Advertisement

“ರಂಜನೀ’ಯ ಪ್ರಭು

06:00 AM Oct 24, 2018 | |

ಕನ್ನಡದ ಪ್ರಸಿದ್ಧ ಸಿನಿಮಾ, ಧಾರಾವಾಹಿ, ರಂಗಭೂಮಿ ಕಲಾವಿದ ಶ್ರೀನಿವಾಸ್‌ ಪ್ರಭು, ತಮ್ಮ ಕಂಚಿನ ಕಂಠ, ಪ್ರಬುದ್ಧ ನಟನೆಯಿಂದ ಖ್ಯಾತರಾದವರು. ಅವರ ಪತ್ನಿ ರಂಜನಿ ಪ್ರಭು. ಸೆಲೆಬ್ರಿಟಿ ಸಂಗಾತಿಯಾಗಿ ನಿಮಗೆ ಹೇಗನ್ನಿಸುತ್ತದೆ ಎಂದು ರಂಜನಿಯವರನ್ನು ಕೇಳಿದರೆ, ನನ್ನ ಗಂಡ ಸೆಲೆಬ್ರಿಟಿ ಅಂತ ನನಗೆ ಅನ್ನಿಸುವುದೇ ಇಲ್ಲ. ಅವರು ತುಂಬಾ ಡೌನ್‌ ಟು ಅರ್ಥ್ ಎನ್ನುತ್ತಾರೆ. ರಂಜನಿಯವರು ಖ್ಯಾತ ಕವಯಿತ್ರಿ, ಬರಹಗಾರ್ತಿ. ಸೇಂಟ್‌ ಆ್ಯನ್ಸ್‌ ಕಾಲೇಜಿನಲ್ಲಿ 33 ವರ್ಷಗಳಿಂದ ಕನ್ನಡದ ಪ್ರಾಧ್ಯಾಪಕಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು, ಈಗ ಕನ್ನಡ ವಿಭಾಗದ ಮುಖ್ಯಸ್ಥೆ. ತಮ್ಮ ಸುಖೀ ದಾಂಪತ್ಯದ ಬಗ್ಗೆ ಅವರಿಲ್ಲಿ ಮಾತನಾಡಿದ್ದಾರೆ.

Advertisement

-ನಿಮ್ಮ ಬಾಲ್ಯ, ವಿದ್ಯಾಭ್ಯಾಸ ಎಲ್ಲಿ ಆಗಿದ್ದು?
ನಾನು ಹುಟ್ಟಿ ಬೆಳೆದಿದ್ದೆಲ್ಲಾ ಬೆಂಗಳೂರಿನಲ್ಲಿಯೇ. ಮಹಾರಾಣಿ ಕಾಲೇಜಿನಲ್ಲಿ ಡಿಗ್ರಿ ಮಾಡಿ, ಬೆಂಗಳೂರು ವಿವಿಯಲ್ಲಿ ಎಂಎ ಕನ್ನಡ ಸ್ನಾತಕೋತ್ತರ ಪದವಿ ಓದಿದೆ. ಅಪ್ಪ-ಅಮ್ಮ ಇಬ್ಬರೂ ಪ್ರಗತಿಪರ ಮನೋಭಾವದವರು. ಅವರಿಗೆ ಮೂವರು ಗಂಡು ಮಕ್ಕಳು, ಮೂವರು ಹೆಣ್ಣು ಮಕ್ಕಳು. ಗಂಡು-ಹೆಣ್ಣು ಎಂಬ ಭೇದವಿಲ್ಲದೆ ಬೆಳೆಸಿದರು. ಕುಟುಂಬದಲ್ಲಿ ಸಾಹಿತ್ಯದ ವಾತಾವರಣ ಇತ್ತು. ದೊಡ್ಡಪ್ಪ, ಕಾವ್ಯಾಲಯ ಎಂಬ ಪ್ರಕಾಶನ ನಡೆಸುತ್ತಿದ್ದರು. ಅಪ್ಪ ಅಮ್ಮ ಕೂಡ ಓದಿನ ಗೀಳಿದ್ದವರೇ. ಹಾಗಾಗಿ, ದೊಡ್ಡ ದೊಡ್ಡ ಸಾಹಿತಿಗಳ ಕೃತಿಗಳನ್ನು ಚಿಕ್ಕ ವಯಸ್ಸಿನಲ್ಲೇ ಓದಿದ್ದೆ. 

-ನಿಮ್ಮ ನೆಚ್ಚಿನ ಬರಹಗಾರರು ಯಾರು?
ನಾನು ಕುವೆಂಪು ಅವರ ದೊಡ್ಡ ಅಭಿಮಾನಿ. ಕೆ.ಎಸ್‌. ನರಸಿಂಹಸ್ವಾಮಿ ನನ್ನ ಪ್ರೀತಿಯ ಕವಿ. ನನ್ನ ಮೊದಲನೇ ಕವನ ಸಂಕಲನಕ್ಕೆ ಜಿ.ಎಸ್‌. ಶಿವರುದ್ರಪ್ಪನವರು ಮುನ್ನುಡಿ ಬರೆದಿದ್ದರು. ನನ್ನ ಕವಿತೆಗಳನ್ನು ಓದಿ, ನಿಮ್ಮ ಕವಿತೆಗಳ ಮೇಲೂ ಕೆ.ಎಸ್‌.ನ. ಪ್ರಭಾವ ಇದೆ ಎಂದಿದ್ದರು ಜಿಎಸ್ಸೆಸ್‌.

-ಯಾವ ವಯಸ್ಸಿಗೆ ಬರವಣಿಗೆ ಆರಂಭಿಸಿದಿರಿ? ಎಷ್ಟು ಪುಸ್ತಕ ಬರೆದಿದ್ದೀರಿ? 
7ನೇ ತರಗತಿಯಲ್ಲಿರುವಾಗಲೇ ಒಂದು ಕಾದಂಬರಿ ಬರೆದಿದ್ದೆ. ಅದನ್ನು ಪರಿಚಿತರಿಗೆ ಮಾತ್ರ ಓದಲು ಕೊಟ್ಟಿದ್ದೆ. ಈಗ ಅದರ ಪ್ರತಿ ಕೂಡ ನನ್ನಲ್ಲಿ ಇಲ್ಲ. ಆಗಾಗ ಪದ್ಯ ಬರೆಯುತ್ತಿದ್ದೆ. ಕೆಲವನ್ನು ಕುಟುಂಬದವರಿಗೆ ತೋರಿಸುತ್ತಿದ್ದೆ. ಇನ್ನು ಕೆಲವನ್ನು ಹರಿದು ಹಾಕುತ್ತಿದ್ದೆ. ಬರವಣಿಗೆಯನ್ನು ಗಂಭೀರವಾಗಿ ಪರಿಗಣಿಸಿದ್ದು ತುಂಬಾ ತಡವಾಗಿ. ಕಾಲೇಜಿನಲ್ಲಿದ್ದಾಗ, “ತುಷಾರ’ ಮಾಸ ಪತ್ರಿಕೆಗೆ “ಬಾಲ್ಯಕಾಲದ ಸಖೀ’ ಎಂಬ ಲೇಖನ ಬರೆದಿದ್ದೆ. ಅದಾದ ಬಳಿಕ ಹಲವಾರು ಲೇಖನಗಳು ಬೇರೆ ಬೇರೆ ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಕವನ ಸಂಕಲನ ಬಿಡುಗಡೆಗೆ ಪ್ರಭು ಒತ್ತಾಸೆಯೇ ಕಾರಣ. ಈವರೆಗೆ 2 ಕವನ ಸಂಕಲನ, ನಾಲ್ಕು ಭಾವಗೀತೆಗಳ ಸಿಡಿ ಹೊರತಂದಿದ್ದೇನೆ. ಕವಿತೆಗಳಿಗೆ ಉಪಾಸನಾ ಮೋಹನ್‌ ಸ್ವರ ಸಂಯೋಜಿಸಿದ್ದಾರೆ. ನೋವಿನ ವಿಚಾರವೆಂದರೆ ಪುಸ್ತಕ ಬಿಡುಗಡೆ ವೇಳೆಗೆ ಅಪ್ಪ ಅಮ್ಮ ಇಬ್ಬರೂ ತೀರಿಕೊಂಡಿದ್ದರು. ಅವರಿಬ್ಬರಿಗೂ ನಾನು ಸಾಹಿತ್ಯದಲ್ಲಿ ಏನಾದರೂ ಸಾಧನೆ ಮಾಡುತ್ತೇನೆ ಎಂಬ ನಂಬಿಕೆ ಇತ್ತು. ಆದರೆ ನಾನೊಂದು ಮೈಲಿಗಲ್ಲು ತಲುಪಿದ ವೇಳೆ ಅವರಿಬ್ಬರೂ ಇರಲಿಲ್ಲ.

-ಕಾಲೇಜು ದಿನಗಳು ಹೇಗಿದ್ದವು?
ಕಾಲೇಜು ದಿನಗಳನ್ನು ನಾನು ತುಂಬಾ ಎಂಜಾಯ್‌ ಮಾಡಿದ್ದೇನೆ. ಕವಿತೆ, ಸಾಹಿತ್ಯ ಚಟುವಟಿಕೆ, ನಾಟಕ, ಸ್ನೇಹಿತೆಯರ ಜೊತೆ ಸುತ್ತಾಟ.. ಅಂತ ಏನೇನೋ ಮಾಡಿದ್ದೇನೆ. ಓದನ್ನು ಇನ್ನಷ್ಟು ಗಂಭೀರವಾಗಿ ಪರಿಗಣಿಸಬೇಕಿತ್ತು ಅಂತ ಈಗ ಅನ್ನಿಸುತ್ತದೆ. ನಾನು ಎಂಇಎಸ್‌ ಕಾಲೇಜಿನಲ್ಲಿ ಪಿಯುಸಿ ಓದಿದ್ದು. ಸ್ನೇಹಿತೆಯರು ಮಹಾರಾಣಿ ಕಾಲೇಜಿಗೆ ಸೇರಿದರು ಅಂತ ಡಿಗ್ರಿಗೆ ನಾನೂ ಮಹಾರಾಣಿ ಕಾಲೇಜಿಗೆ ಸೇರಿದೆ. ಅವರೆಲ್ಲ ರಾಜ್ಯಶಾಸ್ತ್ರ ತೆಗೆದುಕೊಂಡರು ಅಂತ ನಾನೂ ತೆಗೆದುಕೊಂಡೆ .ಅಂಥ ಯಡವಟ್ಟೆಲ್ಲಾ ಮಾಡಿದ್ದೇನೆ. ಆದರೆ, ಜಿ.ಎಸ್‌. ಶಿವರುದ್ರಪ್ಪ, ಕಂಬಾರರು, ಡಿ.ಆರ್‌. ನಾಗರಾಜ್‌ ಇವರೆಲ್ಲಾ ನನಗೆ ಗುರುಗಳಾಗಿದ್ದರು ಎಂಬ ಹೆಮ್ಮೆ ಇದೆ. ಲಕ್ಷ್ಮೀ ನಾರಾಯಣ ಭಟ್ಟರ ಛಂದಸ್ಸಿನ ಪಾಠ ಕೇಳುವುದೇ ಒಂದು ದೊಡ್ಡ ಖುಷಿಯಾಗಿತ್ತು ನನಗೆ. 

Advertisement

 -ಶ್ರೀನಿವಾಸ್‌ ಪ್ರಭು ಅವರನ್ನು ಮೊದಲು ಭೇಟಿ ಮಾಡಿದ್ದೆಲ್ಲಿ? ಮೊದಲು ಪ್ರಪೋಸ್‌ ಮಾಡಿದ್ಯಾರು? 
ನನಗೆ ನಾಟಕದ ಗೀಳಿದ್ದಿದ್ದರಿಂದ ಅವರನ್ನು ನಾನು ಕಲಾಕ್ಷೇತ್ರ ಮುಂತಾದ ಕಡೆಯಲ್ಲಿ ನೋಡುತ್ತಿದ್ದೆ. ಪರಿಚಯ ಇರಲಿಲ್ಲ. ಒಮ್ಮೆ ನಮ್ಮ ಪರಿಚಿತರೊಬ್ಬರು ಶ್ರೀನಿವಾಸ್‌ ಪ್ರಭು ಅವರನ್ನು ಮದುವೆಗೆ ಕೇಳಬಹುದು ಎಂದು ನನ್ನ ತಂದೆಗೆ ಹೇಳಿದರು. ನಾನು ಯೋಚನೆ ಮಾಡಿದೆ. ನಾವಿಬ್ಬರೂ ಸಾಹಿತ್ಯ, ರಂಗಭೂಮಿಯಲ್ಲಿ ಆಸಕ್ತಿಯುಳ್ಳವರು. ನಮ್ಮಿಬ್ಬರ ಅಭಿರುಚಿಗಳು ಒಂದೇ ರೀತಿ ಇವೆ. ಇಬ್ಬರೂ ಮದುವೆಯಾದರೆ ಚೆನ್ನ ಅನ್ನಿಸಿತು. ಈ ಕುರಿತು ನಾನೇ ಮೊದಲು ಅವರಿಗೆ ಪತ್ರ ಬರೆದು ಪ್ರಪೋಸ್‌ ಮಾಡಿದೆ. ಆದರೆ ಅವರಿಗೆ ಮದುವೆಯಾಗುವ ಯೋಚನೆ ಇರಲಿಲ್ಲ. ಸಾಕಷ್ಟು ಸಮಯ ತೆಗೆದುಕೊಂಡು, ಕೊನೆಗೆ ಒಪ್ಪಿದರು. 1985ರ ಜುಲೈ 11ರಂದು ನಮ್ಮ ಮದುವೆಯಾಯ್ತು. ಆಮೇಲೆ ತಿಳಿಯಿತು, ನಮ್ಮಿಬ್ಬರ ಅಭಿರುಚಿ ಮಾತ್ರವಲ್ಲ, ಜೀವನ ಮೌಲ್ಯ, ಧ್ಯೇಯ, ಜೀವನ ಶೈಲಿ ಎಲ್ಲವೂ ಹೋಲುತ್ತದೆ ಅಂತ. ನನ್ನ ಅಂದಿನ ನಿರ್ಧಾರದ ಕುರಿತು ಇವತ್ತಿಗೂ ಹೆಮ್ಮೆ ಪಡುತ್ತೇನೆ. 

-ಬಿಡುವಿನ ಸಮಯವನ್ನು ಹೇಗೆ ಕಳೆಯುತ್ತೀರ?
ಇಬ್ಬರಿಗೂ ಸಂಗೀತದಲ್ಲಿ ಆಸಕ್ತಿ ಹೆಚ್ಚು. ಪ್ರಭು ಇವತ್ತಿಗೂ ಹಾರ್ಮೋನಿಯಂ ಹಿಡಿದು ತಲ್ಲೀನರಾಗಿ ಸಂಗೀತಾಭ್ಯಾಸ ಮಾಡುತ್ತಾರೆ. ನಾನು ಸಂಗೀತ ಕಲಿತಿದ್ದೇನೆ. ಬಿಡುವಿದ್ದಾಗ ಹಾಡಿಕೊಳ್ಳುತ್ತೇನೆ. ಸಾಹಿತ್ಯ ಸಭೆ, ಗೋಷ್ಠಿಗಳಿಗೆ ಒಟ್ಟಿಗೆ ಹೋಗುತ್ತೇವೆ. ನಾವು ಮತ್ತು ಮಕ್ಕಳು ಸ್ನೇಹಿತರಂತೆಯೇ ಇದ್ದೇವೆ. ಒಟ್ಟಿಗೆ ಕೂತು ಹರಟೆ, ಚರ್ಚೆ ಮಾಡುತ್ತೇವೆ.

-ನಟರಾಗಿ ಶ್ರೀನಿವಾಸ ಪ್ರಭು ಅವರಲ್ಲಿ ಯಾವ ಗುಣಗಳು ಇಷ್ಟ. ಅವರಿಗೆ ನಿಮ್ಮಿಂದ ಎಷ್ಟು ಪ್ರೋತ್ಸಾಹ ದೊರಕಿದೆ?
ಮೊದಮೊದಲಿಗೆ ಪ್ರಭು ಸಿನಿಮಾಗಳಲ್ಲಿ, ಧಾರಾವಾಹಿಗಳಲ್ಲಿ ನಟಿಸುವುದನ್ನು ನಾನು ಇಷ್ಟ ಪಡುತ್ತಿರಲಿಲ್ಲ. ಅವರನ್ನು ನಿಜದಲ್ಲಿ, ನಾಟಕಗಳಲ್ಲಿ ಸಭ್ಯ, ಪ್ರಬುದ್ಧರನ್ನಾಗಿ ನೋಡಿ ಮೆಚ್ಚಿದ್ದ ನನಗೆ, ಸಿನಿಮಾದಲ್ಲಿ ಅವರನ್ನು ಬೇರೆಬೇರೆ ರೀತಿಯ ಪಾತ್ರಗಳಲ್ಲಿ ನೋಡಲು ಕಷ್ಟವಾಗುತ್ತಿತ್ತು. ಹೀಗಾಗಿ ನಾನು ಅವರಿಗೆ ಹೆಚ್ಚು ಪ್ರೋತ್ಸಾಹ ನೀಡಲಿಲ್ಲ. ಹೆಚ್ಚು ಪ್ರೋತ್ಸಾಹಿಸಿದ್ದರೆ ಅವರು ಮತ್ತಷ್ಟು ಸಿನಿಮಾ, ಧಾರಾವಾಹಿಗಳಲ್ಲಿ ನಟಿಸುತ್ತಿದ್ದರೇನೋ. ನಟನೆಯಲ್ಲಿ ಅವರ ಗಾಂಭೀರ್ಯ ಇಷ್ಟ. ಸಾಹಿತ್ಯ, ರಂಗಭೂಮಿ ಹಿನ್ನೆಲೆಯಿಂದ ಬಂದ ಕಲಾವಿದರ ಪ್ರಬುದ್ಧತೆಯೇ ಬೇರೆ. ತೆರೆ ಮೇಲೆ ಮತ್ತು ತೆರೆ ಹಿಂದಿನ ಅವರ ನಡವಳಿಕೆ ಬೇರೆಯವರಿಗಿಂತ ಸಾಕಷ್ಟು ಭಿನ್ನವಾಗಿರುತ್ತದೆ. 

-ನಿಮ್ಮ ಮಕ್ಕಳ ಬಗ್ಗೆ ಹೇಳಿ? 
ನಮಗೆ ಇಬ್ಬರು ಮಕ್ಕಳು. ಮಗಳು ರಾಧಿಕಾ ಪ್ರಭು (ಅನ್ವಿ), ಭರತನಾಟ್ಯ ಕಲಾವಿದೆ. ಲಂಡನ್‌ ಸೆಲ್ಫಿà ಕಾಲೇಜಿನಲ್ಲಿ ಚಿತ್ರಕಲೆ ಪದವಿ ಪಡೆದಿದ್ದಾಳೆ. ಎಕ್ಸೆಪ್ಷನ್‌ ಆರ್ಟಿಸ್ಟ್‌ ವೀಸಾ ನೀಡಿ, ಲಂಡನ್‌ ಆಕೆಯನ್ನು ಅಲ್ಲಿಗೆ ಕರೆಸಿಕೊಂಡಿದೆ. ಹಾಗಾಗಿ 2 ವರ್ಷಗಳಿಂದ ಅವಳು ಲಂಡನ್‌ನಲ್ಲಿದ್ದಾಳೆ. ಅವಳಿಗೂ ಸಾಹಿತ್ಯಾಸಕ್ತಿ ಇದೆ. 2 ಇಂಗ್ಲಿಷ್‌ ಕವನ ಸಂಕಲನ ತಂದಿದ್ದಾಳೆ. ಮಗ ಅನಿರುದ್ಧ, ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ನಲ್ಲಿ 3ನೇ ರ್‍ಯಾಂಕ್‌ ಪಡೆದ. ಅವನು ವಿಜ್ಞಾನ ಕ್ಷೇತ್ರದಲ್ಲೇ ಮುಂದುವರಿಯುತ್ತಾನೆ ಅಂದುಕೊಂಡಿದ್ದೆವು. ಆದರೆ ಕಲೆಯ ಗೀಳು ಅವನನ್ನೂ ಬಿಡಲಿಲ್ಲ. ಅವನು ವೆಸ್ಟ್ರನ್‌ ಸಂಗೀತ ಕಲಿತಿದ್ದಾನೆ. ಅವನದ್ದೇ 2 ಬ್ಯಾಂಡ್‌ ಇವೆ. ಗಿಟಾರ್‌, ಕೀಬೋರ್ಡ್‌ ತರಗತಿ ನಡೆಸುತ್ತಾನೆ. ಈಗ ಡಿಜೆ ತರಬೇತಿ ಪಡೆದು, ಡಿಜೆ ಆಗಿದ್ದಾನೆ. 

-ಪ್ರವಾಸ ಎಂದರೆ ನಿಮಗಿಷ್ಟ ಎಂದು ತಿಳಿಯಿತು. ಯಾವ ಪ್ರವಾಸ ನಿಮ್ಮ ಮನದಲ್ಲಿ ಅಚ್ಚಳಿಯದೇ ನಿಂತಿದೆ? 
ಯಾರಾದರೂ ವಜ್ರದ ನೆಕ್‌ಲೇಸ್‌, ದುಬಾರಿ ಸೀರೆ ಕೊಂಡರೆ ನನಗೆ ಏನೂ ಅನಿಸುವುದಿಲ್ಲ. ಆದರೆ ಅವರು, ನಾನು ನೋಡದೇ ಇರುವ ಊರು ನೋಡಿದ್ದಾರೆ ಅಂತ ಗೊತ್ತಾದರೆ ನನಗೆ ಅವರ ಮೇಲೆ ಅಸೂಯೆ ಮೂಡುತ್ತದೆ. ನನಗೆ ಪ್ರವಾಸವೆಂದರೆ ಭಾರೀ ಇಷ್ಟ. ಮದುವೆಯಾದ ಆರಂಭದಲ್ಲಿ ಕಾಶ್ಮೀರಕ್ಕೆ ಹೋಗಿದ್ದೆವು. ಆ ಪ್ರವಾಸ ಇವತ್ತಿಗೂ ನೆನಪಿದೆ. ನನ್ನ ಮಗ ಹೊಟ್ಟೆಯಲ್ಲಿದ್ದಾಗ ತಮಿಳುನಾಡಿನ ಎರಕಾಡುವಿಗೆ ಕುಟುಂಬ ಸಮೇತ ಹೋಗಿದ್ದೆವು. ಮಗಳು ಆಗ ಸಣ್ಣವಳು. ಅದನ್ನೂ ಮರೆಯಲಾಗುವುದಿಲ್ಲ. 

-ಇತ್ತೀಚೆಗೆ ಸಾಕಷ್ಟು ಯುವ ಕವಿ/ಲೇಖಕರು ಫೇಸ್‌ಬುಕ್‌ಅನ್ನು ಕಾವ್ಯ ರಚನೆಗೆ ಬಳಸಿಕೊಳ್ಳುತ್ತಿದ್ದಾರೆ. ಈ ಕುರಿತು ಏನು ಹೇಳ್ತೀರಿ?
ಅದನ್ನು ನಾನೂ ಗಮನಿಸಿದ್ದೇನೆ. ಸಾಮಾಜಿಕ ಜಾಲತಾಣಗಳಿಂದ ಅತ್ಯಂತ ಪ್ರತಿಭಾವಂತ ಬರಹಗಾರರು ಬೆಳಕಿಗೆ ಬರುತ್ತಿದ್ದಾರೆ. ಫೇಸ್‌ಬುಕ್‌ ಅವರಿಗೆಲ್ಲ, ಪ್ರತಿಭಾ ಪ್ರದರ್ಶನಕ್ಕೆ ಉತ್ತಮ ವೇದಿಕೆ ಕೊಟ್ಟಿದೆ. ಆದರೆ ಇನ್ನೂ ಕೆಲವರ ಬರಹಗಳನ್ನು ನೋಡಿದಾಗ, ಇವರೆಲ್ಲಾ ಯಾಕಾಗಿ ಬರೆಯುತ್ತಾರೋ ಎಂದೂ ಅನಿಸುತ್ತದೆ. ಆದರೆ, ತಪ್ಪಿಲ್ಲದೆ ನಾಲ್ಕು ಸಾಲು ಕನ್ನಡ ಬರೆಯುವ ಜನರು ಇದ್ದಾರಲ್ಲಾ ಅಂತ ತಿಳಿದು ಖುಷಿಯಾಗುತ್ತದೆ. 

-ಕೆಲವು ಮಹಿಳೆಯರು ಗಂಡನ ಜೊತೆ ಮನೆಗೆಲಸ ಹಂಚಿಕೊಳ್ಳುವುದೇ ದೊಡ್ಡ ತಪ್ಪು ಎಂದು ಭಾವಿಸಿರುತ್ತಾರಲ್ಲ?
ಸಮಾನತೆ ಹೋರಾಟ ಮಾಡಿ ಸಾಧಿಸುವಂಥದ್ದಲ್ಲ. ನನ್ನ ಪ್ರಕಾರ ಹೆಣ್ಣು ಗಂಡು ಸಮಾನರಲ್ಲ. ಹೆಣ್ಣು ಹೆಣ್ಣೇ, ಗಂಡು ಗಂಡೇ. ಹೋರಾಡಿ ಸಮಾನತೆ ಸಾಧಿಸುತ್ತೇವೆ ಎನ್ನುವುದು ನನ್ನ ಪ್ರಕಾರ ಬೋಗಸ್‌. ಪರಸ್ಪರ ಪ್ರೀತಿ, ಸಾಮರಸ್ಯದಿಂದ ಮಾತ್ರ ಹೆಣ್ಣು ಗಂಡು ಎಂಬ ಭೇದವನ್ನು ತೊಡೆದುಹಾಕಬೇಕು. ಹೆಣ್ಣು ಸಂಸಾರ ನಿಭಾಯಿಸಲು ಹೊರಗೆ ಹೋಗಿ ದುಡಿಯುತ್ತಾಳೆ ಎಂದ ಮೇಲೆ, ಮನೆಯಲ್ಲಿ ಗಂಡ ಆಕೆಯ ಮೇಲಿನ ಪ್ರೀತಿಯಿಂದ ಮನೆಗೆಲಸ ಹಂಚಿಕೊಳ್ಳಬೇಕು. ಯಾವುದೂ ಒತ್ತಾಯದಿಂದ, ಪ್ರತಿಭಟನೆಯಿಂದ ಆಗುವುದಿಲ್ಲ. 

ಹೆಮ್ಮೆಯಿಂದ ಒಪ್ಪಿಕೊಳ್ತಾರೆ
ನನಗೆ ಅಡುಗೆ ಮಾಡುವುದು ಇಷ್ಟದ ಕೆಲಸವಲ್ಲ. ಆದರೆ ಪ್ರಭುಗೆ ಅದು ತುಂಬಾ ಪ್ರೀತಿಯ ಕೆಲಸ. ಅಡುಗೆ ಮನೆಗೆ ಹೋದರೆ ತನ್ಮಯರಾಗಿ ಅಡುಗೆ ಮಾಡುತ್ತಾರೆ. ಅವರು ಅಡುಗೆಗೆ ಸಂಬಂಧಿಸಿದ 2 ಪುಸ್ತಕಗಳನ್ನೂ ಬರೆದಿದ್ದಾರೆ. ಅದರಲ್ಲೊಂದು, 365 ಬಗೆಯ ಬೆಳಗಿನ ಉಪಾಹಾರಗಳ ರೆಸಿಪಿಯದ್ದು. ಮನೆಯಲ್ಲಿ ಬೆಳಗ್ಗೆಯ ತಿಂಡಿ ಅವರೇ ಮಾಡುವುದು. ಅಡುಗೆ ಮಾಡೋದು ಇಷ್ಟ ಅನ್ನುವುದಕ್ಕಿಂತಲೂ, ನನಗೆ ಕಷ್ಟವಾಗುತ್ತದೆ ಎಂದು ಅವರು ಅದನ್ನೆಲ್ಲಾ ಮಾಡುತ್ತಾರೆ. ಮನೆಗೆ ನೆಂಟರಿಷ್ಟರು ಬಂದಾಗಲೂ, ಅಡುಗೆಯಲ್ಲಿ ಸಹಾಯ ಮಾಡುತ್ತಾರೆ. ಕೆಲವು ಗಂಡಸರು ಅಡುಗೆಯಲ್ಲಿ ಹೆಂಡತಿಗೆ ಸಹಾಯ ಮಾಡಿದರೂ, ನೆಂಟರಿಷ್ಟರ ಎದುರು ಅದನ್ನು ಒಪ್ಪಿಕೊಳ್ಳುವುದಿಲ್ಲ. ಆದರೆ ನನ್ನ ಗಂಡ, ಬಂದವರ ಮುಂದೆ ಅದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. 

ಜಗಳ ಆಡದೆ ಬಾಳ್ಳೋಕಾಗ್ತದಾ?
ಸಮಾನ ಆಸಕ್ತಿ, ಮೌಲ್ಯಗಳು ಏನೇ ಇದ್ದರೂ, ನಾವು ಗಂಡ ಹೆಂಡಿರಲ್ಲವೇ? ಹೀಗಾಗಿ ನಮ್ಮ ನಡುವೆಯೂ ಜಗಳ ಮಾಮೂಲಿ. ಪ್ರಭುಗೆ, ಮಾತನಾಡುವ ಧಾಟಿ, ಬಳಸುವ ಪದ ಎಲ್ಲವೂ ಶಿಷ್ಟವಾಗಿರಬೇಕು. ಏರು ಧ್ವನಿಯಲ್ಲಿ ಮಾತನಾಡುವುದು, ಮಾತಾಡಿದಾಗ ಪ್ರತಿಕ್ರಿಯಿಸದೇ ಸುಮ್ಮನಾಗುವುದು ಅವರಿಗೆ ಇಷ್ಟವಾಗದು. ಹಾಗೆ ಮಾಡಿದರೆ ಅವರಿಗೆ ಕೋಪ ಬರುತ್ತದೆ. ಸಿಟ್ಟು ಬಂದಾಗ ಅವರು ಬಯ್ಯುವುದಿಲ್ಲ, ಜಗಳವಾಡುವುದಿಲ್ಲ. ಆದರೆ ಮಾತನಾಡದೇ ಸುಮ್ಮನಾಗಿ, ಶಿಕ್ಷೆ ಕೊಡುತ್ತಾರೆ. ತಿಂಗಳು ಪೂರ್ತಿ ಮಾತು ಬಿಟ್ಟಿರುವುದೂ ಇದೆ. ಮೊದಲೆಲ್ಲ, ನನಗೆ ನೀವು ಸಮಯ ನೀಡುತ್ತಿಲ್ಲ ಎಂದು ಅವರೊಡನೆ ಜಗಳವಾಡುತ್ತಿದ್ದೆ. ದಿನಗಳೆದಂತೆ ಇಬ್ಬರೂ ಸಹಿಷ್ಣುಗಳಾಗಿದ್ದೇವೆ. ವಯಸ್ಸಿನ ಜೊತೆ ಮಾಗಿದ್ದೇವೆ. ಹಾಗಾಗಿ ಜಗಳ ತುಂಬಾ ಕಡಿಮೆಯಾಗಿದೆ. 

-ಚೇತನ ಜೆ.ಕೆ. 

Advertisement

Udayavani is now on Telegram. Click here to join our channel and stay updated with the latest news.

Next