Advertisement

ರಂಗನಾಥ ದೇಗುಲ ಜೀರ್ಣೋದ್ಧಾರ ಚುರುಕು

06:06 PM Mar 27, 2018 | |

ಯಳಂದೂರು: ತಾಲೂಕಿನ ಪ್ರಸಿದ್ಧ ಯಾತ್ರಾ ಸ್ಥಳ ಬಿಳಿಗಿರಿರಂಗಬೆಟ್ಟ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಭರದಿಂದ ನಡೆಯುತ್ತಿದ್ದು, ದೇಗುಲ ಆವರಣಕ್ಕೆ ಹಾಕಿರುವ ಕಲ್ಲಿನ ನೆಲಹಾಸು  ಅವೈಜ್ಞಾನಿಕವಾಗಿದೆ. ಕಲ್ಲುಗಳನ್ನು ಸಮರ್ಪಕವಾಗಿ ಜೋಡಣೆ ಮಾಡದ ಕಾರಣ ಚಿಕ್ಕ ರಥೋತ್ಸವಕ್ಕೆ ತೊಂದರೆಯಾಗುವ ಸಾಧ್ಯತೆ ಇದೆ ಎಂಬ ಆರೋಪ ಕೇಳಿ ಬಂದಿದೆ.

Advertisement

ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಬಿಳಿಗಿರಿ ರಂಗನಬೆಟ್ಟದಲ್ಲಿ ಸುಮಾರು 500 ವರ್ಷಗಳ ಬಿಳಿಗಿರಿ ರಂಗನಾಥಸ್ವಾಮಿ ಹಾಗೂ ಅಲಮೇಲಮ್ಮ ನವರ ದೇವಸ್ಥಾನವಿದೆ. ಐದಾರು ಶತಮಾನಗಳ ಹಳೆಯದಾದ ಈ ದೇವಸ್ಥಾನವು ಶಿಥಿಲಾವಸ್ಥೆಗೆ ತಲುಪಿತ್ತು. ದೇವಸ್ಥಾನದ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿತ್ತು. ದೇವಸ್ಥಾನದ ಮೇಲೆಲ್ಲ ಗಿಡಗಳು ಬೆಳೆದಿದ್ದು, ಆದಷ್ಟು ಬೇಗ ದೇವಸ್ಥಾನ
ಜೀರ್ಣೋದ್ಧಾರ ಮಾಡಬೇಕು ಎಂಬುದು ಭಕ್ತರು ಹಾಗೂ ಪ್ರವಾಸಿಗರು ಒತ್ತಾಸೆಯಾಗಿತ್ತು. ಅದರಂತೆ ಪುರಾತತ್ವ ಇಲಾಖೆಯು 2.40 ಕೋಟಿ ರೂ. ವೆಚ್ಚದಲ್ಲಿ ದೇವಸ್ಥಾನ ಜೀರ್ಣೋದ್ಧಾರ ಕೈಗೊಂಡಿದೆ. 

ಶಿವಮೊಗ್ಗದ ಪರಂಪರಾ ಕನ್‌ಸ್ಟ್ರಕ್ಷನ್‌ 2017ರ ಮಾರ್ಚ್‌ನಲ್ಲಿ ಜೀರ್ಣೋದ್ಧಾರ ಕಾರ್ಯ ಆರಂಭಿ ಸಿದ್ದು, ಭರದಿಂದ ಸಾಗುತ್ತಿದೆ. ಈಗಾಗಲೇ ಬಿಳಿಗಿರಿ ರಂಗನಾಥ ಸ್ವಾಮಿ ಹಾಗೂ ಅಲಮೇಲಮ್ಮನವರ ದೇವಸ್ಥಾನದ ಚಾವಣಿಗೆ ಕಲ್ಲುಗಳನ್ನು ಜೋಡಿಸಲಾಗಿದೆ. ಶೇ.70 ಕಾಮಗಾರಿಯು ಮುಗಿದಿದೆ. ಜೊತೆಗೆ ದೇವಾಲಯದ ಸುತ್ತಲೂ 8 ಅಡಿ ಅಗಲದಷ್ಟು ನೆಲ ಹಾಸಿಗೆ ಕಲ್ಲುಗಳನ್ನು
ಹಾಕಲಾಗುತ್ತಿದೆ. ಇದರಿಂದ ಚಿಕ್ಕ ರಥೋತ್ಸವ ಸಮಯದಲ್ಲಿ ತೊಂದರೆಯಾಗುವ ಸಂಭವ ಇದೆ ಎಂದು ಭಕ್ತರು ಆರೋಪಿಸಿದ್ದಾರೆ.

ಕಾಮಗಾರಿಯಿಂದ ತೊಂದರೆ: ದೇವಸ್ಥಾನದ ಆವರಣದ ಸುತ್ತಲೂ 8 ಅಡಿ ಅಗಲದ ಕಲ್ಲುಗಳನ್ನು ಹಾಕಲಾಗಿದೆ. ಬಿಳಿಗಿರಿರಂಗನಾಥಸ್ವಾಮಿ ದೇವಾ ಲಯದ ಬದಿಯಲ್ಲಿ 1 ಅಡಿ ಎತ್ತರದ ಕಲ್ಲುಗಳನ್ನು ಹಾಕಿದ್ದು, ಪಕ್ಕದಲ್ಲಿನ ಅಲ್ಲಮೇಲಮ್ಮನವರ ದೇವಾಲಯದ ಆವರಣದಲ್ಲಿ 1 ಅಡಿ ಕೆಳಭಾಗದಲ್ಲಿ ಕಲ್ಲುಗಳನ್ನು ಹಾಸಿದ್ದಾರೆ. ಇದರಿಂದ ಸಂಕ್ರಾಂತಿ ಮರು ದಿನ ನಡೆಯುವ ರಂಗಪ್ಪನ ಚಿಕ್ಕ ರಥವನ್ನು ಎಳೆಯಲು ತೊಂದರೆಯಾಗಲಿದೆ. ಜೊತೆಗೆ ಈ ನೆಲಹಾಸುಗೆ ಕೆಳಭಾಗದಲ್ಲಿ ಕಲ್ಲುಗಳನ್ನು ಸಮರ್ಪಕವಾಗಿ ಹಾಕದೇ ಬರಿ ಮಣ್ಣನ್ನು ಹಾಕಲಾಗಿದೆ. ಇದು ಕಲ್ಲು ಕುಸಿಯುವ ಸಾಧ್ಯತೆ ಇದೆ. ಮಳೆ ಗಾಲದ ಸಮಯದಲ್ಲಿ ನೀರು  ಅಲಮೇಲಮ್ಮ ನವರ ದೇವಸ್ಥಾನಕ್ಕೆ ನುಗ್ಗುವ ಸಾಧ್ಯತೆಗಳಿವೆ. ಇಲ್ಲಿ ಗುಣಮಟ್ಟದ ಕಾಮಗಾರಿಗಳು ನಡೆಯುತ್ತಿಲ್ಲ. ಅಲ್ಲದೆ ಕೆಲಸ ನಡೆಯುವ ಸ್ಥಳದಲ್ಲಿ ಇಲಾಖೆ ಯಾವೊಬ್ಬ ಅಧಿಕಾರಿಯೂ ಹಾಜರಿರುವುದಿಲ್ಲ. ಇಲ್ಲಿನ ಗುತ್ತಿಗೆದಾರರು ತಮಗಿಷ್ಟ ಬಂದಂತೆ ಕೆಲಸ ಮಾಡುತ್ತಿದ್ದಾರೆ ಎಂದು ಭಕ್ತರಾದ ರಾಜು, ಸಂತೋಷ್‌, ಸತೀಶ್‌, ಆರೋಪಿಸಿದ್ದಾರೆ.

ತಾಲೂಕಿನ ಬಿಳಿಗಿರಂಗನಬೆಟ್ಟದಲ್ಲಿನ ನಿರ್ಮಾಣವಾಗುತ್ತಿರುವ ನೆಲಹಾಸು ಕಾಮಗಾರಿಯಿಂದ ರಥೋತ್ಸವ ಸಮಯದಲ್ಲಿ ತೇರನ್ನು ಎಳೆಯಲು ತೊಂದರೆಯಾಗುವ ಸಾಧ್ಯತೆಗಳು ಇದೆ. ಆದ್ದರಿಂದ ಸಂಬಂಧಪಟ್ಟ ಮೇಲಧಿಕಾರಿಗಳು ಭೇಟಿ ನೀಡಿ ಪರಿಶೀಸಿ
ಸಂಪೂರ್ಣವಾಗಿ ಆವರಣದ ಸುತ್ತಲೂ ಒಂದೇ ಸಮನಾಗಿ ನೆಲಹಾಸುಗೆ ಕಲ್ಲು ಹಾಕಿಬೇಕಾಗಿದೆ.
 ●ಸರೋಜಮ್ಮ, ಗ್ರಾಪಂ ಸದಸ್ಯೆ, ಬಿಳಿಗಿರಂಗನಬೆಟ್ಟ

Advertisement

ತಾಲೂಕಿನ ಬಿಳಿಗಿರಿರಂಗನಬೆಟ್ಟದಲ್ಲಿನ ದೇವಸ್ಥಾನದ ಆವರಣದಲ್ಲಿ ನಡೆಯುತ್ತಿರುವ ನೆಲಹಾಸು ಕಾಮಗಾರಿಯಲ್ಲಿ ಭೇಟಿ ನೀಡಿ ಪರಿ
ಶೀಲಿಸಿ, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು.
 ●ಎಸ್‌.ಜಯಣ್ಣ , ಶಾಸಕರು ಕೊಳ್ಳೇಗಾಲ ವಿ.ಸಭಾ ಕ್ಷೇತ್ರ

ದೇವಸ್ಥಾನದ ಆವರಣದಲ್ಲಿ ಬಿಳಿಗಿರಿರಂಗನ ಬೆಟ್ಟದಲ್ಲಿ ನಡೆಯುತ್ತಿರುವ ಕಾಮಗಾರಿಯು ಕ್ರಿಯಾ ಯೋಜನೆಯಂತೆ ದೇವಸ್ಥಾನದ ಸುತ್ತಲು ನೆಲಕ್ಕೆ ಕಲ್ಲುಗಳನ್ನು ಹಾಕಲಾಗುತ್ತಿದೆ. ಜೊತೆಗೆ ಮುಂದಿನ ದಿನಗಳಲ್ಲಿ ಆವರಣದ ಸುತ್ತಲೂ ಸಂಪೂರ್ಣವಾಗಿ ನೆಲಹಾಸುಗಳನ್ನು ಹಾಕಿಸುವ ನಿಟ್ಟಿನಲ್ಲಿ ಕ್ರಮವಹಿಸಲಾಗುವುದು.
 ●ವೆಂಕಟೇಶಪ್ರಸಾದ್‌, ಕಾರ್ಯನಿರ್ವಾಹಕ ಅಧಿಕಾರಿ, ಬಿಳಿಗಿರಿರಂಗನಬೆಟ್ಟ

ಗೂಳಿಪುರ ನಂದೀಶ

Advertisement

Udayavani is now on Telegram. Click here to join our channel and stay updated with the latest news.

Next