ಕುರಿಯ – ಇವು ಯಕ್ಷಗಾನ ಆಸಕ್ತರನ್ನು ಮಂತ್ರಮುಗ್ಧಗೊಳಿಸುವ ಮೂರು ಅಕ್ಷರಗಳು. ಯಕ್ಷಕಲಾ ದಿಗಂತದಲ್ಲಿ ಬಾಲ ಭಾಸ್ಕರನಂತೆ ಉದಯಿಸಿ ಸ್ವಯಂ ಪ್ರಕಾಶದಿಂದ ವಿಜೃಂಭಿಸಿ ಅಸ್ತಮಿಸಿದ ವಿಠಲ ಶಾಸ್ತ್ರಿಗಳ ಪುಣ್ಯಗೃಹ ಕುರಿಯ. ಜೀವನೋತ್ತರದಲ್ಲಿ ಶಾಶ್ವತ ಕೀರ್ತಿಗೆ ಭಾಜನರಾದ “ಯಕ್ಷರಾಜ’ ವಿಠಲ ಶಾಸ್ತ್ರಿಗಳ ಸಹೋದರ ರಾಮ ಶಾಸ್ತ್ರಿಗಳು. ಅಣ್ಣನ ನೆರಳಾಗಿ ಲಕ್ಷ್ಮಣನಂತಿದ್ದ ರಾಮ ಶಾಸ್ತ್ರಿಗಳ ಪುತ್ರ ಕುರಿಯ ಗಣಪತಿ ಶಾಸ್ತ್ರಿಗಳು. ಬಾಲ ಗಣಪತಿ ಅಂಬೆಗಾಲಿಟ್ಟದ್ದೇ ತಾಳದ ಗತಿಗನುಗುಣ ವಾಗಿ. ಯಾಕೆಂದರೆ ಕುರಿಯ ಅದಾಗಲೇ ಯಕ್ಷಗಾನ ನಾಟ್ಯಶಾಲೆಯಾಗಿ ಮೆರೆಯುತ್ತಿತ್ತು. ಕಲಾವಿದರ ದಂಡು ಕಲೆಯುತ್ತಿದ್ದ – ಕಲಿಯುತ್ತಿದ್ದ ವಾತಾವರಣ ದಲ್ಲಿ ಗಣಪತಿ ಶಾಸ್ತ್ರಿಗಳು ತಾವಾಗಿ ತಲ್ಲೀನರಾದರು. ನಾಟ್ಯ, ಅರ್ಥಗಾರಿಕೆ, ಬಣ್ಣಗಾರಿಕೆ, ಪ್ರಸಂಗ ತರಬೇತಿ, ತಾಳಮದ್ದಳೆ ಎಲ್ಲವೂ ಕುರಿಯದ ಅರಮನೆಯಲ್ಲಿ. ಗಣಪತಿ ಶಾಸ್ತ್ರಿಗಳದ್ದು ಧಡೂತಿ ದೇಹ. ಆದರೂ ಕಲಿಕೆಯ ದಾಹ. ತಮ್ಮ ದೊಡ್ಡಪ್ಪನವರಿಂದ ನಾಟ್ಯಾಭ್ಯಾಸ. ಬೆಳೆವ ಸಿರಿಯ ಮೊಳಕೆ ಅಂದೇ ಚಿಗುರಿತ್ತು. ಏಕ ಪ್ರಾಯದ ಸಮಸ್ತರನ್ನು ಒಟ್ಟು ಸೇರಿಸಿ ಅನಧಿಕೃತ “ಪ್ರಸಂಗ ಪ್ರದರ್ಶನ’ ನಡೆಸುವ ಮಟ್ಟಕ್ಕೆ ತಂಡ ಕಟ್ಟಿದರು. ಅದಕ್ಕೆ ಗಣಪತಿ ಶಾಸ್ತ್ರಿಗಳೇ ನಾಯಕ. ಆರಂಭದಲ್ಲಿ ಕೇಳುತ್ತಿದ್ದರಂತೆ, “”ಪ್ರಸಂಗ ಯಾವುದಕ್ಕು ಗಣಪ್ಪ’ ಅಂತ. ಇವರ ಉತ್ತರ ಒಂದೇ… “ದೇವೀ ಮಹಾತ್ಮೆ’. ಸುಮಾರು ನಾಲ್ಕು ದಶಕಕ್ಕೂ ಮೀರಿ ರಂಗವನ್ನಾಳಿದ ಭಾಗವತರಾಗಿ ಶೋಭಿಸುವ ಈ ಶಾಸ್ತ್ರಿಗಳಿಗೆ ಯಕ್ಷ ಲೋಕವೇ ನಮಿಸು ತ್ತಿದೆ. ಇವರ ತಂದೆ ರಾಮ ಶಾಸ್ತ್ರಿಗಳು ಓರ್ವ ಹವ್ಯಾಸಿ ಭಾಗವತರು. ಕುರಿಯದಲ್ಲಿ ನಡೆಯುತ್ತಿದ್ದ ನಿತ್ಯ ಕೂಟಕ್ಕೆ ಅವರದ್ದೇ ಭಾಗವತಿಕೆ. ಅವರ ರಕ್ತವನ್ನೇ ಪಡೆದ ಗಣಪತಿ ಶಾಸ್ತ್ರಿಗಳು ಆರಂಭದಲ್ಲಿ ಕಲಿತದ್ದು ಪಾರೆಕೋಡಿ ಕೃಷ್ಣ ಭಟ್ಟರಲ್ಲಿ. ಮುಂದುವರಿಸಿದ್ದು ಬಾಯಾರು ಸುಬ್ರಾಯ ಮಾಸ್ತರರಲ್ಲಿ. ಇವರನ್ನು ತಿದ್ದಿ ರಂಗಕ್ಕೆ ಸಿದ್ಧಗೊಳಿಸಿದವರು ಚಿಪ್ಪಾರು ಕೃಷ್ಣಯ್ಯ ಬಲ್ಲಾಳರು.
ಹೀಗೆ ತನ್ನ ಬದುಕಿನ ಪಯಣದಲ್ಲಿ ಜಾಗಟೆಯನ್ನು ಸಂಗಾತಿಯಾಗಿ ಸ್ವೀಕರಿಸಿದ ಇವರು ಹವ್ಯಾಸಿ ಕೂಟಗಳಲ್ಲಿ ಭಾಗವತರಾಗಿ ಗುರುತಿಸಲ್ಪಟ್ಟರು. “ಕಟೀಲು ಮೂರನೇ ಮೇಳಕ್ಕೆ ಭಾಗವತರಾಗಿ ಕಳುಹಿಸಿಕೊಡಬಹುದೇ’ ಎನ್ನುವ ಯಜಮಾನ ಕಲ್ಲಾಡಿ ವಿಠಲ ಶೆಟ್ಟರ ಬೇಡಿಕೆಗೆ ರಾಮ ಶಾಸ್ತ್ರಿಗಳು ಸಂತೋಷದಿಂದ ಒಪ್ಪಿಕೊಂಡರು. “ದೇವಿಯ ಸೇವೆ ಮಾಡುವ ಭಾಗ್ಯ… ಧಾರಾಳವಾಗಿ ಕರೆದೊಯ್ಯಿರಿ’ ಎಂದು ಸಮ್ಮತಿಸಿ ದರು. ಅಲ್ಲಿಂದ ಪ್ರಾರಂಭವಾಯಿತು ಗಣಪತಿ ಶಾಸ್ತ್ರಿಗಳ ಗಾನಯಾನ.
ಹಿರಿಯರ ಹರಕೆ ಹೊತ್ತು ಕಟೀಲಿನಲ್ಲಿ ಮುಂಡಾಸು ಕಟ್ಟಿದ ಶಾಸ್ತ್ರಿಗಳಿಂದ ಇತಿಹಾಸವೇ ನಿರ್ಮಾಣವಾಯಿತು. ರಂಗಕ್ಕೆ ತಮ್ಮನ್ನು ನೂರಕ್ಕೆ ನೂರು ಅರ್ಪಿಸಿಕೊಂಡು ದುಡಿದರು. ತನ್ನ ಭಾಗವತಿಕೆಗೆ ಹೆಜ್ಜೆ ಹಾಕಿದ ಕಲಾವಿದರನ್ನು ಅಷ್ಟೇ ಸಮರ್ಥವಾಗಿ ದುಡಿಸಿದರು. ಇವರ ವೃತ್ತಿ ಜೀವನದಲ್ಲಿ ಸಕಾಲಿಕ ಮಾರ್ಗದರ್ಶನವಿತ್ತು ಆಶೀರ್ವದಿಸಿದವರು ಮದೆಗಾರ ನಿಡ್ಲೆ ನರಸಿಂಹ ಭಟ್ಟರು.
ಮೋಹನ ಸ್ವರ, ಆಶು ಕವಿತಾ ಸಾಮರ್ಥ್ಯ, ಸಮಗ್ರ ರಂಗ ಮಾಹಿತಿ, ಅದ್ಭುತ ಸಾಹಿತ್ಯ ಜ್ಞಾನ, ನಾಟ್ಯ ನಿಖರತೆ, ಇವೆಲ್ಲಕ್ಕಿಂತ ಹೆಚ್ಚಾಗಿ ಭಾಗವತ ರಿಗೆ ಅತ್ಯಗತ್ಯವಾದ ರಂಗ ನಿಯಂತ್ರಣ ಹಕ್ತಿ ಇತ್ಯಾದಿಗಳು ಕುರಿಯ ಗಣಪತಿ ಭಾಗವತರನ್ನು ಪ್ರತ್ಯೇಕವಾಗಿ ನಿಲ್ಲಿಸುತ್ತವೆ. ಇವರು ಸಂದರ್ಭಕ್ಕೆ ತಕ್ಕಂತೆ ವಜ್ರದಷ್ಟು ಕಠೊರರೂ ಹೂವಿನಷ್ಟು ಮೃದುವೂ ಆಗಬಲ್ಲವರು. ಹಾಗಾಗಿ ರಂಗಸ್ಥಳದ ನಾಲ್ಕು ಕಂಬಗಳ ನಡುವೆ ಸಾವಿರ ಸಾವಿರ ಪ್ರದರ್ಶನಗಳನ್ನು ಎಣೆ ಯಿಲ್ಲದಂತೆ ಕಟ್ಟಿಕೊಟ್ಟಿದ್ದಾರೆ, 28 ವರ್ಷ ಒಂದೇ ಮೇಳದಲ್ಲಿ ಸೇವೆ ಮಾಡಿ ಆನಂದಭಾಷ್ಪದೊಂದಿಗೆ ವಿರಮಿಸಿದ್ದಾರೆ. ಇವರಿಗೆ ಮೇಳ ದೂರವಾದರೂ ಅಭಿಮಾನಿಗಳು ಹತ್ತಿರವೇ ಇದ್ದಾರೆ. ಯಕ್ಷಗಾನವೂ ಅಂಟಿಕೊಂಡೇ ಇದೆ. ಪ್ರವೃತ್ತಿಯೂ ಭಾಗವತಿಕೆಯಲ್ಲಿ ಮುಂದುವರಿದಿದೆ. ಊರ ಪರವೂರ ಸಾವಿರಾರು ಆಟ – ಕೂಟಗಳಿಗೆ ಇಂದಿಗೂ ಉಸಿರಾಗಿದ್ದಾರೆ. ಕ್ಷೇತ್ರದ ಎಲ್ಲ ದಿಗ್ಗಜರನ್ನು ತಮ್ಮ ಹಾಡಿನ ಲಹರಿಯಲ್ಲಿ ಮೈಮರೆಯುವಂತೆ ಮಾಡಿದ ಭಾಗವತ ಕುರಿಯ ಗಣಪತಿ ಶಾಸ್ತ್ರಿಗಳಿಗೆ ಎಪ್ರಿಲ್ 30, 2017ರಂದು ಪುತ್ತೂರಿನ ನಟರಾಜ ವೇದಿಕೆಯಲ್ಲಿ ಅಭಿನಂದನಾ ಸಮಾರಂಭ ನಡೆಯಲಿದೆ.
ಶ್ರೀನಿವಾಸ ಭಟ್ ಸೇರಾಜೆ
ಚಿತ್ರಗಳು: ಡಾ| ಪದ್ಮನಾಭ ಕಾಮತ್