ಬೆಳಗಾವಿ: ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಶನಿವಾರ ತಮ್ಮ ಗೃಹ ಕಚೇರಿಯಲ್ಲಿ ತಾಲೂಕಿನ ಕಾರ್ಯಕರ್ತರು ಹಾಗೂ ಬೆಂಬಲಿಗರ ಸಭೆ ನಡೆಸಿ ಸುದೀರ್ಘ ಚರ್ಚೆ ನಡೆಸಿದ್ದು, ಲೋಕಸಭೆ ಚುನಾವಣೆಯಲ್ಲಿ ಯಾವ ಅಭ್ಯರ್ಥಿಗೆ ಮತ ಚಲಾಯಿಸಬೇಕೆಂಬ ಬಗ್ಗೆ ಮುಖಂಡರಿಗೆ ಸೂಚನೆ ನೀಡಿದ್ದಾರೆ. ಆದರೆ ಆ ಅಭ್ಯರ್ಥಿ ಯಾರು ಎಂಬುದು ಬಹಿರಂಗಗೊಂಡಿಲ್ಲ.
ತಮ್ಮ ಬೆಂಬಲಿಗರೆಲ್ಲರೂ ತಟಸ್ಥರಾಗಿ ಉಳಿಯಲು ಸೂಚನೆ ನೀಡಿದ್ದಾರೆ. ತಮ್ಮ ನಿರ್ಧಾರವನ್ನು ಸೋಮವಾರ ಬಹಿರಂಗಪಡಿಸುವುದಾಗಿ ಹೇಳಿರುವುದು ಅವರ ಆಪ್ತ ವಲಯದಿಂದ ತಿಳಿದು ಬಂದಿದೆ. ಸಭೆಯ ವಿವರಗಳ ಬಗ್ಗೆ ಶಾಸಕರು ಗುಟ್ಟು ಬಿಟ್ಟು ಕೊಟ್ಟಿಲ್ಲ. ಸೋಮವಾರದವರೆಗೆ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಅಂದು ನಿರ್ಧಾರ ಬಹಿರಂಗಪಡಿಸಲಾಗುವುದು ಎಂದು ತಿಳಿಸಿದ್ದು ಕುತೂಹಲ ಮೂಡಿಸಿದೆ.
ಸಾವಿರಾರು ಸಂಖ್ಯೆಯಲ್ಲಿ ಹಳ್ಳಿ ಹಳ್ಳಿಗಳ ಮುಖಂಡರು ಹಾಗೂ ಕಾರ್ಯಕರ್ತರು ಗೋಕಾಕಕ್ಕೆ ಆಗಮಿಸಿ ರಮೇಶ ಜಾರಕಿಹೊಳಿ ಅವರನ್ನು ಭೇಟಿಯಾಗದ್ದಾರೆ. ಕಚೇರಿಯ ಮುಂಭಾಗದಲ್ಲಿ ಸೇರಿದ್ದ ಅಪಾರ ಸಂಖ್ಯೆಯ ಕಾರ್ಯಕರ್ತರು ಶಾಸಕರ ಅಣತಿ ಮೇರೆಗೆ ನಡೆದುಕೊಳ್ಳುವುದಾಗಿ ಘೋಷಿಸಿದ್ದಾರೆ.
ಶಾಸಕರ ಅಳಿಯ, ಕಾಂಗ್ರೆಸ್ ಮುಖಂಡ ಅಂಬಿರಾವ ಪಾಟೀಲ ಅವರು ಈ ಬಾರಿ ಬಿಜೆಪಿ ಪರ ಮತ ಚಲಾಯಿಸುವಂತೆ ಹೇಳಿದ್ದಾರೆ ಎಂಬುದು ಆಪ್ತ ವಲಯದಿಂದ ಕೇಳಿ ಬಂದಿದೆ. ಆದರೆ ಇದು ಇನ್ನೂ ಅಧಿಕೃತವಾಗಿ ಘೋಷಣೆ ಆಗಿಲ್ಲ. ಶಾಸಕರ ಬೆಂಬಲಿಗರಾಗಿರುವ ಆಯಾ ಜಿಪಂ, ತಾಪಂ ಹಾಗೂ ಗ್ರಾಪಂ ಸದಸ್ಯರು ಶಾಸಕರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.
ಈಗಾಗಲೇ ಬೆಳಗಾವಿ ಲೋಕಸಭೆಯ ಉಸ್ತುವಾರಿ ವಹಿಸಿಕೊಂಡಿರುವ ಸಚಿವ ಸತೀಶ ಜಾರಕಿಹೊಳಿ ಗೋಕಾಕದಲ್ಲಿ ಬೀಡು ಬಿಟ್ಟಿದ್ದಾರೆ. ರಮೇಶ ಜಾರಕಿಹೊಳಿ ಪ್ರಚಾರಕ್ಕೆ ಬಾರದ್ದಕ್ಕೆ ಸಹೋದರ ಲಖನ್ ಜಾರಕಿಹೊಳಿಗೆ ಗಾಳ ಹಾಕಿದ್ದಾರೆ.
ಲಖನ್ ಹಾಗೂ ಸತೀಶ ಇಬ್ಬರೂ ಸೇರಿ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ರಮೇಶ ಅವರನ್ನು ಹೊರಗಿಟ್ಟು ಲಖನ್ ಅಖಾಡಕ್ಕೆ ಧುಮುಕಿ ಹಳ್ಳಿ ಹಳ್ಳಿಗಳಲ್ಲಿ ಪ್ರಚಾರ ಜೋರಾಗಿ ನಡೆಸಿದ್ದಾರೆ. ಶಾಸಕ ರಮೇಶ ಜಾರಕಿಹೊಳಿ ತೆಗೆದುಕೊಳ್ಳುವ ಮುಂದಿನ ತೀರ್ಮಾನದತ್ತ ಜನರ ದೃಷ್ಟಿ ನೆಟ್ಟಿದೆ.