ಥಿಯೇಟರ್‌ಗಳು ತೆರೆಯಲು ಸರ್ಕಾರದಿಂದ ಅನುಮತಿ ಸಿಗುತ್ತಿದ್ದಂತೆ, ಒಂದರ ಹಿಂದೊಂದು ಸಿನಿಮಾಗಳುನಿಧಾನವಾಗಿ ತೆರೆಗೆ ಬರಲು ತಯಾರಿ ಮಾಡಿಕೊಳ್ಳುತ್ತಿವೆ. ಒಂದೆಡೆ,ಈವರ್ಷದ ಫೆಬ್ರವರಿ ಕೊನೆಗೆ ಮತ್ತು ಮಾರ್ಚ್ ಮೊದಲ ವಾರ ಬಿಡುಗಡೆಯಾದ ಚಿತ್ರಗಳು ಮತ್ತೆ ರೀ-ರಿಲೀಸ್ ಮಾಡಲು ಯೋಚಿಸುತ್ತಿವೆ. ಇದರ ನಡುವೆಯೇ ಚಿರಂಜೀವಿ ಸರ್ಜಾ ಮತ್ತು ಚೇತನ್ ಅಭಿನಯದ “ರಣಂ’ ಚಿತ್ರಕೂಡ ಇದೇ23ಕ್ಕೆ ಬಿಡುಗಡೆಯಾಗಿ ತೆರೆಗೆ ಬರಲು ಸಿದ್ಧತೆ ಮಾಡಿಕೊಂಡಿದೆ.
ಹೌದು, ಈ ವರ್ಷದ ಆರಂಭದಲ್ಲಿಯೇ “ರಣಂ’ ಬಿಡುಗಡೆಗೆ ತಯಾರಾಗಿದ್ದರೂ ಅಂದುಕೊಂಡ ಸಮಯಕ್ಕೆ ತೆರೆಗೆ ಬರಲು ಸಾಧ್ಯವಾಗಿರಲಿಲ್ಲ. ಆದರೆ, ಈಗ ಚಿತ್ರದ ಬಿಡುಗಡೆಯನ್ನು ಅಧಿಕೃತವಾಗಿಘೋಷಿಸಿರುವ ಚಿತ್ರತಂಡ, ಇದೇ ದಸರಾ ಹಬ್ಬದ ಸಂದರ್ಭದಲ್ಲಿ, ಅಕ್ಟೋಬರ್ 23ರಂದು”ರಣಂ’ ಚಿತ್ರವನ್ನು ತೆರೆಗೆ ತರುತ್ತಿದೆ. ಇದೇ ವೇಳೆ “ರಣಂ’ ಚಿತ್ರದ ಬಿಡುಗಡೆಯ ಬಗ್ಗೆ “ಉದಯವಾಣಿ’ ಜೊತೆ ಮಾತನಾಡಿರುವ ನಿರ್ಮಾಪಕ ಕನಕಪುರ ಶ್ರೀನಿವಾಸ್, “ಈ ವರ್ಷದ ಆರಂಭದಲ್ಲಿಯೇ “ರಣಂ’ ಸಿನಿಮಾ ರೆಡಿಯಾಗಿತ್ತು. ಇದೇ ಫೆಬ್ರವರಿ ಅಥವಾ ಮಾರ್ಚ್ ವೇಳೆಗೆ ಸಿನಿಮಾ ರಿಲೀಸ್ ಮಾಡಲು ಪ್ಲಾನ್ ಮಾಡಿಕೊಂಡಿದ್ದೆವು . ಆದ್ರೆ ಅಷ್ಟರಲ್ಲಿ ಕೋವಿಡ್ ಲಾಕ್‌ಡೌನ್ ಬಂದಿದ್ದರಿಂದ, ನಾವು ಅಂದುಕೊಂಡಂತೆ ಸಿನಿಮಾ ರಿಲೀಸ್ ಮಾಡಲು ಸಾಧ್ಯವಾಗಲಿಲ್ಲ. ಈಗ ಥಿಯೇಟರ್‌ಗಳು ಓಪನ್ ಮಾಡೋದಕ್ಕೆ ಅನುಮತಿ ಸಿಕ್ಕಿರುವುದರಿಂದ, ಇದೇ ಅಕ್ಟೋಬರ್23ಕ್ಕೆ ದಸರಾ ಹಬ್ಬದ ವೇಳೆಗೆ “ರಣಂ’ ಸಿನಿಮಾ ರಿಲೀಸ್ ಮಾಡುತ್ತಿದ್ದೇವೆ.
ರಾಜ್ಯದಾದ್ಯಂತ ಸುಮಾರು 250 – 300 ಥಿಯೇಟರ್‌ಗಳಲ್ಲಿ ರಿಲೀಸ್ ಮಾಡುವ ಯೋಚನೆ ಇದೆ. ಮೊದಲಿಗೆ ಕರ್ನಾಟಕದಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದ್ದು, ಅದಾದ ನಂತರ ಬೇರೆ ರಾಜ್ಯಗಳಲ್ಲಿ ಬಿಡುಗಡೆ ಮಾಡುವ ಬಗ್ಗೆ ಯೋಚಿಸುತ್ತೇವೆ. ಸುಮಾರು ಏಳು ತಿಂಗಳ ನಂತರ ಒಂದೊಳ್ಳೆ ಆ್ಯಕ್ಷನ್ ಸಿನಿಮಾ ಬರುತ್ತಿದ್ದು,ಕನ್ನಡದ ಮಾಸ್ ಆಡಿಯನ್ಸ್‌ಗೆ “ರಣಂ’ಖಂಡಿತ ಇಷ್ಟವಾಗಲಿದೆ’ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಆ್ಯಕ್ಷನ್‌ಕಂ ಥ್ರಿಲ್ಲರ್‌ಕಥಾಹಂದರ ಹೊಂದಿರುವ “ರಣಂ’ ಚಿತ್ರದಲ್ಲಿ ಚಿರು ಸರ್ಜಾ ಜೊತೆಗೆ ಮತ್ತೂಬ್ಬ ನಾಯಕ ನಟ ಚೇತನ್‌ಕೂಡ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ತಮಿಳು ನಟಿ ವರಲಕ್ಷ್ಮೀ ಶರತ್ ಕುಮಾರ್ ನಾಯಕಿಯಾಗಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ವಿ. ಸಮುದ್ರ ಆ್ಯಕ್ಷನ್-ಕಟ್ ಹೇಳಿದ್ದಾರೆ.
ಚಿರು ಸರ್ಜಾಅಭಿನಯದಕೊನೆಚಿತ್ರ:ಇನ್ನು ಇದೇ ಮಾರ್ಚ್ ನಲ್ಲಿ ನಟ ಚಿರಂಜೀವಿ ಸರ್ಜಾ ಅಭಿನಯದ “ಶಿವಾರ್ಜುನ’ ಚಿತ್ರ ತೆರೆಕಂಡಿತ್ತು. ಆದರೆ “ಶಿವಾರ್ಜುನ’ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಕೋವಿಡ್ ಆತಂಕದಿಂದ ಥಿಯೇಟರ್ ಗಳು ಮತ್ತು ಮಲ್ಟಿಪ್ಲೆಕ್ಸ್‌ಗಳಲ್ಲಿ ಪ್ರದರ್ಶನವನ್ನು ಸ್ಥಗಿತಗೊಳಿಸಲಾಗಿತ್ತು. ಇದರಿಂದ “ಶಿವಾರ್ಜುನ’ ಚಿತ್ರದ ಗಳಿಕೆಯಿಲ್ಲದೆ ನಿರ್ಮಾಪಕರು ಆರ್ಥಿಕ ತೊಂದರೆ ಎದುರಿಸುವಂತಾಯಿತು. ಇದೀಗ “ಶಿವಾರ್ಜುನ’ ಮತ್ತೆ ಮರು ಬಿಡುಗಡೆಯ ಬಗ್ಗೆ ಚಿತ್ರತಂಡ ಯೋಚಿಸುತ್ತಿರುವಂತೆಯೇ, ಚಿರಂಜೀವಿ ಸರ್ಜಾ ಅಭಿನಯದಕೊನೆಯ ಚಿತ್ರ “ರಣಂ’ಕೂಡ ತೆರೆಗೆ ಬರುತ್ತಿದೆ. ಒಟ್ಟಾರೆ ಸುಮಾರು ಏಳು ತಿಂಗಳ ಬಳಿಕ ಮತ್ತೆ ತೆರೆಮೇಲೆ ಬರುತ್ತಿರುವ ಚಿರು ಸರ್ಜಾ, ಪ್ರೇಕ್ಷಕರಿಗೆ ಅಗಲಿಕೆಯ ನೆನಪುಗಳನ್ನು ಹೊತ್ತುತರುತ್ತಿದ್ದಾರೆ.