ಬೆಂಗಳೂರು: ಇಲ್ಲಿನ ಹೊರವಲಯದ ರಾಮೇಶ್ವರ ಕೆಫೆಯಲ್ಲಿ ಕೆಲ ದಿನಗಳ ಹಿಂದೆ ನಡೆದ ಸ್ಪೋಟ ಪ್ರಕರಣವನ್ನು ರಾಜ್ಯ ಸರ್ಕಾರವು ರಾಷ್ಟ್ರೀಯ ತನಿಖಾ ದಳಕ್ಕೆ (ಎನ್ಐಎ) ಹಸ್ತಾಂತರಿಸಿದೆ. ಉಗ್ರ ನಿಗ್ರಹ ಪಡೆಯು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದೆ.
ಕಳೆದ ಶುಕ್ರವಾರ (ಮಾರ್ಚ್ 1) ರಂದು ವೈಟ್ ಫೀಲ್ಡ್ ಬಳಿಕ ರಾಮೇಶ್ವರಂ ಕೆಫೆಯಲ್ಲಿ ಕಡಿಮೆ ತೀವ್ರತೆಯ ಸ್ಪೋಟ ನಡೆದಿತ್ತು. ಘಟನೆಯಲ್ಲಿ ಕನಿಷ್ಠ ಹತ್ತು ಮಂದಿ ಗಾಯಗೊಂಡಿದ್ದರು. ಪೊಲೀಸರು ಆರೋಪಿಯ ಬಗ್ಗೆ ಕನಿಷ್ಠ 40-50 ಸಿಸಿಟಿವಿ ಫೂಟೇಜ್ ಗಳನ್ನು ಸಂಗ್ರಹಿಸಿದ್ದಾರೆ ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದ್ದಾರೆ.
“ಹಲವು ತಂಡಗಳನ್ನು ರಚಿಸಲಾಗಿದೆ. ಆಳವಾದ ತನಿಖೆ ನಡೆಯುತ್ತಿದೆ ಮತ್ತು ಕೆಲವು ಸುಳಿವುಗಳು ಸಿಕ್ಕಿವೆ. ಸಿಸಿಟಿವಿ ದೃಶ್ಯಗಳಿಂದ ಕೆಲವು ಮಾಹಿತಿಗಳನ್ನು ಸಂಗ್ರಹಿಸಲಾಗಿದೆ. ಶಂಕಿತ ಆರೋಪಿಯು ಬಸ್ಸಿನಲ್ಲಿ ಬಂದಿದ್ದಾರೆ ಎಂಬ ಮಾಹಿತಿಯಿದೆ’’ ಎಂದು ಸಚಿವ ಪರಮೇಶ್ವರ ಹೇಳಿದ್ದಾರೆ.
ಕೆಫೆ ಸ್ಫೋಟದ ತನಿಖೆ ನಡೆಸುತ್ತಿರುವ ತನಿಖಾ ಸಂಸ್ಥೆಗಳು ವ್ಯಾವಹಾರಿಕ ಪೈಪೋಟಿ ಮತ್ತು ಲೋಕಸಭೆ ಚುನಾವಣೆಗೆ ಮುನ್ನ ನಗರದಲ್ಲಿ ಭಯಭೀತಗೊಳಿಸುವ ಪ್ರಯತ್ನಗಳು ಸೇರಿದಂತೆ ಹಲವು ಕೋನಗಳನ್ನು ಅನ್ವೇಷಿಸುತ್ತಿವೆ ಎಂದು ಗೃಹ ಸಚಿವರು ಹೇಳಿದ್ದಾರೆ.
ಸಚಿವರು ಹಿರಿಯ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿ ತನಿಖೆಯನ್ನು ಪರಿಶೀಲಿಸಿದರು.