Advertisement

ವೈದ್ಯ ಕಾಲೇಜಿಗೆ ಮಂತ್ರಿ ಪದವಿ ತ್ಯಾಗ ಮಾಡಿದ್ದ ರಾಂಪೂರೆ

07:30 AM Mar 29, 2019 | Team Udayavani |

ಕಲಬುರಗಿ: ಪ್ರತಿಷ್ಠಿತ ಹೈದ್ರಾಬಾದ್‌-ಕರ್ನಾಟಕ ಶಿಕ್ಷಣ ಸಂಸ್ಥೆ (ಎಚ್‌ಕೆಇ) ಸಂಸ್ಥಾಪಕ ಮಹಾದೇವಪ್ಪ ರಾಂಪೂರೆ ಒಬ್ಬರೇ ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಸತತ ಮೂರು ಸಲ ಗೆಲುವು ಸಾಧಿಸಿದ್ದಲ್ಲದೇ, ಎಚ್‌ಕೆಇ ಸಂಸ್ಥೆಗೆ ವೈದ್ಯಕೀಯ ಕಾಲೇಜು ಮಂಜೂರಿಗೆ ಆಗ್ರಹಿಸಿ ತಮಗೆ ಒಲಿದು ಬಂದಿದ್ದ ಸಚಿವ ಸ್ಥಾನವನ್ನೇ ತ್ಯಾಗ ಮಾಡಿದ್ದರು. ಮಹಾದೇವಪ್ಪ ಯಶ್ವಂತರಾವ ರಾಂಪೂರೆ, 1957, 1962 ಹಾಗೂ 1967ರಲ್ಲಿ ಭಾರತೀಯ ಕಾಂಗ್ರೆಸ್‌ ಪಕ್ಷದಿಂದ ಕಲಬುರಗಿ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದರು. 1957ರಲ್ಲಿ ಕಲಬುರಗಿ-ಬೀದರ್‌ ಲೋಕಸಭಾ ಕ್ಷೇತ್ರ ಒಳಗೊಂಡು ದ್ವಿಸದಸ್ಯತ್ವ ಇದ್ದಾಗ ಮೊದಲ ಬಾರಿಗೆ ಆಯ್ಕೆಯಾಗಿದ್ದರೆ, ಬೀದರ್‌ದಿಂದ ಶಂಕರದೇವ
ಎನ್ನುವರು ಆಯ್ಕೆಯಾಗಿದ್ದರು. ರಾಂಪೂರೆ ಅವರು ಪ್ರಥಮ ಸಲ 1,39,041, ಎರಡನೇ ಸಲ 92,399 ಹಾಗೂ ಮೂರನೇ ಸಲ 1,36,188 ಮತಗಳನ್ನು ಪಡೆದು ಆಯ್ಕೆಯಾಗಿದ್ದರು. ರಾಂಪೂರೆ ನಂತರ ಉಳಿದಂತೆ ನಾಲ್ವರು ಎರಡೆರಡು ಸಲ ಗೆದ್ದಿದ್ದಾರೆ.

Advertisement

ರಾಂಪೂರೆ ಅವರು ಎರಡನೇ  ಸಲ 1962ರಲ್ಲಿ ಸಂಸತ್‌ ಸದಸ್ಯರಾಗಿ ಆಯ್ಕೆಯಾಗಿದ್ದಾಗ ಜವಾಹರಲಾಲ ನೆಹರೂ ಸಂಪುಟದಲ್ಲಿ ಶಿಕ್ಷಣ ಇಲ್ಲವೇ ಆರೋಗ್ಯ ಮಂತ್ರಿಗಳಾಗುವಂತೆ ಆಹ್ವಾನ ಬಂದಿತ್ತು. ಆದರೆ, ರಾಂಪೂರೆ ಅವರು ತಮ್ಮ ಎಚ್‌
ಕೆಇ ಸಂಸ್ಥೆಗೆ ವೈದ್ಯಕೀಯ ಕಾಲೇಜು ಮಂಜೂರು ಮಾಡುವುದರ ಜತೆಗೆ, ವೈದ್ಯಕೀಯ ಕಾಲೇಜು ಮಂಜೂರಾತಿಗೆ ಇರುವ 50 ಲಕ್ಷ ರೂ.ಶುಲ್ಕಕ್ಕೆವಿನಾಯಿತಿ ನೀಡುವುದಾದರೆ ಮಾತ್ರ ತಮಗೆ ಮಂತ್ರಿ ಪದವಿ ನೀಡಿದಂತೆ ಎಂದು ನಯವಾಗಿ ಆಹ್ವಾನ ತಿರಸ್ಕರಿಸಿದ್ದರಂತೆ. ನಂತರ, 1963ರಲ್ಲಿ ಕಲಬುರಗಿ ಎಚ್‌ಕೆಇ ಶಿಕ್ಷಣ ಸಂಸ್ಥೆಗೆ ವೈದ್ಯಕೀಯ ಕಾಲೇಜು ಮಂಜೂರಾಯಿತು. ಇದರ, ಜತೆಗೆ ಬೆಳಗಾವಿ ಕೆಎಲ್‌ಇ ಹಾಗೂ ದಾವಣಗೆರೆ ಬಾಪೂಜಿ ಶಿಕ್ಷಣ ಸಂಸ್ಥೆಗೂ ವೈದ್ಯಕೀಯ ಕಾಲೇಜುಗಳು ಮಂಜೂರಾದವು. ಒಂದು ವೇಳೆ, ರಾಂಪೂರೆ ಅವರು ಕೇಂದ್ರದಲ್ಲಿ ಮಂತ್ರಿಯಾಗಿದ್ದರೆ ಕಲಬುರಗಿಗೆ ವೈದ್ಯಕೀಯ ಕಾಲೇಜು ಮಂಜೂರಾಗುತ್ತಿತ್ತೋ ಇಲ್ಲವೋ ಗೊತ್ತಿರಲಿಲ್ಲ. ಆದರೆ, ಸಚಿವ ಸ್ಥಾನದ ತ್ಯಾಗದಿಂದ ವೈದ್ಯಕೀಯ ಕಾಲೇಜು ಬಂತು.

ಎರಡು ಸಲ ಆಯ್ಕೆಯಾದವರು: ರಾಂಪೂರೆ ಅವರು ಮೂರು ಸಲ ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಚುನಾಯಿತರಾಗಿದ್ದನ್ನು ಬಿಟ್ಟರೆ, ನಾಲ್ವರು ಮಾತ್ರ ಎರಡು ಸಲ ಚುನಾಯಿತರಾಗಿದ್ದಾರೆ. ಸಿದ್ರಾಮರೆಡ್ಡಿಯವರು 1974 ಹಾಗೂ 1977ರಲ್ಲಿ, ಡಾ|
ಬಿ.ಜಿ.ಜವಳಿಯವರು 1989 ಹಾಗೂ 1991ರಲ್ಲಿ, ಇಕ್ಬಾಲ್‌ ಅಹ್ಮದ ಸರಡಗಿಯವರು 1999 ಹಾಗೂ 2004ರಲ್ಲಿ ಆಯ್ಕೆಯಾಗಿದ್ದರೆ, ಹಾಲಿ ಸಂಸದ ಡಾ|ಮಲ್ಲಿಕಾರ್ಜುನ ಖರ್ಗೆ 2009 ಹಾಗೂ 2014ರಲ್ಲಿ ಆಯ್ಕೆಯಾಗಿ ಈಗ ಮೂರನೇ ಗೆಲುವಿನ ಅಗ್ನಿ
ಪರೀಕ್ಷೆಗೆ ಮುಂದಾಗಿದ್ದಾರೆ.

ಮೂವರು ಮಂತ್ರಿ: ಕಲಬುರಗಿ ಲೋಕಸಭಾ ಕ್ಷೇತ್ರದ ಸಂಸತ್‌ ಸದಸ್ಯರಲ್ಲಿ ಮೂವರು ಕೇಂದ್ರದಲ್ಲಿ ಮಂತ್ರಿಗಳಾಗಿದ್ದಾರೆ. 1980ರಲ್ಲಿ ನಡೆದ ಚುನಾವಣೆಯಲ್ಲಿ ಧರ್ಮಸಿಂಗ್‌ ಅವರು ಕಲಬುರಗಿ ಲೋಕಸಭಾ ಸದಸ್ಯರಾಗಿ ಚುನಾಯಿತರಾದರೂ ಸಂಸತ್‌ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಲಿಲ್ಲ. ಏಕೆಂದರೆ, ಅಟಲ್‌ ಬಿಹಾರಿ ವಾಜಪೇಯಿ ಎದುರು ಪರಾಭವಗೊಂಡ ಕೇರಳದ ಸಿ.ಎಂ.ಸ್ಟೀಫನ್‌ ಅವರಿಗಾಗಿ ಆಗಿನ ಪ್ರಧಾನಿ ಇಂದಿರಾಗಾಂಧಿ ಅವರ ಸೂಚನೆ ಮೇರೆಗೆ ಕಲಬುರಗಿ ಕ್ಷೇತ್ರ ಬಿಟ್ಟು ಕೊಡಬೇಕಾಯಿತು.
ಹೀಗಾಗಿ, ಧರ್ಮಸಿಂಗ್‌ ಸಂಸತ್ತು ಪ್ರವೇಶಿಸುವ ಮುಂಚೆಯೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಂತರ ನಡೆದ ಉಪಚುನಾವಣೆಯಲ್ಲಿ ಸಿ.ಎಂ.ಸ್ಟೀಫನ್‌ 1,50,665 ಮತಗಳನ್ನು ಪಡೆದು ಚುನಾಯಿತರಾದರಲ್ಲದೇ ಕೇಂದ್ರದಲ್ಲಿ ಸಂಪರ್ಕ
ಖಾತೆ ಮಂತ್ರಿಯಾದರು.

ವೀರೇಂದ್ರ ಪಾಟೀಲ ಅವರು 1984ರ ಡಿಸೆಂಬರ್‌ ತಿಂಗಳಲ್ಲಿ ನಡೆದ ಲೋಕಸಭಾ
ಚುನಾವಣೆಯಲ್ಲಿ ಚುನಾಯಿತರಾಗಿ ರಾಜೀವ್‌ ಗಾಂಧಿ ಸಂಪುಟದಲ್ಲಿ ಕೇಂದ್ರದ ಕಾರ್ಮಿಕ ಮತ್ತು ಪೆಟ್ರೋಲಿಯಂ ಖಾತೆ ಮಂತ್ರಿಗಳಾದರು. 2009ರ ಲೋಕಸಭಾ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಪ್ರಥಮ ಬಾರಿಗೆ ಸಂಸತ್‌ ಸದಸ್ಯರಾಗಿ
ಚುನಾಯಿತರಾಗಿ ಡಾ| ಮನಮೋಹನ್‌ಸಿಂಗ್‌ ಸಂಪುಟದಲ್ಲಿ ಮೊದಲು ಕಾರ್ಮಿಕ ಖಾತೆ ನಂತರ ರೈಲ್ವೆ ಖಾತೆ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ.

Advertisement

11 ತಿಂಗಳಾದರೂ ನಡೆಯಲಿಲ್ಲ ಉಪಚುನಾವಣೆ

1980ರಲ್ಲಿ ನಡೆದ ಉಪಚುನಾವಣೆಯಲ್ಲಿ ಆಯ್ಕೆಯಾದ ಸಿ.ಎಂ.ಸ್ಟೀಫನ್‌ ಸಂಸತ್‌ ಸದಸ್ಯತ್ವದ ಅವಧಿ ಇನ್ನೂ ಒಂದು ವರ್ಷ ಇರುವಾಗಲೇ ಕೊನೆಯುಸಿರೆಳೆದರು. 11 ತಿಂಗಳ ಕಾಲ ಕಲಬುರಗಿ ಸಂಸತ್‌ ಸ್ಥಾನ ಖಾಲಿ ಇದ್ದರೂ ಉಪಚುನಾವಣೆಯೇ ನಡೆಯಲಿಲ್ಲ. ಸಿ.ಎಂ.ಸ್ಟೀಫನ್‌ 1984ರ ಜ.16ರಂದು ಮೃತಪಟ್ಟರು. ಮುಂದೆ 11 ತಿಂಗಳ ಬಳಿಕ 1984ರ ಡಿಸೆಂಬರ್‌ ತಿಂಗಳಲ್ಲಿ ಸಾರ್ವತ್ರಿಕ ಲೋಕಸಭಾ
ಚುನಾವಣೆ ನಡೆಯಿತು. ಒಂದೇ ಅವಧಿಯಲ್ಲಿ ಎರಡು ಸಲ ಉಪಚುನಾವಣೆ ನಡೆಸಬಾರದು ಎಂಬ ನಿಯಮವಿಲ್ಲವಾದರೂ ಚುನಾವಣೆ ನಡೆಯಲಿಲ್ಲ.

ಪ್ರಥಮ ಸಂಸದ ಸ್ವಾಮಿ ರಮಾನಂದ ತೀರ್ಥರು
ರಾಜ್ಯಗಳ ಪುನರ್‌ ವಿಂಗಡಣೆ ಮುಂಚೆ 1952ರಲ್ಲಿ ನಡೆದ ದೇಶದ ಚುನಾವಣೆಯಲ್ಲಿ ಹೈ-ಕ ವಿಮೋಚನಾ ಚಳವಳಿ ನೇತಾರ, ಸ್ವಾತಂತ್ರ್ಯ ಹೋರಾಟಗಾರ ಸ್ವಾಮಿ ರಮಾನಂದ ತೀರ್ಥರು ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಪ್ರಥಮ ಸಂಸತ್‌ ಸದಸ್ಯರಾಗಿ ಆಯ್ಕೆಯಾದರು. ಇದೇ ಸಂದರ್ಭದಲ್ಲಿ ರಾಯಚೂರು ಲೋಕಸಭಾ ಕ್ಷೇತ್ರದಿಂದ ಸ್ವಾತಂತ್ರ್ಯ ಹೋರಾಟಗಾರ ಕಲಬುರಗಿಯ ಜಗನ್ನಾಥ ಚಂಡ್ರಕಿ ಚುನಾಯಿತರಾಗಿದ್ದರು.

ಹಣಮಂದರಾವ ಭೈರಾಮಡಗಿ

Advertisement

Udayavani is now on Telegram. Click here to join our channel and stay updated with the latest news.

Next