ಬೆಂಗಳೂರು: ಎಐಸಿಸಿ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ಟ್ವಿಟರ್ ಖಾತೆ ಡಿಲೀಟ್ ಆಗಿದ್ದು, ರಮ್ಯಾ ಸಾಮಾಜಿಕ ಜಾಲತಾಣ ಮುಖ್ಯಸ್ಥೆ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆಂಬ ವದಂತಿ ಹಬ್ಬಿದೆ. ರಮ್ಯಾ ಖಾತೆ ಡಿಲೀಟ್ ಆಗಿರುವುದಕ್ಕೆ ನೆಟ್ಟಿಗರು ವ್ಯಂಗ್ಯ ಮಾಡಿ ಅವರ ಕಾಲೆಳೆದಿದ್ದಾರೆ.
ಲೋಕಸಭೆ ಚುನಾವಣೆಗೂ ಮುಂಚೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅನೇಕ ರೀತಿಯಲ್ಲಿ ಟ್ವೀಟ್ ಮಾಡಿ, ಸಾಕಷ್ಟು ವಿವಾದಕ್ಕೂ ಕಾರಣವಾಗಿದ್ದ ರಮ್ಯಾ ಏಕಾಏಕಿ ಕಾಂಗ್ರೆಸ್ ಸಾಮಾಜಿಕ ಜಾಲತಾಣದಿಂದ ದೂರ ಆಗಿರುವುದು ಪಕ್ಷದ ನಾಯಕರಿಗೂ ಅಚ್ಚರಿ ಮೂಡಿಸಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದ್ದರೂ, ರಮ್ಯಾ ಯಾವುದಕ್ಕೂ ಪ್ರತಿಕ್ರಿಯೆ ನೀಡದಿರುವುದು ರಾಜ್ಯ ಕಾಂಗ್ರೆಸ್ ನಾಯಕರಿಗೆ ಯಾವುದೇ ಸ್ಪಷ್ಟತೆ ಇಲ್ಲದಂತಾಗಿದೆ.
ಸಾಮಾಜಿಕ ಜಾಲ ತಾಣದಲ್ಲಿ ಬಂದ ಸುದ್ದಿ ಆಧರಿಸಿ ರಾಜ್ಯ ಕಾಂಗ್ರೆಸ್ ಸಾಮಾಜಿಕ ಜಾಲ ತಾಣದ ಮುಖ್ಯಸ್ಥ ನಟರಾಜ್ ಗೌಡ, ರಮ್ಯಾರನ್ನು ಸಂಪರ್ಕಿಸಲು ಪ್ರಯತ್ನ ಮಾಡಿದರೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ತಿಳಿದು ಬಂದಿದೆ. ಆದರೆ, ಪಕ್ಷದ ಸಾಮಾಜಿಕ ಜಾಲತಾಣದ ಕೋರ್ ಕಮಿಟಿ ತಂಡದಿಂದ ರಮ್ಯಾ ಇನ್ನೂ ನಿರ್ಗಮನವಾಗಿಲ್ಲ ಎನ್ನಲಾಗಿದೆ.
ರಮ್ಯಾ ಯಾವಾಗಲೂ ಸೈಬರ್ ಕಾನೂನಿನ ನಿಯಮಗಳನ್ನು ಉಲ್ಲಂಘಿಸುತ್ತಿದ್ದರು. ಅದೇ ಕಾರಣಕ್ಕೆ ಅವರ ಅಕೌಂಟ್ ಬ್ಲಾಕ್ ಮಾಡಿರಬಹುದು ಎಂದು ರಾಣಾ ನಿಶಾಂತ್ ಸಿಂಗ್ ಎನ್ನುವವರು ಟ್ವೀಟ್ ಮಾಡಿದ್ದಾರೆ. ಶ್ರದ್ಧಾ ಸುಮನ್ ರೈ ಎನ್ನುವವರು ಬಿಜೆಪಿ ಸ್ಟಾರ್‌ಗಳ ಪ್ರಭಾವಿಸುವವರ ಪಟ್ಟಿಯಲ್ಲಿ ರಮ್ಯಾ ಎರಡನೇ ಸ್ಥಾನದಲ್ಲಿದ್ದರು. ಈಗ ಬಿಜೆಪಿಯವರು ಅವಳನ್ನು ಮಿಸ್ ಮಾಡಿಕೊಳ್ಳುತ್ತಾರೆ ಎಂದು ಕಾಲೆಳೆದಿದ್ದಾರೆ.
ಅನು ಆನಂದ್ ಎನ್ನುವವರು ರಮ್ಯಾ ವಾಪಸ್ ಬರಲೇಬೇಕು. ಆಕೆ ಅಕೌಂಟ್ ಡಿಲೀಟ್ ಮಾಡಿದಾಗಿನಿಂದ ನಾನು ಊಟ ಮಾಡಿಲ್ಲ. ಏಕಾಂಗಿಯಾಗಿ ಸತ್ಯಾಗ್ರಹ ಮಾಡುವೆ ಎಂದು ವ್ಯಂಗ್ಯವಾಡಿದ್ದಾರೆ. ಮತ್ತೂಬ್ಬರು ಬಹುಶಃ ಪೇಮೆಂಟ್ ಆಗಿರಲಿಲ್ಲ ಎನ್ನುವ ಕಾರಣಕ್ಕೆ ಅವರು ಹುದ್ದೆ ತೊರೆದಿರಬಹುದು ಎಂದಿದ್ದಾರೆ. ಭರತ ಎನ್ನುವವರು ಬಿಜೆಪಿ ಸೇರುತ್ತಿರಬಹುದಾ ಎಂದು ಪ್ರಶ್ನೆ ಮಾಡಿದ್ದಾರೆ. ಚೌಕಿದಾರ್ ಯೋಗೇಶ್, ಕಾಂಗ್ರೆಸ್‌ನಲ್ಲಿ ರೋಮಾನ್ಸ್ ಮುಗಿದಿರಬಹುದು. ಅದಕ್ಕೆ ಕಾಂಗ್ರೆಸ್ ಐಟಿ ಸೆಲ್ ಬಾಗಿಲು ಮುಚ್ಚಿದೆ ಎಂದು ವ್ಯಂಗ್ಯವಾಡಿದ್ದಾರೆ.