ಬೆಂಗಳೂರು: ಬಾಂಬ್ ಸ್ಫೋಟವಾದ ಸ್ಥಳದಲ್ಲಿ ಪತ್ತೆಯಾದ ವಸ್ತುಗಳನ್ನು ಸಂಗ್ರಹಿಸಿದ ಪರಿಶೀಲಿಸಿರುವ ವಿಧಿವಿಜ್ಞಾನ ಪ್ರಯೋಗಾಲಯ (ಎಫ್ಎಸ್‌ಎಲ್) ತಜ್ಞರು ಸಿಸಿಬಿ ಪೊಲೀಸರ ಜೊತೆ ಕೆಲವೊಂದು ಮಾಹಿತಿ ಹಂಚಿಕೊಂಡಿದ್ದಾರೆ.
ಬಾಂಬ್ ತಯಾರಿಕೆಯಲ್ಲಿ 9 ವೋಲ್ಟ್ ಬ್ಯಾಟರಿ ಮೊಬೈಲ್ ಸರ್ಕೀಟ್ ಟೈಮರ್‌ನಂತರ ಸಾಮಗ್ರಿಗಳನ್ನೂ ಬಳಸಲಾಗಿದೆ. ಬಾಂಬ್ ಹೋಟೆಲ್‌ನ ಮೇಲ್ಭಾಗದಲ್ಲಿ ಸ್ಫೋಟಗೊಂಡಿದ್ದರಿಂದ ಇದರ ತೀವ್ರತೆ ಕಡಿಮೆಯಾಗಿ ಹೋಟೆಲ್‌ನ ಗ್ರಾಹಕರಿಗೆ ಅಷ್ಟೊಂದು ದೊಡ್ಡ ಪೆಟ್ಟು ಆಗಲಿಲ್ಲ. ಒಂದು ವೇಳೆ ಹೋಟೆಲ್‌ನ ಅಕ್ಕ-ಪಕ್ಕದ ಗೋಡೆಗಳ ಮಧ್ಯೆ ಸಿಡಿದಿದ್ದರೆ ಭಾರಿ ಅನಾಹುತ ಸಂಭವಿಸುತ್ತಿತ್ತು. ಹೆಚ್ಚು ತೀವ್ರತೆ ಹೊಂದಿರುವ ಬಾಂಬ್ ಇದಾಗಿದೆ. ಅದೃಷ್ಟವಶಾತ್ ಮೇಲ್ಭಾಗದ ಛಾವಣಿಗೆ ಸಿಡಿದಿದ್ದ ಪರಿಣಾಮ ಅಷ್ಟೊಂದು ತೀವ್ರತೆ ಉಂಟಾಗಲಿಲ್ಲ ಎಂದು ಎಫ್ಎಸ್‌ಎಲ್ ತಜ್ಞರು ಸಿಸಿಬಿ ಪೊಲೀಸರೊಂದಿಗೆ ಚರ್ಚಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಇನ್ನು ಸ್ಫೋಟದ ಸ್ಥಳದಲ್ಲಿ ಪತ್ತೆಯಾಗಿರುವ ಬಾಂಬ್‌ನ ಸಾಮಾಗ್ರಿ ಗಮನಿಸಿದರೆ ಪರಿಣಿತರು ಬಾಂಬ್ ತಯಾರಿಸಿರುವುದು ಕಂಡು ಬಂದಿದೆ. ತೀವ್ರತೆ ಹೆಚ್ಚಿರುವ ಬಾಂಬ್ ತಯಾರಿಸುವುದು ಭಾರಿ ಸೂಕ್ಷ್ಮ ಕೆಲಸವಾಗಿದೆ. ಬಾಂಬ್ ತಯಾರಿಕೆಯಲ್ಲಿ ಹೆಚ್ಚಿನ ಪರಿಣಿತಿ ಹೊಂದಿದವರೇ ಇದನ್ನು ತಯಾರಿಸಬೇಕಾಗುತ್ತದೆ. ಹೀಗಾಗಿ ಶಂಕಿತ ಆರೋಪಿ ಹಾಗೂ ಆತನ ಸಹಚರರು ಟೈಂ ಬಾಂಬ್ ತಯಾರಿಸಿರುವ ಶಂಕೆ ವ್ಯಕ್ತವಾಗಿದೆ. ಈ ಸುಳಿವು ಸಿಕ್ಕಿದ ಬೆನ್ನಲ್ಲೇ ಕರ್ನಾಟಕದಲ್ಲಿ ಈ ಹಿಂದೆ ನಡೆದಿದ್ದ ಬಾಂಬ್ ಸ್ಫೋಟ ಪ್ರಕರಣಗಳ ಬಗ್ಗೆ ತನಿಖಾಧಿಕಾರಿಗಳು ಎಳೆ ಎಳೆಯಾಗಿ ಮಾಹಿತಿ ಕಲೆಹಾಕುತ್ತಿದ್ದಾರೆ.
ಮಾದರಿ ಸಂಗ್ರಹಿಸಿದ ಎನ್‌ಎಸ್‌ಜಿ: ಎನ್‌ಎಸ್‌ಜಿಯ ಬಾಂಬ್ ನಿಷ್ಕ್ರಿಯ ದಳದ ಮೂವರು ಸಿಬ್ಬಂದಿ ಸ್ಫೋಟದ ಸ್ಥಳಕ್ಕೆ ಶನಿವಾರ ಭೇಟಿ ಕೊಟ್ಟು ಮಾದರಿಗಳನ್ನು ಸಂಗ್ರಹಿಸಿದ್ದಾರೆ. ಕೆಫೆಯ ಪ್ರತಿಯೊಂದು ಪ್ರದೇಶದ ಜಾಗದ ಫೋಟೊ ಕ್ಲಿಕ್ಕಿಸಿ ತೆರಳಿದ್ದಾರೆ. ಮತ್ತೂಂದೆಡೆ ಸಿಸಿಬಿ ಪೊಲೀಸರು ಅನುಮಾನದ ಮೇರೆಗೆ ಮೂವರು ಯುವಕರನ್ನು ವಿಚಾರಣೆ ನಡೆಸಿದ್ದಾರೆ.
ಜನರನ್ನು ಕೊಲ್ಲುವ ಉದ್ದೇಶದಿಂದ ಬಾಂಬ್ ಸ್ಫೋಟ: ಸ್ಫೋಟದ ಬಗ್ಗೆ ಕೆಫೆಯ ಮೇಲ್ವಿಚಾರಕ ರಾಜೇಶ್ ಅವರು ಎಚ್‌ಎಎಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅಪರಾಧಿಕ ಸಂಚು, ಹಲ್ಲೆ, ಕೊಲೆಗೆ ಯತ್ನ, ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆಯಡಿ (ಯುಎಪಿಎ) ಎಚ್‌ಎಎಲ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಸ್ಫೋಟಗೊಂಡ ರಭಸಕ್ಕೆ ಹೋಟೆಲ್‌ನ ಕಬ್ಬಿಣದ ಮೇಲ್ಚಾವಣಿ ಸಂಪೂರ್ಣವಾಗಿ ಹಾನಿಯಾಗಿದೆ. ಗಾಜುಗಳು, ಪೀಠೊಪಕರಣಗಳು ಒಡೆದು ಹೋಗಿವೆ. ಟಾರ್ಪಲ್ ಶೆಲ್ಟರ್‌ಗೂ ಹಾನಿಯಾಗಿವೆ. ಹೆಚ್ಚು ಜನ ಸೇರುವ ಕೆಫೆಯಲ್ಲಿ ಬಾಂಬ್ ಸ್ಫೋಟಿಸಿ ಸಾರ್ವಜನಿಕರನ್ನು ಕೊಲ್ಲುವ ಉದ್ದೇ ಶದಿಂದಲೇ ದುಷ್ಕರ್ಮಿಗಳು ಬಾಂಬ್ ಸ್ಫೋಟಿಸಿದ್ದಾರೆ ಎಂದು ಮೇಲ್ವಿಚಾರಕ ರಾಜೇಶ್ ದೂರಿನಲ್ಲಿ ತಿಳಿಸಿದ್ದಾರೆ.
ಜೊತೆಗೆ ಹೋಟೆಲ್‌ನ ವ್ಯವಸ್ಥಾಪಕ ಹರಿಹರನ್ ಶುಕ್ರವಾರ ಬೆಳಗ್ಗೆ ಸುಮಾರು 11.30ಕ್ಕೆ ಶಂಕಿತನನ್ನು ನೋಡಿರುವುದಾಗಿ ದೂರಿನಲ್ಲಿ ಹೇಳಲಾಗಿದೆ.
ಸೂಕ್ಷ್ಮ ಪ್ರದೇಶಗಳಲ್ಲಿ ಖಾಕಿ ಅಲರ್ಟ್: ಸೂಕ್ಷ್ಮ ಪ್ರದೇಶಗಳಲ್ಲಿ ಖಾಕಿ ಅಲರ್ಟ್ ಆಗಿದ್ದು, ಮೆಜೆಸ್ಟಿಕ್ ಬಸ್ ನಿಲ್ದಾಣ, ರೈಲು ನಿಲ್ದಾಣ, ಹೆಚ್ಚು ಜನ ಸೇರುವ ವೈಟ್‌ಫೀಲ್ಡ್ , ಕೋರಮಂಗಲ, ಇಂದಿರಾನಗರ, ಎಂಜಿ ರೋಡ್, ಬ್ರಿಗೇಡ್ ರೋಡ್, ಕಮರ್ಷಿ ಯಲ್ ಸ್ಟ್ರೀಟ್‌ನ ಊಕ್ಷ್ಮ ಪ್ರದೇಶದಲ್ಲಿ ಶನಿವಾರ ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳದ ಸಿಬ್ಬಂದಿ ತಪಾಸಣೆ ನಡೆಸಿದ್ದಾರೆ.
400 ಕ್ಯಾಮೆರಾ ಪರಿಶೀಲನೆ :
ರಾಮೇಶ್ವರಂ ಕೆಫೆ ಹಾಗೂ ಅಕ್ಕ-ಪಕ್ಕದ ಅಂಗಡಿಗಳು, ಐಟಿಪಿಎಲ್ ಮುಖ್ಯರಸ್ತೆ, ಕುಂದಲಹಳ್ಳಿ ಹಾಗೂ ಸುತ್ತಮುತ್ತಲಿನ ಸ್ಥಳಗಳಲ್ಲಿರುವ 400ಕ್ಕೂ ಹೆಚ್ಚು ಸಿಸಿ ಕ್ಯಾಮೆ ರಾಗಳನ್ನು ತನಿಖಾಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಶಂಕಿತ ಉಗ್ರ ಓಡಾಡಿದ್ದ ಕೆಲ ದೃಶ್ಯಗಳು ವಿಡಿಯೊದಲ್ಲಿ ಸೆರೆಯಾಗಿವೆ.