Advertisement

ವಾಸ್ತವದ ವಿಡಂಬನೆ ಮೊಕ್ಕಾಂ ಪೋಸ್ಟ್‌ ಬೊಂಬಿಲ್‌ ವಾಡಿ

06:00 AM Dec 21, 2018 | |

ಉಡುಪಿ ರಂಗಭೂಮಿಯ 39ನೇ ರಾಜ್ಯಮಟ್ಟದ ನಾಟಕ ಸ್ಪರ್ಧೆಯಲ್ಲಿ “ಮೊಕ್ಕಾಂ ಪೋಸ್ಟ್‌ ಬೊಂಬಿಲ್‌ ವಾಡಿ’ (ರ: ಪರೇಶ್‌ ಮೊಕಾಶಿ ನಿ: ರವೀಂದ್ರ ಪೂಜಾರಿ) ಪ್ರಥಮ ಬಹುಮಾನ ಗಳಿಸಿತು. ಸ್ವಾತಂತ್ರ್ಯ ಚಳವಳಿಯ ಕಾಲದಲ್ಲಿ ನಡೆದ ಎರಡನೇ ಲೋಕ ಮಹಾಯುದ್ಧದಲ್ಲಿ ಶತ್ರುಪಕ್ಷಗಳಾದ ಅಧಿಕಾರ ಪಿಪಾಸು ಹಿಟ್ಲರ್‌ ಮತ್ತು ಇಂಗ್ಲಂಡುಗಳ ನಡುವೆ ಸಿಲುಕಿ ಅತಂತ್ರವಾಗಿ ನಿಂತ ಬಡದೇಶದ ಜನಸಾಮಾನ್ಯರ ಮತ್ತು ನಾಟಕ ಕಲಾವಿದರ ಸ್ಥಿತಿಗತಿಗಳನ್ನು ಮೊನಚಾದ ವಿಡಂಬನೆಯ ಮೂಲಕ ಚಿತ್ರಿಸಿ ಈ ನಾಟಕವು ಹೆಜ್ಜೆ ಹೆಜ್ಜೆಗೆ ಪ್ರೇಕ್ಷಕರನ್ನು ನಗಿಸುತ್ತ ಹೋಯಿತು. ಪ್ರತಿಯೊಬ್ಬ ನಟರ ಮನೋಜ್ಞ ಅಭಿನಯ, ಸಂಭಾಷಣೆಗಳ ಧ್ವನಿಪೂರ್ಣ ನಿರ್ವಹಣೆ, ಅದ್ಭುತವೆನ್ನಿಸುವಷ್ಟು ಚುರುಕಾದ ಚಲನವಲನ, ಹಾವಭಾವ, ಸೂಕ್ತ ಸಂದರ್ಭಗಳಲ್ಲಿ ಸಾಂದರ್ಭಿಕ ಅರ್ಥವಿರುವ ಹಾಡುಗಳ ಸಮರ್ಥ ಗಾಯನ, ಸಶಕ್ತವಾಗಿ ಮೂಡಿಬಂದ ಬೆಳಕಿನ ನಿರ್ವಹಣೆಗಳು ನಾಟಕದ ಯಶಸ್ಸಿಗೆ ಕಾರಣವಾದವು. 

Advertisement

ದ್ವಿತೀಯ ಬಹುಮಾನ ಪಡೆದ ನಾಟಕ ಅವ್ವ. ಹಳ್ಳಿಯಲ್ಲಿ ಹುಟ್ಟಿ ಬಡತನದಲ್ಲೇ ಕಳೆದು ಅಗಾಧವಾದ ನಿಸರ್ಗ ಪ್ರೀತಿಯನ್ನು ಬೆಳೆಸಿಕೊಂಡ ಕವಿ ಹೃದಯದ ಲೇಖಕ ಪಿ.ಲಂಕೇಶರ ಜೀವನಗಾಥೆಯನ್ನು ಆಧರಿಸಿದ ನಾಟಕ ಅವ್ವ (ರ : ಪದ್ಮಿನಿ ನಾಗರಾಜ್‌- ನಿ: ಕೃಷ್ಣಮೂರ್ತಿ ಕವತ್ತಾರ್‌). ಕೊಡವೂರಿನ ಸುಮನಸಾ ತಂಡದವರು ಸ್ಪರ್ಧೆಯ ಒಂಬತ್ತನೆಯ ದಿನ ಇದನ್ನು ಪ್ರಸ್ತುತ ಪಡಿಸಿದರು. ಅವ್ವನ ಅಂತಃಕರಣ, ತ್ಯಾಗ ಮನೋಭಾವಗಳೊಂದಿಗೆ ಲಂಕೇಶ ಅವ್ವನ ಬಗ್ಗೆ ಇಟ್ಟುಕೊಂಡ ಹೃದಯಾಂತರಾಳದ ಪ್ರೀತಿಯ ಭಾವಲೋಕ ಇಲ್ಲಿ ಅನಾವರಣಗೊಂಡಿದೆ. ಅವ್ವ ಪಾತ್ರದ ಅಭಿನಯ ಮನೋಜ್ಞವಾಗಿತ್ತು. ಸಂಗೀತದ ಬಳಕೆ ಮತ್ತು ಬೆಳಕಿನ ಪ್ರಯೋಗಗಳು ಅದ್ಭುತ ವಾಗಿದ್ದವು. ಆದರೆ ಅವ್ವ ಕೇಂದ್ರಿತವಾದ ನಾಟಕ ದಲ್ಲಿ ಆರಂಭದ ಕೆಲವು ದೃಶ್ಯಗಳು (ಶಾಲೆ, ತರ ಗತಿ, ಮೇಷ್ಟ್ರು ಇತ್ಯಾದಿ) ದೀರ್ಘ‌ವಾಗಿ ನಾಟಕದ ಚೌಕಟ್ಟಿನ ಹೊರಗೆ ಉಳಿದವು. ವೇಷ ಭೂಷಣಗಳ ಬಗ್ಗೆ ಹೆಚ್ಚಿನ ಗಮನದ ಅಗತ್ಯವಿದೆ. ಈ ಕೊರತೆಯ ಹೊರತಾಗಿಯೂ ಒಟ್ಟು ನಾಟಕದ ಪ್ರಸ್ತುತಿ ಹೃದಯಸ್ಪರ್ಶಿಯಾಗಿದ್ದ ರಿಂದ ನಾಟಕಕ್ಕೆ ಎರಡನೆಯ ಬಹುಮಾನ ಬಂತು. 

ಮೂರನೇ ಬಹುಮಾನ ಪಡೆದ ನಾಟಕ ಗುಲಾಬಿ ಗ್ಯಾಂಗ್‌ (ರಚನೆ ಮತ್ತು ನಿರ್ದೇಶನ : ರಾಜಗುರು ಹೊಸಕೋಟೆ).ಪ್ರೇಕ್ಷಕರನ್ನೂ ಉದ್ದಕ್ಕೂ ಹಿಡಿದಿಟ್ಟ ನಾಟಕ ಗುಲಾಬಿ ಗ್ಯಾಂಗ್‌. ತಲೆತಲಾಂತರದಿಂದ ಪರಂಪರೆಯ ಹೆಸರಿನಲ್ಲಿ ನಡೆಯುತ್ತಾ ಬಂದಿರುವ ಸ್ತ್ರೀ ಶೋಷಣೆ ಮತ್ತು ಸ್ತ್ರೀಯರ ಮೇಲಾಗುವ ದೌರ್ಜನ್ಯಗಳ ವಿರುದ್ಧ ಸಿಡಿದೆದ್ದು ಪ್ರತಿಭಟಿಸುವ ಗುಲಾಬಿ ಗ್ಯಾಂಗ್‌ ಅಲ್ಲಲಿ ಗಳಿಸುವ ಯಶಸ್ಸು ತುಸು ರೊಮ್ಯಾಂಟಿಕ್‌ ಅನ್ನಿಸಿದರೂ ವಾಸ್ತವದ ಸಾಧ್ಯತೆಯುಳ್ಳ ಘಟನೆಗಳನ್ನೇ ಬಿಚ್ಚಿಡುತ್ತ ತನ್ನ ಅದ್ಭುತ ಅಭಿನಯದಿಂದ ಅದು ನೋಡುಗರಿಗೆ ಕಚಗುಳಿಯಿಟ್ಟಿತು. ಅಭಿನಯ, ಸಂಗೀತ, ಬೆಳಕು, ಪರಿಕರ ಇವೆಲ್ಲ ಅಂಶಗಳಲ್ಲಿ ಎಲ್ಲೂ ತಪ್ಪಿ ಬೀಳದೆ ಎಚ್ಚರಿಕೆಯಿಂದ ನಿರ್ವಹಿಸಿದ ನಾಟಕವಿದು.

ಬಿರುಗಾಳಿ (ರ:ಕುವೆಂಪು ನಿ: ಜಯಶ್ರೀ ಇಡಿRದು),ಸುಖಗಳಿಂದ ದೂರವಾಗಿ (ರ :ಅಭಿರಾಮ ಭಡಕ ಮಕರ ನಿ: ಡಾ|ಸಂಧ್ಯಾ ದೇಶಪಾಂಡೆ),ಖೈರ್ಲಾಂಜಿ ,ಸಾಹೇಬರು ಬರುತ್ತಾರೆ (ನಿ: ವಿನಯ ಶಾಸಿŒ),ಚಿತ್ತಾರ (ರಚನೆ ಮತ್ತು ನಿ : ರಾಜೇಂದ್ರ ಕಾರಂತ),ಅರಹಂತ (ರ: ಎಸ್‌.ರಾಮನಾಥ ನಿ:ಚ.ನಾರಾಯಣಸ್ವಾಮಿ),ಚಕ್ರರತ್ನ (ರಚನೆ ನಿರ್ದೇಶನ : ಮಧುಸೂದನ ಜೆ.ಘಾಟೆ),ಅಶ್ವತ್ಥಾಮ (ರ:ರಾಮಚಂದ್ರದೇವ ನಿ : ಮೈಮ್‌ ರಮೇಶ್‌),ಪಂಚವಟಿ (ರ: ಭಾಸ್ಕರ ಭಟ್‌ ಸಿ.ಎ. ನಿ : ಭಾಸ್ಕರ ನೀನಾಸಮ್‌),ಕಾತ್ಯಾಯನಿ ಭೂಮಿಕಾ(ರ: ಎಸ್‌.ಎನ್‌. ಸೇತೂರಾಂ-ನಿ: ಬಿ.ಎಸ್‌.ರಾಮ್‌ ಶೆಟ್ಟಿ),ದಶಾನನನ 
ಸ್ವಪ್ನಸಿದ್ಧಿ ಸ್ಪರ್ಧೆಯಲ್ಲಿ ಭಾಗವಹಿಸಿದ ಇತರ ನಾಟಕಗಳು.

– ಡಾ| ಪಾರ್ವತಿ ಜಿ.ಐತಾಳ್‌ 

Advertisement
Advertisement

Udayavani is now on Telegram. Click here to join our channel and stay updated with the latest news.

Next