Advertisement

ಭ್ರಷ್ಟಾಚಾರವನ್ನು ಕಾಂಗ್ರೆಸ್ ಎಂದಿಗೂ ಸಹಿಸಲ್ಲ.. ಕಮಿಷನ್ ಆರೋಪ ಬಂದ್ರೆ ಕೈ ಶಾಸಕರ ಉಚ್ಛಾಟನೆ

07:18 PM Feb 22, 2023 | Team Udayavani |

ಬೀದರ್: ಲಂಚ, ಭ್ರಷ್ಟಾಚಾರವನ್ನು ಕಾಂಗ್ರೆಸ್ ಎಂದಿಗೂ ಸಹಿಸಲ್ಲ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪೂರ್ಣ ಬಹುಮತದೊಂದಿಗೆ ಸರ್ಕಾರ ರಚನೆ ಮಾಡಲಿದ್ದು, ಒಂದು ಪೈಸೆ ಸಹ ಕಮಿಷನ್ ಆರೋಪ ಕೇಳಿ ಬಂದರೂ ಅಂಥ ಶಾಸಕರನ್ನು ಕಾಂಗ್ರೆಸ್‌ನಿಂದ ಉಚ್ಛಾಟಿಸಲಾಗುವುದು. ಇದು ನಮ್ಮ ಪಕ್ಷದ ವಚನ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪಸಿಂಗ್ ಸುರ್ಜೆವಾಲಾ ಹೇಳಿದರು.

Advertisement

ನಗರದಲ್ಲಿ ಬುಧವಾರ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರ ಸಭೆಗೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯದ ಬಿಜೆಪಿ ಸರ್ಕಾರ ಶೇ. 40ರಷ್ಟು ಕಮಿಷನ್ ದಂಧೆಯಿಂದ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಇವರ ದುರಾಡಳಿತದಿಂದ ಜನ ಬೇಸರಗೊಂಡಿದ್ದಾರೆ. ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವುದು ನಿಶ್ಚಿತವಾಗಿದ್ದು, ಭ್ರಷ್ಟಾಚಾರದಲ್ಲಿ ಭಾಗಿಯಾಗುವ ಪಕ್ಷದ ಶಾಸಕರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರತಿ ಮನೆಗೆ ಮಾಸಿಕ 2000 ರೂ. ಹಾಗೂ ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡುತ್ತೇವೆ. ಭರವಸೆಯ ಈ ಕಾರ್ಡ್‌ಗಳನ್ನು ಪ್ರತಿ ಮನೆಗೆ ಮುಟ್ಟಿಸಬೇಕು. ಪ್ರತಿ ಕ್ಷೇತ್ರದಲ್ಲಿ 20 ತಂಡ ರಚಿಸಿ, ಮನೆ-ಮನೆಗೆ ಭೇಟಿ ನೀಡಬೇಕು. ಈ ಕೆಲಸ 10 ದಿನಗಳಲ್ಲಿ ಪೂರ್ಣಗೊಳಿಸಬೇಕು ಎಂದು ಹೇಳಿದರು.

ರಾಜ್ಯದಲ್ಲಿ ಸರ್ಕಾರ ಬಂದ ಮೊದಲ ದಿನವೇ ಉಚಿತ ವಿದ್ಯುತ್ತ ಮತ್ತು ಮಾಸಿಕ 2 ಸಾವಿರ ರೂ. ಕೊಡುವುದಕ್ಕೆ ಆದೇಶ ಹೊರಡಿಸಲಾಗುವುದು. ಈ ಯೋಜನೆಗೆ ಹಣ ಹೇಗೆ ಹೊಂದಿಸುವಿರಿ ಎಂದು ಜನ ಕೇಳಿದರೆ, ರಾಜ್ಯದ ಬಜೆಟ್ ಮೊತ್ತದಲ್ಲಿ ಶೇ. 40ರಷ್ಟು ಅನುದಾನ ಭ್ರಷ್ಟಾಚಾರದಲ್ಲಿ ಮುಳುಗಿರುವ ಬಿಜೆಪಿ ಪಾಲಾಗುತ್ತಿದೆ. ಇದನ್ನು ತಡೆದು, ಅದರಲ್ಲಿ ಉಚಿತ ಕೊಡುಗೆಗಳಿಗೆ ಖುರ್ಚು ಮಾಡುತ್ತೇವೆ ಎಂದು ಮನವರಿಕೆ ಮಾಡಬೇಕು ಎಂದು ಕರೆ ನೀಡಿದರು.

ಟಿಕೆಟ್ ಕೈತಪ್ಪಿದ್ರೂ ಪಕ್ಷ ಬಿಡಲಿಲ್ಲ:
ನನ್ನ ಕ್ಷೇತ್ರದಲ್ಲಿ ನನಗೆ ಸಹ ಟಿಕೆಟ್ ಕೈತಪ್ಪಿ, ನಮ್ಮನ್ನು ವಿರೋಧ ಮಾಡುವವರಿಗೆ ಸಿಕ್ಕಿತು. ಆದರೆ, ಪಕ್ಷ ತಾಯಿ ಇದ್ದಂತೆ ಎಂದು ಹೇಳಿ ಚುನಾವಣೆಯಲ್ಲಿ ಬೆಂಬಲಿಸಿ ಗೆಲ್ಲಿಸಿದೆ. ನನಗೆ ಮೂರು ಬಾರಿ ಟಿಕೆಟ್ ಕೈತಪ್ಪಿದರು ನಾನು ಪಕ್ಷ ಬಿಡಲಿಲ್ಲ. ಹೀಗಾಗಿ ಇಂದು ನನಗೆ ಎಐಸಿಸಿಯ ಉನ್ನತ ಸ್ಥಾನ ಸಿಕ್ಕಿದೆ ಎಂದು ಟಿಕೆಟ್ ಆಕಾಂಕ್ಷಿಗಳಿಗೆ ಕಿವಿ ಮಾತು ಹೇಳಿದ ಸುಜೇವಾಲಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಅರ್ಜಿ ಹಾಕಿದ ಅಭ್ಯರ್ಥಿಗಳು ಪಕ್ಷದ ಮಕ್ಕಳು ಇದ್ದಂಗೆ. ಯಾರಿಗೆ ಟಿಕೆಟ್ ಕೊಟ್ಟರೂ ಎಲ್ಲರು ಸೇರಿ ಶ್ರಮವಹಿಸಿ ಗೆಲ್ಲಿಸಬೇಕು. ಬರುವ ದಿನಗಳಲ್ಲಿ ಎಲ್ಲರಿಗೆ ಸ್ಥಾನಮಾನ ನೀಡಲಾಗುವುದು ಎಂದು ಭರವಸೆ ನೀಡಿದರು.

Advertisement

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಮಾತನಾಡಿದರು. ಎಐಸಿಸಿ ಕಾರ್ಯದರ್ಶಿ ಶ್ರೀಧರರೆಡ್ಡಿ, ಜಿಲ್ಲಾಧ್ಯಕ್ಷ ಬಸವರಾಜ ಜಾಬಶೆಟ್ಟಿ, ಶಾಸಕ ರಹೀಮ್ ಖಾನ್, ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲ್, ಮಾಜಿ ಶಾಸಕರಾದ ಅಶೋಕ ಖೇಣಿ, ವಿಜಯಸಿಂಗ್, ಪ್ರಮುಖರಾದ ಚಂದ್ರಾಸಿಂಗ್, ಮೀನಾಕ್ಷಿ ಸಂಗ್ರಾಮ, ಮಾಲಾ ನಾರಾಯಣರಾವ್, ಧನರಾಜ ತಾಳಂಪಳ್ಳಿ, ರಾಜೇಶ್ರೀ ಸ್ವಾಮಿ, ಗೀತಾ ಚಿದ್ರಿ, ಅಮೃತರಾವ್ ಚಿಮಕೋಡೆ, ದತ್ತು ಮೂಲಗೆ ಇತರರಿದ್ದರು.

ಪರಿಶಿಷ್ಟರು, ಹಿಂದುಳಿದ ವರ್ಗ ಸೇರಿದಂತೆ ಕೆಳ ಸಮುದಾಯದ ಜನರನ್ನು ಮತ್ತಷ್ಟೂ ತುಳಿಯುವ ದುರುದ್ದೇಶದಿಂದ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಹತ್ಯೆ ಮಾಡಲು ಬಿಜೆಪಿ ಯೋಜಿಸಿ, ಸಚಿವ ಅಶ್ವತ್ಥನಾರಾಯಣ ಮೂಲಕ ಪ್ರಧಾನಿ ನರೇಂದ್ರ ಮೋದಿ, ಸಿಎಂ ಬೊಮ್ಮಾಯಿ, ಜೆ.ಪಿ.ನಡ್ಡಾ ಹೇಳಿಸಿದ್ದಾರೆ. ರಾಷ್ಟ್ರಕ್ಕಾಗಿ ಪ್ರಾಣ ನೀಡಿದ ಪಕ್ಷ ಕಾಂಗ್ರೆಸ್. ಸಿದ್ದರಾಮಯ್ಯ ಅವರನ್ನು ಹತ್ಯೆ ಮಾಡಿಸಿದರೆ ಹತ್ತರಷ್ಟು ಸಿದ್ದರಾಮಯ್ಯ ಪಕ್ಷದಲ್ಲಿ ಇದ್ದಾರೆ. ಕಾಂಗ್ರೆಸ್‌ನ್ನು ತಡೆಯುವುದು ಬಿಜೆಪಿಯಿಂದ ಅಸಾಧ್ಯ.

– ರಣದೀಪ್‌ಸಿಂಗ್ ಸುರ್ಜೆವಾಲಾ, ಎಐಸಿಸಿ ಪ್ರಧಾನ ಕಾರ್ಯದರ್ಶಿ.

ಇದನ್ನೂ ಓದಿ: ಶಿಂಧೆ ಬಣ ನಿಜವಾದ ಶಿವಸೇನೆ: ಆದೇಶಕ್ಕೆ ತಡೆ ನೀಡಲು ನಿರಾಕರಿಸಿದ ಸುಪ್ರೀಂ

Advertisement

Udayavani is now on Telegram. Click here to join our channel and stay updated with the latest news.

Next