ಬೆಂಗಳೂರು: ಖಾತೆ ಬದಲಾವಣೆ ಬೆಳವಣಿಗೆಯಿಂದ ಬೇಸರಗೊಂಡಿದ್ದ ಸಚಿವ ಬಿ ಶ್ರೀರಾಮುಲು ಇಂದು ಸಿಎಂ ಬಿ ಎಸ್ ಯಡಿಯೂರಪ್ಪ ಅವರನ್ನು ಭೇಟಿಯಾದರು. ಕೆ ಸುಧಾಕರ್ ಕೂಡಾ ಸಿಎಂ ನಿವಾಸಕ್ಕೆ ಆಗಮಿಸಿದ್ದು, ಉಭಯ ಸಚಿವರಿಗೂ ಸಿಎಂ ಕಿವಿಮಾತು ಹೇಳಿದ್ದಾರೆ ಎಂದು ವರದಿಯಾಗಿದೆ.
ಸಿಎಂ ಸಂಧಾನದ ನಂತರ ಬೇಸರ, ಅಸಮಾಧಾನವಿಲ್ಲವೆಂದು ತೋರ್ಪಡಿಸಲು ರಾಮುಲು ಮತ್ತು ಸುಧಾಕರ್ ಇಬ್ಬರೂ ಮಾಧ್ಯಮದವರೆದುರು ಹೇಳಿಕೆ ನೀಡಿದರು. ಇಬ್ಬರು ಸಚಿವರು ಕೂಡಾ ತಮಲ್ಲಿ ಯಾವುದೇ ಅಸಮಾಧಾನವಿಲ್ಲ ಎಂದು ಹೇಳಿಕೊಂಡರೂ, ಟಾಂಗ್ ನೀಡುವುದನ್ನು ಮರೆಯಲಿಲ್ಲ.
ಈ ಹಿಂದೆ ನಾನು ಕೋವಿಡ್ ಉಸ್ತುವಾರಿಯಾಗಿದ್ದಾಗ ಬೆಂಗಳೂರಿನಲ್ಲಿ ಸಾವಿರ ಪ್ರಕರಣಗಳಿತ್ತು. ಸುಧಾಕರ್ ಉಸ್ತುವಾರಿ ಪಡೆದ ನಂತರ ಕೋವಿಡ್ ಕೇಸ್ ಐದು ಸಾವಿರಕ್ಕೇರಿತ್ತು. ಹಾಗೆಂದ ಮಾತ್ರಕ್ಕೆ ಸುಧಾಕರ್ ಕೋವಿಡ್ ನಿಯಂತ್ರಿಸಲು ವಿಫಲನಾಗಿದ್ದಾರೆ ಎಂದರ್ಥವಲ್ಲ ಎಂದು ಪರೋಕ್ಷವಾಗಿ ಸುಧಾಕರ್ ಗೆ ಕುಟುಕಿದರು.
ಇದನ್ನೂ ಓದಿ:ಸಂತೋಷದಿಂದ, ಸಂಪೂರ್ಣ ಒಪ್ಪಿಗೆಯಿಂದ ಸಮಾಜ ಕಲ್ಯಾಣ ಇಲಾಖೆ ಖಾತೆ ಒಪ್ಪಿಕೊಂಡಿದ್ದೇನೆ: ರಾಮುಲು
ಈ ಮಾತುಗಳನ್ನು ಕೇಳಿಸಿಕೊಂಡ ಸಚಿವ ಸುಧಾಕರ್ ನಂತರ ಮಾತನಾಡಿ, ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಕೆಳಹಂತದಲ್ಲಿ ಸಮನ್ವಯದ ಕೊರತೆಯಿತ್ತು. ಹಾಗಾಗಿ ತಾಂತ್ರಿಕತೆ ಮತ್ತು ಸಮನ್ವಯತೆ ಕಾಪಾಡಿಕೊಳ್ಳಲು ಖಾತೆ ಬದಲಾವಣೆ ಮಾಡಲಾಗಿದೆ. ಇಲ್ಲಿ ಯಾರು ಹೆಚ್ಚು ಯಾರು ಕಡಿಮೆ ಎಂಬ ಪ್ರಶ್ನೆಯೇ ಇಲ್ಲ. ರಾಮುಲು ಅಣ್ಣ ಅವರಿಗೆ ದೊಡ್ಡ ಇಲಾಖೆಯೆ ಸಿಕ್ಕಿದೆ. ಅವರು ಡಿ ಪ್ರಮೋಟ್ ಆಗಿಲ್ಲ, ಪ್ರಮೋಶನ್ ಆಗಿದೆ ಎಂದು ಸುಧಾಕರ್ ಅವರು ರಾಮುಲುಗೆ ಪರೋಕ್ಷ ತಿರುಗೇಟು ನೀಡಿದರು.