ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದ ವೈಫಲ್ಯಗಳು, ಭ್ರಷ್ಟಾಚಾರ ಪ್ರಕರಣಗಳು, ಆಡಳಿತ ಯಂತ್ರ ಕುಸಿತ, ಉದ್ಯೋಗ ಸಮಸ್ಯೆ, ಬೆಲೆ ಏರಿಕೆಯಂತಹ ಪ್ರಶ್ನೆಗಳಿಗೆ ಉತ್ತರ ಕೊಡದೆ ಪ್ರಧಾನಿ ಮೋದಿ ಪಲಾಯನ ಮಾಡುತ್ತಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲ ಟೀಕಿಸಿದ್ದಾರೆ.
ರಾಜ್ಯಕ್ಕೆ ಸೋಮವಾರ ಪ್ರಧಾನಿ ಮೋದಿ ಭೇಟಿ ನೀಡಿದ ಹಿನ್ನೆಲೆಯಲ್ಲಿ ಪತ್ರಿಕಾ ಹೇಳಿಕೆ ನೀಡಿರುವ ಅವರು, ಚುನಾವಣೆ ಹತ್ತಿರ ಬರುತ್ತಿದ್ದಂತೆ ಕರ್ನಾಟಕ ನೆನಪಾಗಿ ಓಡೋಡಿ ಬರುತ್ತಿದ್ಧಾರೆ. ಚುನಾವಣಾ ಸಮಯದಲ್ಲಿ ಕರ್ನಾಟಕದ ಸ್ಥಳೀಯ ನಾಯಕತ್ವದ ಕೊರತೆ ಮತ್ತು ವೈಫಲ್ಯವನ್ನು ಮನಗಂಡಿರುವ ಮೋದಿ ಅವರು ಪದೇ ಪದೆ ಭೇಟಿ ನೀಡಿ ಸುಳ್ಳು ಮಾಹಿತಿಗಳ ಮೂಲಕ ಜನ ಸಾಮಾನ್ಯರ ಭಾವನೆಗಳ ಜತೆ ಆಟವಾಡುತ್ತಿದ್ಧಾರೆ ಎಂದು ಆರೋಪಿಸಿದ್ದಾರೆ. ಕಾಂಗ್ರೆಸ್ ಕೇಳಿರುವ ಪ್ರಮುಖ 6 ಪ್ರಶ್ನೆಗಳಿಗೆ ಉತ್ತರ ಕೊಡಬೇಕು ಎಂದು ಸುರ್ಜೇವಾಲ ಆಗ್ರಹಿಸಿದ್ದಾರೆ.
ಪ್ರಶ್ನೆ-1: ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ನೀಡಿದ್ದ 600 ಭರವಸೆಗಳ ಪೈಕಿ ಶೇ.10 ರಷ್ಟು ಭರವಸೆಗಳನ್ನೂ ನಿಮ್ಮ ಪಕ್ಷದ ಸರ್ಕಾರ ಈಡೇರಿಸಿಲ್ಲ ಏಕೆ? ಬಿಜೆಪಿಯೇ ಭರವಸೆ ಅನ್ನೋ ಅಭಿಯಾನ ನಡೆಸುತ್ತಿದೆ. ಶೇ.40 ಅಕ್ರಮ ಗಳಿಕೆಯ ಹಣದಲ್ಲಿ ಎಲ್ಲಾ ರಸ್ತೆಗಳು, ಗೋಡೆಗಳ ಮೇಲೆ ಪೋಸ್ಟರ್ ಅಂಟಿಸುವ ಮೂಲಕ ಚುನಾವಣೆಗೆ ಮುಂದಾಗಿದೆ. ಸರ್ಕಾರದ ಹಣದಲ್ಲಿ ನೀವು ನಡೆಸುತ್ತಿರುವ ಪ್ರಚಾರ ಸಭೆಯಲ್ಲಿ ಉತ್ತರ ಕೊಡಬೇಕು.
ಪ್ರಶ್ನೆ -2: ದೇಶದಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ. ರಾಜ್ಯದಲ್ಲಿ 2.50 ಲಕ್ಷ ಸರ್ಕಾರಿ ಉದ್ಯೋಗ ಮತ್ತು ಸುಮಾರು 7.50 ಲಕ್ಷ ಖಾಸಗಿ ಉದ್ಯೋಗಕ್ಕೆ ಅವಕಾಶವಿದ್ದರೂ ಬಿಜೆಪಿ ಸರ್ಕಾರ ಉದ್ಯೋಗ ನೀಡುವಲ್ಲಿ ವಿಫಲವಾಗಿದೆ. ನೇಮಕಾತಿ ನಡೆಸುತ್ತಿರುವ ಹುದ್ದೆಗಳ ಹಂಚಿಕೆಯಲ್ಲೂ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದೆ. ಇದಕ್ಕೆ ಪಿಎಸ್‌ಐ ಹಗರಣ ಸಾಕ್ಷಿ ಅಲ್ಲವೇ?
ಪ್ರಶ್ನೆ-3: ಶಿವಮೊಗ್ಗ ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಲಕ್ಷಾಂತರ ಜನರ ಪಾಲಿಗೆ ಉದ್ಯೋಗ ಒದಗಿಸಿದ್ದ ದೇಶದ ಪ್ರಮುಖ ಕಾರ್ಖಾನೆಯಾಗಿತ್ತು. 2013 ರಲ್ಲಿ ಯುಪಿಎ ಸರ್ಕಾರ 380 ಎಕರೆ ಗಣಿ ಪ್ರದೇಶ ಒದಗಿಸಿದ್ದರೂ ಉಪಯೋಗ ಮಾಡದೇ ಕಾರ್ಖಾನೆಗೆ ಶಾಶ್ವತ ಬೀಗ ಹಾಕಿದ್ದು ಏಕೆ, ಶಿವಮೊಗ್ಗ ಜನರಿಗೆ ಉತ್ತರಿಸುವರೇ?
ಪ್ರಶ್ನೆ-4: ಅಡಕೆ ಮೇಲಿದ್ದ ಆಮದು ಸುಂಕವನ್ನು ಶೇ.110 ರಿಂದ ಕೇವಲ ಶೇ.10ಕ್ಕೆ ಇಳಿಸಿ ದೇಶೀಯ ಅಡಕೆ ಮಾರುಕಟ್ಟೆಯನ್ನು ಭಸ್ಮ ಮಾಡಿದ್ದು ಏಕೆ? ಎಲೆ ಚುಕ್ಕೆ ರೋಗಕ್ಕೆ ಡಬಲ್ ಎಂಜಿನ್ ಸರ್ಕಾರದ ಔಷಧಿ ಕಂಡು ಹಿಡಿಯಲು ಏಕೆ ಮುಂದಾಗಿಲ್ಲ?
ಪ್ರಶ್ನೆ-5: ಬೆಳಗಾವಿಯಲ್ಲಿ ರೋಡ್‌ಶೋ ಗಾಗಿ ಪ್ರಥಮ ಪಿಯುಸಿ ಪರೀಕ್ಷೆ ರದ್ದು ಮಾಡಿದ್ದು ಏಕೆ?
ಪ್ರಶ್ನೆ -6: ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ- ಇಲ್ಲಿ ಯಾರೂ ಅನಾವಶ್ಯಕವಾಗಿ ಗಡಿ ವಿಚಾರದಲ್ಲಿ ರಾಜಕೀಯ ಮಾಡಬಾರದೆಂದು ಮಹಾರಾಷ್ಟ್ರದ ಬಿಜೆಪಿ ಶಾಸಕರಿಗೆ ಪಾಠ ಹೇಳಬಲ್ಲಿರಾ?