Advertisement

ಉತ್ತರ ಕರ್ನಾಟಕದಲ್ಲಿ ಕಲಬುರಗಿ ರಂಗಾಯಣದ ರಂಗಯಾತ್ರೆ ಆರಂಭ

11:25 AM Nov 03, 2022 | Team Udayavani |

ಕಲಬುರಗಿ: ರಂಗಾಯಣದ ಜನಪ್ರಿಯ ನಾಟಕ “ಬಿಚ್ಚಿದ ಜೋಳಿಗೆ” ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರದರ್ಶನ ಮಾಡಲು ಹೊರಟಿದೆ. ಜನಪ್ರಿಯ ವೈದ್ಯ ಸಾಹಿತಿ, ಸಂಶೋಧಕರಾಗಿದ್ದ ಡಾ.ಸ.ಜ.ನಾಗಲೋಟಿಮಠ ಅವರ ಆತ್ಮಕಥೆ ಬಿಚ್ಚಿದ ಜೋಳಿಗೆಯು ಈಗಾಗಲೇ ಎಂಟು ಪ್ರದರ್ಶನ ಕಂಡಿದ್ದು, ಮೊದಲ ಹಂತದಲ್ಲಿ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಸಂಚರಿಸಲಿದೆ’ ಎಂದು ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿ ಹೇಳಿದರು.

Advertisement

ಹಿರಿಯ ಪತ್ರಕರ್ತ ಗಣೇಶ ಅಮೀನಗಡರವರು, ಡಾ.ಸ.ಜ.ನಾಗಲೋಟಿಮಠ ಅವರ ಆತ್ಮಕಥೆಯನ್ನು ರಂಗರೂಪ ಮಾಡಿದ್ದು, ರಾಷ್ಟ್ರೀಯ ನಾಟಕ ಶಾಲೆಯ ಪದವೀಧರ ಜಗದೀಶ ಜಾನೆ ನಿರ್ದೇಶಿಸಿ, ಸಂಗೀತ ಸಂಯೋಜನೆ ಮಾಡಿದ್ದಾರೆ.

ಇದೇ ನವೆಂಬರ್ 1ರಂದು ಚಿತ್ರದುರ್ಗ ಜಿಲ್ಲೆಯ ಸಾಣೆಹಳ್ಳಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ನಾಟಕೋತ್ಸವದಲ್ಲಿ ಪ್ರದರ್ಶನ ಮಾಡಲಿದ್ದು, 5ರಂದು ಹೊಸಪೇಟೆಯಲ್ಲಿ, 1ರಂದು ಬಾಗಲಕೋಟೆಯಲ್ಲಿ, 7ರಂದು ಅಮೀನಗಡದಲ್ಲಿ, 8ರಂದು ಗಜೇಂದ್ರಗಡದಲ್ಲಿ, 9 ಮತ್ತು 10ರಂದು ಹುನಗುಂದದಲ್ಲಿ, 11ರಂದು ಇಲಕಲ್ಲದಲ್ಲಿ, 12 ಮತ್ತು 13ರಂದು ವಿಜಯಪುರದಲ್ಲಿ, 14ರಂದು ಹುಬ್ಬಳ್ಳಿಯಲ್ಲಿ ಹಾಗೂ 15 ಮತ್ತು 16ರಂದು ಧಾರವಾಡದ ವಿದ್ಯಾವರ್ಧಕ ಸಂಘದ ನಾಟಕೋತ್ಸವದಲ್ಲಿ ಕಲಬುರಗಿ ರಂಗಾಯಣದ ನಾಟಕಗಳು ಪ್ರದರ್ಶನ ಕಾಣಲಿವೆ ಎಂದು ವಿವರಿಸಿದರು.

ಕಲಬುರಗಿ ರಂಗಾಯಣ ಸ್ಥಾಪನೆಯಾದಾಗಿನಿಂದ ಇದೇ ಮೊದಲ ಬಾರಿಗೆ ರೆಪರ್ಟರಿ ತಂಡವು ನಿರಂತರ ಹತ್ತು ಸ್ಥಳಗಳಲ್ಲಿ ಪ್ರದರ್ಶನ ಮಾಡುತ್ತಿದೆ. ಬಿಚ್ಚಿದ ಜೋಳಿಗೆ ನಾಟಕದ ಜತೆ ರಂಗಾಯಣದ ಮತ್ತೊಂದು ಸೂಪರ್ ಹಿಟ್ ನಾಟಕ, ಮಹಾದೇವ ಹಡಪದ ನಿರ್ದೇಶನದ ‘ಸಿರಿ ಪುರಂದರ ನಾಟಕದ ಪ್ರದರ್ಶನ ಕೂಡ, ಹುನಗುಂದ ಮತ್ತು ಧಾರವಾಡದಲ್ಲಿ ನಡೆಯಲಿದೆ ಎಂದು ತಿಳಿಸಿದರು.

ಸುದ್ದಿ ಗೋಷ್ಠಿಯಲ್ಲಿ ರಂಗಾಯಣ ಉಪನಿರ್ದೇಶಕಿ ಜಗದೀಶ್ವರಿ, ಅ. ನಾಸಿ, ಹಿರಿಯ ಸಿಬ್ಬಂದಿ ಮಲ್ಲಿನಾಥ ಜಿ.ಎಲ್‌. ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next