Advertisement

ಗರ್ಭದಲ್ಲಿರುವಾಗಲೇ ಮಗುವಿಗೆ ಸಂಸ್ಕಾರ  

11:29 AM Mar 20, 2019 | |

ರಾಣಿಬೆನ್ನೂರ: ವೀರಶೈವ ಧರ್ಮದಲ್ಲಿ 8 ತಿಂಗಳ ಗರ್ಭಾವಸ್ಥೆಯಲ್ಲಿರುವಾಗಲೇ ಲಿಂಗಧಾರಣೆ ಸಂಸ್ಕಾರ ನೀಡಲಾಗುವುದು. ಜನ್ಮತಾಳಿದ ನಂತರ ಆ ಮಗು ಸಂಸ್ಕಾರದ ಜೊತೆ ಗುರು ಹಿರಿಯರ, ತಂದೆ ತಾಯಿಗಳಲ್ಲಿ ವಿನಯಪೂರ್ವಕವಾಗಿ ನಡೆದುಕೊಳ್ಳುವ ಪರಿಪಾಠ ಪಾಲಿಸುತ್ತದೆ ಎಂದು ಕಾಶಿ ಜಗದ್ಗುರು ಡಾ| ಚಂದ್ರಶೇಖರ ಶಿವಾಚಾರ್ಯ ಪಾದಂಗಳವರು ಹೇಳಿದರು.

Advertisement

ತಾಲೂಕಿನ ಲಿಂಗದಹಳ್ಳಿ ರಂಭಾಪುರಿ ಶಾಖಾ ಹಿರೇಮಠದಲ್ಲಿ ಮಂಗಳವಾರ ಶ್ರೀ ಜಗದ್ಗುರು ರೇಣುಕಾಚಾರ್ಯರ ಜಯಂತ್ಯುತ್ಸವ, ಜಗದ್ಗುರು ವಿಶ್ವೇಶ್ವರ ಶಿವಾಚಾರ್ಯ ಗುರುಕುಲ ಮತ್ತು ಎಕ್ಸ್‌ಲೆಂಟ್‌ ಪಬ್ಲಿಕ್‌ ಶಾಲೆಗೆ 5ನೇ ತರಗತಿಯಿಂದ ಉಚಿತ ವಸತಿ ಶಾಲೆಯ ಪ್ರಾರಂಭೋತ್ಸವ ಹಾಗೂ ಸರ್ವಧರ್ಮ ಸಾಮೂಹಿಕ ವಿವಾಹ ಮತ್ತು ಧರ್ಮಸಭೆ ಉದ್ಘಾಟಿಸಿ ಆಶೀರ್ವಚನ ನೀಡಿದರು.

ದಕ್ಷಿಣ ಭಾರತದಲ್ಲಿ ಕನ್ಯಾಕುಮಾರಿ ಬಿಟ್ಟರೆ ಲಿಂಗದಹಳ್ಳಿ ರಂಭಾಪುರಿ ಶಾಖಾ ಹಿರೇಮಠದಲ್ಲಿ ಮಾತ್ರ ಸ್ಪಟಿಕಲಿಂಗ ಕಾಣಸಿಗುತ್ತದೆ. ಭೂಕೈಲಾಸವಾದ ಹಿಮಾಲಯ ಪರ್ವತದಲ್ಲಿ ಹಿಮಗಟ್ಟಿಗೊಂಡು ಸ್ಪಟಿಕ ಶಿಲೆಯಾಗುತ್ತಿದೆ. ಅಂತಹ ಶಿಲೆಯುಳ್ಳ ಸ್ಪಟಿಕ ಲಿಂಗ ಲಿಂಗದಹಳ್ಳಿಯಲ್ಲಿರುವುದರಿಂದ ಲಿಂಗದಹಳ್ಳಿ ಎಂಬ ಹೆಸರು ಈ ಗ್ರಾಮಕ್ಕೆ ಬಂದಿದೆ ಎಂದು ಶ್ರೀಗಳು ಹೇಳಿದರು.

ಸರ್ಕಾರಿ ನೌಕರರಾಗಿ ಲಕ್ಷಕ್ಕೂ ಅಧಿಕ ಸಂಬಳ ಪಡೆಯುತ್ತಿರುವ ಶ್ರೀಮಠದ ಪೀಠಾಧಿ ಪತಿಗಳು ಸಂಸಾರಸ್ಥರಾಗಿ ವೈಭೋಗದ ಜೀವನ ನಡೆಸಬಹುದಿತ್ತು. ಆದರೆ, ಸಂಸಾರದ ಅಭಿಲಾಸೆಗೆ ತಿಲಾಂಜಲಿ ನೀಡಿ ಸನ್ಯಾಸ ದೀಕ್ಷೆ ಪಡೆದು, ದೇಶ ಸೇವೆ ಜತೆಗೆ ಈಶ ಸೇವೆ ಮಾಡುತ್ತಿರುವುದು ಶ್ಲಾಘನೀಯ ಎಂದು ನುಡಿದರು.

ಈ ಮೊದಲು ಎಲ್ಲಿಯೂ ನಮ್ಮ ಹೆಸರಿನ ಸಮುದಾಯ ಭವನ ನಿರ್ಮಾಣ ಮಾಡಿಲ್ಲ. ಆದರೆ, ಶ್ರೀ ಮಠದಲ್ಲಿ “ಕಾಶಿ ಜಗದ್ಗುರು ಡಾ| ಚಂದ್ರಶೇಖರ ಶಿವಾಚಾರ್ಯ ಸಭಾ ಭವನ’ ನಿರ್ಮಿಸಲಾಗಿದೆ. ಎಕ್ಸ್‌ಲೆಂಟ್‌ ಪಬ್ಲಿಕ್‌ ಶಾಲೆಗೆ 5ನೇ ತರಗತಿಯಿಂದ ಉಚಿತ ವಸತಿ ಶಾಲೆ ಪ್ರಾರಂಭಿಸಿ ಬಡಮಕ್ಕಳಿಗೆ ಭವಿಷ್ಯ ರೂಪಿಸಲು ವೀರಭದ್ರ ಶಿವಾಚಾರ್ಯರ ಕಾರ್ಯಕ್ಕೆ ನಮ್ಮ ಸಹಕಾರ ಸದಾ ಇದೆ. ಈ ನಿಮಿತ್ತ ಭವನ ನಿರ್ಮಾಣಕ್ಕೆ ನಮ್ಮ ಕೈಬರಳಿನ ಉಂಗುರದಿಂದಲೇ ಭೂಮಿಪೂಜೆ ನೆರವೇರಿಸುತ್ತಿದ್ದೇನೆ. ಶ್ರೀಮಠ ಬಂಗಾರದಂತೆ ಹೊಳಪುಳ್ಳದ್ದಾಗಲಿ ಎಂದು ಕಾಶಿ ಜಗದ್ಗುರುಗಳು ಹರಿಸಿದರು.

Advertisement

ರಟ್ಟಿಹಳ್ಳಿಯ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಇಂದು ಯುವ ಪೀಳಿಗೆಯು ಟಿವಿ, ಮೊಬೈಲ್‌ ಬಳಕೆಯಿಂದ ಅಮೂಲ್ಯ ಸಮಯ ವ್ಯರ್ಥ ಮಾಡಿಕೊಳ್ಳುತ್ತಿದ್ದಾರೆ. ಅವರನ್ನು ಪುನಃ ಸಂಸ್ಕಾರ ಹಾಗೂ ಸನ್ಮಾರ್ಗಕ್ಕೆ ತರಲು ಗುರುಕುಲ ಮಾದರಿಯ ಶಾಲೆಗಳಿಂದ ಮಾತ್ರ ಸಾಧ್ಯ. ಹಿಂದಿನ ಕಾಲದಲ್ಲಿ ಪಾಲಕರು ಗುರುಕುಲ ಶಾಲೆಗಳಲ್ಲಿ ಮಾತ್ರ ಶಿಕ್ಷಣ ಕೊಡಲು ಮುಂದಾಗುತ್ತಿದ್ದರು. ಆ ದೆಶೆಯತ್ತ ಮರಳುವ ಕಾಲ ದೂರ ಉಳಿದಿಲ್ಲ ಎಂದು ಹೇಳಿದರು.

ಶ್ರೀಮಂತರ ಆಹಾರವಾಗಿದ್ದ ಅನ್ನ ಬಡವರದಾಗಿದ್ದರೆ, ಬಡವರ ಆಹಾರ ಎಂದು ಕರೆಯುತ್ತಿದ್ದ ಸಿರಿಧಾನ್ಯ ಶ್ರೀಮಂತರ ಆಹಾರವಾಗಿ ಪರಿವರ್ತನೆಯಾಗಿದೆ. ಅದೇ ರೀತಿ ಶೈಕ್ಷಣಿಕ ಕ್ಷೇತ್ರಗಳು ಪರಿವರ್ತನೆಯಾಗಲಿವೆ. ಪ್ರಸ್ತುತ ಶ್ರೀಮಠದಲ್ಲಿ ಗುರುಕುಲ ಮಾದರಿಯ ಶಾಲೆ ಪ್ರಾರಂಭಿಸಿರುವುದು ಸಾಕ್ಷಿಯಾಗಿದೆ ಎಂದು ನುಡಿದರು.

ಸಾನ್ನಿಧ್ಯ ವಹಿಸಿದ್ದ ಶ್ರೀಮಠದ ಶ್ರೀವೀರಭದ್ರ ಶಿವಾಚಾರ್ಯ ಸ್ವಾಮಿಗಳು, ಬೆಂಗಳೂರಿನ ಮಲ್ಲಿಕಾರ್ಜುನ ದೇವರು ಆಶೀರ್ವಚನ ನೀಡಿದರು. ಎಸ್‌.ಎಸ್‌.ರಾಮಲಿಂಗಣ್ಣನವರ, ವಿಶ್ವಾರಾಧ್ಯ ಅಜ್ಜೆàವಡಿಮಠ, ಮಂಜುನಾಥ ಗೌಡಶಿವಣ್ಣನವರ, ರುಕ್ಮಿಣಿಬಾಯಿ ಸಾವುಕಾರ, ಸುಜಿತ್‌ ಜಂಬಗಿ, ಭಾರತಿ ಅಳವಂಡಿ, ಚೈತ್ರಾ ಮಾಗನೂರ, ನಿತ್ಯಾನಂದ ಕುಂದಾಪುರ, ಕೊಟ್ರೇಶಪ್ಪ ಎಮ್ಮಿ, ಗಂಗಾಧರ ಶಾಸ್ತ್ರೀ, ಪ್ರಶಾಂತ ರಿಪ್ಪನಪೇಟೆ, ಆರ್‌.ಎಸ್‌.ಪಾಟೀಲ, ಪಿ.ಎನ್‌.ಪೂಜಾರ, ಅಜ್ಜಪ್ಪ ಪೂಜಾರ, ರುದ್ರಗೌಡ ಪಾಟೀಲ ಸೇರಿದಂತೆ ಮತ್ತಿತರರು ಇದ್ದರು.

ಕಾರ್ಯಕ್ರಮಕ್ಕೂ ಮುನ್ನ ಸೂರ್ಯೋದಯ ಕಾಲಕ್ಕೆ ಶಿವದೀಕ್ಷೆ, ಗುಗ್ಗಳ ಸಮಾರಾಧನೆ ಮತ್ತು ಕಾಶಿ ಜಗದ್ಗುರು ಡಾ| ಚಂದ್ರಶೇಖರ ಶಿವಾಚಾರ್ಯ ಶ್ರೀಗಳಿಂದ ನೂತನ ಸಭಾ ಭವನದ ಶಂಕುಸ್ಥಾಪನೆ ನಡೆಯಿತು. ನಂತರ ಮಹಾರುದ್ರಯಾಗದ ಪೂರ್ಣಾಹುತಿ ನಡೆಯಿತು. ಮಹಾರುದ್ರಯಾಗ ನಡೆಸಿಕೊಟ್ಟ ಶಾಸ್ತ್ರೀಗಳಿಗೆ ಕಾಶಿ ಶ್ರೀಗಳು ಸನ್ಮಾನಿಸಿ ಆಶೀರ್ವಾದ ನೀಡಿದರು. ಸಂಜೆ ರಥೋತ್ಸವ ಬಹು ವಿಜೃಂಭಣೆಯಿಂದ ನೆರವೇರಿತು.

‘ಲಿಂಗ ಮಧ್ಯೆ ಜಗತ್‌ ಸರ್ವಂ’ ಎಂಬ ವೇದವ್ಯಾಸರ ವಾಣಿಯಂತೆ ಯಾವುದೇ ಧಾತುಗಳಿಲ್ಲದೇ ಆತ್ಮವನ್ನೇ ಲಿಂಗವನ್ನಾಗಿಸಿಕೊಂಡು ಆತ್ಮಲಿಂಗ ಪೂಜಿಸಬಹುದು. ಆದರೆ, ಮಣ್ಣು, ಮರಳು, ಶಿಲೆಗಳಿಂದಲೂ ಲಿಂಗವನ್ನ ಮಾಡಿ ಬಾಹ್ಯವಾಗಿ ಪೂಜಿಸಲೂಬಹುದು. ಇದರಿಂದ ತನ್ಮಯನಾದಂತೆ ಆತ್ಮವೇ ಲಿಂಗವಾಗಿ ಪರಿವರ್ತನೆಯಾಗುತ್ತದೆ.
ಕಾಶಿ ಜಗದ್ಗುರು ಡಾ| ಚಂದ್ರಶೇಖರ
ಶಿವಾಚಾರ್ಯರ

Advertisement

Udayavani is now on Telegram. Click here to join our channel and stay updated with the latest news.

Next