Advertisement

ಸಾವಿನ ಕನಸು ಕಂಡ ರಂಗಪ್ಪ

07:00 AM Apr 19, 2018 | Team Udayavani |

ಒಂದೂರಲ್ಲಿ ರಂಗಪ್ಪನೆಂಬ ಹಣ್ಣಿನ ವ್ಯಾಪಾರಿಯಿದ್ದ. ಕುಟುಂಬದಲ್ಲಿ ಎಲ್ಲರೂ ಅವನನ್ನು ಇಷ್ಟಪಡುತ್ತಿದ್ದರು. ಅವನಿಗೆ ಹಣದ ಕೊರತೆಯಿರಲಿಲ್ಲ. ದೇವರ ದಯೆಯಿಂದ ಐಶ್ವರ್ಯ ಅವನಿಗೆ ಒಲಿದಿತ್ತು. ಒಂದು ದಿನ ಅವನಿಗೆ ತಾನು ಸತ್ತಂತೆ ಕನಸು ಬಿದ್ದಿತು. ಭಯಭೀತನಾದ ರಂಗಪ್ಪ ಜ್ಯೋತಿಷಿಯ ಬಳಿಗೆ ತೆರಳಿದ. ಜ್ಯೋತಿಷಿ ಅದು ಕೆಟ್ಟ ಕನಸು ಮಾತ್ರವಷ್ಟೇ, ನಿಮ್ಮ ಆಯುಷ್ಯ ತುಂಬಾ ಗಟ್ಟಿಯಿದೆ ಎಂದು ಹೇಳಿದಾಗ ರಂಗಪ್ಪನ ಮನಸ್ಸು ನಿರಾಳವಾಯಿತು. ಆದರೂ ಅನುಮಾನ, ಒಂದು ವೇಳೆ ನನ್ನ ಕನಸು ನಿಜವಾದರೆ ಏನು ಮಾಡೋದು ಎಂದು. ಮನೆಗೆ ಹಿಂದಿರುಗಿದಾಗ ಅವನು ತಾನು ಪ್ರಾಣಕ್ಕಿಂತ ಹೆಚ್ಚು ಇಷ್ಟಪಡುವ ಮಡದಿಯನ್ನು ಕೇಳಿದ “ನಾನು ಸಾಯೋವಾಗ ನನ್ನನ್ನು ಹಿಂಬಾಲಿಸುವೆಯಾ?’. ಮಡದಿ ಇಲ್ಲವೆಂದಳು. ಅವನಿಗೆ ಬೇಸರವಾಯಿತು. ತನ್ನನ್ನು ವಿಶ್ವಾಸದಿಂದ ಕಾಣುವ ಅಣ್ಣ ತಮ್ಮಂದಿರನ್ನು ಕೇಳಿದ. ಅವರೂ ಇಲ್ಲವೆಂದರು. ಅವನಿಗೆ ತುಂಬಾ ಬೇಸರವಾಯಿತು. 
ಇವರು ಯಾರೂ ತಾನು ಸತ್ತ ನಂತರ ಹಿಂಬಾಲಿಸದಿದ್ದ ಮೇಲೆ ಇವರೊಡನೆ ಬದುಕುವುದು ನಿರರ್ಥಕ ಎನ್ನಿಸತೊಡಗಿತು. ಮತ್ತೆ ಜ್ಯೋತಿಷಿಯ ಬಳಿ ತೆರಳಿ ತನ್ನ ದುಃಖವನ್ನು ತೋಡಿಕೊಂಡನು. ಜ್ಯೋತಿಷಿ ಒಂದು ಪ್ರಶ್ನೆ ಕೇಳಿದನು “ನಿನ್ನ ಅಣ್ಣ ತಮ್ಮಂದಿರು ಅದೇ ಪ್ರಶ್ನೆಯನ್ನು ನಿನಗೆ ಕೇಳಿದ್ದಿದ್ದರೆ ನೀನು ಅವರನ್ನು ಹಿಂಬಾಲಿಸುತ್ತಿದ್ದೆಯಾ?’. ರಂಗಪ್ಪ “ಇಲ್ಲಾ ನನ್ನ ಪತ್ನಿಯನ್ನು ಒಬ್ಬಳೇ ಬಿಟ್ಟು ಹೇಗೆ ಹೋಗುವುದು?’ ಎಂದನು. ಜ್ಯೋತಿಷಿ “ಒಂದು ವೇಳೆ ಪತ್ನಿಯೇ ಆ ಪ್ರಶ್ನೆಯನ್ನು ನಿಮಗೆ ಕೇಳಿದ್ದರೆ?’ ಎಂದು ಪ್ರಶ್ನಿಸಿದಾಗ ರಂಗಪ್ಪ, ಮಗನನ್ನು ಬಿಟ್ಟು ಹೇಗೆ ಹೋಗುವುದು?’ ಎಂದನು. ರಂಗಪ್ಪನಿಗೆ ತನ್ನ ಪ್ರಶ್ನೆಗೆ ಉತ್ತರ ಸಿಕ್ಕಿತ್ತು. ಸಾಯುವಾಗ ನಮ್ಮನ್ನು ಹಿಂಬಾಲಿಸುವುದು ನಮ್ಮ ಕರ್ಮಫ‌ಲವೇ ಹೊರತು ಬೇರೆ ಯಾರೂ ಅಲ್ಲ ಎಂಬುದು ರಂಗಪ್ಪನಿಗೆ ಅರ್ಥವಾಗಿತ್ತು.

Advertisement

ಗಣೇಶ ಭಟ್ಟ, ಕುಮಟಾ

Advertisement

Udayavani is now on Telegram. Click here to join our channel and stay updated with the latest news.

Next