Advertisement

ಸಾಮಾಜಿಕ ಮಾಧ್ಯಮಗಳ ಮೂಲಕ ಉಗ್ರವಾದ ವಿಸ್ತರಣೆ

01:11 AM Dec 14, 2022 | Team Udayavani |

ಹೊಸದಿಲ್ಲಿ: ಸಾಮಾಜಿಕ ಮಾಧ್ಯಮಗಳ ಬಳಕೆಯ ಮುಖಾಂತರ ಭಯೋತ್ಪಾದನೆ ಹಬ್ಬುವ ಸಾಧ್ಯತೆ ಈಗ ಹಿಂದೆಂದಿಗಿಂತಲೂ ಹೆಚ್ಚಿದೆ. ಲೋಕಸಭೆ­ಯಲ್ಲಿ ಕೇಂದ್ರ ಸಚಿವ ನಿತ್ಯಾನಂದ ರಾಯ್‌ ಈ ಆಘಾತಕಾರಿ ಮಾಹಿತಿ ನೀಡಿದ್ದಾರೆ.

Advertisement

ಗಡಿರಹಿತ ಸೈಬರ್‌ಸ್ಪೇಸ್‌ನೊಂದಿಗೆ ತ್ವರಿತ ಸಂವ­ಹನವೂ ಜತೆಗೂಡಿರುವ ಕಾರಣ ಹಿಂದೆಂದಿ­ಗಿಂ­ತಲೂ ಹೆಚ್ಚು ವೇಗದಲ್ಲಿ ಉಗ್ರವಾದವು ವ್ಯಾಪಿ­ಸಲಾ­ರಂಭಿಸಿದೆ. ಇದು ದೇಶದ ಸಾರ್ವ­ಭೌಮತೆ ಮತ್ತು ಸಮಗ್ರತೆಗೆ ಅಪಾಯವೊಡ್ಡಿದೆ ಎಂದಿದ್ದಾರೆ. ಕಳೆದ 3 ವರ್ಷಗಳಲ್ಲಿ ಪ್ರತೀದಿನ ಸುಮಾರು 1,500 ರಷ್ಟು ಸೈಬರ್‌ ಅಪರಾಧ ಪ್ರಕರಣಗಳು ದಾಖಲಾ­ಗಿವೆ. ಈ ಪೈಕಿ ಶೇ.2ರಷ್ಟು ಪ್ರಕರಣಗಳಲ್ಲಿ ಮಾತ್ರ ಎಫ್ಐಆರ್‌ ದಾಖಲಾಗಿದೆ ಎಂದೂ ಸರಕಾರ ತಿಳಿಸಿದೆ.

ಕ್ಯಾನ್ಸರ್‌ ಕೇಸ್‌, ಸಾವು ಹೆಚ್ಚಳ: 2020- 2022ರ ನಡುವೆ ದೇಶದಲ್ಲಿ ಕ್ಯಾನ್ಸರ್‌ ಪ್ರಕರಣಗಳು ಮತ್ತು ಅದರಿಂದಾದ ಸಾವು ಪ್ರಕರಣಗಳು ಗಣನೀಯ­ವಾಗಿ ಹೆಚ್ಚಳವಾಗಿವೆ. 2020ರಲ್ಲಿ 13,92,179 ರಷ್ಟಿದ್ದ ಪ್ರಕರಣಗಳು, 2022ರ ವೇಳೆಗೆ 15,61,427 ಕ್ಕೇರಿಕೆಯಾಗಿವೆ. ಸಾವು 7,70,230 ಇದ್ದಿದ್ದು, ಎರಡೇ ವರ್ಷದಲ್ಲಿ 8,08,558­ಕ್ಕೇರಿಕೆ­ಯಾಗಿದೆ.

ಈ ನಡುವೆ, 2021-22ರಲ್ಲಿ ಲಭ್ಯವಿದ್ದ 60,202 ವೈದ್ಯ ಪಿಜಿ ಸೀಟುಗಳ ಪೈಕಿ 3,733 ಸೀಟುಗಳು ಕೌನ್ಸೆಲಿಂಗ್‌ ಬಳಿಕವೂ ಭರ್ತಿಯಾಗಿಲ್ಲ ಎಂದು ಆರೋಗ್ಯ ಸಚಿವ ಮಾಂಡವೀಯಾ ತಿಳಿಸಿದ್ದಾರೆ.

ಸಮುದ್ರದ ಮೂಲಕ: ಭಾರತಕ್ಕೆ ಕಳ್ಳಸಾಗಣೆ ಮೂಲಕ ತರಲಾಗುತ್ತಿರುವ ಹೆರಾಯಿನ್‌, ಕೊಕೇನ್‌, ಹಶೀಶ್‌ನಂತಹ ಮಾದಕದ್ರವ್ಯಗಳ ಪೈಕಿ ಅತೀ ಹೆಚ್ಚು ಡ್ರಗ್ಸ್‌ ಸಮುದ್ರದ ಮೂಲಕ ಸಾಗಣೆ­ಯಾಗುತ್ತಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾ­ರಾಮನ್‌ ರಾಜ್ಯಸಭೆಗೆ ಲಿಖೀತ ಮಾಹಿತಿ ನೀಡಿದ್ದಾರೆ. ಪ್ರಸಕ್ತ ವರ್ಷದ ನ.30ರ ವರೆಗೆ 3,017 ಕೆ.ಜಿ. ಹೆರಾಯಿನ್‌, 122 ಕೆಜಿ ಕೊಕೇನ್‌ ವಶಪಡಿಸಿ­ಕೊಳ್ಳಲಾಗಿದ್ದು, ಈ ಪೈಕಿ ಕ್ರಮವಾಗಿ ಶೇ.55 ಮತ್ತು ಶೇ.84ರಷ್ಟು ಡ್ರಗ್ಸ್‌ ಸಮುದ್ರದ ಮೂಲಕ ಕಳ್ಳಸಾಗಣೆಯಾಗಿದ್ದು ಎಂದಿದ್ದಾರೆ ನಿರ್ಮಲಾ.

Advertisement

ಪ್ರಚಾರಕ್ಕೆ 168 ಕೋಟಿ: ಪ್ರಸಕ್ತ ವಿತ್ತೀಯ ವರ್ಷದಲ್ಲಿ ಇದುವರೆಗೆ ಕೇಂದ್ರ ಸರಕಾರ ಪ್ರಚಾರ ಮತ್ತು ಜಾಹೀರಾತಿಗಾಗಿ 168.8 ಕೋಟಿ ವೆಚ್ಚ ಮಾಡಿದೆ ಎಂದು ತಿಳಿಸಿದೆ. ವಿದ್ಯುನ್ಮಾನ ಮಾಧ್ಯಮ ಗಳಲ್ಲಿ ಜಾಹೀರಾತಿಗಾಗಿ 76.84 ಕೋಟಿ ರೂ. ವಿನಿಯೋಗಿಸಲಾಗಿದೆ.

2,302 ಕೊರೊನಾ ವೀರರ ಕುಟುಂಬಕ್ಕೆ ಪರಿಹಾರ
ಕೊರೊನಾ ವಿರುದ್ಧದ ಹೋರಾಟದ ವೇಳೆ ಮಡಿದ ಆರೋಗ್ಯ ಸಿಬಂದಿಯ ಕುಟುಂಬಕ್ಕೆ ತಲಾ 10 ಲಕ್ಷ ರೂ. ವಿಮೆ ನೀಡುವ ಯೋಜನೆಯ ಅನ್ವಯ ಈವರೆಗೆ 2,302 ಮಂದಿಗೆ ತಲಾ 50 ಲಕ್ಷ ರೂ.ಗಳನ್ನು ವಿತರಿಸಲಾಗಿದೆ. ಹೀಗೆಂದು ರಾಜ್ಯಸಭೆಗೆ ಕೇಂದ್ರ ಆರೋಗ್ಯ ಖಾತೆ ಸಹಾಯಕ ಸಚಿವೆ ಭಾರತಿ ಪ್ರವೀಣ್‌ ಪವಾರ್‌ ಲಿಖೀತ ಮಾಹಿತಿ ನೀಡಿದ್ದಾರೆ.

ಕರ್ನಾಟಕದ 38 ಮಂದಿಯ ಸಹಿತ ಒಟ್ಟು 2,302 ಮಂದಿ ಕೊರೊನಾ ವೀರರ ಕುಟುಂಬಕ್ಕೆ ತಲಾ 50 ಲಕ್ಷ ರೂ. ವಿಮೆ ಮೊತ್ತ ಪಾವತಿಸಲಾಗಿದೆ. ಈ ಪೈಕಿ 465 ಕ್ಲೇಮುಗಳು ವೈದ್ಯರ ಕುಟುಂಬಗಳಿಗೆ ಸಂಬಂಧಿಸಿದ್ದು ಎಂದೂ ಸಚಿವೆ ಭಾರತಿ ತಿಳಿಸಿದ್ದಾರೆ. ಬಿಹಾರದ 53, ಉತ್ತರಪ್ರದೇಶದ 64, ಮಹಾರಾಷ್ಟ್ರದ 43, ತಮಿಳುನಾಡು ಮತ್ತು ಆಂಧ್ರಪ್ರದೇಶದ ತಲಾ 37 ವೈದ್ಯರ ಕುಟುಂಬಗಳಿಗೆ ವಿಮೆಯ ಮೊತ್ತ ಪಾವತಿಸಲಾಗಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next