ರಾಮನಗರ: ಜಿಲ್ಲೆಯಲ್ಲಿ ಚುನಾವಣಾ ರಣಕಣ ರಂಗೇರುತ್ತಿದೆ. ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಘೋಷಣೆ ಮಾಡುವ ಮೂಲಕ ಅಖಾಡಕ್ಕಿಳಿದಿದ್ದರೆ ಬಿಜೆಪಿ ಮಾತ್ರ ಮುಗುಮ್ಮಾಗಿದ್ದು ಅಭ್ಯರ್ಥಿ ಯಾರೆಂದು ಘೋಷಣೆ ಮಾಡಿಲ್ಲ, ಇದು ಸಾಮಾನ್ಯವಾಗಿಯೇ ಆಕಾಂಕ್ಷಿತರ ಪಟ್ಟಿ ಹೆಚ್ಚಳಕ್ಕೆ ಕಾರಣವಾಗಿದೆ. ಇದೆಲ್ಲವೂ ಬಣ ರಾಜಕೀಯಕ್ಕೆ ಎಡೆಮಾಡಿಕೊಟ್ಟಿದ್ದು ಹುಚ್ಚನ ಮದುವೇಲಿ ಉಂಡೋನೆ ಜಾಣ ಎನ್ನುವಂತಾಗಿದೆ ಇಂದಿನ ಬಿಜೆಪಿ ಸ್ಥಿತಿ.
ರಾಮನಗರ ಅಂದ್ರೇನೆ ಚುನಾವಣಾ ರಣಕಣ ರಾಜ್ಯದ ಗಮನ ಸೆಳೆಯುತ್ತದೆ. ಇಲ್ಲಿ ಗೆದ್ದವರಿಗೆ ಮುಖ್ಯ ಮಂತ್ರಿ ಯೋಗ ಸುಲಭ ಎನ್ನುವ ನಂಬಿಕೆ ಹೆಚ್ಚಾಗಿದ್ದು, ಕ್ಷೇತ್ರದಲ್ಲಿ ಟಿಕೆಟ್ ಆಕಾಂಕ್ಷಿತರು ಸಹಜವಾಗಿಯೇ ಹೆಚ್ಚಾಗಿದ್ದಾರೆ. ಇಲ್ಲಿ ಕೆಂಗಲ್ ಹನುಮಂತಯ್ಯರವರ ನಂತರ ಮಾಜಿ ಪ್ರಧಾನಿ ದೇವೇಗೌಡರು ಇಲ್ಲಿ ರಾಜಕೀಯ ಪುನರ್ಜನ್ಮದ ಜೊತೆಗೆ ಮುಖ್ಯಮಂತ್ರಿಯಾಗಿ ಪಿಎಂ ಕೂಡ ಆಗಿದ್ದರು, ಬಳಿಕ ಮಾಜಿ ಸಿಎಂ ಕುಮಾರಸ್ವಾಮಿ ಪ್ರಥಮ ಭಾರಿಗೆ ಶಾಸಕರಾಗಿ ಮುಖ್ಯಮಂತ್ರಿಯಾಗಿದ್ದು, ಕ್ಷೇತ್ರದ ಮಹಿಮೆ ಹೆಚ್ಚಾಗಲು ಕಾರಣವಾಗಿದೆ. ಅದಕ್ಕಾಗಿ ಕಾಂಗ್ರೆಸ್ ನಿಂದ ಮುಖ್ಯಮಂತ್ರಿ ರೇಸ್‌ನಲ್ಲಿರುವ ಡಿ.ಕೆ. ಶಿವಕುಮಾರ್ ಇಲ್ಲಿಂದಲೇ ಸ್ಪರ್ಧಿಸುತ್ತಾರೆಂಬ ಸುದ್ದಿ ಹರಿದಾಡಿತ್ತು ಬಳಿಕ ಅದನ್ನ ಕೈಬಿಡಲಾಗಿದೆ.
ಇನ್ನು ಜೆಡಿಎಸ್ ನಿಂದ ಮಾಜಿ ಸಿಎಂ ಕುಮಾರಸ್ವಾಮಿ ಪುತ್ರ ನಿಖೀಲ್ ಕುಮಾರಸ್ವಾಮಿ ಅಭ್ಯರ್ಥಿ , ಕಾಂಗ್ರೆಸ್‌ನಿಂದ ಡಿ.ಕೆ.ಬ್ರದರ್ ಕಟ್ಟಾ ಬೆಂಬಲಿಗ ಜಿ.ಪಂ ಮಾಜಿ ಅಧ್ಯಕ್ಷ ಇಕ್ಬಾಲ್ ಹುಸೇನ್ ಅಭ್ಯರ್ಥಿಯಾಗಿ ಘೋಷಣೆಯಾಗುವುದು ಬಹುತೇಕ ನಿಶ್ಚಿತವಾಗಿದೆ. ಇನ್ನು ಬಿಜೆಪಿಯಲ್ಲಿ ಆಕಾಂಕ್ಷಿತರ ಪಟ್ಟಿ ದೊಡ್ಡದಾಗಿದ್ದು, ಯಾರು ಹಿತವರು ಎಂಬ ಪ್ರಶ್ನೆ ಎದುರಾಗಿದೆ.
ದಿನಕ್ಕೊಂದು ಬಿಜೆಪಿ ಅಭ್ಯರ್ಥಿಗಳ ಹೆಸರು: ಇನ್ನು ದಿನಕ್ಕೊಂದು ಹೆಸರು ಬಿಜೆಪಿ ಅಭ್ಯರ್ಥಿಯಾಗಿ ಹೊರಬರುತ್ತಿದೆ, ಮೊದಲಿಗೆ ಕರ್ನಾಟಕ ರಾಜ್ಯ ರೇಷ್ಮೆ ಉದ್ಯಮಗಳ ನಿಗಮದ ಅಧ್ಯಕ್ಷ ಗೌತಮ್ ಗೌಡ ಹೆಸರು ಹರಿದಾಡುತ್ತಿದೆಯಾದರೂ, ಗ್ರೇಟರ್ ಬೆಂಗಳೂರು ಬಿಡದಿ ಸ್ಮಾರ್ಟ್ ಸಿಟಿ ಅಧ್ಯಕ್ಷ ವರದರಾಜ್ ಗೌಡ, ಪಕ್ಷದ ನಿಷ್ಠಾವಂತ ಕಾರ್ಯಕರ್ತ ಹಾಗೂ ಪ್ರಭಾವಿಯಾಗಿದ್ದು, ಅವರೇ ನಮ್ಮ ಎಂಎಲ್‌ಎ ಎಂಬ ಕರಪತ್ರಗಳ ಮೂಲಕ ಘೋಷಣೆ ಆರಂಭವಾಗಿದೆ. ಸಿಪಿವೈ ಅವರ ಕಟ್ಟಾ ಬೆಂಬಲಿಗ ಗೋವಿಂದರಾಜು ತೆರೆಮರೆಯಲ್ಲಿ ಪ್ರಯತ್ನ ನಡೆಸಿದ್ದಾರೆ. ನಂತರ ಬೆಂಗಳೂರಿನ ವೈದ್ಯೆ ಪುಣ್ಯವತಿ ಸದ್ದಿಲ್ಲದೆ ರಾಜ್ಯ ನಾಯಕರ ಸಮ್ಮುಖದಲ್ಲಿಯೇ ಬಿಜೆಪಿ ಸೇರ್ಪಡೆಗೊಂಡಿದ್ದು, ಟಿಕೆಟ್‌ಗಾಗಿ ಇನ್ನಿಲ್ಲದ ಕಸರತ್ತು ನಡೆಸಿ ತಮ್ಮ ಬೆಂಬಲಿಗರ ಮೂಲಕ ಪ್ರಭಾವ ಬೀರುತ್ತಿದ್ದಾರೆ.
Related Articles
ಇನ್ನು ತಿಗಳ ಸಮುದಾಯವೇ ಬೆನ್ನಿಗೆ ನಿಲ್ಲುವ ಮೂಲಕ ತಮ್ಮ ಸಮುದಾಯಕ್ಕೆ ಆದ್ಯತೆ ನೀಡಿ ರಾಜಕೀಯವಾಗಿ ಸ್ಥಾನಮಾನ ಒದಗಿಸಿಕೊಡಿ ಅದಕ್ಕಾಗಿ ಎಂಎಲ್‌ಎ ಟಿಕೆಟ್ ಬೇಕೇ ಬೇಕು ಎಂಬ ಹಕ್ಕೊತ್ತಾಯ ಮಂಡಿಸಿದ್ದು ಡಿ.ನರೇಂದ್ರ ಪಾಲಿಗೆ ಸಿಹಿ ಜೇನಾಗಿದೆ. ಇದೆಲ್ಲದರ ನಡುವೆ ಬಿಜೆಪಿ ತಾ.ಮಾಜಿ ಅಧ್ಯಕ್ಷ ಪ್ರವೀಣ್ ಗೌಡ ಪ್ರಬಲ ಆಕಾಂಕ್ಷಿಗಳಲ್ಲೊಬ್ಬರಾಗಿದ್ದು, ಪ್ರಾಧಿಕಾರದ ಅಧ್ಯಕ್ಷ ಶಿವಮಾದು ಸೇರಿ ಹಲವು ಮಂದಿ ಮುಂಚೂಣಿಯಲ್ಲಿದ್ದಾರೆ. ಕ್ಷೇತ್ರದಲ್ಲಿ ಓರ್ವ ಪ್ರಧಾನಿ ಮೂವರು ಮುಖ್ಯಮಂತ್ರಿಗಳನ್ನು ಕೊಡುಗೆ ನೀಡಿರುವ ಕ್ಷೇತ್ರದಲ್ಲಿ ಅದಿಪತ್ಯಕ್ಕಾಗಿ ಕಸರತ್ತು ಸಹಜವಾಗಿದ್ದು, ಬಿಜೆಪಿ ಅಭ್ಯರ್ಥಿ ಘೋಷಣೆ ಬಳಿಕವಷ್ಟೇ ರೇಷ್ಮೇನಗರಿ ರಾಮನಗರದ ಸ್ಪಷ್ಠ ಚಿತ್ರಣ ದೊರಕಲಿದೆ.
ಡಿ.ಕೆ.ಸುರೇಶ್ ಸ್ಪರ್ಧೆ ! : ರಾಮನಗರ ವಿಧಾನಸಭಾ ಕ್ಷೇತ್ರದಿಂದ ಡಿ.ಕೆ. ಸುರೇಶ್ ಸ್ಪರ್ಧೆ ಬಗ್ಗೆ ಹೈಮಾಂಡ್ ಒಲವು ತೋರಿದ್ದು, ಕೆಪಿಸಿಸಿಗೆ ಸೂಚಿಸಿದೆ ಎನ್ನಲಾಗಿದ್ದು, ನಿಖೀಲ್ ವಿರುದ್ಧ ಪ್ರಬಲ ಪೈಪೋಟಿ ನೀಡುವ ಮೂಲಕ ಎಚ್ ಡಿಕೆಯನ್ನು ಜಿಲ್ಲೆಯಲ್ಲಿ ಕಟ್ಟಿಹಾಕುವ ಕೆಲಸಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ. ಈ ನಡುವೆ ಅಧಿಕೃತ ಘೋಷಣೆಯಾಗದಿದ್ದರೂ ಊಹಾಪೋಹ ದಿಂದಾಗಿ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಉತ್ಸಾಹದ ಚಿಲುಮೆ ಹೆಚ್ಚಾಗಿದ್ದು, ಡಿಕೆ ಸುರೇಶ್ ಸ್ಪರ್ಧೆಗೆ ಒತ್ತಡ ಏರಲು ಮುಖಂಡರು ಮುಂದಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಹಾಗೇನಾದರೂ ಆದರೆ, ರಾಮನಗರ ವಿಧಾನಸಭಾ ಕ್ಷೇತ್ರ ಹೈವೋಲ್ಟೆàಜ್ ಕ್ಷೇತ್ರವಾಗುವುದರಲ್ಲಿ ಅಚ್ಚರಿಯಿಲ್ಲ.
-ಎಂ.ಎಚ್.ಪ್ರಕಾಶ