ಬೆಳಗಾವಿ: ಅನರ್ಹ ಶಾಸಕ “ರಮೇಶ ಜಾರಕಿಹೊಳಿ ಹೋಳ ಉಪ್ಪಿನಕಾಯಿ ಇದ್ದಂಗೆ. ಅವನನ್ನು ಸೀರಿಯಸ್ ಆಗಿ ತೆಗೆದುಕೊಳ್ಳುವುದಿಲ್ಲ. ಗೋಕಾಕ್‌ನಲ್ಲಿ ಅಂಬಿರಾವ್ ಪಾಟೀಲ್ ಸಾಮ್ರಾಜ್ಯ ಕಟ್ಟಿದ್ದು, ಪ್ರವಾಹದಲ್ಲಿ ಮಹಾರಾಷ್ಟ್ರ ಹೇಗೆ ಕೊಚ್ಚಿ ಹೋಯಿತೋ ಹಾಗೆಯೇ ಅದನ್ನು ಧ್ವಂಸ ಮಾಡಿದಾಗ ಕೊಚ್ಚಿ ಹೋಗಲಿದೆ’ ಎಂದು ಶಾಸಕ ಸತೀಶ ಜಾರಕಿಹೊಳಿ ವಾಗ್ಧಾಳಿ ನಡೆಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ ಜಾರಕಿಹೊಳಿಗೆ ಅಂಬಿರಾವ್ ಎಂದರೆ ಜಿಪಿ ಹೋಲ್ಡರ್’ ಇದ್ದಂತೆ. ಅಂಬಿರಾವ್‌ರನ್ನು ನಿಯಂತ್ರಣ ಮಾಡಬೇಕಿದೆ. ಅದನ್ನು ಮಾಡಲು ನಾವು ಸಿದ್ಧರಾಗಿದ್ದೇವೆ. ಉಪಚುನಾವಣೆಯಲ್ಲಿ ಅಂಬಿರಾವ್ ಹೋಲ್ಡ್ ಕಡಿಮೆಗೊಳಿಸಬೇಕಿದೆ. ಜಾರಕಿಹೊಳಿ ನಾಮ್ ಕೇ ವಾಸ್ತೆ ಇದ್ದಂಗೆ. ಹೀಗಾಗಿ ಅಂಬಿರಾವ್‌ರ ಸಾಮ್ರಾಜ್ಯವನ್ನು ಒಡೆದು ಹಾಕುತ್ತೇವೆ ಎಂದರು.
ಜಾರಕಿಹೊಳಿ ಸಾಮ್ರಾಜ್ಯ ಒಳ್ಳೆಯದಕ್ಕೆ ಕಟ್ಟಲಾಗಿದೆ. ಆದರೆ ಅದು ಈಗ ಆಗುತ್ತಿಲ್ಲ. ಹೀಗಾಗಿ ಒಡೆಯುವ ಕೆಲಸ ಮಾಡಲೇಬೇಕಿದೆ. ಜನರಿಗೆ ನ್ಯಾಯ ಒದಗಿಸಬೇಕೆಂಬ ನಿಟ್ಟಿನಲ್ಲಿ ನಮ್ಮ ಹೋರಾಟ ಮುಂದುವರಿಯಲಿದೆ. ಗೋಕಾಕ್‌ನಲ್ಲಿ ಸಾಮ್ರಾಜ್ಯ ಕಟ್ಟಿದ್ದು ನಾನು. ನನ್ನ ನಂಬಿದ ಜನರು ಅಲ್ಲಿದ್ದಾರೆ. ಹೀಗಾಗಿ ಗೋಕಾಕ್‌ಗೆ ಹೋಗುತ್ತೇನೆ. ಆಪರೇಷನ್ ಕಮಲಕ್ಕೆ ನಾನು, ಎಂ.ಬಿ. ಪಾಟೀಲ ಕಾರಣ ಅಲ್ಲ. ನಾವು ರಮೇಶ ಪರವಾಗಿದ್ದು, ನಮ್ಮಲ್ಲಿಯ ಭಿನ್ನಮತವನ್ನು ಆಗಿನ ಮುಖ್ಯಮಂತ್ರಿಗಳು ಬಗೆಹರಿಸಿದ್ದರು. ರಮೇಶ ಭಿನ್ನಮತ ಮುದುವರಿಸಿದರು ಎಂದರು.
ಇನ್ನೂ 10-12 ಜನ ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡುತ್ತಾರೆಂದು ಮೊದಲಿಂದಲೂ ರಮೇಶ ಹೇಳುತ್ತಿದ್ದಾರೆ. ಬಿಜೆಪಿಯಲ್ಲಿ ಮಂತ್ರಿ ಸ್ಥಾನ ಮಾಡದ್ದಕ್ಕೆ ಭಿನ್ನಮತ ಜೋರಾಗಿದೆ. ರಮೇಶ ಈ ತರಹ ಊಹೆ ಮೇಲೆ ಹೇಳಿರಬಹುದು. ಯಾರೂ ರಾಜೀನಾಮೆ ಕೊಡುವುದಿಲ್ಲ. ರಮೇಶನ ವರ್ಚಸ್ಸು ಕಡಿಮೆ ಆಗುತ್ತಿರುವುದರಿಂದ ಶಕ್ತಿ ಪ್ರದರ್ಶನ ಮಾಡಲು ಸವದತ್ತಿ, ಅರಭಾವಿ, ಅಥಣಿ ಕ್ಷೇತ್ರದ ಜನರನ್ನು ಕರೆ ತಂದು ಸಂಕಲ್ಪ ಸಮಾವೇಶ ಮಾಡಿದ್ದಾರೆ ಎಂದರು.
ದೇವರು ರಕ್ಷಣೆಗೆ ಬರಲ್ಲ: ಗೋಕಾಕನಲ್ಲಿ ನಿಂತು ದೇವರಿಗೆ ರಮೇಶ ಕೈ ಮುಗಿಬೇಕಿತ್ತು. ಅದನ್ನ ಬಿಟ್ಟು ಕೇದಾರನಾಥ್‌ಗೆ ಏಕೆ ಹೋಗಬೇಕಿತ್ತು. ಜನರೇ ನಮಗೆ ದೇವರು. ಅದನ್ನು ಬಿಟ್ಟು ಅನಾವಶ್ಯಕವಾಗಿ ಎಲ್ಲ ದೇವರ ಗುಡಿ ಸುತ್ತುವುದು ಏಕೆ. ಈ ಸಲ ಕೇದಾರನಾಥ, ಕೊಲ್ಲಾಪುರದ ಮಹಾಲಕ್ಷ್ಮೀ ದೇವಿ, ಪುಳೆ ಗಣಪತಿ ದೇವರು ರಮೇಶ ಜಾರಕಿಹೊಳಿ ರಕ್ಷಣೆಗೆ ನಿಲ್ಲುವುದಿಲ್ಲ ಎಂದು ಶಾಸಕ ಸತೀಶ ಜಾರಕಿಹೊಳಿ ವ್ಯಂಗ್ಯವಾಡಿದರು.