Advertisement

ಡೊಂಬಿವಲಿ ಕರ್ನಾಟಕ ಸಂಘದ ರಂಗತರಂಗ ನಾಟಕ ಸ್ಪರ್ಧೆ 

04:57 PM Nov 28, 2017 | Team Udayavani |

ಡೊಂಬಿವಲಿ: ಸುವರ್ಣ ಮಹೋತ್ಸವ ಸಂಭ್ರಮದಲ್ಲಿರುವ ಡೊಂಬಿವಲಿ ಕರ್ನಾಟಕ ಸಂಘವು ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಿ ತುಳು-ಕನ್ನಡಿಗರ ಪ್ರೀತಿ, ಗೌರವಕ್ಕೆ ಪಾತ್ರವಾಗಿದೆ. ಸಂಸ್ಥೆಯ ಸುವರ್ಣ ಮಹೋತ್ಸವದ ನಿಮಿತ್ತ ಸುವರ್ಣ ರಶ್ಮೀ ಎಂಬ ಸ್ಮರಣ ಸಂಚಿಕೆಯನ್ನು ಹೊರತಂದು ಅದರ ಮುಖಾಂತರ ಒಂದು ಕೋ. ರೂ. ವಿದ್ಯಾನಿಧಿಯನ್ನು ಸ್ಥಾಪಿಸಲು ಉದ್ದೇಶಿಸಿದೆ. ಇದರ ಮುಖಾಂತರ ಪ್ರತೀ ವರ್ಷ 7 ಲಕ್ಷ ರೂ. ಗಳನ್ನು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ನೀಡುವ ಆಶಯ ನಮ್ಮದಾಗಿದೆ. ಸಂಸ್ಥೆಯ ಈ ಕನಸನ್ನು ನನಸಾಗಿಸುವಲ್ಲಿ ತುಳು-ಕನ್ನಡಿಗರ ಪ್ರೋತ್ಸಾಹ ಸದಾಯಿರಲಿ ಎಂದು ಡೊಂಬಿವಲಿ ಕರ್ನಾಟಕ ಸಂಘದ ಅಧ್ಯಕ್ಷ ಇಂದ್ರಾಳಿ ದಿವಾಕರ ಶೆಟ್ಟಿ ಅವರು ಹೇಳಿದರು.

Advertisement

ನ. 26ರಂದು ಡೊಂಬಿವಲಿ ಪೂರ್ವದ ಸಾವಿತ್ರಿ ಭಾಯಿ ಫುಲೆ ಸಭಾಗೃಹದಲ್ಲಿ ನಡೆದ ಡೊಂಬಿವಲಿ ಕರ್ನಾಟಕ ಸಂಘದ ಸುವರ್ಣ ಮಹೋತ್ಸವ ಸಂಭ್ರಮದ ಸರಣಿ ಕಾರ್ಯಕ್ರಮ ರಂಗತರಂಗ ಕನ್ನಡ ಏಕಾಂಕ ನಾಟಕ ಸ್ಪರ್ಧೆ ಮತ್ತು ನಾಡಹಬ್ಬ ಆಚರಣೆಯ ಉದ್ಘಾಟನ ಸಮಾರಂಭದ  ಅಧ್ಯಕ್ಷತೆ ವಹಿಸಿ ಮಾತನಾಡಿದ ಇವರು, ಕಲೆ, ಸಾಹಿತ್ಯ, ಶಿಕ್ಷಣಕ್ಕೆ ಡೊಂಬಿವಲಿ ಕರ್ನಾಟಕ ಸಂಘವು ಬಹಳಷ್ಟು ಯೋಗದಾನ ನೀಡುತ್ತಿದೆ. ಯುವ ಪ್ರತಿಭೆಗಳನ್ನು ಗುರುತಿಸುವ ಉದ್ದೇಶದಿಂದ ರಂಗತರಂಗ ಎಂಬ ಕನ್ನಡ ಏಕಾಂಕ ನಾಟಕ ಸ್ಪರ್ಧೆಯನ್ನು ಆಯೋಜಿಸ ಲಾಗಿದ್ದು, ಸೋಲು-ಗೆಲುವನ್ನು ನೋಡದೆ ಎಲ್ಲರು ಉತ್ಸಾಹದಿಂದ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ತಿಳಿಸಿದರು.

ಅತಿಥಿಯಾಗಿ ಪಾಲ್ಗೊಂಡ ಕಲ್ಯಾಣ್‌ ಕರ್ನಾಟಕ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ನೂತನ್‌ ಹೆಗ್ಡೆ ಅವರು ಮಾತನಾಡಿ, ಎಲ್ಲಾ ಸೇವೆಗಳಿಗಿಂತ ಸಮಾಜ ಸೇವೆ ಶ್ರೇಷ್ಠವಾದುದು. ಈ ಸೇವೆಯಿಂದ ದೊರೆಯುವ ಮಾನಸಿಕ ತೃಪ್ತಿ ಬಲಾಡ್ಯರಾಗುವಂತೆ ಮಾಡುತ್ತದೆ. ಇದರಿಂದ ದೊರೆಯುವ ಮಾನ-ಸಮ್ಮಾನಗಳು ನಮಗೆ ಪ್ರೇರಣ ಶಕ್ತಿಯನ್ನು ನೀಡುವುದರ ಜತೆಗೆ ಆತ್ಮಸಂತೃಪ್ತಿಯನ್ನೂ ನೀಡುತ್ತದೆ.  ಡೊಂಬಿವಲಿ ಕರ್ನಾಟಕ ಸಂಘವೂ ನನಗೆ ಇಂದು ನೀಡಿದ ಈ ಸಮ್ಮಾನಕ್ಕೆ ನಾನು ಅರ್ಹಳ್ಳೋ ಎಂಬುವುದು ನನಗೆ ಗೊತ್ತಿಲ್ಲ. ಆದರೆ ತಾವು ನೀಡಿದ ಈ ಗೌರವವನ್ನು ಕಲ್ಯಾಣ್‌ ಕರ್ನಾಟಕ ಸಂಘಕ್ಕೆ ಅರ್ಪಿಸುತ್ತಿದ್ದೇನೆ. ಯಾಕೆಂದರೆ ನಾನು ಈ ಸಂಘದಲ್ಲಿ ಗೌರವ ಕಾರ್ಯದರ್ಶಿಯಾಗಿದ್ದು, ನನಗೆ ಸಮಾಜ ಸೇವೆ ಮಾಡಲು ಅವಕಾಶ ಮಾಡಿಕೊಟ್ಟಿದೆ. ಪ್ರಬಲ ಇಚ್ಛಾಶಕ್ತಿಯಿದ್ದಲ್ಲಿ ಮನುಷ್ಯ ಏನನ್ನೂ ಬೇಕಾದರೂ ಸಾಧಿಸಲು ಸಾಧ್ಯವಿದೆ ಎಂಬುದಕ್ಕೆ ಡೊಂಬಿವಲಿ ಕರ್ನಾಟಕ ಸಂಘದ ನಿದರ್ಶನವಾಗಿದೆ. ಕರ್ನಾಟಕದ ನಮ್ಮ ಶ್ರೀಮಂತ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಉಳಿಸಿ-ಬೆಳೆಸುವುದರ ಜೊತೆಗೆ ಸಹಸ್ರಾರು ಮಕ್ಕಳಿಗೆ ಜ್ಞಾನದಾಸೋಹ ನೀಡುತ್ತಿರುವ ಡೊಂಬಿವಲಿ ಕರ್ನಾಟಕ ಸಂಘದ ಕಾರ್ಯ ಅಭಿನಂದನೀಯವಾಗಿದೆ ಎಂದು ನುಡಿದರು.

ಇನ್ನೋರ್ವ ಅತಿಥಿ ಮೋಹನೆ ಕರ್ನಾಟಕ ಸಂಘದ ಅಧ್ಯಕ್ಷ ಪ್ರಕಾಶ್‌ ಆರ್‌. ಶೆಟ್ಟಿ ಅವರು ಮಾತನಾಡಿ, ನೋಡಿ ಕಲಿ-ಮಾಡಿ ತಿಳಿ ಎಂಬ ನಾಣ್ಣುಡಿಯಂತೆ ಡೊಂಬಿವಲಿ ಕರ್ನಾಟಕ ಸಂಘದಿಂದ ನೋಡಿ ಕಲಿಯಬೇಕಾದದ್ದು ಬಹಳಷ್ಟಿದೆ. ರಂಗತರಂಗ ನಾವು ಸ್ಪರ್ಧೆಗಳ ಮುಖಾಂತರ ನಾಟ್ಯ ಕಲೆಗೆ ಒಂದು ಹೊಸ ಆಯಾಯ ನೀಡಿದೆ. ಕಾರ್ಯಕ್ರಮಗಳನ್ನು ನೋಡುವುದು ಸುಲಭ. ಆದರೆ ನಡೆಸುವುದು ಬಹು ಪ್ರಯಾಸದ ಕೆಲಸ ಅಂತಹದರಲ್ಲಿ ಸುವರ್ಣ ಮಹೋತ್ಸವ ನಿಮಿತ್ತ ನಡೆಸುತ್ತಿರುವ ಸಂಘದ ಸರಣಿ ಕಾರ್ಯಕ್ರಮಗಳು ಜನಮನ ಗೆದ್ದಿದ್ದು, ಸಂಘದ ಸರ್ವತೋಮುಖ ಅಭಿವೃದ್ಧಿಗೆ ಶುಭಹಾರೈಸಿದರು.

ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ಆಗಮಿಸಿದ ಕಲ್ಯಾಣ್‌ ಡೊಂಬಿವಲಿ ಮಹಾನಗರ ಪಾಲಿಕೆ ಸದಸ್ಯ ರಮೇಶ್‌ ಮೋರೆ ಮಾತನಾಡಿ, ನನಗೆ ಕನ್ನಡ ಬರುವುದಿಲ್ಲ. ಆದರೆ ಕನ್ನಡಿಗರೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದು, ನನ್ನ ಸಾಧನೆಗೆ ಕನ್ನಡಿಗರ ಕೊಡುಗೆ ಅಪಾರ ಎಂದು ಹೇಳಿ ಶಿಕ್ಷಣ ಕ್ಷೇತ್ರಕ್ಕೆ ಡೊಂಬಿವಲಿ ಕರ್ನಾಟಕ ಸಂಘದ ಕೊಡುಗೆ ಅಪಾರವಾಗಿದೆ ಎಂದರು.

Advertisement

ಕರ್ನಾಟಕ ಸಂಘದ ಕಾರ್ಯಾಧ್ಯಕ್ಷ ಸುಕುಮಾರ್‌ ಎನ್‌. ಶೆಟ್ಟಿ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ಸಂಸ್ಥೆಯ ಸಿದ್ಧಿ-ಸಾಧನೆಗಳನ್ನು ವಿವರಿಸಿದರು. ಗಣ್ಯರನ್ನು ಸಂಘದ ಪದಾಧಿಕಾರಿಗಳು ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಗೌರವಿಸಲಾಯಿತು. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಷ್ಮಾ ಡಿ. ಶೆಟ್ಟಿ ಹಾಗೂ ಕಾರ್ಯದರ್ಶಿ ಸನತ್‌ ಕುಮಾರ್‌ ಜೈನ್‌ ಗಣ್ಯರನ್ನು ಪರಿಯಿಸಿ ದರು. ಭಾವನಾ ಬೇಂಗೆರಿ ಹಾಗೂ ಸ್ವಾಮಿ ಮಂಗಳ ವೆಡೆಕರ್‌ ಪ್ರಾರ್ಥನೆಗೈದರು. ಗಣ್ಯರು ಜ್ಯೋತಿ ಬೆಳಗಿಸಿ ಸಮಾರಂಭಕ್ಕೆ ಚಾಲನೆ ನೀಡಿದರು. ಜತೆ ಕಾರ್ಯದರ್ಶಿ ವಸಂತ ಸುವರ್ಣ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

ಸಂಸ್ಥೆಯ ಪದಾಧಿಕಾರಿಗಳಾದ ನಿಕಟಪೂರ್ವ ಅಧ್ಯಕ್ಷ ವಿಟuಲ್‌ ಶೆಟ್ಟಿ, ಉಪಾಧ್ಯಕ್ಷ ಡಾ| ದಿಲೀಪ್‌ ಕೋಪರ್ಡೆ, ಕಾರ್ಯಾಧ್ಯಕ್ಷ ಸುಕುಮಾನ್‌ ಎನ್‌. ಶೆಟ್ಟಿ, ಉಪ ಕಾರ್ಯಾಧ್ಯಕ್ಷ ಡಾ| ವಿಜಯ ಎಂ. ಶೆಟ್ಟಿ, ಗೌ. ಪ್ರ. ಕಾರ್ಯದರ್ಶಿ ದೇವದಾಸ್‌ ಎಲ್‌. ಕುಲಾಲ್‌, ಗೌರವ ಕೋಶಾಧಿಕಾರಿ ಲೋಕನಾಥ ಎ. ಶೆಟ್ಟಿ, ಜತೆ ಕಾರ್ಯದರ್ಶಿ ರಮೇಶ್‌ ಕಾಖಂಡಕಿ, ಜತೆ ಕೋಶಾಧಿ ಕಾರಿ ಚಿತ್ತರಂಜನ್‌ ಎಂ. ಆಳ್ವ, ಸುವರ್ಣ ಮಹೋತ್ಸವ ಸಮಿತಿ ಕಾರ್ಯದರ್ಶಿ ಸನತ್‌ ಕುಮಾರ್‌ ಜೈನ್‌, ಕೋಶಾಧಿಕಾರಿ ಸತೀಶ್‌ ಆಲಗೂರ, ಮಹಿಳಾ ವಿಭಾಗದ ಪರವಾಗಿ ಕಾರ್ಯಾಧ್ಯಕ್ಷೆ ಸುಷ್ಮಾ ಡಿ. ಶೆಟ್ಟಿ, ಕಾರ್ಯದರ್ಶಿ ಮಾಧುರಿಕಾ ಆರ್‌. ಬಂಗೇರ, ಲಲಿತ ಕಲಾ ವಿಭಾಗದ ಕಾರ್ಯಾಧ್ಯಕ್ಷ ಪ್ರಭಾಕರ ಆರ್‌. ಶೆಟ್ಟಿ, ಕಾರ್ಯದರ್ಶಿ ವಸಂತ ಎನ್‌. ಸುವರ್ಣ, ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ  ಸದಸ್ಯರು, ವಿವಿಧ ಉಪಸಮಿತಿ  ಪದಾಧಿಕಾರಿಗಳು, ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

ರಂಗನಿರ್ದೇಶಕ, ನಟ, ಕವಿ, ಸಾಹಿತಿ ಸಾ. ದಯಾ ಅವರ ಸಂಪೂರ್ಣ ಸಹಕಾರದೊಂದಿಗೆ ತುಳುಕೂಟ ರಂಗಚಾವಡಿ ಡೊಂಬಿವಲಿ ಇವರಿಂದ ಪಿ. ಲಂಕೇಶ್‌ ರಚನೆಯ, ರವಿ ಎಸ್‌. ಶೆಟ್ಟಿ ನಿರ್ದೇಶನದ ಪೊಲೀಸರಿದ್ದಾರೆ ಎಚ್ಚರಿಕೆ…?, ಕಲಾಸ್ಪಂದನ ಮುಂಬಯಿ ತಂಡ ದಿಂದ ಬಾಬಾ ಪ್ರಸಾದ್‌ ಅರಸ ಕುತ್ಯಾರ್‌ ರಚಿಸಿ, ನಿರ್ದೇಶಿಸಿರುವ ಸೋತು-ಗೆದ್ದವಳು, ಚಾರ್ಕೋಪ್‌ ಕನ್ನಡಿಗರ ಬಳಗದಿಂದ ಪರ್ವತ ವಾಣಿ ಅವರು ರಚಿಸಿ, ರಮೇಶ್‌ ಶಿವಪುರ ನಿರ್ದೇಶನದ ಹಗ್ಗದ ಕೊನೆ, ರಂಗಮಿಲನ ಮುಂಬಯಿ ತಂಡದಿಂದ ನಾರಾಯಣ ಶೆಟ್ಟಿ ನಂದಳಿಕೆ ರಚಿಸಿ, ಮನೋಹರ ಶೆಟ್ಟಿ ನಂದಳಿಕೆ ನಿರ್ದೇಶನದ ಸಂಸಾರ ನಾಟಕಗಳು ಪ್ರದರ್ಶನಗೊಂಡವು.

ಚಿತ್ರ-ವರದಿ : ಗುರುರಾಜ ಪೋತನೀಸ್‌.

Advertisement

Udayavani is now on Telegram. Click here to join our channel and stay updated with the latest news.

Next