ಲಕ್ನೋ: “ಅಯೋಧ್ಯೆ ವಿವಾದ ಮಾತುಕತೆ ಮೂಲಕವೇ ಬಗೆಹರಿಸಬೇಕು. ಈ ಕುರಿತ ಸುಪ್ರೀಂ ಕೋರ್ಟ್ ಸಲಹೆಯನ್ನು ನಾನು ಸ್ವಾಗತಿಸುತ್ತೇನೆ.’
ಹೀಗೆಂದು ಹೇಳಿರುವುದು ಉತ್ತರಪ್ರದೇಶದ ನೂತನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್. ಸಿಎಂ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ಆರೆಸ್ಸೆಸ್ ಮುಖವಾಣಿ “ಪಾಂಚಜನ್ಯ’ಕ್ಕೆ ನೀಡಿರುವ ಸಂದರ್ಶನದಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ದೀರ್ಘಕಾಲದಿಂದ ಬಾಕಿ ಉಳಿದಿರುವ ಅಯೋಧ್ಯೆ ರಾಮಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ನೀಡಿರುವ ಸಲಹೆಯು ಅತ್ಯುತ್ತಮವಾದದ್ದು. ಈ ವಿವಾದವು ಅತ್ಯಂತ ಸೂಕ್ಷ್ಮಮತ್ತು ಸಂವೇದನಾಶೀಲವಾಗಿದ್ದು, ಪರಸ್ಪರ ಸಂಧಾನ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಿ ಎಂದು ನ್ಯಾಯಾಲಯ ಹೇಳಿದೆ. ಇದೊಂದು ಸ್ವಾಗತಾರ್ಹ ಸಲಹೆ. ಇದಕ್ಕೆ ನನ್ನ ಸಹಮತವಿದೆ. ಮಾತುಕತೆ ಮೂಲಕ ವಿವಾದಕ್ಕೆ ಪರಿಹಾರ ಕಂಡುಕೊಳ್ಳುವುದಿದ್ದರೆ, ನನ್ನ ಸರ್ಕಾರವೂ ಸಹಾಯ ಮಾಡಲು ಸಿದ್ಧವಿದೆ. 2010ರಲ್ಲಿ ಅಲಹಾಬಾದ್ ಹೈಕೋರ್ಟ್ ನೀಡಿರುವ ತೀರ್ಪು ಬಹುತೇಕ ವಿಚಾರಗಳನ್ನು ಬಗೆಹರಿಸಿದೆ. ಈಗ ಅದನ್ನು ಸಂಪೂರ್ಣವಾಗಿ ಸಂಧಾನದ ಮೂಲಕ ಪರಿಹರಿಸುವುದು ಮುಖ್ಯ,’ ಎಂದಿದ್ದಾರೆ ಯೋಗಿ.
ಅಕ್ರಮ ಕಸಾಯಿಖಾನೆ: ಇದೇ ಸಂದರ್ಭದಲ್ಲಿ, ಅಕ್ರಮ ಕಸಾಯಿಖಾನೆಗಳ ವಿರುದ್ಧದ ಕ್ರಮವನ್ನು ಸಮರ್ಥಿಸಿಕೊಂಡಿರುವ ಯೋಗಿ, ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ಆದೇಶದಂತೆಯೇ ಈ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ. ಸೂಕ್ತ ಲೈಸೆನ್ಸ್ ಹೊಂದಿರುವ ವಧಾಗೃಹಗಳಿಗೆ ಯಾವುದೇ ತೊಂದರೆ ಮಾಡುವುದಿಲ್ಲ. ಎನ್‌ಜಿಟಿ ಮತ್ತು ಅಲಹಾಬಾದ್ ಹೈಕೋರ್ಟ್ ಅಕ್ರಮ ಕಸಾಯಿಖಾನೆ ಕುರಿತು ಕೆಲವು ನಿರ್ದೇಶನಗಳನ್ನು ರಾಜ್ಯ ಸರ್ಕಾರಕ್ಕೆ ನೀಡಿದ್ದವು. ಅದನ್ನು ನಾವು ಅನುಸರಿಸುತ್ತಿದ್ದೇವೆ ಎಂದಿದ್ದಾರೆ.
ಸಸ್ಯಾಹಾರ ಒಳ್ಳೆಯದು: ಇದೇ ವೇಳೆ, ಸಸ್ಯಾಹಾರವು ಶರೀರಕ್ಕೆ ಉತ್ತಮ ಎಂದಿದ್ದಾರೆ ಯೋಗಿ. ಮಾಂಸ ನಿಷೇಧ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, “ನಾನು ಯಾರ ಮೇಲೂ ಒತ್ತಡ ತರುತ್ತಿಲ್ಲ. ಭಾರತದ ಸಂವಿಧಾನವು ಜನರಿಗೆ ಕೆಲವು ಹಕ್ಕು ಮತ್ತು ಸ್ವಾತಂತ್ಯÅವನ್ನು ನೀಡಿದೆ. ಆದರೆ, ಎಲ್ಲದಕ್ಕೂ ಒಂದು ಮಿತಿ ಇರಬೇಕು,’ ಎಂದು ಹೇಳಿದ್ದಾರೆ.
ಕೆಲಸವೇ ಮಾತಾಡುತ್ತದೆ: ನನ್ನ ಸರ್ಕಾರವು ಓಲೈಕೆ ರಾಜಕಾರಣ ಮಾಡುವುದಿಲ್ಲ. ನಮ್ಮ ಕೆಲಸವೇ ಮಾತಾಡುತ್ತದೆ. ನಾನಿದನ್ನು ಹಿಂದೆಯೂ ಹೇಳಿದ್ದೇನೆ, ಈಗಲೂ ಹೇಳುತ್ತಿದ್ದೇನೆ. ಜಾತಿ, ಧರ್ಮಗಳ ಎಲ್ಲೆಯನ್ನು ಮೀರಿ ಎಲ್ಲರ ಅಭಿವೃದ್ಧಿಗಾಗಿ ನನ್ನ ಸರ್ಕಾರ ಶ್ರಮಿಸಲಿದೆ ಎಂದೂ ಯೋಗಿ ಭರವಸೆ ನೀಡಿದ್ದಾರೆ.