ಉಡುಪಿ: ಸಂಗೀತದಲ್ಲಿ ಪ್ರೌಢಸಾಧನೆಯನ್ನು ಕಿರಿಯ ವಯಸ್ಸಿ ನಲ್ಲಿಯೇ ಸಾಧಿಸಿದ್ದ ರಂಜನಿಯ ಆತ್ಮ ಹಿರಿದಾದುದು (ಸೌಲ್ ಈಸ್ ಓಲ್ಡ್) ಎಂದು ರಂಜನಿಯ ಸಹಪಾಠಿ, ಮಣಿಪಾಲ ಎಂಐಟಿ ಸಹಪ್ರಾಧ್ಯಾಪಕಿ ಡಾ| ಸಲ್ಮಾತಾಜ್ ವಿಶ್ಲೇಷಿಸಿದರು.
ಅವರು ಮಂಗಳವಾರ ರಂಜನಿ ಮೆಮೋರಿಯಲ್ ಟ್ರಸ್ಟ್ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆಯೋಜಿಸಿದ ರಂಜನಿ ಸಂಸ್ಮರಣ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಸಂಸ್ಮರಣ ಭಾಷಣ ಮಾಡಿದರು.
ಪ್ರೊ| ಅರವಿಂದ ಹೆಬ್ಟಾರ್ ಅವರು ತನಗೂ ಶಿಕ್ಷಕರಾಗಿದ್ದರು. ಅವರ ಮನೆಯಲ್ಲಿ ಹೆಬ್ಟಾರ್ ಪುತ್ರಿ ರಂಜನಿಯ ಪರಿಚಯವಾಯಿತು. ಯಾವುದೇ ವಿಷಯದ ಉಚ್ಚ ಮಟ್ಟದ ಜ್ಞಾನ ಬರಬೇಕಾದರೆ ಅದರ ಹಿನ್ನೆಲೆ ಅರಿತಿರಬೇಕು. ಸಂಗೀತದ ಕುರಿತಂತೆ ಹೆಬ್ಟಾರ್ ಮತ್ತು ರಂಜನಿ ತನಗೆ ಸೂಕ್ತ ಮಾರ್ಗದರ್ಶನ ಮಾಡಿದರು. ಹೆಬ್ಟಾರ್ ಅವರು ವಿಜ್ಞಾನದ ಶಿಕ್ಷಕರಾಗಿದ್ದರೂ ಬದುಕಿನ ಶೈಲಿಯ ಶಿಕ್ಷಕರಾಗಿದ್ದರು. ಅವರು ಪ್ರಾಯೋಗಿಕ ಹಂತದಲ್ಲಿ ಪ್ರಯೋಗಶೀಲರಾಗಿಯೂ, ದೈವಿಕ ಸಂದರ್ಭದಲ್ಲಿ ದೈವಿಕತೆಯನ್ನೂ ನಡೆದು ತೋರಿಸುತ್ತಿದ್ದರು ಎಂದರು.
ರಂಜನಿ ಸಂಗೀತದಲ್ಲಿ ಭಿನ್ನವಾಗಿ ಕಾಣುತ್ತಿದ್ದಳು. ನಾನು ಸ್ವಲ್ಪ ದೊಡ್ಡವಳಾದರೂ ಆಕೆ ನನಗೆ ಸಂಗೀತದಲ್ಲಿ ಗುರುವೆನಿಸಿದ್ದಳು. ಸಂಗೀತದಲ್ಲಿ ಪ್ರೌಢಿಮೆ ತನಗೆ ಇಲ್ಲವಾದರೂ ಕೇಳುವ ಜ್ಞಾನವಿದೆ. ಆಕೆಯ ಸಂಗೀತ ಎಳೆ ವಯಸ್ಸಿನಲ್ಲಿಯೇ ಹೃದಯವನ್ನು ತಟ್ಟುವಂತಿತ್ತು. ರಂಜನಿ ಎಂಬ ಕಲ್ಪನೆಯನ್ನು (ಕಾನ್ಸೆಪ್ಟ್) ಜೀವಂತವಾಗಿರಿಸಬೇಕು ಎಂದು ಡಾ| ಸಲ್ಮಾತಾಜ್ ಹೇಳಿದರು.
ಅಭ್ಯಾಗತರಾಗಿ ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಡಾ| ಎಂ.ಜಿ.ವಿಜಯ್, ಮಣಿಪಾಲ ಎಂಐಟಿ ಜಂಟಿ ನಿರ್ದೇಶಕ ಡಾ|ಬಿ.ಎಚ್.ವಿ.ಪೈ ಆಗಮಿಸಿದ್ದರು. ಟ್ರಸ್ಟ್ ಮುಖ್ಯಸ್ಥರಾದ ಪ್ರೊ| ಅರವಿಂದ ಹೆಬ್ಟಾರ್, ವಸಂತಲಕ್ಷ್ಮೀ ಹೆಬ್ಟಾರ್ ಉಪಸ್ಥಿತರಿದ್ದರು. ಶ್ರೀಮತಿ ದೇವಿ ಕಾರ್ಯಕ್ರಮ ನಿರ್ವಹಿಸಿದರು.