ಕೋಟ್ಯಾಂತರ ರೂಪಾಯಿ ಬಜೆಟ್‌ನ ರೈಲ್ವೇ ಇಲಾಖೆಯ ಡಾಕ್ಯುಮೆಂಟರಿ ಕೊಡಿಸುವ ಆಮಿಷವೊಡ್ಡಿ ದಕ್ಷಿಣ ಭಾರತದ ಅನೇಕ ಸಿನಿಮಾ ನಿರ್ದೇಶಕರನ್ನು ಜಾರ್ಖಂಡ್‌ನ “ರಾಂಚಿ’ಗೆ ಉಪಾಯವಾಗಿ ಕರೆಸಿಕೊಳ್ಳುತ್ತಿದ್ದ ಡಕಾಯಿತರ ತಂಡ, ಅಲ್ಲಿ ಅವರಿಂದ ಲಕ್ಷಾಂತರ ರೂಪಾಯಿ ಸುಲಿಗೆ ಮಾಡುತ್ತಿದ್ದ ಪ್ರಕರಣ ಕೆಲ ವರ್ಷಗಳ ಹಿಂದೆ ಸಾಕಷ್ಟು ಸುದ್ದಿಯಾಗಿತ್ತು. ಪೊಲೀಸ್ ಇಲಾಖೆಗೆ ತಲೆ ನೋವಾಗಿದ್ದ ಈ ಡಕಾಯಿತರ ಗ್ಯಾಂಗ್ ಅನ್ನು ಹೆಡೆಮುರಿ ಕಟ್ಟಲು ಸಾಕಷ್ಟು ವರ್ಷಗಳೇ ಬೇಕಾಯಿತು. ಇದೇ ನೈಜ ಘಟನೆಯನ್ನು ಆಧರಿಸಿ ಈ ವಾರ ತೆರೆಗೆ ಬಂದಿರುವ ಸಿನಿಮಾ “ರಾಂಚಿ’.
ರೈಲ್ವೇ ಇಲಾಖೆಯ ಡಾಕ್ಯು ಮೆಂಟರಿ ಮಾಡಲು ಹೋಗುವ ಸಿನಿಮಾ ನಿರ್ದೇಶಕನೊಬ್ಬ ತನ್ನ ಸಿನಿಮಾದ ಚಿತ್ರಕಥೆಯಂತೆಯೇ ಹೇಗೆ ಡಕಾಯಿತರನ್ನು ಪೊಲೀಸರ ಸಹಾಯದಿಂದ ಖೆಡ್ಡಾಕ್ಕೆ ಬೀಳಿಸುತ್ತಾನೆ ಎಂಬುದೇ “ರಾಂಚಿ’ ಸಿನಿಮಾದ ಕಥೆಯ ಒಂದು ಎಳೆ.
ನಿರ್ದೇಶಕ ಶಶಿಕಾಂತ್ ಗಟ್ಟಿ ತಮ್ಮ ಜೀವನದಲ್ಲಿ ಅನುಭವಿಸಿದ ಘಟನೆಯನ್ನು “ರಾಂಚಿ’ ಸಿನಿಮಾದಲ್ಲಿ ಅಷ್ಟೇ ರೋಚಕವಾಗಿ ಪ್ರೇಕ್ಷಕರ ಮುಂದೆ ತಂದಿದ್ದಾರೆ. ಸಸ್ಪೆನ್ಸ್ ಕಂ ಕ್ರೈಂ-ಥ್ರಿಲ್ಲರ್ ಶೈಲಿಯಲ್ಲಿ ಮೂಡಿಬಂದಿರುವ “ರಾಂಚಿ’ ಸಿನಿಮಾ ಆರಂಭದಿಂದ ಅಂತ್ಯದವರೆಗೂ ಅನೇಕ ಟ್ವಿಸ್ಟ್ ಮತ್ತು ಟರ್ನ್ಗಳ ನಡುವೆ ಕುತೂಹಲ ಮೂಡಿಸುತ್ತ ಸಾಗುತ್ತದೆ. ಸಸ್ಪೆನ್ಸ್ ಕಂ ಕ್ರೈಂ-ಥ್ರಿಲ್ಲರ್ ಸಿನಿಮಾವನ್ನು ಬಯಸುವ ಪ್ರೇಕ್ಷಕರಿಗೆ ಇಷ್ಟವಾಗುವಂತ ಸಿನಿಮಾವನ್ನು ತೆರೆಮೇಲೆ ತರುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ.
ಇನ್ನು “ರಾಂಚಿ’ ಸಿನಿಮಾದಲ್ಲಿ ಯುವ ಸಿನಿಮಾ ನಿರ್ದೇಶಕನಾಗಿ ನಾಯಕ ನಟ ಪ್ರಭು ಮುಂಡ್ಕೂರ್ ತಮ್ಮ ಅಭಿನಯದಲ್ಲಿ ಫುಲ್ ಮಾಕ್ಸ್ ಪಡೆದುಕೊಳ್ಳುತ್ತಾರೆ. ನಾಯಕಿ ದಿವ್ಯಾ ಉರುಡುಗ ಕೂಡ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ಅಭಿನಯಿಸಿದ್ದಾರೆ. ಉಳಿದಂತೆ ಸಿನಿಮಾದಲ್ಲಿ ಬರುವ ಬಹುತೇಕ ಕಲಾವಿದರು ತಮ್ಮ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ.
ತಾಂತ್ರಿಕವಾಗಿ ಸಿನಿಮಾದ ಲೈಟಿಂಗ್, ಸಂಕಲನ, ಡಿಐ ಹೀಗೆ ಒಂದಷ್ಟು ವಿಷಯಗಳ ಕಡೆಗೆ ಚಿತ್ರತಂಡ ಇನ್ನಷ್ಟು ಗಮನ ಕೊಡಬಹುದಿತ್ತು. ಚಿತ್ರಕಥೆ, ನಿರೂಪಣೆ, ಹಿನ್ನೆಲೆ ಸಂಗೀತ ಮತ್ತು ಕಲಾವಿದರ ಸಹಜ ಅಭಿನಯ “ರಾಂಚಿ’ ಹೈಲೈಟ್ಸ್ ಎನ್ನಬಹುದು.
ಮಾಮೂಲಿ ಸಿನಿಮಾಗಳಿಗಿಂತ ಕೊಂಚ ವಿಭಿನ್ನವಾಗಿ ಮತ್ತು ಹೊಸಥರದಲ್ಲಿ ಮೂಡಿಬಂದಿರುವ “ರಾಂಚಿ’ ಕ್ಲಾಸ್ ಮತ್ತು ಮಾಸ್ ಆಡಿಯನ್ಸ್ ಎರಡೂ ವರ್ಗವನ್ನೂ ಕೆಲಹೊತ್ತು ಹಿಡಿದು ಕೂರಿಸುವ ಸಿನಿಮಾ ಎನ್ನಲು ಅಡ್ಡಿಯಿಲ್ಲ.