Advertisement

ರಣಜಿ: ಸೆಮಿಫೈನಲ್‌ ಸನಿಹ ಕರ್ನಾಟಕ

11:56 PM Feb 23, 2020 | sudhir |

ಜಮ್ಮು: ಕರ್ನಾಟಕ ತಂಡ ರಣಜಿ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಪರಿಸ್ಥಿತಿಯ ಮೇಲೆ ಸಂಪೂರ್ಣ ಹಿಡಿತ ಸಾಧಿಸಿತಲ್ಲದೆ ಅನನುಭವಿ ತಂಡವೊಂದರ ವಿರುದ್ಧ ಹಿನ್ನಡೆ ಅನುಭವಿಸಿ, ಸೆಮಿಫೈನಲ್‌ನಿಂದ ಹೊರಬೀಳುವ ಆತಂಕದಿಂದಲೂ ಪಾರಾಗಿದೆ.

Advertisement

ಜಮ್ಮು ಮತ್ತು ಕಾಶ್ಮೀರ ತಂಡವನ್ನು ಮೊದಲ ಇನ್ನಿಂಗ್ಸ್‌ನಲ್ಲಿ ತನಗಿಂತ ಕಡಿಮೆ ಮೊತ್ತಕ್ಕೆ ಆಲೌಟ್‌ ಮಾಡಿದ ಕರ್ನಾಟಕ ತಂಡವು ತನ್ನ 2ನೇ ಇನ್ನಿಂಗ್ಸ್‌ನಲ್ಲಿ ಅಮೋಘ ಬ್ಯಾಟಿಂಗ್‌ ಮಾಡಿ ಮುನ್ನಡೆಯನ್ನು 259ಕ್ಕೇರಿಸಿಕೊಂಡಿದೆ. ಹೀಗಾಗಿ ಕೊನೆಯ ದಿನವಾದ ಸೋಮವಾರ ಜಮ್ಮು ಮತ್ತು ಕಾಶ್ಮೀರಕ್ಕೆ ಗೆಲ್ಲಲು ಅಸಾಧ್ಯ ಗುರಿ ನೀಡಲು ವೇದಿಕೆ ಸಿದ್ಧ ಮಾಡಿಕೊಂಡಿದೆ. ಮೊದಲ ಇನ್ನಿಂಗ್ಸ್‌ ಮುನ್ನಡೆ ಆಧಾರದಲ್ಲಿ ಕರ್ನಾಟಕ ಸೆಮಿಫೈನಲ್‌ಗೇರುವುದು ಬಹುತೇಕ ಖಚಿತಗೊಂಡಿದೆ.

ಪಂದ್ಯದ ಮೊದಲೆರಡು ದಿನದಾಟ ಮಳೆ ಯಿಂದ ರದ್ದಾಗಿದ್ದರೆ ಮೂರನೇ ದಿನ ಆಟ ನಡೆಯಿತು. ಮೂರನೇ ದಿನ ಕರ್ನಾಟಕವನ್ನು ಕೇವಲ 206 ರನ್ನಿಗೆ ಆಲೌಟ್‌ ಮಾಡಿಸುವಲ್ಲಿ ಯಶಸ್ವಿಯಾಗಿದ್ದ ಜಮ್ಮು ಮತ್ತು ಕಾಶ್ಮೀರ ಆಬಳಿಕ ಕೇವಲ 2 ವಿಕೆಟ್‌ ನಷ್ಟದಲ್ಲಿ 88 ರನ್‌ ಪೇರಿಸಿ ಮೊದಲ ಇನ್ನಿಂಗ್ಸ್‌ ಮುನ್ನಡೆ ಗಳಿಸುವ ವಿಶ್ವಾಸ ಮೂಡಿಸಿತ್ತು. ಇದರಿಂದಾಗಿ ಕರ್ನಾಟಕ ಇಕ್ಕಟ್ಟಿಗೆ ಸಿಲುಕಿತ್ತು. ಆದರೆ ನಾಲ್ಕನೇ ದಿನ ಸರ್ವಾಂಗೀಣ ಆಟದ ಪ್ರದರ್ಶನ ನೀಡಿದ ಕರ್ನಾಟಕ ಪರಿಸ್ಥಿತಿಯನ್ನು ಸಂಪೂರ್ಣ ಬದಲಾಯಿಸಿದೆ.

ಶ್ರೇಷ್ಠ ಮಟ್ಟದ ಬೌಲಿಂಗ್‌
ನಾಲ್ಕನೇ ದಿನ ಶ್ರೇಷ್ಠ ಮಟ್ಟದ ಬೌಲಿಂಗ್‌ ಪ್ರದರ್ಶಿಸಿದ ಕರ್ನಾಟಕ ಜಮ್ಮು ಮತ್ತು ಕಾಶ್ಮೀರ ತಂಡವನ್ನು 192 ರನ್ನಿಗೆ ಆಲೌಟ್‌ ಮಾಡಿತು. ಮೊದಲ ಇನ್ನಿಂಗ್ಸ್‌ನಲ್ಲಿ 14 ರನ್‌ ಮುನ್ನಡೆ ಗಳಿಸಿದ ಕರ್ನಾಟಕ ನಿರಾಳವಾಯಿತು. ಒಂದು ವೇಳೆ ಪಂದ್ಯ ಡ್ರಾಗೊಂಡರೂ ಕರ್ನಾಟಕ ಮೊದಲ ಇನ್ನಿಂಗ್ಸ್‌ ಮುನ್ನಡೆ ಆಧಾರದಲ್ಲಿ ಸೆಮಿಫೈನಲ್‌ಗೇರುವುದು ಖಚಿತ.

ಮುನ್ನಡೆ ಗಳಿಸಿದ ಬಳಿಕ 2ನೇ ಇನ್ನಿಂಗ್ಸ್‌ ಆಡಿದ ಕರ್ನಾಟಕ ಭರ್ಜರಿ ಆಟವಾಡಿ 4 ವಿಕೆಟ್‌ ನಷ್ಟಕ್ಕೆ 245 ರನ್‌ ಗಳಿಸಿದೆ. ಸದ್ಯ ತಂಡದ ಒಟ್ಟು ಮುನ್ನಡೆ 259ಕ್ಕೇರಿದೆ. ಸೋಮವಾರ ಕರ್ನಾಟಕ ಮೊದಲ ಅವಧಿ ಆಡಿ ಡಿಕ್ಲೇರ್‌ ಮಾಡಿಕೊಂಡರೆ, ಜಮ್ಮು ಮತ್ತು ಕಾಶ್ಮೀರಕ್ಕೆ ಬೃಹತ್‌ ಗುರಿಯೇ ಲಭಿಸಲಿದೆ.

Advertisement

ಭರ್ಜರಿ ಬೌಲಿಂಗ್‌
ಇದಕ್ಕೂ ಮೊದಲು ಕರ್ನಾಟಕದ ಬೌಲರ್‌ಗಳ ಪಾತ್ರವನ್ನು ಶ್ಲಾ ಸಲೇಬೇಕು. ತಂಡದ ಪರಿಸ್ಥಿತಿಯನ್ನು ಬಲಿಷ್ಠಗೊಳಿಸಿದ್ದೇ ಬೌಲರ್‌ಗಳು. ಕೇವಲ 2 ವಿಕೆಟ್‌ ಕಳೆದುಕೊಂಡು 88 ರನ್‌ ಗಳಿಸಿದ್ದ ಕಾಶ್ಮೀರ ತಂಡವು 192 ರನ್‌ಗಳಾಗುವಷ್ಟರಲ್ಲಿ ಸರ್ವಪತನ ಕಾಣಲು ಬೌಲರ್‌ಗಳ ನಿಖರ ದಾಳಿ ಕಾರಣವಾಯಿತು. ಎದುರಾಳಿಗಳ ಮೇಲೆರಗಿದ ವೇಗಿ ಪ್ರಸಿದ್ಧ್ಕೃಷ್ಣ  4 ವಿಕೆಟ್‌ ಪಡೆದರು. ಇದರಿಂದ ಪರಿಸ್ಥಿತಿಯ ಮೇಲೆ ಕರ್ನಾಟಕ ನಿಯಂತ್ರಣ ಸಾಧಿಸಿತು. ಸೆಮಿಫೈನಲ್‌ಗೇರುವ ದಾರಿಯೂ ನಿಚ್ಚಳವಾಯಿತು. ಬೌಲರ್‌ಗಳು ಈ ಸಾಹಸ ಮಾಡಿರದಿದ್ದರೆ, ಕರ್ನಾಟಕದ ಪರಿಸ್ಥಿತಿ
ದಯನೀಯವಾಗಿರುತ್ತಿತ್ತು.

ಮತ್ತೆ ಮಿಂಚಿದ ಸಿದ್ಧಾರ್ಥ್
2ನೇ ಇನ್ನಿಂಗ್ಸ್‌ನಲ್ಲಿ ಕರ್ನಾಟಕದ ರವಿಕುಮಾರ್‌ ಸಮರ್ಥ್ ಅಮೋಘ ಬ್ಯಾಟಿಂಗ್‌ ಮಾಡಿದರು. ಮೊದಲ ಇನ್ನಿಂಗ್ಸ್‌ನಲ್ಲಿ ವಿಫ‌ಲವಾಗಿದ್ದ ಅವರು ಈ ಬಾರಿ ಹಾಗೆ ಮಾಡಲಿಲ್ಲ. 133 ಎಸೆತ ಎದುರಿಸಿ, 7 ಬೌಂಡರಿಗಳೊಂದಿಗೆ 74 ರನ್‌ ಗಳಿಸಿದರು. ಇವರೊಂದಿಗೆ ಕೆ.ಸಿದ್ಧಾರ್ಥ್ ಮತ್ತೆ ಮಿಂಚಿದರು. ಮೊದಲ ಇನ್ನಿಂಗ್ಸ್‌ನಲ್ಲೂ ತಂಡದ ನೆರವಿಗೆ ನಿಂತಿದ್ದ ಸಿದ್ಧಾರ್ಥ್ 2ನೇ ಇನ್ನಿಂಗ್ಸ್‌ನಲ್ಲೂ ಕೈಹಿಡಿದರು. ಅವರು 136 ಎಸೆತ ಎದುರಿಸಿ, 6 ಬೌಂಡರಿ, 2 ಸಿಕ್ಸರ್‌ಗಳೊಂದಿಗೆ 75 ರನ್‌ ಗಳಿಸಿ ಅಜೇಯರಾಗಿ ಉಳಿದಿದ್ದು ಸೋಮವಾರ ಶತಕ ಬಾರಿಸುವ ನಿರೀಕ್ಷೆಯಲ್ಲಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಸಿದ್ಧಾರ್ಥ್ ಅವರಿಗೆ ಶತಕ ಬಾರಿಸಲು ಅವಕಾಶ ನೀಡುವ ಸಾಧ್ಯತೆಯೇ ಹೆಚ್ಚು. ಸೋಮವಾರ ಏನು ಮಾಡಿದರೂ, ಸ್ಪಷ್ಟ ಫ‌ಲಿತಾಂಶ ಪಡೆಯುವುದು ಕಷ್ಟವಿದೆ. ಹಾಗಾಗಿ ಸಿದ್ಧಾರ್ಥ್ ಅವರು ಶತಕ ಬಾರಿಸಲಿ ಎಂದು ಕಾದರೆ ತಪ್ಪಿಲ್ಲ.

ಇತರ ಕ್ವಾರ್ಟರ್‌ಫೈನಲ್ಸ್‌ ಫ‌ಲಿತಾಂಶ
– ಗುಜರಾತ್‌ಗೆ 464 ರನ್ನುಗಳ ಭಾರೀ ಜಯ ಮತ್ತು ಸೆಮಿಫೈನಲಿಗೆ ಜಿಗಿತ (ಗುಜರಾತ್‌ ಮೊದಲ ಇನ್ನಿಂಗ್ಸ್‌ 8 ವಿಕೆಟಿಗೆ 602 ಮತ್ತು 6 ವಿಕೆಟಿಗೆ 199; ಗೋವಾ 173 ಮತ್ತು 164).

– ಒಡಿಶಾ ವಿರುದ್ಧ ಬಂಗಾಲಕ್ಕೆ 82 ರನ್‌ ಮೊದಲ ಇನ್ನಿಂಗ್ಸ್‌ ಮುನ್ನಡೆ, ಸೆಮಿಫೈನಲ್‌ ಖಚಿತ (ಬಂಗಾಲ 332 ಮತ್ತು 7 ವಿಕೆಟಿಗೆ 361;
ಒಡಿಶಾ 250

– ಆಂಧ್ರ ಪ್ರದೇಶ ವಿರುದ್ಧ ಸೌರಾಷ್ಟ್ರಕ್ಕೆ 283 ರನ್‌ ಮೊದಲ ಇನ್ನಿಂಗ್ಸ್‌ ಮುನ್ನಡೆ. ಸೆಮಿಫೈನಲ್‌ ಖಾತ್ರಿ. (ಸೌರಾಷ್ಟ್ರ 419 ಮತ್ತು 9 ವಿಕೆಟಿಗೆ 375; ಆಂಧ್ರಪ್ರದೇಶ 136).

Advertisement

Udayavani is now on Telegram. Click here to join our channel and stay updated with the latest news.

Next