Advertisement
2015-16ರ ಋತುವಿನ ತನಕ ರಣಜಿ ಪಂದ್ಯಗಳನ್ನು ತವರು ಮತ್ತು ಹೊರಗಿನ ಅಂಗಳದಲ್ಲಿ ಆಡುವ ಸಂಪ್ರದಾಯವಿತ್ತು. ಆದರೆ ರಣಜಿ ಟ್ರೋಫಿಗೆ ಹೊಸತನ ನೀಡಬೇಕೆಂಬ ಉದ್ದೇಶದಿಂದ ಮಂಡಳಿಯ ಸದಸ್ಯರು ತಟಸ್ಥ ಕೇಂದ್ರಗಳಲ್ಲಿ ಪಂದ್ಯಗಳನ್ನು ಆಡಿಸುವ ನಿರ್ಧಾರಕ್ಕೆ ಬಂದರು. ತವರಿನ ಕ್ರಿಕೆಟ್ ಮಂಡಳಿ ತನ್ನ ತಂಡಕ್ಕೆ ಅನುಕೂಲಕರವಾಗುವಂಥ ಪಿಚ್‌ಗಳನ್ನು ನಿರ್ಮಿಸುತ್ತದೆ ಎಂಬ ದೂರು ಕೂಡ ಈ ಬದಲಾವಣೆಗೆ ಕಾರಣ. ಅದರಂತೆ 2016-17ರ ರಣಜಿ ಪಂದ್ಯಗಳಿಗೆ ತವರಿನ ಭಾಗ್ಯ ಲಭಿಸಲಿಲ್ಲ. ಎಲ್ಲವೂ ತಟಸ್ಥ ಅಂಗಳದಲ್ಲೇ ನಡೆದವು.
ಆದರೆ ಕ್ರಿಕೆಟ್ ಮಂಡಳಿಯ ಈ ಯೋಜನೆ ಸಂಪೂರ್ಣ ವಿಫಲಗೊಂಡಿತು. ಕಾರಣ, ತವರಿನಂಗಳದಲ್ಲಿ ಪಂದ್ಯ ನಡೆಯದಿದ್ದುದರಿಂದ ವೀಕ್ಷಕರು ಸ್ಟೇಡಿಯಂ ಕಡೆ ತಲೆಯನ್ನೇ ಹಾಕಲಿಲ್ಲ. ತಮ್ಮ ನೆಚ್ಚಿನ ತಂಡದ ಆಟವನ್ನು ಕಾಣಲಾಗದಿದ್ದ ಮೇಲೆ ಇಂಥ ಪಂದ್ಯಾವಳಿಯ ಅಗತ್ಯವಾದರೂ ಏನು ಎಂಬ ಅಸಮಾಧಾನ ಕೂಡ ವ್ಯಕ್ತವಾಯಿತು. “ದೇಶದ ಬಹುತೇಕ ಕ್ರಿಕೆಟ್ ಮಂಡಳಿಗಳು ತಟಸ್ಥ ಕೇಂದ್ರದ ಮಾದರಿಗೆ ವಿರೋಧ ವ್ಯಕ್ತಪಡಿಸಿವೆ. ಹೀಗಾಗಿ ನಾವು ಹಳೆಯ ಮಾದರಿಗೇ ಮರಳುವ ಯೋಜನೆಯಲ್ಲಿದ್ದೇವೆ. ಆಗ ತವರಿನ ವೀಕ್ಷಕರಿಗೆ ಕನಿಷ್ಠ 4 ಪಂದ್ಯಗಳನ್ನಾದರೂ ವೀಕ್ಷಿಸುವ ಅವಕಾಶ ಲಭಿಸುತ್ತದೆ. ಸುಮಾರು ಮೂರೂವರೆ ತಿಂಗಳ ಕಾಲ ಕ್ರಿಕೆಟಿಗರು ಹೊರಗಡೆ ಸುತ್ತಾಡುತ್ತ ಇರಬೇಕಾದ್ದರಿಂದ ಅವರಿಗೆ “ಹೋಮ್ ಸಿಕ್‌ನೆಸ್’ ಕೂಡ ಕಾಡಲಾರಂಭಿಸುತ್ತದೆ. ಹಳೆ ಮಾದರಿಯಲ್ಲಿ ಇದಕ್ಕೆ ಆಸ್ಪದವಿಲ್ಲ…’ ಎಂದು ಬಿಸಿಸಿಐ ವಕ್ತಾರರೊಬ್ಬರು ಪಿಟಿಐ ಜತೆ ಹೇಳಿಕೊಂಡಿದ್ದಾರೆ.