Advertisement

Ranji;ತಮಿಳುನಾಡು ವಿರುದ್ಧ ಇನ್ನಿಂಗ್ಸ್‌ ಜಯಭೇರಿ : ಮುಂಬಯಿಗೆ 48ನೇ ಫೈನಲ್‌ ನಂಟು

12:10 AM Mar 05, 2024 | Team Udayavani |

ಮುಂಬಯಿ: ಏಳು ವರ್ಷಗಳ ಬಳಿಕ ರಣಜಿ ಟ್ರೋಫಿ ಸೆಮಿಫೈನಲ್‌ ಪ್ರವೇಶಿಸಿದ್ದ ತಮಿಳುನಾಡು, ಆತಿಥೇಯ ಮುಂಬಯಿಯ ಹೊಡೆತಕ್ಕೆ ತತ್ತರಿಸಿ ಮೂರೇ ದಿನಗಳಲ್ಲಿ ಇನ್ನಿಂಗ್ಸ್‌ ಸೋಲಿಗೆ ತುತ್ತಾಗಿದೆ. “ರಣಜಿ ರಾಜ’ ಮುಂಬಯಿ 48ನೇ ಸಲ ಫೈನಲ್‌ ಪ್ರವೇಶಿಸಿದೆ. ಪ್ರಶಸ್ತಿ ಸಮರದಲ್ಲಿ ಮಧ್ಯ ಪ್ರದೇಶ ಅಥವಾ ವಿದರ್ಭ ವಿರುದ್ಧ ಸೆಣಸಲಿದೆ.

Advertisement

232 ರನ್ನುಗಳ ಹಿನ್ನಡೆಗೆ ಸಿಲುಕಿದ ತಮಿಳುನಾಡು, ದ್ವಿತೀಯ ಇನ್ನಿಂಗ್ಸ್‌ನಲ್ಲಿ ಮತ್ತೆ ಬ್ಯಾಟಿಂಗ್‌ ಕುಸಿತಕ್ಕೆ ಸಿಲುಕಿ 162 ರನ್ನಿಗೆ ಸರ್ವಪತನ ಕಂಡಿತು. 41 ಬಾರಿಯ ಚಾಂಪಿಯನ್‌ ಮುಂಬಯಿ ಮೂರೇ ದಿನಗಳಲ್ಲಿ ಇನ್ನಿಂಗ್ಸ್‌ ಹಾಗೂ 70 ರನ್ನುಗಳ ಜಯಭೇರಿ ಮೊಳಗಿಸಿತು.

ಶಾರ್ದೂಲ್‌ ಬೌಲಿಂಗ್‌ ದಾಳಿ
ಶತಕ ಬಾರಿಸಿ ಮುಂಬಯಿಗೆ ಮೇಲುಗೈ ಒದಗಿಸಿದ್ದ ಶಾದೂìಲ್‌ ಠಾಕೂರ್‌ ತಮಿಳುನಾಡಿನ ಆರಂಭಿಕರನ್ನು 6 ರನ್‌ ಆಗುವಷ್ಟರಲ್ಲಿ ಪೆವಿಲಿಯನ್ನಿಗೆ ರವಾನಿಸಿದರು. ಲೀಗ್‌ ಹಂತದಲ್ಲಿ ರನ್‌ ಪ್ರವಾಹ ಹರಿಸಿದ್ದ ಸಾಯಿ ಸುದರ್ಶನ್‌ (5) ಮತ್ತು ಎನ್‌. ಜಗದೀಶನ್‌ (0) ಘೋರ ವೈಫ‌ಲ್ಯ ಅನುಭವಿಸಿದರು. ವಾಷಿಂಗ್ಟನ್‌ ಸುಂದರ್‌ಗೆ ಭಡ್ತಿ ನೀಡಿದ ಪ್ರಯೋಗ ಯಶಸ್ವಿಯಾಗಲಿಲ್ಲ. ಅವರು ನಾಲ್ಕೇ ರನ್‌ ಮಾಡಿ ವಾಪಸಾದರು. 10 ರನ್ನಿಗೆ ತಮಿಳುನಾಡಿನ 3 ವಿಕೆಟ್‌ ಬಿತ್ತು.

ಮಧ್ಯಮ ಕ್ರಮಾಂಕದಲ್ಲಿ ತಮಿಳುನಾಡಿನ ಬ್ಯಾಟಿಂಗ್‌ ಒಂದಿಷ್ಟು ಚೇತರಿಕೆ ಕಂಡಿತಾದರೂ ತಂಡವನ್ನು ಹೋರಾಟಕ್ಕೆ ಸಜ್ಜುಗೊಳಿಸಲು ಸಾಲಲಿಲ್ಲ. ಬಾಬಾ ಇಂದ್ರಜಿತ್‌ ಕ್ರೀಸ್‌ ಆಕ್ರಮಿಸಿಕೊಂಡು 70 ರನ್‌ ಹೊಡೆದರು (105 ಎಸೆತ, 9 ಬೌಂಡರಿ). ಪ್ರದೋಷ್‌ ಪೌಲ್‌ 25, ವಿಜಯ್‌ ಶಂಕರ್‌ 24, ಆರ್‌. ಸಾಯಿ ಕಿಶೋರ್‌ 21 ರನ್‌ ಮಾಡಿದರು.

ಎಡಗೈ ಸ್ಪಿನ್ನರ್‌ ಶಮ್ಸ್‌ ಮುಲಾನಿ 4, ತನುಷ್‌ ಕೋಟ್ಯಾನ್‌, ಶಾರ್ದೂಲ್‌ ಠಾಕೂರ್‌ ಮತ್ತು ಮೋಹಿತ್‌ ಅವಸ್ಥಿ ತಲಾ 2 ವಿಕೆಟ್‌ ಉರುಳಿಸಿದರು. ಶತಕದೊಂದಿಗೆ (109) 4 ವಿಕೆಟ್‌ ಉರುಳಿಸಿದ ಶಾದೂìಲ್‌ ಠಾಕೂರ್‌ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

Advertisement

ಶತಕ ವಂಚಿತ ಕೋಟ್ಯಾನ್‌
ಆದರೆ ತನುಷ್‌ ಕೋಟ್ಯಾನ್‌ಗೆ ಸತತ 2ನೇ ಶತಕ ಸಾಧ್ಯವಾಗಲಿಲ್ಲ. ಅವರ ಜತೆಗಾರ, ಅಂತಿಮ ಆಟಗಾರ ತುಷಾರ್‌ ದೇಶಪಾಂಡೆ 26 ರನ್‌ ಮಾಡಿ ಔಟಾದರು. ಹೀಗಾಗಿ ಕೋಟ್ಯಾನ್‌ 89 ರನ್‌ ಗಳಿಸಿ ಅಜೇಯರಾಗಿ ಉಳಿಯಬೇಕಾಯಿತು (126 ಎಸೆತ, 12 ಬೌಂಡರಿ). ಮುಂಬಯಿ 9ಕ್ಕೆ 353 ರನ್‌ ಗಳಿಸಿ ದ್ವಿತೀಯ ದಿನದಾಟ ಮುಗಿಸಿತ್ತು. ಆಗ ಕೋಟ್ಯಾನ್‌ 74 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದರು.

ಸಂಕ್ಷಿಪ್ತ ಸ್ಕೋರ್‌: ತಮಿಳುನಾಡು-148 ಮತ್ತು 162 (ಬಾಬಾ ಇಂದ್ರಜಿತ್‌ 70, ಪ್ರದೋಷ್‌ ಪೌಲ್‌ 25, ವಿಜಯ್‌ ಶಂಕರ್‌ 24, ಆರ್‌. ಸಾಯಿ ಕಿಶೋರ್‌ 21, ಶಮ್ಸ್‌ ಮುಲಾನಿ 53ಕ್ಕೆ 4, ಶಾದೂìಲ್‌ ಠಾಕೂರ್‌ 16ಕ್ಕೆ 2, ತನುಷ್‌ ಕೋಟ್ಯಾನ್‌ 18ಕ್ಕೆ 2, ಮೋಹಿತ್‌ ಅವಸ್ಥಿ 26ಕ್ಕೆ 2). ಮುಂಬಯಿ-378.

ಪಂದ್ಯಶ್ರೇಷ್ಠ: ಶಾರ್ದೂಲ್‌ ಠಾಕೂರ್‌.

ವಿದರ್ಭ ತಿರುಗೇಟು; 261 ರನ್‌ ಲೀಡ್‌
ನಾಗ್ಪುರ: ಇನ್ನಿಂಗ್ಸ್‌ ಹಿನ್ನಡೆಗೆ ಸಿಲುಕಿದ ಬಳಿಕ ದಿಟ್ಟ ಬ್ಯಾಟಿಂಗ್‌ ಹೋರಾಟವೊಂದನ್ನು ನೀಡಿದ ಆತಿಥೇಯ ವಿದರ್ಭ, ರಣಜಿ ಸೆಮಿಫೈನಲ್‌ ಪಂದ್ಯವನ್ನು ರೋಚಕ ಘಟ್ಟಕ್ಕೆ ತಂದು ನಿಲ್ಲಿಸಿದೆ. ದ್ವಿತೀಯ ಇನ್ನಿಂಗ್ಸ್‌ನಲ್ಲಿ 6 ವಿಕೆಟಿಗೆ 343 ರನ್‌ ಗಳಿಸಿದ್ದು, ಒಟ್ಟು ಮುನ್ನಡೆ 261 ರನ್ನಿಗೆ ಏರಿದೆ.

ಯಶ್‌ ರಾಥೋಡ್‌ 97 ರನ್‌ ಗಳಿಸಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ (165 ಎಸೆತ, 12 ಬೌಂಡರಿ). ನಾಯಕ ಹಾಗೂ ಕೀಪರ್‌ ಅಕ್ಷಯ್‌ ವಾಡ್ಕರ್‌ 77, ಅಮನ್‌ ಮೋಖಡೆ 59, ಧ್ರುವ ಶೋರಿ 40, ಕರುಣ್‌ ನಾಯರ್‌ 38 ರನ್‌ ಬಾರಿಸಿ ವಿದರ್ಭ ಸರದಿಯನ್ನು ಆಧರಿಸಿದರು.
ವಿದರ್ಭ 17 ರನ್ನಿಗೆ 2 ವಿಕೆಟ್‌ ಕಳೆದುಕೊಂಡು ಆರಂಭಿಕ ಆಘಾತಕ್ಕೆ ಸಿಲುಕಿತ್ತು. 161ಕ್ಕೆ 5ನೇ ವಿಕೆಟ್‌ ಪತನಗೊಂಡಿತು. ರಾಥೋಡ್‌-ವಾಡ್ಕರ್‌ 6ನೇ ವಿಕೆಟಿಗೆ 158 ರನ್‌ ಪೇರಿಸಿ ಪರಿಸ್ಥಿತಿಯನ್ನು ಸುಧಾರಿಸಿದರು.

ಪಂದ್ಯವಿನ್ನೂ 2 ದಿನ ಕಾಣಲಿಕ್ಕಿದೆ. ವಿದರ್ಭ ತನ್ನ ಮುನ್ನಡೆಯನ್ನು 325-350ರ ತನಕ ಕೊಂಡೊಯ್ದರೆ ಫೈನಲ್‌ ಪ್ರವೇಶವನ್ನು ನಿರೀಕ್ಷಿಸಬಹುದು.

ಸಂಕ್ಷಿಪ್ತ ಸ್ಕೋರ್‌: ವಿದರ್ಭ-170 ಮತ್ತು 6 ವಿಕೆಟಿಗೆ 343 (ಯಶ್‌ ರಾಥೋಡ್‌ ಬ್ಯಾಟಿಂಗ್‌ 97, ಅಕ್ಷಯ್‌ ವಾಡ್ಕರ್‌ 77, ಅಮನ್‌ ಮೋಖಡೆ 59, ಧ್ರುವ ಶೋರಿ 40, ಕರುಣ್‌ ನಾಯರ್‌ 38, ಅನುಭವ್‌ ಅಗರ್ವಾಲ್‌ 68ಕ್ಕೆ 2, ಕುಮಾರ ಕಾರ್ತಿಕೇಯ 73ಕ್ಕೆ 2). ಮಧ್ಯ ಪ್ರದೇಶ-252.

ವಾಂಖೇಡೆಯಲ್ಲಿ ಫೈನಲ್‌
“ರಣಜಿ ಕಿಂಗ್‌’ ಖ್ಯಾತಿಯ ಮುಂಬಯಿ ಫೈನಲ್‌ಗೆ ಲಗ್ಗೆ ಇರಿಸಿದ್ದು, ಈ ಪ್ರಶಸ್ತಿ ಹಣಾಹಣಿ “ವಾಂಖೇಡೆ ಸ್ಟೇಡಿಯಂ’ನಲ್ಲಿ ನಡೆಯಲಿದೆ ಎಂಬುದಾಗಿ ಮುಂಬಯಿ ಕ್ರಿಕೆಟ್‌ ಅಸೋಸಿಯೇಶನ್‌ (ಎಂಸಿಎ) ಪ್ರಕಟಿಸಿದೆ.

ಮುಂಬಯಿಯ ಎದುರಾಳಿ ಯಾರೆಂಬುದು ಇನ್ನಷ್ಟೇ ತಿಳಿಯಬೇಕಿದೆ. ಮಧ್ಯ ಪ್ರದೇಶ ಮತ್ತು ವಿದರ್ಭ ಪ್ರಬಲ ಪೈಪೋಟಿಯಲ್ಲಿವೆ. ಇವೆರಡು ತಂಡಗಳ ತವರು ಅಂಗಳ ಇಂದೋರ್‌ ಹಾಗೂ ನಾಗ್ಪುರ. ಆದರೆ ಅಂಕಪಟ್ಟಿಯಲ್ಲಿ ಈ ಎರಡು ತಂಡಗಳಿಗಿಂತಲೂ ಮೇಲಿದ್ದ ಕಾರಣ ಮುಂಬಯಿಗೆ ತವರಿನ ಅಂಗಳದ ಹಕ್ಕು ಲಭಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next