Advertisement

World Tourism Day 2023: ಕಣ್ಮನ ಸೆಳೆಯುವ ಅದ್ಭುತ ತಾಣ “ ಈ ರಾಣಿಪುರಂ ಗಿರಿಧಾಮ”

06:27 PM Sep 26, 2023 | Team Udayavani |

ಇತ್ತೀಚಿನ ದಿನಗಳಲ್ಲಿ ಭಾನುವಾರ ಬಂದರೆ ಸಾಕು ಮನೆ ಬಿಟ್ಟು ಹೊರಗಡೆ ಸುತ್ತಾಟ ಮಾಡುವವರೆ ಹೆಚ್ಚು , ಹೌದು ಪ್ರಸ್ತುತ ದಿನಗಳಲ್ಲಿ ಕೆಲಸದ ಒತ್ತಡದಿಂದ ಸ್ವಲ್ಪ ರಿಲೀಫ್ ಪಡೆಯಲು  ಪ್ರಕೃತಿಯ ಜೊತೆ ಒಡನಾಟ, ಸುತ್ತಾಟ ಅವಶ್ಯಕ. ನಮಗೂ ಕೂಡಾ ಹೆಚ್ಚಾಗಿ ಟ್ರಿಪ್ ಹೋಗುವ ಅಭ್ಯಾಸ ಅದರಲ್ಲೂ  ಸ್ನೇಹಿತರ ಜೊತೆ ಹೋಗುವುದು ಅಂದ್ರೆ ಅದರ ಮಜಾನೇ ಬೇರೆ ಅಲ್ವಾ, ಕಳೆದ ಆಗಸ್ಟ್ 15 ರಂದು ನಾವು ನಮ್ಮ ಸ್ನೇಹಿತರು ಸೇರಿ ದಕ್ಷಿಣ ಕನ್ನಡ ಬಂಟ್ವಾಳದಿಂದ ಹೋದದ್ದು  ರಾಣಿಪುರಂ ಗಿರಿಧಾಮಕ್ಕೆ , ಇದೊಂದು ಅದ್ಭುತ ಪಯಣ.

Advertisement

ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯಲ್ಲಿರುವ ಒಂದು ಸುಂದರವಾದ ಗಿರಿಧಾಮ ರಾಣಿಪುರಂ, ತನ್ನ ತಂಪಾದ ಹವಾಮಾನ ಮತ್ತು ಆಳವಾದ ಕಾಡಿನ ಮೂಲಕ ಟ್ರೆಕ್ಕಿಂಗ್ ಗೆ  ಪ್ರಮುಖವಾಗಿ ಹೆಸರುವಾಸಿಯಾಗಿದೆ.  ಕೇರಳದ ಊಟಿ ಎಂದೂ ಕರೆಯಲ್ಪಡುವ ಈ ಗಿರಿಧಾಮವು ಸಮುದ್ರ ಮಟ್ಟದಿಂದ 750 ಮೀ (2,460 ಅಡಿ) ಎತ್ತರದಲ್ಲಿದೆ. ಮೊದಲು “ಮಾಡತುಮಲ” ಎಂದು ಕರೆಯಲಾಗುತ್ತಿದ್ದ  ರಾಣಿಪುರಂ, ಬೆಟ್ಟಗಳ ತಳದಲ್ಲಿರುವ ಕಣಿವೆಯಲ್ಲಿರುವ ಅತಿಥಿ ಗೃಹಗಳಿಂದ ಪ್ರಾರಂಭವಾಗುತ್ತದೆ. ಅಲ್ಲಿಂದ ಬೆಟ್ಟಕ್ಕೆ ಹೋಗಲು  ಎರಡು  ಮಾರ್ಗಗಳಿವೆ.

ಈ ಪ್ರದೇಶವು ದಟ್ಟ ಅರಣ್ಯ ಸಸ್ಯ ಮತ್ತು ಹಸಿರು ಹುಲ್ಲುಗಾವಲುಗಳನ್ನು ಹೊಂದಿದೆ. ಟ್ರಕ್ಕಿಂಗ್ ಮೂಲಕ ನಾವು ಭೂದೃಶ್ಯ ಮತ್ತು ಹಸಿರು ಕಣಿವೆಗಳ ವಿಶಾಲವಾದ ನೋಟವನ್ನು ನೋಡಬಹುದಾಗಿದೆ. ಟ್ರೆಕ್ಕಿಂಗ್ ಹಾದಿಯಲ್ಲಿ ಬಂಡೆಗಳು ಜಾರುತ್ತವೆ ಹಾಗಾಗಿ ಚಾರಣ ಹೋಗುವಾಗ ಎಚ್ಚರದಿಂದಿರಬೇಕು. ಹಾಗೆ ಇಲ್ಲಿ ರಕ್ತ ಹೀರುವ ಲೀಚ್‌(ಇಂಬಳ) ಹುಳ ತುಂಬಾ ಸಾಮಾನ್ಯವಾಗಿರುತ್ತದೆ.

ರಾಣಿಪುರಂನ  ಟ್ರೆಕ್ ಮಾರ್ಗವು ಬಹಳ ಸುಂದರವಾಗಿದೆ ಮತ್ತು ಪ್ರಕೃತಿ ಛಾಯಾಗ್ರಾಹಕರಿಗೆ ಚಿತ್ರವನ್ನು ಸೆರೆಹಿಡಿಯಲು ಇದೊಂದು ತುಂಬಾ ಉತ್ತಮ ಸ್ಥಳವಾಗಿದೆ. ಪ್ರಾಣಿ ಪಕ್ಷಿಗಳಿಂದ ಕೂಡಿರುವ ಈ ಅದ್ಭುತ ತಾಣವು ಖಂಡಿತವಾಗಿಯೂ ಒಂದು ಪ್ರಶಾಂತ ಅನುಭವವನ್ನು ಪ್ರವಾಸಿಗರಿಗೆ ನೀಡುವುದರಲ್ಲಿ ಸಂಶಯವಿಲ್ಲ.

Advertisement

ಮಧ್ಯಾಹ್ನದ ತೀವ್ರ ಬಿಸಿಲಿನಿಂದ ತಪ್ಪಿಸಲು ಬೆಳಿಗ್ಗಿನ ಹೊತ್ತಿನಲ್ಲಿ ಪ್ರಯಾಣ ಮಾಡುವುದು ಉತ್ತಮ. ಅಲ್ಲಿ ನಿಮಗೆ ಯಾವುದೇ ತಿಂಡಿ ತಿನಿಸು ಸಿಗುವುದಿಲ್ಲ, ಹಾಗಾಗಿ ಹೋಗುವಾಗಲೇ ಉಪಹಾರಕ್ಕೆ ಎಲ್ಲಾ ವ್ಯವಸ್ಥೆ ಮಾಡಿಕೊಂಡು ಹೋಗುವುದು ಉತ್ತಮ. ನಮಗೂ ನಮ್ಮ ಸ್ನೇಹಿತರಿಗೂ ಉತ್ತಮ ಅನುಭವ ನೀಡಿದ  ಟ್ರೆಕ್ಕಿಂಗ್ ಇದಾಗಿದ್ದು, ನಮ್ಮ ನೆನಪಿನ ಬುತ್ತಿಯಲ್ಲಿ  ರಾಣಿಪುರಂನ ನೆನಪು ಎಂದಿಗೂ ಶಾಶ್ವತ.

* ಶೈಲಶ್ರೀ ಬಾಯಾರ್

Advertisement

Udayavani is now on Telegram. Click here to join our channel and stay updated with the latest news.

Next