ಮಾಗಡಿ: ತಿರುಮಲೆಯ ಪ್ರಸಿದ್ಧ ರಂಗನಾಥಸ್ವಾಮಿ ಬಡಾವಣೆಯ ನಾಗರಿಕರು ಮೂಲ ಸೌಕರ್ಯಗಳ ಕೊರತೆಯಿಂದ ಸಮಸ್ಯೆ ಎದುರಿಸುತ್ತಿದ್ದು, ಪುರಸಭೆ ಅಧಿಕಾರಿಗಳು ಹಾಗೂ ಜನಪ್ರತಿನಿದಿಗಳು ಸಮಸ್ಯೆ ಗಳ ನಿವಾರಣೆಯತ್ತ ನಿರ್ಲಕ್ಷ್ಯ ತೋರಿದ್ದಾರೆ ಎಂದು ನಾಗರಿಕರು ಆರೋಪಿಸಿದ್ದಾರೆ.
ಕಾಂಕ್ರೀಟ್ ರಸ್ತೆ ಇಲ್ಲ: ಬಡಾವಣೆ ನಿರ್ಮಾಣವಾಗಿ 45 ವರ್ಷಗಳು ಕಳೆದರೂ ಸಹ ಇನ್ನೂ ಮುಖ್ಯ ರಸ್ತೆಯಾಗಲಿ ಅಥವಾ ಸಂಪರ್ಕ ರಸ್ತೆಗಳು ಅಭಿವೃದ್ಧಿ ಕಂಡಿಲ್ಲ. ಕಳೆದ ಮೂರು ವರ್ಷಗಳ ಹಿಂದೆ ಮುಖ್ಯ ರಸ್ತೆ ಡಾಂಬರೀಕರಣಕ್ಕೆ ಜಲ್ಲಿ ತಂದು ಸುರಿದು ಕಾಮಗಾರಿ ಕೈಗೊಳ್ಳದೆ ಕೈ ಬೀಡಲಾಗಿದೆ. ಆದರೂ ಕಾಮಗಾರಿ ಬಿಲ್ ಪಾವತಿಯಾಗಿದೆ ಎಂಬ ಆರೋಪವಿದ್ದು, ಉಳಿದ ಸಂಪರ್ಕ ರಸ್ತೆಗಳು ಸಹ ಡಾಂಬರೀಕರಣಗೊಂಡಿಲ್ಲ. ಜಲ್ಲಿಕಲ್ಲು ಮಣ್ಣಿನ ರಸ್ತೆಯಲ್ಲಿಯೇ ಸಂಚರಿಸಬೇಕಾದ ಪರಿಸ್ಥಿತಿ ಈ ಬಡಾವಣೆಯ ನಿವಾಸಿಗಳದ್ದಾಗಿದೆ.
ಚರಂಡಿಗಳೇ ಇಲ್ಲ: ಇಷ್ಟು ವರ್ಷ ಕಳೆದರೂ ಸಹ ಇನ್ನೂ ಎಷ್ಟೋ ಕಡೆ ಚರಂಡಿಗಳು ನಿರ್ಮಾಣ ವಾಗಿಲ್ಲ. ಮಳೆ ಬಿದ್ದರೆ ನೀರೆಲ್ಲ ರಸ್ತೆ ಮೇಲೆ ಹರಿದು ಹೋಗುವಂತ ಪರಿಸ್ಥಿತಿ ಇದೆ. ಕೆಲವು ಚರಂಡಿ ಬದಿಗಳಲ್ಲಿ ಗಿಡಗಂಟಿಗಳು ಎದೆಯತ್ತರಕ್ಕೆ ಬೆಳೆದು ನಿಂತಿದ್ದು, ವಿಷ ಜಂತುಗಳ ಆವಾಸ ಸ್ಥಾನವಾಗಿದೆ. ಚರಂಡಿಯಿಂದ ಸೂಸುವ ದುರ್ವಾಸನೆಯ ನಡವೆಯೇ ಮಕ್ಕಳು ಶಾಲೆಗೆ ನಡೆದು ಹೋಗುವಂತ ದುಸ್ಥಿತಿ ನಿರ್ಮಾಣವಾಗಿದೆ.
ಜಾಣಕುರುಡು ಪ್ರದರ್ಶನ: ಬಹುತೇಕ ಕಡೆ ಗಿಡಗಂಟಿಗಳು ಬೆಳೆದುನಿಂತಿದ್ದರೂ ಸ್ವತ್ಛಗೊಳಿಸುವ ಗೋಜಿಗೆ ಹೋಗದೆ ಸಹ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ. ಇದರಿಂದಾಗಿ ವಿಷ ಜಂತುಗಳು ಮನೆಯೊಳಗೆ ಪ್ರವೇಶಿಸುತ್ತವೆ ಎಂಬ ಭಯದಿಂದ ನಿವಾಸಿಗಳು ಮನೆಯ ಬಾಗಿಲು ಹಾಕಿಕೊಂಡೆ ಇರಬೇಕಿದೆ. ಒಂದೆಡೆ ಚರಂಡಿ ಸ್ವತ್ಛಗೊಳಿಸುತ್ತಿಲ್ಲ. ಮತ್ತೂಂದೆಡೆ ರಸ್ತೆಗಳು ಡಾಂಬರ್ ಕಂಡಿಲ್ಲ. ಜೊತೆಗೆ ಬೀದಿ ದೀಪಗಳು ಉರಿಯುತ್ತಿಲ್ಲ. ರಾತ್ರಿ ವೇಳೆ ಈ ರಸ್ತೆಗಳಲ್ಲಿ ಸಂಚರಿಸಲಾಗುತ್ತಿಲ್ಲ ಎಂಬ ದೂರುಗಳನ್ನು ಪುರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ, ಅಧಿಕಾರಿಗಳು ಮಾತ್ರ ತಮಗೂ ಇದಕ್ಕೂ ಸಂಬಂಧವಿಲ್ಲ ಎಂಬಂತೆ ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ.
ನಿತ್ಯ ಈ ರಸ್ತೆಯಲ್ಲಿ ಪ್ರಸಿದ್ಧ ರಂಗನಾಥಸ್ವಾಮಿ ದರ್ಶನಕ್ಕೆ ಭಕ್ತರ ದಂಡೇ ಆಗಮಿಸುತ್ತದೆ. ರಸ್ತೆ ಬದಿಯಲ್ಲಿ ಮುಳ್ಳಿನ ಬೇಲಿ ಬೆಳೆದು ನಿಂತಿದ್ದು, ನಗರದಿಂದ ಬರುವ ಜನರು ಈ ರಸ್ತೆ ಬದಿಯನ್ನು ಗಮನಿಸಿ ಕಾಡಿನಂತೆ ಬಾಸವಾಗುತ್ತಿದೆ ಎನ್ನುತ್ತಾರೆ. ದೂರದೃಷ್ಟಿಯಿಂದ ನಿರ್ಮಾಣವಾಗಿರುವ ಈ ಬಡಾವಣೆಯ ಸ್ಥಿತಿಯೇ ಹೀಗಾದರೆ ಉಳಿದ ಬಡಾವಣೆಗಳ ಸ್ಥಿತಿಯೂ ಹೊರತಾಗಿಲ್ಲ. ಅದರಲ್ಲೂ ಖಾಲಿ ನಿವೇಶನಗಳಂತೂ ನಿಜಕ್ಕೂ ವಿಷಜಂತುಗಳ ಆವಾಸ ಸ್ಥಾನವಾಗಿದೆ. ಪಕ್ಕದ ಮನೆಯ ವಾಸಿಗಳಂತು ಆತಂಕದಿಂದಲೇ ವಾಸಿಸುತ್ತಿದ್ದಾರೆ.
ಹೋರಾಟದ ಎಚ್ಚರಿಕೆ: ಕಾಲ ಕಾಲಕ್ಕೆ ಕಂದಾಯ ಇತರೆ ಶುಲ್ಕವನ್ನು ಪುರಸಭೆಗೆ ಜಮಾ ಮಾಡಿ ಕೊಂಡು ಬರುತ್ತಿದ್ದೇವೆ. ಆದರೂ ಪುರಸಭೆ ತಮಗೆ ಯಾವುದೇ ಮೂಲಭೂತ ಸೌಕರ್ಯಗಳನ್ನು ಸಮರ್ಪಕವಾಗಿ ಒದಗಿಸುತ್ತಿಲ್ಲ. ಹೀಗೆ ಮುಂದುವರೆದರೆ, ಬಡಾವಣೆ ನಾಗರೀಕರಲ್ಲೆರೂ ಸೇರಿ ಪುರಸಭೆ ಮುಂದೆ ಪ್ರತಿಭಟನಾ ಹಮ್ಮಿಕೊಳ್ಳಬೇಕಾಗುತ್ತದೆ ಎಂದ ಸ್ಥಳಿಯ ನಾಗರಿಕರು ಎಚ್ಚರಿಕೆ ನೀಡಿದ್ದಾರೆ.
-ತಿರುಮಲೆ ಶ್ರೀನಿವಾಸ್