ಮುಂಬೈ : ಕರ್ನಾಟಕದಲ್ಲಿ ನಡೆದ ಮಂಗಗಳ ಮಾರಣ ಹೋಮದ ಘಟನೆ ವಿರುದ್ಧ ಕೆರಳಿರುವ ಬಾಲಿವುಡ್ ನಟ ರಣದೀಪ್ ಹೂಡ ಈ ಅಮಾನವೀಯತೆಗೆ ಕಾರಣವಾದವರಿಗೆ ತಕ್ಕ ಶಿಕ್ಷೆಯಾಗಬೇಕೆಂದು ಆಗ್ರಹಿಸಿದ್ದಾರೆ.
ಹಾಸನದ ಸಕಲೇಶಪುರದಲ್ಲಿ ಕೋತಿಗಳಿಗೆ ವಿಷ ಹಾಕಲಾಗಿದೆ. ಇದರಿಂದ 60 ಕ್ಕೂ ಹೆಚ್ಚು ಮಂಗಗಳು ಸಾವನ್ನಪ್ಪಿವೆ. ಕೋತಿಗಳ ಮೃತ ದೇಹಗಳನ್ನು ರಸ್ತೆಯಲ್ಲಿ ಬಿಸಾಡಿ ಅಮಾನವೀಯತೆ ತೋರಲಾಗಿದೆ. ಈ ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಘಟನೆ ಕುರಿತು ಆಕ್ರೋಶ ವ್ಯಕ್ತವಾಗಿದೆ.
ಇದೇ ವಿಡಿಯೋವನ್ನು ಹಂಚಿಕೊಂಡಿರುವ ನಟ ರಣದೀಪ್ ಹೂಡಾ, ”ಇದು ಅತ್ಯಂತ ಹೇಯವಾದ ಘಟನೆ. 60ಕ್ಕೂ ಹೆಚ್ಚು ಕೋತಿಗಳಿಗೆ ವಿಷವಿಕ್ಕಿ ಅವುಗಳನ್ನು ಚೀಲದಲ್ಲಿ ತುಂಬಿ ಸಕಲೇಶಪುರದ ಬೇಗೂರು ಬಳಿ ರಸ್ತೆಯಲ್ಲಿ ಬಿಸಾಡಲಾಗಿದೆ” ಎಂದಿದ್ದಾರೆ ರಣದೀಪ್ ಹೂಡ.
ಈ ಹೇಯ ಕೃತ್ಯ ಮಾಡಿರುವವರಿಗೆ ಸೂಕ್ತ ಶಿಕ್ಷೆ ನೀಡಿ ಎಂದು ರಣದೀಪ್ ಹೂಡ ಮನವಿ ಮಾಡಿದ್ದು, ತಮ್ಮ ಟ್ವೀಟ್ ಅನ್ನು ಕರ್ನಾಟಕ ಮುಖ್ಯಮಂತ್ರಿಗಳಿಗೆ, ರಾಜ್ಯ ಅರಣ್ಯ ಇಲಾಖೆಗೆ, ಕೇಂದ್ರ ಅರಣ್ಯ ಮಂತ್ರಿಗೆ ಟ್ಯಾಗ್ ಮಾಡಿದ್ದಾರೆ.
ಇನ್ನು ಈ ಘಟನೆ ಬುಧವಾರ( ಜು.28) ನಡೆದಿದ್ದು 60 ಕೋತಿಗಳಿಗೆ ಯಾರೊ ಕಿಡಿಗೇಡಿಗಳು ವಿಷವಿಕ್ಕಿ ಮೂಟೆಗಳಲ್ಲಿ ತುಂಬಿ ಬೇಗೂರು ಬಳಿಯ ರಸ್ತೆಯಲ್ಲಿ ಬಿಸಾಡಿದ್ದಾರೆ, ಸ್ಥಳೀಯರ ಸಹಾಯದೊಂದಿಗೆ ಅಧಿಕಾರಿಗಳು 14 ಕೋತಿಗಳನ್ನು ಉಳಿಸಿಕೊಳ್ಳಲು ಯಶಸ್ವಿಯಾಗಿದ್ದಾರೆ. ಘಟನೆ ಕುರಿತು ಪ್ರಕರಣ ಸಹ ದಾಖಲಾಗಿದೆ.