ಬೆಂಗಳೂರು:ಮುಂದಿನ ಲೋಕಸಭೆ ಚುನಾವಣೆ ಸಮರ್ಥವಾಗಿ ಎದುರಿಸಲು ಕಾಂಗ್ರೆಸ್ ರಚಿಸಿರುವ ಮೂರು ಮಹತ್ವದ ಸಮಿತಿಗಳಲ್ಲಿ ಮಾಜಿ ಸಂಸದೆ ರಮ್ಯಾ ಸ್ಥಾನ ಪಡೆದಿರುವುದು ರಾಜ್ಯ ಕಾಂಗ್ರೆಸ್‌ನಲ್ಲೂ ಅಚ್ಚರಿಗೆ ಕಾರಣವಾಗಿದೆ. ಲೋಕಸಭೆ ಚುನಾವಣೆಗಾಗಿ ರಚಿಸಿರುವ ಪ್ರಚಾರ ಸಮಿತಿಯಲ್ಲಿ ರಾಜ್ಯದ ನಾಯಕರನ್ನು ಹಿಂದಿಕ್ಕಿ ಸ್ಥಾನ ಪಡೆಯುವಲ್ಲಿ ರಮ್ಯಾ ಯಶಸ್ವಿಯಾಗಿದ್ದಾರೆ.
ಚುನಾವಣೆಗೆ ದೇಶಾದ್ಯಂತ ಪ್ರಚಾರದ ರೂಪು-ರೇಷೆ ಸಿದ್ಧಪಡಿಸುವ ಸಮಿತಿಯಲ್ಲಿ ಸ್ಥಾನ ಪಡೆದು ತಮ್ಮನ್ನು ವಿರೋಧಿಸುತ್ತಿದ್ದ ರಾಜ್ಯ ಕಾಂಗ್ರೆಸ್ ನಾಯಕರಿಗೂ ಶಕ್ತಿ ಪ್ರದರ್ಶನ ಮಾಡಿದ್ದಾರೆ ಎಂದು ಹೇಳಲಾಗಿದೆ.
ಆನಂದ್ ಶರ್ಮಾ,ಮನೀಶ್ ತಿವಾರಿ, ರಾಜೀವ್ ಶುಕ್ಲಾ ಅವರಂತಹ ಹಿರಿಯರು ಇರುವ ಸಮಿತಿಯಲ್ಲಿ ರಮ್ಯಾ ಸ್ಥಾನ ಪಡೆದು ಹೈಕಮಾಂಡ್ ಮಟ್ಟದಲ್ಲಿ ತಮ್ಮ ಪ್ರಭಾವ ತೋರಿಸಿದ್ದಾರೆ ಎನ್ನಲಾಗಿದೆ.
ಎಐಸಿಸಿ ರಚಿಸಿರುವ ಕೋರ್ ಗ್ರೂಪ್, ಪ್ರಚಾರ ಸಮಿತಿ, ಪ್ರಣಾಳಿಕೆ ಸಮಿತಿ ಲೋಕಸಭೆ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಇಂತಹ ಸಮಿತಿಗೆ ರಾಷ್ಟ್ರಮಟ್ಟದ ನಾಯಕರು ಹಾಗೂ ಯುವ ನಾಯಕರನ್ನು ನೇಮಿಸಲಾಗಿದೆ.
ಮೂರು ಸಮಿತಿಗಳಲ್ಲಿ ರಾಜ್ಯದ ಮಲ್ಲಿಕಾರ್ಜುನ ಖರ್ಗೆ ಕೋರ್ ಗ್ರೂಪ್‌ನಲ್ಲಿ, ರಾಜೀವ್‌ಗೌಡ ಪ್ರಣಾಳಿಕೆ ಸಮಿತಿಯಲ್ಲಿ ಸ್ಥಾನ ಪಡೆದಿದ್ದರೆ ರಮ್ಯಾ ಪ್ರಚಾರ ಸಮಿತಿಯಲ್ಲಿ ಸ್ಥಾನ ಪಡೆದಿದ್ದಾರೆ.ಎಐಸಿಸಿ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆಯಾಗಿರುವ ರಮ್ಯಾ ಅವರ ಅಧಿಕಾರಕ್ಕೆ ಕತ್ತರಿ ಹಾಕಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ರಾಹುಲ್‌ಗಾಂಧಿ ಯವರ ಟ್ವೀಟ್ ಹಾಗೂ ಸಾರ್ವಜನಿಕ ಭಾಷಣ ನೋಡಿಕೊಳ್ಳುವ ಉಸ್ತುವಾರಿ ಸ್ಥಾನಕ್ಕೆ ಬೇರೊಬ್ಬರನ್ನು ನೇಮಿಸಲಾಗಿದೆ ಎಂಬ ಮಾತುಗಳು ಕೇಳಿಬಂದಿದ್ದವಾದರೂ ಇದೀಗ ಪ್ರಮುಖ ಸಮಿತಿಯಲ್ಲಿ ಸ್ಥಾನ ಪಡೆದು ಶಕ್ತಿ ಪ್ರದರ್ಶನ ಮಾಡಿದ್ದಾರೆ.
ರೂಪು-ರೇಷೆ
ಈ ಮಧ್ಯೆ, ಪ್ರಚಾರ ಸಮಿತಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿರುವ ರಮ್ಯಾ, ಕರ್ನಾಟಕ, ಆಂಧ್ರ, ತೆಲಂಗಾಣ, ತಮಿಳುನಾಡು, ಕೇರಳ, ಪಾಂಡಿಚೇರಿ, ಗೋವಾ, ಮಹಾರಾಷ್ಟ್ರ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷದ ಪ್ರಚಾರದ ಬಗ್ಗೆ ವಿಶೇಷ ಗಮನಹರಿಸಲಿದ್ದಾರೆ.
ಮತದಾರರ ತಲುಪಲು ಯಾವ ರೀತಿ ಪ್ರಚಾರ ಕೈಗೊಳ್ಳಬೇಕು. ಯಾವ್ಯಾವ ನಾಯಕರು ಹಾಗೂ ಸಮುದಾಯದ ಮುಖಂಡರನ್ನು ಒಟ್ಟಾಗಿ ಕರೆದೊಯ್ಯಬೇಕು ಎಂಬ ಬಗ್ಗೆ ವರದಿ ಸಿದ್ಧಪಡಿಸಲಿದ್ದಾರೆ ಎಂದು ಹೇಳಲಾಗಿದೆ.