Advertisement

ರೈತರ ಸಮಸ್ಯೆಗಳಿಗೆ ಪರಿಹಾರ ಸೂಚಿಸಲಿದ್ದಾನಾ ರಣಹೇಡಿ?

09:54 AM Nov 29, 2019 | Naveen |

ರೈತರ ಸಮಸ್ಯೆಗಳನ್ನು ಪ್ರತಿಬಿಂಬಿಸುವಂಥಾ ಅನೇಕ ಚಿತ್ರಗಳು ಈಗಾಗಲೇ ಬಂದು ಹೋಗಿವೆ. ಆದರೆ ರೈತರ ಸಮಸ್ಯೆಗಳಿಗೆಲ್ಲ ಏನು ಪರಿಹಾರ ಅಂತ ಸೂಚಿಸುವಂತೆ ಮೂಡಿ ಬಂದಿರುವ ಸಿನಿಮಾಗಳು ವಿರಳ. ಸಾಮಾನ್ಯವಾಗಿ ಬೆಂಗಳೂರಿನಂಥಾ ಪಟ್ಟಣಗಳಲ್ಲಿ ವಾಸಿಸುವ ಮಂದಿಗೆ ರೈತರ ತಲ್ಲಣಗಳು ಕಾಣಿಸೋ ರೀತಿ ಬೇರೆಯದ್ದಾಗಿರುತ್ತೆ. ರೈತಾಪಿ ವರ್ಗದಿಂದಲೇ ಬಂದಿರುವವರಿಗೆ ಅದು ಅನುಭವ ಜನ್ಯವಾಗಿ ದಕ್ಕಿರುತ್ತದೆ. ಬಹುಶಃ ಅಂಥವರಿಂದ ಮಾತ್ರವೇ ರೈತರ ಸಮಸ್ಯೆಗಳಿಗೆ ಒಂದಷ್ಟು ಪರಿಹಾರವನ್ನೂ ಸೂಚಿಸಲು ಸಾಧ್ಯವಾಗಬಹುದೇನೋ. ಇದೇ ತಿಂಗಳ 29ರಂದು ತೆರೆಗಾಣುತ್ತಿರೋ ರಣಹೇಡಿ ಚಿತ್ರದ ನಿರ್ದೇಶಕ ಮನು ಕೆ ಶೆಟ್ಟಿಹಳ್ಳಿ ಕೂಡಾ ರೈತಾಪಿ ವರ್ಗದಿಂದಲೇ ಬಂದಿರುವವರು. ಹೊಲ ಗದ್ದೆಗಳೊಂದಿಗೆ ಒಡನಾಟವಿಟ್ಟುಕೊಂಡಿರುವವರು. ಆದ್ದರಿಂದಲೇ ಅವರಿಲ್ಲಿ ಪರಿಹಾರದತ್ತಲೂ ಗಮನ ಹರಿಸಿರಬಹುದೆಂಬ ನಿರೀಕ್ಷೆಗಳೆದ್ದಿವೆ.

Advertisement

ಮನು ಕೆ ಶೆಟ್ಟಿಹಳ್ಳಿ ದಶಕಗಳ ಕಾಲ ಕನ್ನಡ ಚಿತ್ರರಂಗದಲ್ಲಿ ಬರಹಗಾರರಾಗಿ ಕಾರ್ಯ ನಿರ್ವಹಿಸಿದ್ದವರು. ಹೀಗೆ ಅನುಭವ ದಕ್ಕಿಸಿಕೊಂಡಿದ್ದ ಅವರ ಪ್ರಧಾನ ಕನಸಾಗಿದ್ದದ್ದು ಸ್ವತಂತ್ರ ನಿರ್ದೇಶನ. ಮಂಡ್ಯ ಕಡೆಯ ಹಳ್ಳಿಗಾಡಿನಲ್ಲಿ ಹುಟ್ಟಿ ಬೆಳೆದಿದ್ದ ಅವರ ಪಾಲಿಗೆ ರೈತಾಪಿ ವರ್ಗದ ಆಂತರ್ಯ ಸುಸ್ಪಷ್ಟ. ಅದರ ಆಧಾರದಲ್ಲಿಯೇ ಚೆಂದದ್ದೊಂದು ಕಥೆ ರೆಡಿ ಮಾಡಿಕೊಂಡಿದ್ದ ಮನುಗೆ ತನ್ನನ್ನು ನಂಬಿ ಯಾರಾದರೂ ಕಾಸು ಹೂಡಬಹುದೆಂಬ ನಂಬಿಕೆಯೇ ಮಾಸಲಾಗುವಂಥಾ ಸಂದರ್ಭವೂ ಬಂದೊದಗಿತ್ತು. ಇಂಥಾ ಹೊತ್ತಿನಲ್ಲಿಯೇ ಸಿಕ್ಕವರು ನಿರ್ಮಾಪಕ ಸುರೇಶ್. ಹಾಗೆ ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡಿದ್ದ ಸುರೇಶ್ ಯಾವ ಸ್ಟಾರ್ ಸಿನಿಮಾಗಳಿಗೂ ಕಡಿಮೆಯಿಲ್ಲದಂತೆ ಈ ಚಿತ್ರವನ್ನು ಕಟ್ಟಿ ಕೊಟ್ಟಿದ್ದಾರಂತೆ.

ಮನು ಕೂಡಾ ಈ ಸಿನಿಮಾವನ್ನು ಅಷ್ಟೇ ಚೆಂದಗೆ ಕಟ್ಟಿ ಕೊಟ್ಟಿದ್ದಾರೆ. ಇದು ರೈತ ಕಥನ ಅನ್ನೋದರ ಹೊರತಾಗಿ ಕಥೆಯ ಬಿಂದುವಿನ ಬಗ್ಗೆ ನಿರ್ದೇಶಕರು ಯಾವ ಗುಟ್ಟನ್ನೂ ಬಿಟ್ಟು ಕೊಡುತ್ತಿಲ್ಲ. ಇದರಲ್ಲಿ ರೈತರ ಸಮಸ್ಯೆಗಳಿಗೆ ಪರಿಹಾರವಿದೆಯಾ ಅನ್ನೋ ಪ್ರಶ್ನೆಗೂ ಅವರು ನಿಖರ ಉತ್ತರ ಕೊಡುವುದಿಲ್ಲ. ಯಾಕೆಂದರೆ ಕಥೆಯ ಮೂಲ ಸೆಲೆ ಮತ್ತು ಆಶಯ ಇರೋದೇ ಆ ಬಿಂದುವಿನಲ್ಲಿ. ನಿರ್ದೇಶಕರಿಗಿರೋ ರೈತ ಕಾಳಜಿ, ಕೃಷಿಯ ಸ್ಥಿತಿಗತಿಗಳ ಬಗ್ಗೆ ಅವರಿಗಿರೋ ತಿಳುವಳಿಕೆ ಮತ್ತು ಪ್ರಸ್ತುತ ವಾತಾವರಣವನ್ನು ಅವರು ವಿಮರ್ಶಿಸುವ ರೀತಿ ಕಂಡರೆ ಖಂಡಿತಾ ರಣಹೇಡಿ ಎಂಬುದು ಪರಿಣಾಮಕಾರಿ ಚಿತ್ರವಾಗಲಿದೆ ಅನ್ನಿಸುತ್ತೆ.

Advertisement

Udayavani is now on Telegram. Click here to join our channel and stay updated with the latest news.

Next