Advertisement

Ranji Final; ಬೌಲರ್‌ಗಳ ಮೇಲುಗೈ: ಮುಂಬಯಿಗೆ ಆಸರೆಯಾದ ಶಾರ್ದೂಲ್‌

11:49 PM Mar 10, 2024 | Team Udayavani |

ಮುಂಬಯಿ: ಮುಂಬಯಿ-ವಿದರ್ಭ ನಡುವಿನ ರಣಜಿ ಟ್ರೋಫಿ ಕ್ರಿಕೆಟ್‌ ಫೈನಲ್‌ ಪಂದ್ಯದ ಮೊದಲ ದಿನವೇ ಬೌಲರ್‌ಗಳ ಕೈ ಮೇಲಾಗಿದ್ದು, 13 ವಿಕೆಟ್‌ಗಳು ಉರುಳಿವೆ. ಮುಂಬಯಿಯ ಶಾದೂìಲ್‌ ಠಾಕೂರ್‌ ಆಲ್‌ರೌಂಡ್‌ ಪ್ರದರ್ಶನದ ಮೂಲಕ ಗಮನ ಸೆಳೆದರು.

Advertisement

48ನೇ ಫೈನಲ್‌ನಲ್ಲಿ ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ “ರಣಜಿ ಕಿಂಗ್‌’ ಮುಂಬಯಿ 224 ರನ್ನುಗಳ ಸಾಮಾನ್ಯ ಮೊತ್ತಕ್ಕೆ ಕುಸಿಯಿತು. ಜವಾಬಿತ್ತ ವಿದರ್ಭ 3 ವಿಕೆಟ್‌ ನಷ್ಟಕ್ಕೆ 31 ರನ್‌ ಮಾಡಿದೆ.

ಠಾಕೂರ್‌ ಆಪತ್ಬಾಂಧವ
ಶಾರ್ದೂಲ್‌ ಠಾಕೂರ್‌ ಮುಂಬಯಿ ಪಾಲಿನ ಆಪತ್ಬಾಂಧವರಾಗಿ ಮೂಡಿ ಬಂದರು. ಬ್ಯಾಟಿಂಗ್‌ ವೇಳೆ 75 ರನ್‌ ಬಾರಿಸಿ ತಂಡವನ್ನು ಮೇಲೆತ್ತಿದ ಅವರು, ವಿದರ್ಭದ ಮೊದಲ ವಿಕೆಟ್‌ ಹಾರಿಸಿ ಕುಸಿತಕ್ಕೆ ಮುಹೂರ್ತವಿರಿಸಿದರು.
ಮುಂಬಯಿ ಆರಂಭ ಉತ್ತಮ ವಾಗಿಯೇ ಇತ್ತು. ಪೃಥ್ವಿ ಶಾ (46) ಮತ್ತು ಭೂಪೇನ್‌ ಲಾಲ್ವಾನಿ (37) ಭರ್ತಿ 20 ಓವರ್‌ ನಿಭಾಯಿಸಿ 81 ರನ್‌ ಪೇರಿಸಿದರು. ಆಗ ಮುಂಬಯಿ ದೊಡ್ಡ ಮೊತ್ತದ ಸೂಚನೆ ನೀಡಿತ್ತು. ಆದರೆ ಮಧ್ಯಮ ಕ್ರಮಾಂಕದಲ್ಲಿ ತೀವ್ರ ಕುಸಿತ ಅನುಭವಿಸಿತು. ಸ್ಕೋರ್‌ 111ಕ್ಕೆ ತಲುಪುವಷ್ಟರಲ್ಲಿ 6 ವಿಕೆಟ್‌ ಉರುಳಿತು!

ಅಂಡರ್‌-19 ಸ್ಟಾರ್‌ ಮುಶೀರ್‌ ಖಾನ್‌ (6), ನಾಯಕ ಅಜಿಂಕ್ಯ ರಹಾನೆ (7), ಟೆಸ್ಟ್‌ ತಂಡದಿಂದ ಬೇರ್ಪಟ್ಟಿರುವ ಶ್ರೇಯಸ್‌ ಅಯ್ಯರ್‌ (7), ಕೀಪರ್‌ ಹಾರ್ದಿಕ್‌ ತಮೋರೆ (5) ಸಂಪೂರ್ಣ ವೈಫ‌ಲ್ಯ ಅನುಭವಿಸಿದರು. ಒಂದು ಹಂತದಲ್ಲಂತೂ ಸತತ 18 ಓವರ್‌ಗಳಲ್ಲಿ ಮುಂಬಯಿಗೆ ಒಂದೂ ಬೌಂಡರಿ ಬಾರಿಸಲಾಗಲಿಲ್ಲ.

ಬ್ಯಾಟಿಂಗ್‌ ಸ್ಪೆಷಲಿಸ್ಟ್‌ಗಳೆಲ್ಲ ಪೆವಿಲಿ ಯನ್‌ ಸೇರಿಕೊಂಡ ಬಳಿಕ ಸವ್ಯಸಾಚಿ ಶಾದೂìಲ್‌ ಠಾಕೂರ್‌ ನೆರವಿಗೆ ನಿಂತರು. ಅತ್ಯಂತ ಆಕ್ರಮಣಕಾರಿಯಾಗಿ ಬ್ಯಾಟ್‌ ಬೀಸಿದ ಠಾಕೂರ್‌ 69 ಎಸೆತ ಎದುರಿಸಿ 75 ರನ್‌ ಬಾರಿಸಿದರು. 8 ಬೌಂಡರಿ, 3 ಸಿಕ್ಸರ್‌ ಬಾರಿಸಿ ವಿದರ್ಭ ದಾಳಿಯನ್ನು ಪುಡಿಗಟ್ಟಿದರು. ಕೊನೆಯವರಾಗಿ ವಾಪಸಾದರು.

Advertisement

ಶಮ್ಸ್‌ ಮುಲಾನಿ (13), ತನುಷ್‌ ಕೋಟ್ಯಾನ್‌ (8) ಮತ್ತು ತುಷಾರ್‌ ದೇಶಪಾಂಡೆ (14) ಅವರಿಂದ ಹೆಚ್ಚಿನ ಕೊಡುಗೆ ಸಂದಾಯವಾಗಲಿಲ್ಲ. ಆದರೆ ಇವರ ನೆರವು ಪಡೆದ ಠಾಕೂರ್‌, ಕೊನೆಯ 3 ವಿಕೆಟ್‌ಗಳಿಂದ 70 ರನ್‌ ಒಟ್ಟುಗೂಡಿಸಿ ಮುಂಬಯಿ ಸ್ಕೋರ್‌ಬೋರ್ಡ್‌ನಲ್ಲಿ ಗೌರವಯುತ ಮೊತ್ತ ದಾಖಲಾಗುವಂತೆ ನೋಡಿಕೊಂಡರು.

ವಿದರ್ಭ ಪರ ಎಡಗೈ ಸ್ಪಿನ್ನರ್‌ ಹರ್ಷ ದುಬೆ ಮತ್ತು ಮಧ್ಯಮ ವೇಗಿ ಯಶ್‌ ಠಾಕೂರ್‌ ತಲಾ 3 ವಿಕೆಟ್‌, ಟೀಮ್‌ ಇಂಡಿಯಾದಿಂದ ಬೇರ್ಪಟ್ಟಿರುವ ಉಮೇಶ್‌ ಯಾದವ್‌ 2 ವಿಕೆಟ್‌ ಉರುಳಿಸಿದರು.

ವಿದರ್ಭ ಕುಸಿತ
ವಿದರ್ಭ ಈಗಾಗಲೇ ಇನ್‌ಫಾರ್ಮ್ ಓಪನರ್‌ ಧ್ರುವ ಶೋರಿ (0), ಅಮನ್‌ ಮೋಖಡೆ (8) ಮತ್ತು ಕರುಣ್‌ ನಾಯರ್‌ (0) ವಿಕೆಟ್‌ ಕಳೆದುಕೊಂಡು ಸಂಕಟಕ್ಕೆ ಸಿಲುಕಿದೆ. ಮೊದಲು ಶೋರಿ ಅವರನ್ನು ಠಾಕೂರ್‌ ಲೆಗ್‌ ಬಿಫೋರ್‌ ರೂಪದಲ್ಲಿ ಪೆವಿಲಿಯನ್‌ಗೆ ರವಾನಿಸಿದರು. ಈ ತೀರ್ಪು ಡಿಆರ್‌ಎಸ್‌ ಮೂಲಕ ಬಂತು. ಬಳಿಕ ಧವಳ್‌ ಕುಲಕರ್ಣಿ ಘಾತಕವಾಗಿ ಪರಿಣಮಿಸಿದರು. ಮೋಖಡೆ ಮತ್ತು ನಾಯರ್‌ ವಿಕೆಟ್‌ ಹಾರಿಸಿದರು.
ಆರಂಭಕಾರ ಅಥರ್ವ ತೈಡೆ (21) ಮತ್ತು ಆದಿತ್ಯ ಠಾಕರೆ (0) ಕ್ರೀಸಿನಲ್ಲಿದ್ದಾರೆ.

ಸಂಕ್ಷಿಪ್ತ ಸ್ಕೋರ್‌
ಮುಂಬಯಿ-224 (ಶಾದೂìಲ್‌ ಠಾಕೂರ್‌ 75, ಪೃಥ್ವಿ ಶಾ 46, ಭೂಪೇನ್‌ ಲಾಲ್ವಾನಿ 37, ಯಶ್‌ ಠಾಕೂರ್‌ 54ಕ್ಕೆ 3, ಹರ್ಷ ದುಬೆ 62ಕ್ಕೆ 3, ಉಮೇಶ್‌ ಯಾದವ್‌ 43ಕ್ಕೆ 2). ವಿದರ್ಭ-3 ವಿಕೆಟಿಗೆ 31 (ಅಥರ್ವ ತೈಡೆ ಬ್ಯಾಟಿಂಗ್‌ 21, ಧವಳ್‌ ಕುಲಕರ್ಣಿ 9ಕ್ಕೆ 2, ಶಾದೂìಲ್‌ ಠಾಕೂರ್‌ 14ಕ್ಕೆ 1).

“ವಾಂಖೇಡೆ ಸ್ಟೇಡಿಯಂ’ಗೆ ಸ್ವರ್ಣ ಸಂಭ್ರಮ ಕ್ರಿಕೆಟ್‌ ನಾಯಕರಿಗೆ ಸಮ್ಮಾನ

ವಿಶ್ವ ಕ್ರಿಕೆಟ್‌ನಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಮುಂಬಯಿಯ ಐತಿಹಾಸಿಕ “ವಾಂಖೇಡೆ ಸ್ಟೇಡಿಯಂ’ ಈಗ ಸುವರ್ಣ ಸಂಭ್ರಮದಲ್ಲಿದೆ.

50 ವರ್ಷಗಳ ಸವಿನೆನಪಿಗಾಗಿ “ಮುಂಬಯಿ ಕ್ರಿಕೆಟ್‌ ಅಸೋಸಿ ಯೇಶನ್‌’ (ಎಂಸಿಎ) ದೊಡ್ಡ ಮಟ್ಟದ ಕಾರ್ಯಕ್ರಮವನ್ನೇನೂ ಹಮ್ಮಿ ಕೊಂಡಿಲ್ಲ. ರವಿವಾರದ ರಣಜಿ ಫೈನಲ್‌ ಪಂದ್ಯಕ್ಕೂ ಮುನ್ನ ನಡೆದ ಸರಳ ಕಾರ್ಯಕ್ರಮವೊಂದರಲ್ಲಿ ಇತ್ತಂಡ ಗಳ ನಾಯಕರಾದ ಅಜಿಂಕ್ಯ ರಹಾನೆ ಮತ್ತು ಅಕ್ಷಯ್‌ ವಾಡ್ಕರ್‌ ಅವರಿಗೆ ಸ್ಮರಣಿಕೆ ನೀಡಿ ಗೌರವಿಸಿತು. ಪಂದ್ಯದ ಸಿಬಂದಿಯ ಜತೆಗೆ ಈ ಅಂಗಳದ ಪ್ರಥಮ ಪಂದ್ಯದಲ್ಲಿ ಆಡಿದ ಮುಂಬಯಿ ತಂಡದ ಕ್ರಿಕೆಟಿಗರನ್ನೂ ಸಮ್ಮಾನಿಸಲಾಯಿತು. ಎಂಸಿಎ ಅಧ್ಯಕ್ಷ ಅಮೋಲ್‌ ಕಾಳೆ, ಕಾರ್ಯದರ್ಶಿ ಅಜಿಂಕ್ಯ ನಾಯಕ್‌ ಹಾಗೂ ಇತರ ಅಧಿಕಾರಿಗಳು ಹಾಜರಿದ್ದರು.

1974ರಲ್ಲಿ ಜಾಗತಿಕ ಕ್ರಿಕೆಟಿಗೆ ತೆರೆದುಕೊಂಡ “ವಾಂಖೇಡೆ ಸ್ಟೇಡಿಯಂ’ ನಲ್ಲಿ ಮೊದಲ ಟೆಸ್ಟ್‌ ಪಂದ್ಯ ನಡೆದದ್ದು 1975ರಲ್ಲಿ. ಎದುರಾಳಿ ವೆಸ್ಟ್‌ ಇಂಡೀಸ್‌. ಇದನ್ನು ಭಾರತ 201 ರನ್ನುಗಳ ಭಾರೀ ಅಂತರದಿಂದ ಸೋತಿತ್ತು. ಈ ಪಂದ್ಯದ ವೇಳೆ ಕ್ರಿಕೆಟ್‌ ಅಭಿಮಾನಿಯೊಬ್ಬ ಕ್ಲೈವ್‌ ಲಾಯ್ಡ ಅವರನ್ನು ಭೇಟಿಯಾಗಲು ನೇರವಾಗಿ ಅಂಗಳಕ್ಕೆ ಧಾವಿಸಿದ ಘಟನೆಯೂ ಸಂಭವಿಸಿತ್ತು. 1976ರಲ್ಲಿ ನ್ಯೂಜಿಲ್ಯಾಂಡ್‌ ವಿರುದ್ಧ ಭಾರತವಿಲ್ಲಿ ಮೊದಲ ಜಯ ದಾಖಲಿಸಿತು. ಅಂತರ 162 ರನ್‌.

ಸ್ಟೇಡಿಯಂ ಜೀರ್ಣೋದ್ಧಾರ
2011ರ ವಿಶ್ವಕಪ್‌ಗಾಗಿ ವಾಂಖೇಡೆ ಸ್ಟೇಡಿಯಂನ ಜೀರ್ಣೋದ್ಧಾರ ಕಾರ್ಯ ನಡೆದಿತ್ತು. ವೀಕ್ಷಕರಿಗೆ ಹೆಚ್ಚು ಅನುಕೂಲ ಕರವಾಗುವ ರೀತಿಯಲ್ಲಿ ಇದನ್ನು ನವೀಕರಣಗೊಳಿಸಲಾಗಿತ್ತು. 32 ಸಾವಿರ ವೀಕ್ಷಕರ ಸಾಮರ್ಥ್ಯವನ್ನು ಇದು ಹೊಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next