Advertisement

ಹುಬ್ಬಳ್ಳಿಯ ಮೂವರು ಮಹಿಳಾ ಮಣಿಗಳಿಗೆ ರಾಣಿ ಚನ್ನಮ್ಮ ಪ್ರಶಸ್ತಿ

02:11 PM Mar 09, 2021 | Team Udayavani |

ಹುಬ್ಬಳ್ಳಿ: ಮಹಿಳೆಯರ ಸಾಧನೆ ಹಾಗೂ ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವ ಸಾಧನೆ ಗುರುತಿಸಿ ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ನೀಡುವ ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿಗೆ ನಗರದ ಮೂವರು ಸಾಧಕಿಯರು ಆಯ್ಕೆಯಾಗಿದ್ದಾರೆ. ಸಾಹಿತ್ಯ ಕೃಷಿಯಲ್ಲಿ ತೊಡಗಿರುವ ಶಿವಲಿಂಗಮ್ಮ ಕಟ್ಟಿ, ಜಲತರಂಗ ವಾದನದಲ್ಲಿ ನಾಡಿನ ಗಮನ ಸೆಳೆದಿರುವ ವಿದುಷಿ ಶಶಿಕಲಾ ದಾನಿ ಹಾಗೂ ಸ್ವ ಉದ್ಯೋಗದ ಮೂಲಕ ಸಾವಿರಾರು ಯುವತಿಯರು, ಮಹಿಳೆಯರಿಗೆ ತರಬೇತಿ ನೀಡಿ ನೂರಾರು ಜನರಿಗೆ ಉದ್ಯೋಗ ನೀಡಿರುವ ಸುನಿತಾ ದಿವಟೆ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಮಾ. 10ರಂದು ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ.

Advertisement

ಶಿವಲಿಂಗಮ್ಮ ಕಟ್ಟಿ  :

84ರ ಇಳಿವಯಸ್ಸಿನಲ್ಲೂ ಸಾಹಿತ್ಯಾಸಕ್ತಿ ಕುಂದದ ಸಾಧಕಿ. ವಿಶ್ವೇಶ್ವರ ನಗರದಲ್ಲಿ ಸಣ್ಣ ಮನೆಯೊಂದರಲ್ಲಿ ವಾಸವಾಗಿದ್ದಾರೆ. ಅಡುಗೆ ಪುಸ್ತಕ, ಲಿಂಗ ಪೂಜೆ, ಅನುಷ್ಠಾನ, ಹಿಂದಿನ ಶರಣೆಯರು, ತೆರೆದ ಪುಟ ಸೇರಿದಂತೆ ಇದುವರೆಗೆ 50ಕ್ಕೂ ಹೆಚ್ಚು ಪುಸ್ತಕಗಳನ್ನು ರಚಿಸಿದ್ದಾರೆ. ತಮ್ಮ ದುಡಿಮೆ ಮೂಲಕವೇ ಪುಸ್ತಕಗಳನ್ನು ಹೊರತಂದಿದ್ದಾರೆ. ಯಾರ ನೆರವು ಪಡೆಯದೆ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. ಪ್ರಶಸ್ತಿಯ ಗೀಳು ಇಲ್ಲ. ಇದಕ್ಕಾಗಿ ಪುಸ್ತಕ ಬರೆಯಲಿಲ್ಲ. ಮನೆಯ ಪಕ್ಕದವರು ಒತ್ತಾಯ ಮಾಡಿ ಅರ್ಜಿ ಹಾಕಿದ್ದಾರೆ. ಪ್ರಶಸ್ತಿ ಬಂದಿರುವುದು ನನ್ನ ಕಾರ್ಯಕ್ಕೆ ಎನ್ನುವುದಕ್ಕಿಂತ ಇಂತಹ ವಯಸ್ಸಿನಲ್ಲಿ ಸ್ವಾವಲಂಬಿ ಜೀವನ ನಡೆಸಬಹುದು ಎನ್ನುವುದಕ್ಕೆ ಪ್ರೇರಣೆಯಾಗಲಿ ಎನ್ನುತ್ತಾರೆ ಶಿವಲಿಂಗಮ್ಮ

ಶಶಿಕಲಾ ದಾನಿ  :

ಜಲತರಂಗ ವಾದನ ಮೂಲಕ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದ್ದಾರೆ. ಕಳೆದ 45 ವರ್ಷಗಳ ಸಂಗೀತ ಸೇವೆಯಲ್ಲಿ ತೊಡಗಿರುವ ಶಶಿಕಲಾ ಅವರು ಮೂಲತಃ ಸಂಗೀತ ಕುಟುಂಬದಿಂದ ಬಂದವರು. ಸಿತಾರ್‌, ಹಾರ್ಮೋನಿಯಂ ಇನ್ನಿತರೆ ವಾದ್ಯಗಳನ್ನು ನುಡಿಸುತ್ತಾರೆ. ಹಿಂದೂಸ್ತಾನಿ ಸಂಗೀತಗಾರಾಗಿರುವ ಇವರು ಜಲತರಂಗ ವಾದನದಲ್ಲಿ ಹೆಚ್ಚು ಪ್ರಖ್ಯಾತಿ ಪಡೆದಿದ್ದಾರೆ. ವಿದೇಶಗಳಲ್ಲೂ ವಿದ್ಯಾರ್ಥಿಗಳನ್ನು ಹೊಂದಿದ್ದಾರೆ. ರೆಡಿಯೋ ಹಾಗೂ ದೂರದರ್ಶನ ಕಲಾವಿದರಾಗಿ ಸಂಗೀತಸೇವೆಯಲ್ಲಿದ್ದಾರೆ. ಇವರ ಸಂಗೀತ ಸಾಧನೆಗೆ ಹಲವು ಪ್ರಶಸ್ತಿಗಳು ದೊರೆತಿದ್ದು, ಇದೀಗ ಕಿತ್ತೂರು ಚನ್ನಮ್ಮ ಪ್ರಶಸ್ತಿ ಲಭಿಸಿದೆ. ಇವರ ಪುತ್ರ ಸುಜ್ಞಾನ ದಾನಿ ಜಲತರಂಗ ವಾದನ ಕುರಿತು ಪಿಎಚ್‌ಡಿ ಮಾಡುತ್ತಿದ್ದಾರೆ. ಅಳಿವಿನ ಹಂತದಲ್ಲಿರುವ ಈ ವಾದನ ಉಳಿಸಿ ಬೆಳೆಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಪ್ರಶಸ್ತಿ ಲಭಿಸಿರುವುದು ಪ್ರೋತ್ಸಾಹ ನೀಡಿದಂತಾಗಿದ್ದು, ಸಂತಸ ತಂದಿದೆ ಎನ್ನುತ್ತಾರೆ ಶಶಿಕಲಾ.

Advertisement

ಸುನಿತಾ ದಿವಟೆ :

ಸರಕಾರಿ ನೌಕರಿಗಾಗಿ ಕಾಯದೆ ಸ್ವ ಉದ್ಯೋಗದಲ್ಲಿ ಯಶಸ್ವಿಯಾಗಿದ್ದಾರೆ. ತಮ್ಮೊಂದಿಗೆ ನೂರಾರು ಮಹಿಳೆಯರಿಗೆ ಉದ್ಯೋಗ ನೀಡಿರುವ ಸುನಿತಾ ವಿಶ್ವೇಶ್ವರ ನಗರದವರು. ಮಹಿಳೆಯರ ಉಡುಪು ಸಿದ್ಧಪಡಿಸುವ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಕಳೆದ 13 ವರ್ಷಗಳಲ್ಲಿ ಸುಮಾರು 5000 ಸಾವಿರಕ್ಕೂ ಹೆಚ್ಚು ಮಹಿಳೆಯರಿಗೆ ತರಬೇತಿ ನೀಡಿದ್ದಾರೆ. ತರಬೇತಿ ಪಡೆದ ಆಸಕ್ತ ಹಾಗೂಕೌಶಲ ಮಹಿಳೆಯರ ಮೂಲಕ ಉಡುಪುಗಳನ್ನು ಸಿದ್ಧಪಡಿಸಿ ಅಮೆಜಾನ್‌, ಫ್ಲಿಪ್‌ಕಾರ್ಟ್ ನಂತಹ ಕಂಪನಿಗಳ ಮೂಲಕ ಆನ್‌ಲೈನ್‌ನಲ್ಲಿ ಮಾರಾಟ ಮಾಡುತ್ತಿದ್ದಾರೆ. ಇದೀಗ ಇವರೇ ನಾರಿ ಸಹಾಯ ಎನ್ನುವ ಆ್ಯಪ್‌ ಮೂಲಕ ಮಾರುಕಟ್ಟೆ ಕಂಡುಕೊಂಡಿದ್ದಾರೆ. ನೂರಾರು ಮಹಿಳೆಯರಿಗೆ ಉದ್ಯೋಗ ಕಲ್ಪಿಸಿದ ಸಾಧನೆಗೆ ಈ ಪ್ರಶಸ್ತಿ ಲಭಿಸಿದೆ. ಮಹಿಳೆ ಮನಸ್ಸು ಮಾಡಿದರೆ ಯಾವುದೂ ಅಸಾಧ್ಯವಲ್ಲ. ಈ ಪ್ರಶಸ್ತಿ ಇನ್ನಷ್ಟು ಮಹಿಳೆಯರಿಗೆ ಪ್ರೇರಣೆಯಾಗಲಿ ಎನ್ನುತ್ತಾರೆ ಸುನಿತಾ.

Advertisement

Udayavani is now on Telegram. Click here to join our channel and stay updated with the latest news.

Next