Advertisement

Devi Temple: ಹಾಸನಾಂಬೆ ದೇವಿ ದರ್ಶನ ಅವ್ಯವಸ್ಥೆ, ಭಕ್ತರ ಆಕ್ರೋಶ: ವಿಶೇಷ ಪಾಸ್‌ ರದ್ದು

04:28 AM Nov 01, 2024 | Team Udayavani |

ಹಾಸನ: ಹಾಸನಾಂಬೆ ದೇವಿ ದರ್ಶನಕ್ಕೆ ಕೇವಲ ಇನ್ನೆರಡೇ ದಿನ ಬಾಕಿ ಇರುವಾಗ ದರ್ಶನದ ಅವ್ಯವಸ್ಥೆಯೂ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ಗುರುವಾರ ದೇವಿ ದರ್ಶನಕ್ಕೆ ಬಂದ ಸಾವಿರಾರು ಭಕ್ತರ ಸ್ಥಿತಿ ಅಯೋಮಯವಾಗಿತ್ತು. ಇಷ್ಟೆಲ್ಲಾ ಅವ್ಯವಸ್ಥೆಗೆ ಕಾರಣವಾಗಿದ್ದು ಮಿತಿ ಮೀರಿ ವಿಶೇಷ ಪಾಸ್‌ಗಳ (ವಿಐಪಿ, ವಿವಿಐಪಿ) ಹಂಚಿಕೆ. ಈ ಹಿನ್ನೆಲೆಯಲ್ಲಿ ದೇವಾಲಯದ ಆಡಳಿತ ಮಂಡಳಿ ವಿಶೇಷ ಪಾಸ್‌ಗಳನ್ನು ರದ್ದುಗೊಳಿಸಿದೆ.

Advertisement

ವಿವಿಐಪಿ ಪಾಸ್‌ನ ಪ್ರವೇಶ ದ್ವಾರದಲ್ಲಿ ಪಾಸ್‌ಗಳನ್ನು ಹಿಡಿದು ಸರದಿ ಸಾಲಿನತ್ತ ನುಗ್ಗುತ್ತಿದ್ದ ಭಕ್ತರನ್ನು ನಿಯಂತ್ರಿಸಲಾಗದೆ ಅಂತಿಮವಾಗಿ ವಿಐಪಿ, ವಿವಿಐಪಿ ಪಾಸ್‌ ಹಾಗೂ 1,000 ರೂ. ವಿಶೇಷ ದರ್ಶನವನ್ನೂ ರದ್ದುಪಡಿಸಲಾಗಿದೆ ಎಂದು ದೇವಾಲಯದ ಆಡಳಿತ ಮಂಡಳಿ ಪ್ರಕಟಿಸಿದೆ. ಸುಮಾರು 500 ವಿಶೇಷ ಬಸ್‌ ಸಂಚಾರವನ್ನೂ ರದ್ದುಪಡಿಸಲಾಯಿತು.

ಸ್ವಚ್ಛತೆ ಮಾಡದೇ ಹೊರಗುಳಿದರು
ಪೊಲೀಸರು ಪೌರ ಕಾರ್ಮಿಕರೊಬ್ಬರನ್ನು ತಳ್ಳಿದರೆಂಬ ಕಾರಣಕ್ಕೆ ಜಿಲ್ಲಾಡಳಿತದ ವಿರುದ್ಧ ಪೌರ ಕಾರ್ಮಿಕರೂ ಸಿಡಿದೆದ್ದು, ಸ್ವಚ್ಛತೆಯಿಂದ ಹೊರಗುಳಿದರು. ನಗರಸಭೆ ಸದಸ್ಯರು, ನೌಕರರೂ ಪ್ರತಿಭಟನೆಗಿಳಿದು ದೇವಾಲಯದತ್ತ ನುಗ್ಗಲು ಯತ್ನಿಸಿದಾಗ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.

ಕಾಲ್ಕಿತ್ತ ಅಧಿಕಾರಿಗಳು
ಸೂಕ್ತ ವ್ಯವಸ್ಥೆ ಮಾಡದೆ ಏಕೆ ಮಿತಿ ಮೀರಿ ಪಾಸ್‌ ಹಂಚಿದ್ದೀರಿ?, ರಾತ್ರಿಯಿಂದ ಸರತಿ ಸಾಲಿನಲ್ಲಿ ನಿಂತವರಿಗೆ ಬೆಳಗ್ಗೆಯಾದರೂ ದರ್ಶನ ಸಿಗುತ್ತಿಲ್ಲ ಎಂದು ಭಕ್ತರು ಎದುರಿಗಿದ್ದ ಅಧಿಕಾರಿಗಳು, ಪೊಲೀಸರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆ ಅಧಿಕಾರಿಗಳು ಅಲ್ಲಿಂದ ಕಾಲ್ಕಿತ್ತರು. ಒಂದೆಡೆ ಭಕ್ತರು ಪರದಾಡಿದರೆ, ಮತ್ತೂಂದೆಡೆ ತಮ್ಮ ತಮ್ಮ ಕುಟುಂಬದವರನ್ನು ದರ್ಶನಕ್ಕೆ ಕರೆಯೊಯ್ಯುವ ಸಂಬಂಧ ಕಂದಾಯ ಇಲಾಖೆ ಸಿಬಂದಿಗಳೇ ಪರಸ್ಪರ ಹೊಡೆದಾಡಿದ ಪ್ರಸಂಗವೂ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next