Advertisement

ಕರ್ನಾಟಕಕ್ಕೆ ಇನ್ನಿಂಗ್ಸ್‌ ಮುನ್ನಡೆ ಕನಸು

12:45 AM Dec 11, 2019 | Team Udayavani |

ದಿಂಡಿಗಲ್‌ (ತ.ನಾ.): ವಾರಗಳ ಹಿಂದೆ ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದ ಕೆ.ಗೌತಮ್‌ ಅವರ ಆಲ್‌ರೌಂಡ್‌ ಪರಾಕ್ರಮದಿಂದಾಗಿ ಆತಿಥೇಯ ತಮಿಳುನಾಡು ವಿರುದ್ಧ ಕರ್ನಾಟಕ ತಂಡ ರಣಜಿ ಕ್ರಿಕೆಟ್‌ ಎಲೈಟ್‌ “ಬಿ’ ಗುಂಪಿನ ಪಂದ್ಯದಲ್ಲಿ ಮೇಲುಗೈ ಸಾಧಿಸುವ ಮುನ್ಸೂಚನೆ ನೀಡಿದೆ.

Advertisement

ದ್ವಿತೀಯ ದಿನವಾದ ಮಂಗಳವಾರ ಬ್ಯಾಟಿಂಗ್‌ ಮುಂದುವರಿಸಿದ ಕರ್ನಾಟಕ 336 ರನ್‌ ಗಳಿಸಿ ಆಲೌಟಾಯಿತು. 6 ವಿಕೆಟಿಗೆ 259 ರನ್ನುಗಳಿಂದ ಎರಡನೇ ದಿನದ ಬ್ಯಾಟಿಂಗ್‌ ಮುಂದುವರಿಸಿದ ಕರ್ನಾಟಕಕ್ಕೆ ಕೆ.ಗೌತಮ್‌ (51 ರನ್‌) ಅರ್ಧಶತಕ ಬಾರಿಸಿ ನೆರವಾದರು. ಇವರಿಗೆ ಡೇವಿಡ್‌ ಮಥಾಯಿಸ್‌ (26 ರನ್‌) ಕೆಳ ಕ್ರಮಾಂಕದಲ್ಲಿ ಸಾಥ್‌ ನೀಡಿದರು.

ಇದಕ್ಕುತ್ತರವಾಗಿ ತಮಿಳುನಾಡು ತಂಡ ದ್ವಿತೀಯ ದಿನದ ಅಂತ್ಯಕ್ಕೆ ಮೊದಲ ಇನ್ನಿಂಗ್ಸ್‌ ನಲ್ಲಿ 4 ವಿಕೆಟಿಗೆ 165 ರನ್‌ ಗಳಿಸಿ ಸಂಕಷ್ಟದ ಸ್ಥಿತಿಯಲ್ಲಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಲು ತಮಿಳುನಾಡು ಇನ್ನೂ 171 ರನ್‌ ಗಳಿಸಬೇಕಾಗಿದೆ. ಕೈಯಲ್ಲಿ 6 ವಿಕೆಟ್‌ ಉಳಿದಿದೆ. ದಿನೇಶ್‌ ಕಾರ್ತಿಕ್‌ (ಅಜೇಯ 23 ರನ್‌) ಹಾಗೂ ಜಗದೀಶನ್‌ (ಅಜೇಯ 6 ರನ್‌) ಮೂರನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

ಗೌತಮ್‌ ಬ್ಯಾಟಿಂಗ್‌ ನೆರವು
2ನೇ ದಿನ ಬ್ಯಾಟಿಂಗ್‌ ಮುಂದುವರಿಸಿದ ಕರ್ನಾಟಕ ತಂಡ ಒಟ್ಟು 77 ರನ್‌ ಗಳಿಸಿ ತನ್ನೆಲ್ಲ ವಿಕೆಟ್‌ ಕಳೆದುಕೊಂಡಿತು. ಶ್ರೇಯಸ್‌ ಗೋಪಾಲ್‌ ಒಂದೂ ರನ್‌ ಸೇರಿಸಲಾಗದೆ ವಿಘ್ನೇಶ್‌ಗೆ ವಿಕೆಟ್‌ ಒಪ್ಪಿಸಿದರು. ಆದರೆ ಕೆ.ಗೌತಮ್‌-ಡೇವಿಡ್‌ ಮಥಾಯಿಸ್‌ 8ನೇ ವಿಕೆಟ್‌ಗೆ 52 ರನ್‌ ಜತೆಯಾಟ ನಿರ್ವಹಿಸಿ ತಂಡವನ್ನು 300ರ ಗಡಿ ದಾಟಿಸಿದರು. 39 ಎಸೆತ ಎದುರಿಸಿದ ಗೌತಮ್‌ 4 ಬೌಂಡರಿ, 4 ಸಿಕ್ಸರ್‌ ಹೊಡೆದರು. ಮತ್ತೋರ್ವ ಬ್ಯಾಟ್ಸ್‌ಮನ್‌ ಡೇವಿಡ್‌ ಮಥಾಯಿಸ್‌ 62 ಎಸೆತ ಎದುರಿಸಿ ತಾಳ್ಮೆಯ ಬ್ಯಾಟಿಂಗ್‌ ಪ್ರದರ್ಶಿಸಿದರು. ಆರ್‌.ಅಶ್ವಿ‌ನ್‌ 79ಕ್ಕೆ 4 ವಿಕೆಟ್‌ ಕಬಳಿಸಿದರೆ ವಿಘ್ನೇಶ್‌, ಸಿದ್ಧಾರ್ಥ್ ತಲಾ 2 ವಿಕೆಟ್‌ ಪಡೆದರು.

ಬೌಲಿಂಗ್‌ನಲ್ಲೂ ಗೌತಮ ವಿಕ್ರಮ
ತಮಿಳುನಾಡು ತಂಡ ಮೊದಲ ಇನ್ನಿಂಗ್ಸ್‌ನಲ್ಲಿ ಭಾರೀ ಆಘಾತ ಅನುಭವಿಸಿದೆ. ಬ್ಯಾಟಿಂಗ್‌ನಲ್ಲಿ ಆತಿಥೇಯರಿಗೆ ಕಾಡಿದ್ದ ಕೆ.ಗೌತಮ್‌ ಬೌಲಿಂಗ್‌ನಲ್ಲೂ ವಿಜಯ್‌ ಶಂಕರ್‌ ಪಡೆಗೆ ಸಿಂಹಸ್ವಪ್ನವಾಗಿ ಪರಿಣಮಿಸಿದರು. ತಮಿಳುನಾಡು ತಂಡ ಈಗಾಗಲೇ 4 ವಿಕೆಟ್‌ ಕಳೆದುಕೊಂಡಿದೆ. ಈ ನಾಲ್ಕು ವಿಕೆಟ್‌ಗಳಲ್ಲಿ ಮೂರು ವಿಕೆಟನ್ನು ಗೌತಮ್‌ ಉರುಳಿಸಿದ್ದಾರೆ. ಒಂದು ವಿಕೆಟ್‌ ರೋನಿತ್‌ ಮೋರೆ ಪಾಲಾಗಿದೆ. ಆರಂಭಿಕ ಬ್ಯಾಟ್ಸ್‌ಮನ್‌ ಅಭಿನವ್‌ ಮುಕುಂದ್‌ (47 ರನ್‌, 75 ಎಸೆತ, 6 ಬೌಂಡರಿ), ಮುರಳಿ ವಿಜಯ್‌ (32 ರನ್‌, 74 ಎಸೆತ, 3 ಬೌಂಡರಿ) ಕೆ.ಗೌತಮ್‌ ಸ್ಪಿನ್‌ ಮಾಯೆ ಅರಿಯದೆ ವಿಕೆಟ್‌ ಕಳೆದುಕೊಂಡರು. ಬಾಬಾ ಅಪರಾಜಿತ್‌ (37 ರನ್‌, 86 ಎಸೆತ, 3 ಬೌಂಡರಿ, 1 ಸಿಕ್ಸರ್‌) ಮೋರೆ ಎಸೆತದಲ್ಲಿ ಔಟಾದರು. ನಾಯಕ ವಿಜಯ್‌ ಶಂಕರ್‌ 12 ರನ್‌ ವೇಳೆ ಗೌತಮ್‌ಗೆ ಎಲ್‌ಬಿಡಬ್ಲ್ಯು ಆಗಿ ಹೊರ ನಡೆದರು.

Advertisement

ಇನ್ನಿಂಗ್ಸ್‌ ಮುನ್ನಡೆಯ ನಿರೀಕ್ಷೆಯಲ್ಲಿ ಮುಂಬಯಿ
ವಡೋದರ: ದೇಶೀಯ ದೈತ್ಯ ಮುಂಬಯಿ ತಂಡವು ಇಲ್ಲಿ ಸಾಗುತ್ತಿರುವ ರಣಜಿ ಟ್ರೋಫಿ ಪಂದ್ಯದಲ್ಲಿ ಬರೋಡ ತಂಡದೆದುರು ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸುವ ನಿರೀಕ್ಷೆಯಲ್ಲಿದೆ.

8 ವಿಕೆಟಿಗೆ 362 ರನ್ನುಗಳಿಂದ ದ್ವಿತೀಯ ದಿನದ ಆಟ ಆರಂಭಿಸಿದ ಮುಂಬಯಿ ತಂಡವು 69 ರನ್‌ ಪೇರಿಸಿ 431 ರನ್ನಿಗೆ ಆಲೌಟಾಯಿತು. ಇದಕ್ಕುತ್ತರವಾಗಿ ಬರೋಡ ತಂಡವು ದಿನದಾಟದ ಅಂತ್ಯಕ್ಕೆ ಶಾಮ್ಸ್‌ ಮುಲಾನಿ ದಾಳಿಗೆ ಕುಸಿದು 9 ವಿಕೆಟ್‌ ಕಳೆದುಕೊಂಡಿದ್ದು 301 ರನ್‌ ಗಳಿಸಿದೆ. ಮುನ್ನಡೆ ಸಾಧಿಸುವ ನಿಟ್ಟಿನಲ್ಲಿ ಆರಂಭಿಕ ಕೇದಾರ್‌ ದೇವಧರ್‌ ಹೋರಾಡುತ್ತಿದ್ದಾರೆ.

ಏಕಾಂಗಿಯಾಗಿ ಹೋರಾಡುತ್ತಿರುವ ಅವರು 154 ರನ್‌ ಗಳಿಸಿ ಆಡುತ್ತಿದ್ದಾರೆ. ಬರೋಡ ಮುನ್ನಡೆ ಸಾಧಿಸಲು ಇನ್ನೂ 130 ರನ್‌ ಗಳಿಸಬೇಕಾಗಿದೆ. ಬಿಗು ದಾಳಿ ಸಂಘಟಿಸಿದ ಮುಲಾನಿ 99 ರನ್ನಿಗೆ 5 ವಿಕೆಟ್‌ ಉರುಳಿಸಿದ್ದಾರೆ.

ಕೇರಳ ಬೃಹತ್‌ ಮೊತ್ತ
ತಿರುವನಂತಪುರ: ನಾಯಕ ಸಚಿನ್‌ ಬೇಬಿ (155) ಅವರ ಭರ್ಜರಿ ಶತಕದ ನೆರವಿನಿಂದ ಕೇರಳ ತಂಡ ದಿಲ್ಲಿ ವಿರುದ್ಧದ ರಣಜಿ ಪಂದ್ಯದಲ್ಲಿ 9 ವಿಕೆಟಿಗೆ 525 ರನ್‌ ಪೇರಿಸಿ ಇನ್ನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡಿದೆ. ಇದಕ್ಕುತ್ತರವಾಗಿ ದಿಲ್ಲಿ ತಂಡವು ದಿನದಾಟದ ಅಂತ್ಯಕ್ಕೆ ಎರಡು ವಿಕೆಟ್‌ ಕಳೆದುಕೊಂಡಿದ್ದು 23 ರನ್‌ ಗಳಿಸಿದೆ. ಫಾಲೋ ಆನ್‌ ತಪ್ಪಿಸಲು ದಿಲ್ಲಿ ತಂಡವು 376 ರನ್‌ ಗಳಿಸಲು ಪ್ರಯತ್ನಿಸಲಿದೆ.

ಮೊದಲ ದಿನ ರಾಬಿನ್‌ ಉತ್ತಪ್ಪ ಅವರ ಶತಕ ಮತ್ತು ಪೂನಂ ರಾಹುಲ್‌ ಅವರ 97 ರನ್‌ ನೆರವಿನಿಂದ ಉತ್ತಮ ಮೊತ್ತ ಪೇರಿಸುವತ್ತ ಹೆಜ್ಜೆ ಹಾಕಿದ್ದ ಕೇರಳ ತಂಡಕ್ಕೆ ನಾಯಕ ಬೇಬಿ ಉತ್ತಮ ನೆರವು ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next