Advertisement
ಈ ಸಾಲಿನ ಸೋಲು ಗೆಲುವಿನ ಲೆಕ್ಕ ಹಾಕಿದರೂ ಕರ್ನಾಟಕವೇ ತುಸು ಮುಂದಿದೆ. ಕರ್ನಾಟಕ ತನ್ನ ಮೊದಲ ಪಂದ್ಯದಲ್ಲಿ ತಮಿಳುನಾಡು ವಿರುದ್ಧ ಗೆಲುವು ಸಾಧಿಸಿದೆ. ತನ್ನದೇ ನೆಲ ಹುಬ್ಬಳ್ಳಿಯಲ್ಲಿ ನಡೆದ 2ನೇ ಪಂದ್ಯದಲ್ಲಿ, ಉತ್ತರಪ್ರದೇಶ ವಿರುದ್ಧ ಡ್ರಾ ಸಾಧಿಸಿದೆ. ಇದಕ್ಕೆ ತದ್ವಿರುದ್ಧವೆಂಬಂತೆ ಅಂಕಿತ್ ಕಲ್ಸಿ ನಾಯಕತ್ವದ ಹಿಮಾಚಲಪ್ರದೇಶ ತಂಡ, ತನ್ನದೇ ನೆಲದಲ್ಲಿ ಸೌರಾಷ್ಟ್ರ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ 5 ವಿಕೆಟ್‌ಗಳಿಂದ ಸೋತುಹೋಗಿದೆ. ಆದರೆ ಡಿಂಡಿಗಲ್‌ನಲ್ಲಿ ನಡೆದ ಆತಿಥೇಯ ತಮಿಳುನಾಡು ವಿರುದ್ಧದ 2ನೇ ಪಂದ್ಯದಲ್ಲಿ 71 ರನ್ ಜಯ ಸಾಧಿಸಿದೆ.
ಮನೀಷ್ ಪಾಂಡೆ ಗೈರಿನಲ್ಲಿ ಕರುಣ್ ನಾಯರ್ ನಾಯಕರಾಗಿ ಮುಂದುವರಿದಿದ್ದಾರೆ. ಗಮನಾರ್ಹ ಸಂಗತಿಯೆಂದರೆ ಭಾರತ ತಂಡದ ಪರವಾಗಿ ಆಡಿ ಮೆರೆದಿರುವ, ಮಾಯಾಂಕ್ ಅಗರ್ವಾಲ್ ತಂಡಕ್ಕೆ ಲಭ್ಯರಿದ್ದಾರೆ. ಇದು ರಾಜ್ಯದ ಮನಃಸ್ಥೈರ್ಯವನ್ನು ವೃದ್ಧಿಸಿದೆ. ಭಾರೀ ಮೊತ್ತ ಪೇರಿಸುವ ಭರವಸೆ ಉಂಟುಮಾಡಿದೆ. ಇನ್ನೊಂದು ಕಡೆ ತಂಡದ ಖಾಯಂ ನಾಯಕ ಮನೀಷ್ ಪಾಂಡೆ, ಕೆ.ಎಲ್.ರಾಹುಲ್ ಅಲಭ್ಯತೆ ತುಸು ಮಟ್ಟಿಗೆ ಹಿನ್ನಡೆಯೆಂದು ಹೇಳಬಹುದು.
Related Articles
Advertisement
ಆದರೆ ಬ್ಯಾಟ್ಸ್‌ಮನ್ ದೇವದತ್ತ ಪಡಿಕ್ಕಲ್, ಆಲ್‌ರೌಂಡರ್ ಶ್ರೇಯಸ್ ಗೋಪಾಲ್ ಇವರೆಲ್ಲ ತಂಡಕ್ಕೆ ಆಧಾರಸ್ತಂಭವಾಗಿ ನಿಂತಿದ್ದಾರೆ. ಉಳಿದವರ ವೈಫಲ್ಯವನ್ನು ಮರೆಮಾಚಲು ಸಾಧ್ಯವಾಗಿದೆ. ಬಿ.ಆರ್.ಶರತ್, ಡಿ.ನಿಶ್ಚಲ್ ಮೇಲೆ ಹೆಚ್ಚಿನ ಜವಾಬ್ದಾರಿಯಿದೆ.
ಬ್ಯಾಟಿಂಗ್ ಸಮಸ್ಯೆಸದ್ಯದ ಸ್ಥಿತಿಯಲ್ಲಿ ಹಿಮಾಚಲಪ್ರದೇಶ ತಂಡದ ಸಾಮರ್ಥ್ಯ ಅಂದಾಜಿಸುವುದು ತುಸು ಕಷ್ಟದ ಕೆಲಸ. ಹಿಂದಿನೆರಡೂ ಪಂದ್ಯಗಳಲ್ಲಿ ಆ ತಂಡ ಬೌಲಿಂಗ್‌ನಲ್ಲಿ ಮಿಂಚಿದೆ. ಆದರೆ ಅದರ ಬ್ಯಾಟಿಂಗ್ ವಿಭಾಗ ಪೂರ್ಣವಾಗಿ ಕೈಕೊಟ್ಟಿದೆ. ಇದನ್ನು ಸರಿಪಡಿಸಿಕೊಳ್ಳದಿದ್ದರೆ, ಕರ್ನಾಟಕ ವಿರುದ್ಧ ಸೋಲುವುದು ಬಹುತೇಕ ಖಾತ್ರಿಯಾಗಿದೆ. ರೋನಿತ್‌ಗೆ ಗಾಯ, ಮಿಥುನ್ ಮೇಲೆ ಹೊರೆ
ತಂಡದ ಪ್ರಮುಖ ಬೌಲರ್ ರೋನಿತ್ ಮೋರೆ ಗಾಯಗೊಂಡಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ಬೌಲಿಂಗ್‌ನ ಹೆಚ್ಚುವರಿ ಹೊಣೆಯನ್ನು ಹೊತ್ತುಕೊಳ್ಳಬೇಕಾದ ಅನಿವಾರ್ಯದಲ್ಲಿ ಅಭಿಮನ್ಯು ಮಿಥುನ್ ಇದ್ದಾರೆ. ಹಿಂದಿನ ಪಂದ್ಯದಲ್ಲಿ ಉತ್ತರಪ್ರದೇಶ ವಿರುದ್ಧ ಮಿಥುನ್ 6 ವಿಕೆಟ್ ಕಿತ್ತು ಮಿಂಚಿದ್ದರು. ಮೊದಲ ಪಂದ್ಯದಲ್ಲಿ ಸವ್ಯಸಾಚಿ ಕೆ.ಗೌತಮ್ 6 ಮತ್ತು 8 ವಿಕೆಟ್ ಕಬಳಿಸಿ, ತಮಿಳುನಾಡಿನ ಸೋಲಿಗೆ ಕಾರಣವಾಗಿದ್ದರು. ರಾಜ್ಯದ ಈ ಅನುಭವಿ ಆಟಗಾರರ ಬಲದಿಂದ, ರೋನಿತ್ ಮೋರೆ ಅನುಪಸ್ಥಿತಿಯಲ್ಲೂ ಬೌಲಿಂಗ್ ವಿಭಾಗ ಬಲಿಷ್ಠವಾಗಿಯೇ ಇದೆ.