Advertisement
ಮೊದಲ ದಿನ 8 ವಿಕೆಟ್ ಕಳೆದುಕೊಂಡು 245 ರನ್ ಗಳಿಸಿದ್ದ ವಿದರ್ಭ, ಎರಡನೇ ದಿನ ಹೆಚ್ಚುವರಿಯಾಗಿ 62 ರನ್ ಪೇರಿಸಿ ಆಲೌಟಾಯಿತು. ವಿದರ್ಭದ ಅಂತಿಮ ಎರಡು ವಿಕೆಟನ್ನು ಬೇಗ ಉರುಳಿಸುವ ಯೋಜನೆ ಹೊಂದಿದ್ದ ಕರ್ನಾಟಕ ವೈಫಲ್ಯ ಅನುಭವಿಸಿತು. ವಿದರ್ಭ ಇನ್ನಿಂಗ್ಸ್ ಒಂದು ರೀತಿ ನೋಡಿದರೆ ಬೃಹತ್ ಮೊತ್ತಕ್ಕೆ ಬೆಳೆಯಿತು. ಇದರಿಂದಾಗಿ ಕರ್ನಾಟಕ ತುಸು ಒತ್ತಡಕ್ಕೆ ಸಿಲುಕಿದೆ. ವಿದರ್ಭದ 307 ರನ್ನಿಗೆ ಉತ್ತರವಾಗಿ ಕರ್ನಾಟಕ ಎರಡನೇ ದಿನದಾಟದ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡಿದ್ದು 208 ರನ್ ಗಳಿಸಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಲು ಕರ್ನಾಟಕ ಇನ್ನೂ 99 ರನ್ ಗಳಿಸಬೇಕಾಗಿದೆ. ಆದರೆ ನಾಗ್ಪುರದ ಪಿಚ್ ಬೌಲಿಂಗ್‌ಗೆ ಅದರಲ್ಲೂ ಸ್ಪಿನ್ ಬೌಲಿಂಗ್‌ಗೆ ಹೆಚ್ಚು ನೆರವು ನೀಡುತ್ತಿರುವುದರಿಂದ ರಾಜ್ಯಕ್ಕೆ ಇನ್ನುಳಿದಿರುವ 5 ವಿಕೆಟ್‌ಗಳಿಂದ ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯವೇ ಎಂಬ ಪ್ರಶ್ನೆ ಮೂಡಿದೆ.
ಭಾರೀ ಮೊತ್ತ ಪೇರಿಸಿಕೊಳ್ಳುವ ಯೋಜನೆ ಯಲ್ಲಿದ್ದ ಕರ್ನಾಟಕ ವಿದರ್ಭದ ಬಿಗು ದಾಳಿಗೆ ಕುಸಿಯಿತು. ಮೊದಲ ಐದು ವಿಕೆಟ್‌ಗಳನ್ನು ಕೇವಲ 87 ರನ್‌ಗಳಿಗೆ ಕಳೆದುಕೊಂಡು ಸಂಕಷ್ಟಕ್ಕೆ ಬಿತ್ತು. ರವಿಕುಮಾರ್ ಸಮರ್ಥ್, ಕೆ.ವಿ. ಸಿದ್ಧಾರ್ಥ್, ಕರುಣ್ ನಾಯರ್, ಸ್ಟುವರ್ಟ್ ಬಿನ್ನಿ ಅಲ್ಪ ಮೊತ್ತಕ್ಕೆ ಔಟಾದ ಕಾರಣ ತಂಡದ ಜಂಘಾಬಲವೇ ಉದುರಿದಂತಾಗಿತ್ತು. ಆ ಹಂತದಲ್ಲಿ ನಿಶ್ಚಲ್ ಅವರನ್ನು ಸೇರಿಕೊಂಡ ಶ್ರೇಯಸ್ ಗೋಪಾಲ್ ತಂಡವನ್ನು ಆಧರಿಸಿದರು. ಐದನೇ ವಿಕೆಟಿಗೆ ಅವರಿಬ್ಬರು 62 ರನ್ನುಗಳ ಜತೆಯಾಟ ನಡೆಸಿದರು. ಇದರಿಂದಾಗಿ 149 ರನ್‌ಗಳಾಗುವವರೆಗೆ ವಿಕೆಟ್ ಪತನವಾಗಲಿಲ್ಲ. ಮುಂದೆ ಈ ಮೊತ್ತ ಇನ್ನಷ್ಟು ಏರಿ 208ಕ್ಕೆ ಮುಟ್ಟಿತು. ಅಷ್ಟರಲ್ಲಿ ದಿನದಾಟ ಮುಗಿದಿದ್ದರಿಂದ ರಾಜ್ಯ ಹೆಚ್ಚಿನ ಅಪಾಯದಿಂದ ಬಚಾವಾಯಿತು. ಸಂಕ್ಷಿಪ್ತ ಸ್ಕೋರು
ವಿದರ್ಭ 307; ಕರ್ನಾಟಕ 5 ವಿಕೆಟಿಗೆ 208 (ನಿಶ್ಚಲ್ 66 ಬ್ಯಾಟಿಂಗ್, ಸ್ಟುವರ್ಟ್ ಬಿನ್ನಿ 20, ಶ್ರೇಯಸ್ ಗೋಪಾಲ್ 30, ಶರತ್ 46 ಬ್ಯಾಟಿಂಗ್).
Related Articles
ಕರ್ನಾಟಕದ ಪರ ಡಿ.ನಿಶ್ಚಲ್ ಅತ್ಯಂತ ತಾಳ್ಮೆಯ ಬ್ಯಾಟಿಂಗ್ ಮೂಲಕ ತಂಡದ ನೆರವಿಗೆ ನಿಂತಿದ್ದಾರೆ. ಟೆಸ್ಟ್ ಕ್ರಿಕೆಟ್‌ಗೆ ಹೇಳಿ ಮಾಡಿಸಿದಂತಹ ಅಸಾಮಾನ್ಯ ತಾಳ್ಮೆ ಪ್ರದರ್ಶಿಸಿದ ನಿಶ್ಚಲ್ ತಮ್ಮ ಅಜೇಯ 66 ರನ್‌ಗಳ ಇನ್ನಿಂಗ್ಸ್‌ಗಾಗಿ 209 ಎಸೆತ ಬಳಸಿಕೊಂಡರು. ಅದರಲ್ಲಿ ಕೇವಲ 4 ಬೌಂಡರಿ ಇದೆ ಎನ್ನುವುದು ಗಮನಾರ್ಹ. ಕರ್ನಾಟಕದ ಶೀಘ್ರ ಕುಸಿತ ತಪ್ಪಿಸಿದ್ದೇ ಈ ಇನ್ನಿಂಗ್ಸ್. 5ನೇ ಕ್ರಮಾಂಕದಲ್ಲಿ ಬ್ಯಾಟ್ ಹಿಡಿದು ಬಂದ ಬಿ.ಆರ್. ಶರತ್ ಕೂಡ ಉತ್ತಮ ಆಟವಾಡಿ ನಿಶ್ಚಲ್‌ಗೆ ನೆರವು ನೀಡಿದರು. ನಿಶ್ಚಲ್‌ಗೆ ಹೋಲಿಸಿದರೆ ಶರತ್ ವೇಗವಾಗಿ ಆಡಿದರು. 76 ಎಸೆತ ಎದುರಿಸಿದ ಅವರು 9 ಬೌಂಡರಿಗಳೊಂದಿಗೆ 46 ರನ್ ಗಳಿಸಿದರು.ಈ ಇಬ್ಬರು ಆಟಗಾರರು ಅಜೇಯರಾಗಿ ಬ್ಯಾಟ್ ಹಿಡಿದು ನಿಂತಿದ್ದಾರೆ. ಬುಧವಾರ ಇವರಿಬ್ಬರ ಯಶಸ್ಸಿನ ಮೇಲೆ ಕರ್ನಾಟಕ ಹೆಚ್ಚುವರಿ ಯಾಗಿ ಎಷ್ಟು ರನ್ ಗಳಿಸುತ್ತದೆ ಎನ್ನುವುದು ತೀರ್ಮಾನವಾಗುತ್ತದೆ. ಅವರಿಬ್ಬರ ಆಟವನ್ನು ಗಮನಿಸಿದರೆ ರಾಜ್ಯ ತಂಡ ಮುನ್ನಡೆ ಸಾಧಿಸುವ ನಿರೀಕ್ಷೆಯಿದೆ.
Advertisement