Advertisement

ಪ್ರತ್ಯೇಕ ರಾಜ್ಯಕ್ಕೆ ಧ್ವನಿ ಎತ್ತಿದ ರಾಮುಲು 

06:00 AM Jul 11, 2018 | |

ವಿಧಾನಸಭೆ: “ಬಜೆಟ್‌ನಲ್ಲಿ ಉತ್ತರ ಕರ್ನಾಟಕ ಭಾಗ ಸಂಪೂರ್ಣ ನಿರ್ಲಕ್ಷ್ಯ ಮಾಡಿದ್ದು, ಪ್ರತ್ಯೇಕ ರಾಜ್ಯದ ಕೂಗಿಗೆ ಯಾಕೆ ಧ್ವನಿಗೂಡಿಸಬಾರದು’ ಎಂದು ಪ್ರಶ್ನಿಸಿರುವ ಬಿಜೆಪಿಯ ಶ್ರೀರಾಮುಲು, “ಮುಖ್ಯಮಂತ್ರಿ ಕುಮಾರಸ್ವಾಮಿ ಪೌರುಷ ಉತ್ತರ ಕುಮಾರನಂತೆ. ಚುನಾವಣೆ ವೇಳೆ ಭರವಸೆ ಕೊಟ್ಟು ಯೂಟರ್ನ್ ಹೊಡೆದಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಜೆಟ್‌ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮುಖ್ಯಮಂತ್ರಿ ಬಜೆಟ್‌ ಮಂಡಿಸಿ ದೊಡ್ಡ ಸಾಧನೆ ಅಂದುಕೊಂಡಿದ್ದಾರೆ. ಆದರೆ ನಾಡಿಗೆ ದೊಡ್ಡ ದ್ರೋಹ ಮಾಡಿದ್ದಾರೆ. ನಾನು ಕನ್ನಡಿಗರ ಮುಲಾಜಲ್ಲಿಲ್ಲ. ಕಾಂಗ್ರೆಸ್‌ ಮುಲಾಜಿನಲ್ಲಿ ಇದ್ದೇನೆಂದು ಹೇಳಿಕೊಂಡಿದ್ದು, ಬಜೆಟ್‌ ಮೂಲಕ ಜನರ ಮೇಲೆ ಉತ್ತರ ಕರ್ನಾಟಕ ಭಾಗದಲ್ಲಿ
ಜೆಡಿಎಸ್‌ ಸೋಲಿನ ಸೇಡು ತೀರಿಸಿಕೊಂಡಿದ್ದಾರೆ ಎಂದು ದೂರಿದರು.

Advertisement

ಹದಿನಾರು ಜಿಲ್ಲೆಗಳಲ್ಲಿ ಜೆಡಿಎಸ್‌ ಗೆದ್ದಿಲ್ಲ. ಬಜೆಟ್‌ನಲ್ಲಿ ರಾಮನಗರ, ಮಂಡ್ಯ, ಹಾಸನಕ್ಕೆ ಆದ್ಯತೆ ಕೊಟ್ಟಿದ್ದು, ಕರ್ನಾಟಕದ ಉದ್ದಗಲಕ್ಕೆ ಹೋದಾಗ ಇದೇ ಮಾತು ಕೇಳಿಬರುತ್ತಿದೆ. ಹೈದ್ರಾಬಾದ್‌ ಕರ್ನಾಟಕ, ಉತ್ತರ ಕರ್ನಾಟಕವನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಲಾಗಿದೆ ಎಂದರು. ಕರ್ನಾಟಕ ಏಕೀಕರಣಕ್ಕೆ ಉತ್ತರ ಕರ್ನಾಟಕದ ಅನೇಕ ಮಂದಿ ಹೋರಾಟ ಮಾಡಿದರು. ಇಂದು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಬೇಕೆಂಬ ಕೂಗು ಕೇಳಿ ಬರುತ್ತಿದೆ. ಯಾರೂ ಪ್ರತ್ಯೇಕ ರಾಜ್ಯ ಕೇಳುತ್ತಿಲ್ಲ. ಬಜೆಟ್‌ ನೋಡಿದರೆ ಪ್ರತ್ಯೇಕ ರಾಜ್ಯದ ಹೋರಾಟಕ್ಕೆ ಬೆಂಬಲ ಕೊಡಬೇಕಾಗುತ್ತದೆ. ಬಹಳ ನೋವಿನಿಂದ ಹೇಳುತ್ತಿದ್ದೇನೆ, ಕಷ್ಟದ ಪರಿಸ್ಥಿತಿಯಲ್ಲಿ ಬೆಂಬಲಿಸಬೇಕಾಗುತ್ತದೆ ಎಂದು ಹೇಳಿದರು.

ಉತ್ತರ ಕರ್ನಾಟಕದಲ್ಲಿ ಹುಟ್ಟಿ ತಪ್ಪು ಮಾಡಿದ್ದೇವೆ ಎಂದು ಕೇಳಬೇಕಾಗುತ್ತದೆ. ಎಚ್‌.ಕೆ.ಪಾಟೀಲ್‌ ಸೇರಿ ಕಾಂಗ್ರೆಸ್‌ ಶಾಸಕರೇ ತಾರತ ಮ್ಯದ ಬಗ್ಗೆ ಹೇಳಿಕೆ ಕೊಟ್ಟಿದ್ದಾರೆ. ಉತ್ತರ ಕರ್ನಾಟಕವನ್ನು ಇಷ್ಟೊಂದು ನಿರ್ಲಕ್ಷ್ಯ ಮಾಡಿದ್ದು ಇದುವರೆಗೆ ಕಂಡಿರಲಿಲ್ಲ. ತುಂಗಭದ್ರಾ ಜಲಾಶಯ ಹೂಳು, ಆಲಮಟ್ಟಿ ಬಗ್ಗೆ ಬಜೆಟ್‌ ನಲ್ಲಿ ಉಲ್ಲೇಖವಿಲ್ಲ. ಕೇವಲ ನಾಲ್ಕೈದು ಜಿಲ್ಲೆಗಳಿಗೆ ಮಾತ್ರ ಬಜೆಟ್‌ನಲ್ಲಿ ಆದ್ಯತೆ ಕೊಡಲಾಗಿದೆ. ಕೂಡಿ ಬಾಳಿದರೆ ಸ್ವರ್ಗ ಎಂಬುದನ್ನು ಮರೆತಂತಿದೆ ಎಂದು ರಾಮುಲು ವಾಗ್ಧಾಳಿ ನಡೆಸಿದರು.

ನಾವೆಲ್ಲರೂ ಕರ್ನಾಟಕ ಒಂದಾಗಿರಬೇಕೆಂದು ಬಯಸುವವರು. ಸಿಎಂಗೆ ಜನರ ಭಾವನೆ ಗೊತ್ತಾಗಬೇಕು. ಅವರೇನು ಪ್ರಣಾಳಿಕೆ ಈಡೇರಿಸುವ ಕೆಲಸ ಮಾಡಿಲ್ಲ. ಮೊಳಕಾಲ್ಮೂರಲ್ಲಿ ಕುಡಿಯಲು ನೀರಿಲ್ಲ. ಭದ್ರಾ ಮೇಲ್ದಂಡೆ ಬಗ್ಗೆ ಪ್ರಸ್ತಾಪ ಇಲ್ಲ. ಪರಮಶಿವಯ್ಯ ವರದಿ ತಿರಸ್ಕಾರ ಮಾಡಲಾಗುತ್ತಿದೆ. ಎರಡು ಸಾವಿರ ಅಡಿ ಬೋರ್‌ವೆಲ್‌ ಕೊರೆಸಿದರೂ ನೀರು ಸಿಗುತ್ತಿಲ್ಲ ನಾವು ಯಾರಲ್ಲಿ ಹೇಳಿಕೊಳ್ಳಬೇಕು? ಉತ್ತರ ಕರ್ನಾಟಕ, ಕರಾವಳಿಯಲ್ಲಿ ಬಿಜೆಪಿ ಗೆದ್ದಿದೆ. ಬಿಜೆಪಿ ಶಾಸಕರು ಏನನ್ನೂ ಕೇಳಬಾರದು ಎಂದು ಹೇಳಲಿ, ನಾವೇನೂ ಕೇಳುವುದಿಲ್ಲ ಎಂದರು.

ಪ್ರತ್ಯೇಕ ರಾಜ್ಯ ಬೇಡಿಕೆಗೆ ಆಕ್ಷೇಪ 
ಪ್ರತ್ಯೇಕ ರಾಜ್ಯದ ಪ್ರಸ್ತಾಪಕ್ಕೆ ಸಚಿವ ಶಿವಶಂಕರ ರೆಡ್ಡಿ ಹಾಗೂ ಜೆಡಿಎಸ್‌ ಸದಸ್ಯ ಎ.ಟಿ.ರಾಮಸ್ವಾಮಿ ಆಕ್ಷೇಪ ವ್ಯಕ್ತಪಡಿಸಿ, ಪ್ರತ್ಯೇಕ ರಾಜ್ಯ ಸಂದೇಶ ಹೋಗಬಾರದು. ಅದನ್ನು ಕಡತದಿಂದ ತೆಗೆಯುವಂತೆ ಮನವಿ ಮಾಡಿದರು. ಪ್ರತಿಪಕ್ಷದ ನಾಯಕ ಯಡಿಯೂರಪ್ಪ ಕೂಡ ಪ್ರತ್ಯೇಕ ರಾಜ್ಯದ ಮಾತು
ಸರಿಯಲ್ಲ. ಸಮಗ್ರ ರಾಜ್ಯ ಅಭಿವೃದ್ಧಿಯಾಗ ಬೇಕು. ಬೇರೆ ಕೆಲಸ ನಿಲ್ಲಿಸಿದರೂ ನೀರಾವರಿಗೆ ಆದ್ಯತೆ ಸಿಗಬೇಕು. ಶ್ರೀರಾಮುಲು ಅವರು ಜನರ ಆಕ್ರೋಶವನ್ನು ಇಲ್ಲಿ ವ್ಯಕ್ತಪಡಿಸಿದ್ದಾರೆಂದು ಸಮಜಾಯಿಷಿ ನೀಡಿದರು. ಮಾತು ಮುಂದುವರಿಸಿದ ಶ್ರೀರಾಮುಲು, “ನನಗೂ ರಾಜ್ಯ ವಿಭಜನೆ ಇಷ್ಟವಿಲ್ಲ. ಕುಡಿಯಲು ನೀರಿಲ್ಲ. ಕೃಷ್ಣಾ ಯೋಜನೆಗಳಿಗೆ ಹತ್ತು  ಸಾವಿರ ಕೋಟಿ ಕೊಡುತ್ತೇನೆ ಎಂದರು. ಏತ ನೀರಾವರಿ ಯೋಜನೆ ನಿಂತಿದೆ. ಯಾರನ್ನು ಕೇಳಬೇಕು’ ಎಂದು ಪ್ರಶ್ನಿಸಿದರು. ನಂತರ ಪ್ರತ್ಯೇಕ ರಾಜ್ಯ ಬೇಡಿಕೆಯ ಬಗ್ಗೆ ಪ್ರಸ್ತಾಪವಾಗಿರುವ ಪದಗಳನ್ನು ಸಭಾಧ್ಯಕ್ಷರ ಸ್ಥಾನದಲ್ಲಿ ಕುಳಿತಿದ್ದ ಅರವಿಂದ ಲಿಂಬಾವಳಿ ಕಡತದಿಂದ ತೆಗೆದು ಹಾಕುವಂತೆ ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next