ರಾಮನಗರ: ರಾಗಿ ಹೊಲದಲ್ಲಿ ಕಾವಲು ಕಾಯುತ್ತಿದ್ದ ರೈತ ಕಾಡಾನೆಯ ದಾಳಿಗೆ ಸಿಲುಕಿ ಸಾವಿಗೀಡಾದ ಘಟನೆ ಕನಕಪುರ ತಾಲೂಕಿನ ಉಯ್ಯಂಬಹಳ್ಳಿ ಹೋಬಳಿ ಹಗ್ಗನೂರುದೊಡ್ಡಿ ಗ್ರಾಮದಲ್ಲಿ ಡಿ.15ರ ಭಾನುವಾರ ಬೆಳಿಗ್ಗೆ ಸುಮಾರು 2 ಗಂಟೆಯ ಸುಮಾರಿನಲ್ಲಿ ನಡೆದಿದೆ.
ಕರಿಯಪ್ಪ(75) ಮೃತ ದುರ್ದೈವಿ.
ಡಿ.14ರ ಶನಿವಾರ ರಾತ್ರಿ ಗ್ರಾಮದ ಹೊರವಲಯದಲ್ಲಿರುವ ತನ್ನ ರಾಗಿ ಹೊಲದಲ್ಲಿ ಕಾವಲು ಕಾಯಲು ಹೋಗಿದ್ದನು. ಈ ಸಂದರ್ಭ ಕಾಡಾನೆಗೆ ಸಿಲುಕಿ ಸಾವಿಗೀಡಾಗಿದ್ದಾನೆ. ಅಕ್ಕಪಕ್ಕದ ಹೊಲದಲ್ಲಿದ್ದ ರೈತರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ.
ಕಾವೇರಿ ವನ್ಯಜೀವಿ ವಲಯದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸುರೇಂದ್ರ, ಎ.ಸಿ.ಎಫ್. ನಾಗೇಂದ್ರ ಪ್ರಸಾದ್, ಡಿ.ಆರ್.ಎಫ್.ಓ. ಸದಾಶಿವ, ಆರ್.ಎಫ್.ಒ. ಅನಿಲ್ ಸ್ಥಳಕ್ಕೆ ಭೇಟಿ ನೀಡಿ ಮೃತರ ಕುಟುಂಬಕ್ಕೆ 15 ಲಕ್ಷ ಪರಿಹಾರ ಹಾಗೂ 5 ವರ್ಷ 4 ಸಾವಿರ ಪೆನ್ಷನ್, ಶವ ಸಂಸ್ಕಾರಕ್ಕೆ ಪರಿಹಾರ ನೀಡುವುದಾಗಿ ತಿಳಿಸಿದರು. ಈ ಸಂಬಂಧ ಸಾತನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಂಎಲ್ಸಿ ಎಸ್. ರವಿ ಜೆಡಿಎಸ್ ತಾಲೂಕು ಅಧ್ಯಕ್ಷ ನಾಗರಾಜು ಆಸ್ಪತ್ರೆಗೆ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿ ದಾಳಿ ಮಾಡಿರುವ ಕಾಡಾನೆಯನ್ನು ಸೆರೆ ಹಿಡಿದು ಸ್ಥಳಾಂತರ ಮಾಡುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.