ಸೆಪ್ಟೆಂಬರ್ 9ರಂದು ಯುಗಳ ಗಾಯನವನ್ನು ನಡೆಸಿಕೊಟ್ಟವರು ಚೆನ್ನೈನ ಕು| ಅನಾಹಿತಾ ಮತ್ತು
ಕು| ಅಪೂರ್ವಾ.ಅವರದು ಏಕರೂಪವಾಗಿ ಧ್ವನಿಸುವ ಕಂಠಸಿರಿಯ ಹೊಂದಾಣಿಕೆ, ಒಳ್ಳೆಯ ಮನೋಧರ್ಮ! ಸಾಂಪ್ರದಾಯಿಕತೆಗೆ ಹೆಚ್ಚಿನ ಆದ್ಯತೆ ನೀಡುವ ಈ ಯುವತಿಯರು ವಸಂತ ರಾಗದ ವರ್ಣವನ್ನು ತಾಳದ ಗತಿಭೇದದೊಂದಿಗೆ ಹಾಡಿ ತಮ್ಮ ಕಛೇರಿಗೆ ಲವಲವಿಕೆಯ ನಾಂದಿ ಹಾಡಿದರು. ತುಸುವೇ ಸ್ವರ ಪ್ರಸ್ತಾರಗಳೊಂದಿಗೆ ಹಾಡಲಾರ ರೀತಿಗೌಳ (ಬಾಲೇ) ಮತ್ತು ರಾಗಮಾಲಿಕೆ (ನಿಖೀಲಲೋಕ ನಾಯಕಿ) ಹೃದ್ಯವಾಗಿದ್ದವು. ಕಲ್ಯಾಣಿ (ಸರಸಿಜಭವ) ಮತ್ತು ಕೀರವಾಣಿ (ಕಲಿಕಿಯುಂಡೇ ಕದಾ) ಪ್ರಧಾನ ರಾಗಗಳಾಗಿದ್ದವು. ಕು| ಅಪೂರ್ವಾ ಕಲ್ಯಾಣಿಯನ್ನು ಮತ್ತು ಕು| ಅನಾಹಿತಾ ಕೀರವಾಣಿಯನ್ನು ಆಯಾ ರಾಗ ಭಾವಕ್ಕನುಗುಣವಾಗಿ, ಅನೇಕ ಸುಂದರ ಸಂಚಾರಗಳೊಂದಿಗೆ, ಅಲ್ಲಲ್ಲಿ ಜೀವಸ್ವರಗಳಲ್ಲಿ ಸುದೀರ್ಘವಾಗಿ ನಿಂತು ಹಿತವಾಗಿ ವಿಸ್ತರಿಸಿದರು. ವಯಲಾ ರಾಜೇಂದ್ರನ್ ಅವರ ನಾದಯುಕ್ತವಾದ ನುಡಿಸಾಣಿಕೆಯಲ್ಲಿ ಈ ಎರಡೂ ರಾಗಗಳು ಜೀವ ತುಂಬಿಕೊಂಡವು. ಮುಂದೆ ಕೃತಿ ನಿರೂಪಣೆ, ಸ್ವರ ವಿನಿಕೆಗಳು, “ಪೊರುತ್ತಂ’ಗಳು ದೋಷರಹಿತವಾಗಿದ್ದರೂ ಅದೇಕೋ ಹೊಸತನದ ಮಿಂಚು ಕಾಣಿಸಲಿಲ್ಲ.
Advertisement
ಗಾಯಕಿಯರ ಶೈಲಿಯನ್ನೇ ಅನುಸರಿಸಿದ ಮೃದಂಗ ವಿದ್ವಾನ್ ಸುನಾದಕೃಷ್ಣ ತನಿಯಲ್ಲಿ ತನ್ನ ವ್ಯಕ್ತಿತ್ವವನ್ನು ಸ್ಥಿರಪಡಿಸಿದರು. ಕಮಾಚ್(ನಾರೀಮಣಿ), ಕಾನಡಾ (ನಾ ನಿನ್ನ ಧ್ಯಾನ) ರಾಗಗಳಲ್ಲಿ ದೇವರನಾಮಗಳು ಮತ್ತು ಅಷ್ಟಪದಿಯ (ಲಲಿತ ಲವಂಗ) ಅನಂತರ ಬಿಂದುಮಾಲಿನಿಯ ಚುರುಕಾದ ತಿಲ್ಲಾನದೊಂದಿಗೆ ಕಛೇರಿ ಸಂಪನ್ನಗೊಂಡಿತು.
Related Articles
Advertisement
ವಯಲಿನ್ ಸಹವಾದಕ ಗೋಕುಲ್ ಪ್ರಧಾನ ಕೃತಿಗಳ ಆರೈಕೆಯ ಎಲ್ಲ ಹಂತಗಳಲ್ಲೂ ತಮ್ಮ ನುಡಿಸಾಕಣಿಕೆಯಲ್ಲಿ ತಮ್ಮದೇ ಆದ ಸ್ವಂತಿಕೆಯನ್ನು ನಿರೂಪಿಸಿದರು.
ಸೆ.5ರಂದು ಬೆಂಗಳೂರಿನ ರಮಣ ಬಾಲಚಂದ್ರನ್ ಅವರಿಂದ ವೀಣಾವಾದನ. ಸಾಂಪ್ರದಾಯಿಕತೆಯಲ್ಲಿ ಅಚಲವಾಗಿರುವ ಈ ಕಿಶೋರ ನಾಟಿ ರಾಗದ ಪ್ರಸ್ತುತಿಯ ಅನಂತರ ಸಾಮ (ಶಾಂತಮುಲೇಕ) ರಾಗವನ್ನು ಎತ್ತಿಕೊಂಡು, ಕರುಣಾರಸ ಪ್ರಧಾನವಾದ ಭಾವಕ್ಕನುಗುಣವಾಗಿ ಅರಳಿಸಿದರು. ಮಾಧುರ್ಯಪೂರ್ಣ ಸುರಟಿ (ವೇಗನೀವು), ಮನೋರಂಜನಿ (ಅಟುಕಾರ) ಕೃತಿಗಳ ಅನಂತರ ಪ್ರಧಾನವಾಗಿ ಭೈರವಿ (ಬಾಲಗೋಪಾಲ) ಕೃತಿಯನ್ನು ಅನಗತ್ಯ ಕಸರತ್ತುಗಳಿಲ್ಲದೆ ಶುದ್ಧವಾದ ರಾಗಪೋಷಣೆ, ಸ್ವರಕಲ್ಪನೆಗಳೊಂದಿಗೆ ನುಡಿಸಿದರು.
ಗೋರಖ ಕಲ್ಯಾಣ್ (ನುಡಿದರೆ) ವಚನ ಮತ್ತು ಮಣಿರಂಗು (ಜಯಜಯ) ಉತ್ಸವ ಸಂಪ್ರದಾಯದ ಕೀರ್ತನೆಯೊಂದಿಗೆ ಕಛೇರಿ ಸಂಪನ್ನಗೊಂಡಿತು. ಮೃದಂಗದಲ್ಲಿ ನಿಕ್ಷಿತ್ ಪುತ್ತೂರು ಮತ್ತು ಖಂಜಿರದಲ್ಲಿ ಸುಮುಖ ಕಾರಂತ ಒಳ್ಳೆಯ ಸಹವಾದನವನ್ನು ನೀಡಿದ್ದಾರೆ.
ಸೆ.10ರಂದು ವೇಣುವಾದನವು ಚೆನ್ನೈಯ ಕು| ಶಾಂತಲಾ ಸುಬ್ರಹ್ಮಣ್ಯ ಅವರಿಂದ ನಡೆಯಿತು. ನುಡಿಸುವಿಕೆಯಲ್ಲಿ ಚೂರೂ ಪಿಸಿರಿಲ್ಲದ ಶುದ್ಧತೆ, ಅಖಂಡತೆ, ರಾಗ, ಲಯಗಳ ಮೇಲಿನ ಹಿಡಿತ ಅವರದು! ತಿರುವನಂತಪುರಂ ಸಂಪತ್ ಅವರ ವಯಲಿನ್ ಸಹವಾದನವೂ ಧನಾತ್ಮಕವಾಗಿದ್ದು ಈ ಕಛೇರಿ ಒಳ್ಳೆ ಗತ್ತಿನಿಂದ ವಿಜೃಂಭಿಸಿತು.
ದರ್ಬಾರ್ ವರ್ಣದ ಅನಂತರ ಮೋಹನ (ಎವಿಕುರಾ) ಮತ್ತು ಚಂದ್ರಜೋತಿ (ಬಾಗಾಯನಯ್ಯ) ಅಚ್ಚುಕಟ್ಟಾದ ರಾಗ, ಸ್ವರ ಹಂದರಗಳೊಂದಿಗೆ ಪ್ರಸ್ತುತಗೊಂಡವು. ದೇವಾಮೃತವರ್ಷಿಣಿ (ಎವರನಿ) ತ್ವರಿತಗತಿಯ ಕೃತಿಯ ಬಳಿಕ ನುಡಿಸ ಲಾದ ಪ್ರಧಾನ ರಾಗ ಕೀರವಾಣಿ (ಕಲಿಗಿಯುಂಡೇ) ರಾಗದ ಗರಿಷ್ಠ ಸಾಧ್ಯತೆಗಳನ್ನು ಅನ್ವೇಷಿಸುತ್ತ ಸಾಗಿತು. ಕೊಳಲಿಗೆ ಸರಿಸಮಾನ ವಾಗಿ ಸಂಪತ್ ಉತ್ಕೃಷ್ಟವಾಗಿ ರಾಗವನ್ನು ಬೆಳೆಸಿದ್ದಾರೆ. ಈ ಇಡೀ ಪ್ರಸ್ತುತಿ ತೂಕದ್ದಾಗಿದ್ದು ರಸಿಕರ ಮೆಚ್ಚುಗೆಯನ್ನು ಪಡೆಯಿತು.
ರಾಗಗಳ ಲಕ್ಷಣ ಮತ್ತು ಸ್ವರೂಪಗಳಿಗೆ ಅನುಗುಣವಾಗಿ ಮೃದುವಾಗಿ ಮೃದಂಗ ನುಡಿಸಿದ ಪಾಲಾ^ಟ್ ಮಹೇಶ್‌ಕುಮಾರ್ ತನಿ ಆವರ್ತನದಲ್ಲಿ ನಡೆವೈವಿಧ್ಯಗಳಿಂದ ಮಿಂಚಿದ್ದಾರೆ.
ಸೆಪ್ಟೆಂಬರ್ 12ರಂದು ಪರ್ಕಳದ “ಸರಿಗಮ ಭಾರತಿ’ ಸಭಾಂಗಣದಲ್ಲಿ, ಉಡುಪಿಯ “ರಾಗಧನ’ ಸಂಸ್ಥೆಯ ವತಿಯಿಂದ “ರಂಜನಿ ಸಂಸ್ಮರಣೆ’ಯಲ್ಲಿ ಒಂದು ಉತ್ತಮವಾದ ಕಛೇರಿ ನಡೆಯಿತು. ಇದನ್ನು ನಡೆಸಿಕೊಟ್ಟವರು ಚೆನ್ನೈನ ಕು| ಸಹನಾ ಸಾಮ್ರಾಜ್. ಹಸನ್ಮುಖೀಯಾದ ಈ ಗಾಯಕಿಯ ಶಾರೀರದಲ್ಲಿ ಎಳೆತನದ ಮಾರ್ದವತೆ ಮತ್ತು ಅನುರಣನೆಯ ಸಖ್ಯವಿತ್ತು. ಸುಟವಾಗಿ ಧ್ವನಿಸುವ “ಅ’ಕಾರಗಳು ಇವರ ಪ್ರಸ್ತುತಿಗಳಿಗೆ ಹೆಚ್ಚಿನ ಅಂದವನ್ನು ನೀಡಿದವು.
ರಂಜನಿ ವರ್ಣದ ಅನಂತರ ಚುಟುಕಾದ ಸ್ವರವಿನಿಕೆಗಳಿದ್ದ ನಾಟ ರಾಗದ ಕೃತಿ (ಜಯ ಜಾನಕೀಕಾಂತ) ಮುಂದಿನ ಕಛೇರಿಗೆ ಗಟ್ಟಿಯಾದ ಬುನಾದಿಯನ್ನು ಒದಗಿಸಿತು. ಕೇದಾರ (ರಂಗನಾಥನ) ಮತ್ತು ಪರಜ್ (ತ್ರಿಲೋಕಮಾತೆ) ರಚನೆಗಳು ಉತ್ತಮವಾಗಿ ಕೇಳಿಸಿಕೊಂಡವು.
ಪಂತುವರಾಳಿಯ ಲಕ್ಷಣಯುತವಾದ ರಾಗವಿಸ್ತಾರ, ಕೃತಿ ನಿರೂಪಣೆ, (ಅಪರಾಮಭಕ್ತಿ) ನೆರವಲ್, ಸ್ವರ ಜೋಡಣೆಗಳು ಮತ್ತು ಮುಕ್ತಾಯಗಳು ಈ ಘನವಾದ ರಾಗಕ್ಕೆ ಮತ್ತು ಪ್ರಸ್ತುತಿಗೆ ನ್ಯಾಯ ಒದಗಿಸಿದವು. ಶಂಕರಾಭರಣದಲ್ಲಿ ಸುಂದರವಾದ ರಾಗ ಹಂದರಗಳನ್ನು ನಿರ್ಮಿಸಿದ ಗಾಯಕಿ, ಹೃದ್ಯವೆನಿಸುವ ಹತ್ತಾರು ಸಂಗತಿಗಳಿಂದ ಅಲಂಕೃತವಾದ ಕೃತಿ ಯನ್ನು (ಪೋಗದಿರೆಲೋ) ನಿರೂಪಿಸಿದರು. “ಪ್ರಧಾನ ರಾಗ’ ಎನ್ನುವ ನೆಲೆ ಯಲ್ಲಿ ಈ ಕೃತಿಗೆ ಒದಗಿಸಲಾದ ನೆರವಲ್ ಮತ್ತು ಸ್ವರಕಲ್ಪನೆಗಳು ತುಸುವೇ ಕಡಿಮೆಯಾಯಿತೇನೋ ಎನ್ನುವ ಭಾವನೆ ಶ್ರೋತೃಗಳ ಮನದಲ್ಲಿ ಮೂಡಿತ್ತು.
ವಿಜಯಗಣೇಶ್ ಅವರು ನುಡಿಸಿದ ಪಂತುವರಾಳಿ ಮತ್ತು ಶಂಕರಾಭರಣ ರಾಗಗಳು ಉನ್ನತಮಟ್ಟದ್ದಾಗಿದ್ದು, ಬಿಲ್ಲುಗಾರಿಕೆಯಲ್ಲಿ ಅವರ ನೈಪುಣ್ಯಕ್ಕೆ ಸಾಕ್ಷಿ ನೀಡಿದವು. ಸುನಾದಕೃಷ್ಣ ಮೃದುವಾಗಿ ಮೃದಂಗ ಸಹಕಾರ ನೀಡಿದ್ದಾರೆ.ಕೆಲವು ದೇವರನಾಮಗಳೊಂದಿಗೆ ಕಛೇರಿ ಕೊನೆಗೊಂಡಿತು. ಸರೋಜಾ ಆಚಾರ್ಯ