Advertisement

Ranji; ಗುಜರಾತ್‌ ವಿರುದ್ಧ ಗೆಲ್ಲುವ ಪಂದ್ಯ ಕಳೆದುಕೊಂಡ ಕರ್ನಾಟಕ

11:21 PM Jan 15, 2024 | Team Udayavani |

ಅಹ್ಮದಾಬಾದ್‌: ಸಂಕ್ರಮಣದಂದು ಸಿಹಿಯ ನಿರೀಕ್ಷೆಯಲ್ಲಿದ್ದ ಕರ್ನಾಟಕಕ್ಕೆ ಆತಿಥೇಯ ಗುಜರಾತ್‌ ಕಹಿಯನ್ನುಣಿಸಿ ರಣಜಿ ಗೆಲುವಿನ ಸಂಭ್ರಮವನ್ನಾಚರಿಸಿದೆ. ಶೋಚನೀಯ ಬ್ಯಾಟಿಂಗ್‌ ವೈಫ‌ಲ್ಯಕ್ಕೆ ಸಿಲುಕಿದ ಮಾಯಾಂಕ್‌ ಅಗರ್ವಾಲ್‌ ಪಡೆ 110 ರನ್ನುಗಳ ಸಣ್ಣ ಗುರಿಯನ್ನೂ ಮುಟ್ಟಲಾಗದೆ 6 ರನ್ನುಗಳ ಸೋಲನ್ನು ಹೊತ್ತು ಅಭಿಮಾನಿಗಳನ್ನು ತೀವ್ರ ನಿರಾಸೆಯಲ್ಲಿ ಕೆಡವಿದೆ.

Advertisement

110 ರನ್‌ ಮುನ್ನಡೆಯೊಂದಿಗೆ ಹಿಡಿತ ಸಾಧಿಸಿದ್ದ ಕರ್ನಾಟಕ, ಗೆಲುವಿಗೆ 110 ರನ್ನುಗಳ ಸಾಮಾನ್ಯ ಟಾರ್ಗೆಟ್‌ ಪಡೆದಿತ್ತು. ಒಂದು ಹಂತದಲ್ಲಿ ವಿಕೆಟ್‌ ನಷ್ಟವಿಲ್ಲದೆ 50 ರನ್‌ ಬಾರಿಸಿ ಗೆಲುವಿನತ್ತ ದಾಪುಗಾಲಿಕ್ಕುತ್ತಿತ್ತು. ಮುಂದಿನದು ನಾಟಕೀಯ ಪತನ. ಎಡಗೈ ಸ್ಪಿನ್ನರ್‌ ಸಿದ್ಧಾರ್ಥ್ ದೇಸಾಯಿ ಎಸೆತಗಳಿಗೆ ಕಕ್ಕಾಬಿಕ್ಕಿಯಾದ ಕರ್ನಾಟಕ ಮತ್ತೆ 53 ರನ್‌ ಗಳಿಸುವಷ್ಟರಲ್ಲಿ ಎಲ್ಲ ವಿಕೆಟ್‌ಗಳನ್ನು ಉದುರಿಸಿಕೊಂಡಿತು. ತನ್ನ ರಣಜಿ ಇತಿಹಾಸದಲ್ಲೇ ಹೀನಾಯ ಸೋಲೊಂದನ್ನು ಹೊತ್ತುಕೊಂಡಿತು. ದೇಸಾಯಿ ಸಾಧನೆ 42 ರನ್ನಿಗೆ 7 ವಿಕೆಟ್‌.

ಮೊದಲ ವಿಕೆಟಿಗೆ 50 ರನ್‌
ಆರ್‌. ಸಮರ್ಥ್ ಬದಲು ಮಾಯಾಂಕ್‌ ಅಗರ್ವಾಲ್‌ ಜತೆ ದೇವದತ್ತ ಪಡಿಕ್ಕಲ್‌ ಇನ್ನಿಂಗ್ಸ್‌ ಆರಂಭಿಸಲು ಬಂದಿದ್ದರು. 9.2 ಓವರ್‌ಗಳ ಜತೆಯಾಟ ನಡೆಸಿದ ಈ ಜೋಡಿ ಮೊದಲ ವಿಕೆಟಿಗೆ ಭರ್ತಿ 50 ರನ್‌ ಗಳಿಸಿತು. ಉಳಿದದ್ದು 60 ರನ್‌ ಮಾತ್ರ. ಇದನ್ನು ಹೇಗೂ ಗಳಿಸಬಹುದಿತ್ತು. ಆದರೆ ಕ್ರಿಕೆಟ್‌ನಲ್ಲಿ ಏನೂ ಸಂಭವಿಸಬಹುದು ಎಂಬುದಕ್ಕೆ ಮುಂದಿನ 17 ಓವರ್‌ಗಳು ಸಾಕ್ಷಿಯಾದವು. ದೇಸಾಯಿ ಬೌಲಿಂಗ್‌ ಆಕ್ರಮಣಕ್ಕೆ ತತ್ತರಿಸಿದ ಕರ್ನಾಟಕದ ಬಲಿಷ್ಠ ಬ್ಯಾಟಿಂಗ್‌ ಸರದಿಗೆ ಭೂಕಂಪನದ ಅನುಭವ!

ಒಂದರ ಹಿಂದೊಂದರಂತೆ ವಿಕೆಟ್‌ಗಳು ಉದುರುತ್ತ ಹೋದವು. ಅಗರ್ವಾಲ್‌ (19) ಬೆನ್ನಲ್ಲೇ ಪಡಿಕ್ಕಲ್‌ (31), ನಿಕಿನ್‌ ಜೋಸ್‌ (4), ಮನೀಷ್‌ ಪಾಂಡೆ (0), ಸುಜಯ್‌ ಸಾತೇರಿ (2), ವಿಜಯ್‌ಕುಮಾರ್‌ ವೈಶಾಖ್‌ (0), ಕೆಳ ಕ್ರಮಾಂಕದಲ್ಲಿ ಬಂದ ಆರ್‌. ಸಮರ್ಥ್ (2), ರೋಹಿತ್‌ ಕುಮಾರ್‌ (0), ಪ್ರಸಿದ್ಧ್ ಕೃಷ್ಣ (7) ಸೇರಿಕೊಂಡು ಬ್ಯಾಟಿಂಗ್‌ ಪರೇಡ್‌ ನಡೆಸಿದರು. ಭಡ್ತಿ ಪಡೆದು ಬಂದ ಶುಭಾಂಗ್‌ ಹೆಗ್ಡೆ (27) ಮಾತ್ರ ಒಂದಿಷ್ಟು ಪ್ರತಿರೋಧ ತೋರಿದರು. ಉಳಿದ 3 ವಿಕೆಟ್‌ ಮತ್ತೋರ್ವ ಆಫ್ಸ್ಪಿನ್ನರ್‌ ರಿಂಕೇಶ್‌ ವಾಘೇಲ ಪಾಲಾಯಿತು.
ಇದಕ್ಕೂ ಮುನ್ನ 7ಕ್ಕೆ 171 ರನ್‌ ಗಳಿಸಿದ್ದ ಗುಜರಾತ್‌ ಸೋಮವಾರದ ಆಟ ಮುಂದುವರಿಸಿ 219ಕ್ಕೆ ದ್ವಿತೀಯ ಇನ್ನಿಂಗ್ಸ್‌ ಮುಗಿಸಿತು. ಉಮಂಗ್‌ ಕುಮಾರ್‌ 57 ರನ್‌ ಹೊಡೆದರು.

ಕರ್ನಾಟಕದ ಮುಂದಿನ ಎದು ರಾಳಿ ಗೋವಾ. ಈ ಪಂದ್ಯ ಜ. 19 ರಿಂದ ಮೈಸೂರಿನ “ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಗ್ರೌಂಡ್‌’ ನಲ್ಲಿ ನಡೆಯಲಿದೆ.

Advertisement

ಸಂಕ್ಷಿಪ್ತ ಸ್ಕೋರ್‌
ಗುಜರಾತ್‌ 264 ಮತ್ತು 219 (ಉಮಂಗ್‌ ಕುಮಾರ್‌ 57, ಮನನ್‌ ಹಿಂಗ್ರಾಜಿಲಾ 56, ಸನ್‌ಪ್ರೀತ್‌ ಸಿಂಗ್‌ 27, ಕ್ಷಿತಿಜ್‌ ಪಟೇಲ್‌ 26, ಚಿಂತನ್‌ ಗಜ 23, ವಿ. ಕೌಶಿಕ್‌ 16ಕ್ಕೆ 3, ರೋಹಿತ್‌ ಕುಮಾರ್‌ 61ಕ್ಕೆ 3, ಶುಭಾಂಗ್‌ ಹೆಗ್ಡೆ 90ಕ್ಕೆ 2). ಕರ್ನಾಟಕ-374 ಮತ್ತು 103 (ಪಡಿಕ್ಕಲ್‌ 31, ಶುಭಾಂಗ್‌ 27, ಅಗರ್ವಾಲ್‌ 19, ಸಿದ್ಧಾರ್ಥ್ ದೇಸಾಯಿ 42ಕ್ಕೆ 7, ರಿಂಕೇಶ್‌ ವಾಘೇಲ 38ಕ್ಕೆ 3). ಪಂದ್ಯಶ್ರೇಷ್ಠ: ಸಿದ್ಧಾರ್ಥ್ ಸೇಸಾಯಿ.

ಮುಂಬಯಿಗೆ 10 ವಿಕೆಟ್‌ ಜಯ
ಮುಂಬಯಿ: ಆಂಧ್ರಪ್ರದೇಶ ವಿರುದ್ಧದ ರಣಜಿ ಪಂದ್ಯವನ್ನು ಮುಂಬಯಿ 10 ವಿಕೆಟ್‌ಗಳಿಂದ ಜಯಿಸಿದೆ. ಗೆಲುವಿಗೆ ಕೇವಲ 34 ರನ್‌ ಮಾಡಬೇಕಿದ್ದ ಮುಂಬಯಿ ವಿಕೆಟ್‌ ನಷ್ಟವಿಲ್ಲದೆ ಗುರಿ ಮುಟ್ಟಿತು. ಜಾಯ್‌ ಗೋಕುಲ್‌ ಬಿಷ್ಟಾ 26 ಮತ್ತು ಭೂಪೆನ್‌ ಲಾಲ್ವಾನಿ 8 ರನ್‌ ಮಾಡಿ ಔಟಾಗದೆ ಉಳಿದರು.

ಮುಂಬಯಿಯ 395 ರನ್ನುಗಳ ಮೊದಲ ಇನ್ನಿಂಗ್ಸ್‌ಗೆ ಜವಾಬು ನೀಡಿದ ಆಂಧ್ರ 184ಕ್ಕೆ ಕುಸಿದು ಫಾಲೋಆನ್‌ಗೆ ತುತ್ತಾಗಿತ್ತು. ದ್ವಿತೀಯ ಸರದಿಯಲ್ಲಿ 244 ರನ್‌ ಗಳಿಸಿ ಇನ್ನಿಂಗ್ಸ್‌ ಸೋಲಿನಿಂದ ಪಾರಾಯಿತು. ಮುಂಬಯಿ ಮುಂದಿನ ಪಂದ್ಯದಲ್ಲಿ ಕೇರಳವನ್ನು ಎದುರಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next