Advertisement
ಮತದಾರರಲ್ಲಿ ಜಾಗೃತಿ ಮೂಡಿಸಲು, ವಿಶೇಷವಾಗಿ ಮತದಾನ ಮಾಡಲು ಪ್ರೇರೇಪಿಸಲು ಚುನಾವಣಾ ಆಯೋಗದ ನಿರ್ದೇಶದಂತೆ ಉಡುಪಿ ಜಿಲ್ಲಾಡಳಿತದ ಮತದಾರ ಜಾಗೃತಿ ಅಭಿಯಾನ ಸಮಿತಿ (ಸ್ವೀಪ್) ವತಿಯಿಂದ ನಡೆಯುತ್ತಿರುವ ಅನೇಕ ಕಾರ್ಯಕ್ರಮಗಳಲ್ಲಿ ರಂಗೋಲಿ ಸ್ಪರ್ಧೆಯೂ ಒಂದು. ಎ. 29ರಂದು ಬಿಗ್ ಬಜಾರ್ ಸಮೀಪ ಮುಖ್ಯರಸ್ತೆಯಲ್ಲಿ ನಡೆದ ರಂಗೋಲಿ ಸ್ಪರ್ಧೆಯಲ್ಲಿ ಯುವಕ ಯುವತಿಯರು ಉತ್ಸಾಹದಿಂದ ಪಾಲ್ಗೊಂಡರು.
ಸ್ವೀಪ್ ಸಮಿತಿ ಅಧ್ಯಕ್ಷ, ಜಿ.ಪಂ. ಸಿಇಒ ಶಿವಾನಂದ ಕಾಪಶಿ, ನಗರಸಭೆ ಆಯುಕ್ತ ಜನಾರ್ದನ್, ಜಿಲ್ಲಾ ಯುವಜನ ಸಶಕ್ತೀ ಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ| ರೋಶನ್ ಕುಮಾರ್ ಶೆಟ್ಟಿ, ವಾರ್ತಾಧಿಕಾರಿ ರೋಹಿಣಿ, ಹಿರಿಯ ನಾಗರಿಕರ ಸಶಕ್ತೀಕರಣ ಇಲಾಖೆಯ ಅಧಿಕಾರಿ ನಿರಂಜನ ಭಟ್, ತಾ| ಶಿಶು ಅಭಿವೃದ್ಧಿ ಯೋಜನಾಧಿಕಾರಿ ವೀಣಾ, ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ್ ಕಾಮತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಗ್ರೇಸಿ ಗೊನ್ಸಾಲ್ವಿಸ್ ಹಾಜರಿದ್ದರು. ಈ ಸ್ಪರ್ಧೆಯಲ್ಲಿ ರೇಖಾ ಭಟ್ ಪರ್ಕಳ ಪ್ರಥಮ, ಸುನಿತಾ ಭಟ್ ದ್ವಿತೀಯ ಬಹುಮಾನ ಗಳಿಸಿದರು. ಎಲ್ಲ ಸ್ಪರ್ಧಿಗಳಿಗೂ ಸಮಾಧಾನಕರ ಬಹುಮಾನ ನೀಡಲಾಗುವುದು ಎಂದು ಆಯೋಜಕರು ತಿಳಿಸಿದರು. ಬುಲೆಟ್ ಗಿಂತ ಬ್ಯಾಲೆಟ್‌ಗೆ ಬಲ
ಮೊದಲ ಬಹುಮಾನ ಪಡೆದ ರಂಗೋಲಿಯಲ್ಲಿ ‘ಬ್ಯಾಲೆಟ್ ಈಸ್ ಸ್ಟ್ರಾಂಗರ್ ದ್ಯಾನ್ ಬುಲೆಟ್ಸ್’ (ಗುಂಡಿಗಿಂತಲೂ ಮತ ಹೆಚ್ಚು ಶಕ್ತಿಶಾಲಿ’), ‘ಯುವರ್ ಓಟ್ ಯುವರ್ ವಾಯ್ಸ್’ ಜಾಗೃತಿ ಸಂದೇಶಗಳು ಇದ್ದವು.
Related Articles
ರಂಗೋಲಿಯಲ್ಲಿ ಚುನಾವಣಾ ಪ್ರಕ್ರಿಯೆ ಚಿತ್ರಣ
ಇಬ್ಬರು ಯುವತಿಯರು ಸೇರಿ ಬಿಡಿಸಿದ ರಂಗೋಲಿ ಇಡೀ ಚುನಾವಣಾ ಪ್ರಕ್ರಿಯೆ ಕಣ್ಣ ಮುಂದಿಡುವಂತಿತ್ತು. ಚುನಾವಣಾ ಪೂರ್ವ (ಪ್ರೀ ಪೋಲಿಂಗ್), ಚುನಾವಣಾ ದಿನ (ಪೋಲಿಂಗ್ ಡೇ) ಮತ್ತು ಚುನಾವಣೋತ್ತರ (ಪೋಸ್ಟ್ ಪೋಲಿಂಗ್) ಎಂಬ ಮೂರು ವಿಭಾಗ ಚಿತ್ರಿಸಲಾಗಿತ್ತು. ‘ಸಮಾಧಾನ್’ ಮತ್ತು ‘ಸುವಿಧಾ’ ಆ್ಯಪ್‌ನ ಚಿತ್ರಣ, ಮತಯಂತ್ರ, ವಿವಿಪ್ಯಾಟ್, ಕರಾವಳಿ ಕರ್ನಾಟಕದ ಸೌಂದರ್ಯವನ್ನು ಕೂಡ ಹರ್ಷಿತಾ ಮತ್ತು ದಿಶಾ ಪೂಜಾರಿ ಅಜ್ಜರಕಾಡು ಅವರು ಕಟ್ಟಿಕೊಟ್ಟರು. ‘ವೋಟ್ ಫಾರ್ ಬೆಟರ್ ಇಂಡಿಯಾ’ ಎಂಬ ಸಂದೇಶ ಶಿರೋನಾಮೆಯಾಗಿತ್ತು.
Advertisement