ಚಾಮರಾಜನಗರ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತ ಹಾಗೂ ಎಲ್ಲರ ಸಹಕಾರದೊಂದಿಗೆ ರಾಜ್ಯ ಮಟ್ಟದ ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಆಚರಣೆ ಕಾರ್ಯಕ್ರಮವನ್ನು ನಗರದಲ್ಲಿ ಅ.23ರಂದು ಅದ್ಧೂರಿಯಾಗಿ ಹಮ್ಮಿಕೊಳ್ಳುವ ಸಂಬಂಧ ನಗರದಲ್ಲಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ, ರಾಜ್ಯಮಟ್ಟದ ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಆಚರಣೆ ಸಂಬಂಧ ಪೂರ್ವಭಾವಿ ಸಭೆ ನಡೆಯಿತು. ಸರ್ಕಾರದ ಆದೇಶದ ಅನುಸಾರ ಚಾಮರಾಜನಗರದಲ್ಲಿ ಕಿತ್ತೂರು ರಾಣಿ ಚನ್ನಮ್ಮ ಜಯಂತಿಯ ರಾಜ್ಯಮಟ್ಟದ ಕಾರ್ಯಕ್ರಮವನ್ನು ಅ.23ರ ಭಾನುವಾರ ಅತ್ಯಂತ ಅದ್ಧೂರಿಯಾಗಿ ಆಯೋಜನೆ ಮಾಡುವ ಕುರಿತು ವಿವರವಾಗಿ ಚರ್ಚಿಸಲಾಯಿತು. ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ವರನಟ ಡಾ. ರಾಜ್‌ಕುಮಾರ್ ರಂಗಮಂದಿರದಲ್ಲಿ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಯಿತು.
ಸಭೆಯ ಆರಂಭದಲ್ಲಿ ಮುಖಂಡರು ಮಾತನಾಡಿ, ಈ ಬಾರಿ ರಾಜ್ಯ ಮಟ್ಟದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಆಚರಣೆಗೆ ಜಿಲ್ಲೆಗೆ ಅವಕಾಶ ಸಿಕ್ಕಿದೆ. ಈ ಕಾರ್ಯಕ್ರಮ ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಹೆಚ್ಚು ಕಲಾತಂಡಗಳಿಂದ ಕಿತ್ತೂರು ರಾಣಿ ಚನ್ನಮ್ಮ ಅವರ ಭಾವಚಿತ್ರ ಮೆರವಣಿಗೆ ಮಾಡಬೇಕು. ನಾವೂ ಸಹ ಎಲ್ಲ ಸಹಕಾರ ನೀಡಲಿದ್ದೇವೆ. ಕಾರ್ಯಕ್ರಮ ಅರ್ಥಪೂರ್ಣ ಹಾಗೂ ವಿಜೃಂಭಣೆಯಿಂದ ನಡೆಯಲು ಅಗತ್ಯವಿರುವ ಎಲ್ಲಾ ಸಿದ್ಧತೆಯನ್ನು ತ್ವರಿತವಾಗಿ ಮಾಡಬೇಕು ಎಂದರು. ರಾಜ್ಯಮಟ್ಟದ ಕಾರ್ಯಕ್ರಮ ನಡೆಯುತ್ತಿರುವ ಹಿನ್ನೆಲೆಯಲ್ಲಿ ಯಶಸ್ವಿಯಾಗಲು ಎಲ್ಲರ ಪೂರ್ಣ ಬೆಂಬಲ ಪಡೆಯಬೇಕು. ಎಲ್ಲಾ ಸಂಘ ಸಂಸ್ಥೆಗಳು, ಗ್ರಾಮೀಣ ವ್ಯಾಪ್ತಿಯ ವಿವಿಧ ಸಂಘಗಳು, ಇಲಾಖೆಗಳು ತೊಡಗಿಸಿಕೊಳ್ಳಬೇಕು. ಒಂದೇ ಸಮುದಾಯಕ್ಕೆ ಸೀಮಿತಗೊಳಿಸದೇ ಎಲ್ಲರ ವಿಶ್ವಾಸ ಸಹಕಾರ ಪಡೆದು ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಲು ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದು ಸೇರಿದಂತೆ ಕಾರ್ಯಕ್ರಮ ಏರ್ಪಾಡು ಸಂಬಂಧ ಮುಖಂಡರು ಹಲವು ಸಲಹೆಗಳನ್ನು ನೀಡಿದರು.
ಕಾರ್ಯಕ್ರಮ ಆಯೋಜನೆಗೆ ಜಿಲ್ಲೆಗೆ ಅವಕಾಶ: ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಮಾತನಾಡಿ, ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಆಚರಣೆಯ ರಾಜ್ಯಮಟ್ಟದ ಕಾರ್ಯಕ್ರಮ ಆಯೋಜನೆಗೆ ಜಿಲ್ಲೆಗೆ ಅವಕಾಶ ಲಭಿಸಿದೆ. ಹೀಗಾಗಿ ಅತ್ಯುತ್ತಮವಾಗಿ ಕಾರ್ಯಕ್ರಮ ಏರ್ಪಾಡು ಮಾಡಲು ಎಲ್ಲಾ ಸಿದ್ದತೆ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ಕಾರ್ಯಕ್ರಮ ಆಯೋಜನೆ ಸಂಬಂಧ ಮುಖಂಡರು ನೀಡಿರುವ ಸಲಹೆ ಸೂಚನೆಗಳನ್ನು ಪರಿಗಣಿಸಿ ಎಲ್ಲರ ಸಹಕಾರದೊಂದಿಗೆ ಯಶಸ್ವಿಗೊಳಿಸಲಾಗುವುದೆಂದು ತಿಳಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಗುರುಲಿಂಗಯ್ಯ, ಮುಖಂಡರಾದ ಅಮ್ಮನಪುರ ಮಲ್ಲೇಶ್, ನಾಗಶ್ರೀ ಪ್ರತಾಪ್, ಆಲೂರು ಮಲ್ಲು, ಕೆ.ಬಿ. ಸ್ವಾಮಿ, ಬಸವನಪುರ ರಾಜಶೇಖರ್, ಮಲ್ಲಿಕಾರ್ಜುನ್ (ನಟೇಶ್), ಜೆ.ಎನ್. ಸತೀಶ್, ಎಂ.ಬಿ. ನಾಗರಾಜು, ಎಚ್.ಎಂ. ಮಧು, ಕೆ.ಎಂ. ಪ್ರಸಾದ್, ವೈ.ಬಿ. ಮಧುಚಂದ್ರ, ಶಿವಶಂಕರ್, ಕೆ.ಎಸ್. ನಾಗರಾಜು, ಇತರೆ ಮುಖಂಡರು, ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಇದ್ದರು.