Advertisement

ರಮೇಶ್‌ಕುಮಾರ್‌ ವರದಿ ಜಾರಿಗೊಳಿಸಿ

12:02 PM Jul 29, 2018 | |

ಬೆಂಗಳೂರು: ಪಂಚಾಯತ್‌ ರಾಜ್‌ ಕಾಯ್ದೆ ತಿದ್ದುಪಡಿಗೆ ಸಂಬಂಧಿಸಿದಂತೆ ಹಿಂದಿನ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ರಮೇಶ್‌ಕುಮಾರ್‌ ನೇತೃತ್ವದ ಸಮಿತಿ ನೀಡಿರುವ ವರದಿಯ ಶಿಫಾರಸುಗಳನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸುವುದರ ಜತೆಗೆ ಅದನ್ನು ನಗರ ಸ್ಥಳೀಯ ಸಂಸ್ಥೆಗಳಿಗೂ ಅನ್ವಯಗೊಳಿಸುವಂತೆ ಕೇಂದ್ರದ ಮಾಜಿ ಸಚಿವ ಮಣಿಶಂಕರ್‌ ಅಯ್ಯರ್‌ ರಾಜ್ಯ ಸರ್ಕಾರಕ್ಕೆ ಸಲಹೆ ಮಾಡಿದ್ದಾರೆ.

Advertisement

ಸಿವಿಕ್‌ ಬೆಂಗಳೂರು ಸಂಸ್ಥೆಯ 25ನೇ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ನಗರದ ಜ್ಞಾನಜ್ಯೋತಿ ಸಭಾಂಗಣದ ಸೆಮಿನಾರ್‌ ಹಾಲ್‌ನಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ “ಸಂವಿಧಾನದ 74ನೇ ತಿದ್ದುಪಡಿಗೆ 25 ವರ್ಷ- ಹಿಂದೆ ಮತ್ತು ಮುಂದೆ’ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಸಮ್ಮಿಶ್ರ ಸರ್ಕಾರದಲ್ಲಿ ಎಚ್‌.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ತಮ್ಮಿಂದ ಸಲಹೆಗಳನ್ನು ಕೋರಿದ್ದರು. ಈ ವೇಳೆ ಪಂಚಾಯತ್‌ರಾಜ್‌ ಅಭಿವೃದ್ಧಿ ಕುರಿತಂತೆ ರಮೇಶ್‌ಕುಮಾರ್‌ ವರದಿಯ ಶಿಫಾರಸುಗಳನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸುವಂತೆ ಹೇಳಿದ್ದೇನೆ. ಜತೆಗೆ ನಗರ ಸ್ಥಳೀಯ ಸಂಸ್ಥೆಗಳಿಗೆ ಅನ್ವಯವಾಗುವ ಶಿಫಾರಸುಗಳಿದ್ದರೆ ಅದನ್ನೂ ಜಾರಿಗೊಳಿಸುವಂತೆ ತಿಳಿಸಿದ್ದೇನೆ ಎಂದರು.

ತಮ್ಮ ಈ ಸಲಹೆಗಳಿಗೆ ಕುಮಾರಸ್ವಾಮಿ ಪೂರಕವಾಗಿ ಸ್ಪಂದಿಸಿದ್ದಾರೆ. ಆದರೆ, ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿರುವುದರಿಂದ ಮಿತ್ರಪಕ್ಷವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಾಗುತ್ತದೆ. ಸ್ಥಳೀಯ ಸಂಸ್ಥೆಗಳನ್ನು ಬಲಿಷ್ಠಗೊಳಿಸುವ ಉದ್ದೇಶ ಹೊಂದಿರುವ ಮುಖ್ಯಮಂತ್ರಿಗಳು ಈ ವಿಚಾರದಲ್ಲಿ ಸಕಾರಾತ್ಮಕ ನಿರ್ಧಾರ ಕೈಗೊಳ್ಳುತ್ತಾರೆ ಎಂಬ ನಂಬಿಕೆಯಿದೆ ಎಂದು ಹೇಳಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಕ್ಷೇತ್ರದ ಅಭಿವೃದ್ಧಿ ಕುರಿತ ನಿಯಮ ರೂಪಿಸುವಲ್ಲಿ ಕರ್ನಾಟಕ ಮುಂಚೂಣಿಯಲ್ಲಿದ್ದರೂ ಅದನ್ನು ಜಾರಿಗೊಳಿಸಲು ಆಸಕ್ತಿ ತೋರಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು, ಈ ವಿಚಾರದಲ್ಲಿ ಕೇರಳ ಮುಂದಿದೆ.

Advertisement

ಇದೇ ಮಾದರಿಯನ್ನೂ ಕರ್ನಾಟಕ ಸರ್ಕಾರವೂ ಅಳವಡಿಸಿಕೊಳ್ಳಬೇಕಾದ ಅಗತ್ಯವಿದೆ ಎಂದರು. ಗ್ರಾಮೀಣಾಭಿವೃದ್ಧಿಗೆ ಅಪಾರ ಕೊಡುಗೆ ನೀಡಿರುವ ಮಾಜಿ ಸಚಿವ ನಜೀರ್‌ ಸಾಬ್‌ ಅವರ ಪುತ್ಥಳಿಯನ್ನು ಎಲ್ಲಾ ಗ್ರಾಮ ಪಂಚಾಯ್ತಿಗಳಲ್ಲಿ ಅನಾವರಣಗೊಳಿಸಬೇಕು ಎಂದು ತಿಳಿಸಿದರು.

ಕೇಂದ್ರದ ವಿರುದ್ಧ ಆಕ್ರೋಶ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಮಣಿಶಂಕರ ಅಯ್ಯರ್‌, ರಾಷ್ಟ್ರದ ಅಭಿವೃದ್ಧಿಗಿಂತ ಹಿಂದೂ ರಾಷ್ಟ್ರವೇ ಅವರ ಪ್ರಮುಖ ಅಜೆಂಡಾ ಆಗಿದೆ. ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಸಾವರ್ಕರ್‌, ಗೋಳ್‌ವಾಲ್ಕರ್‌, ಕಮ್ಯುನಿಸ್ಟ್‌ ಆಡಳಿತವಿರುವ ರಾಜ್ಯಗಳಲ್ಲಿ ನೆನಿನ್‌, ಕಾರ್ಲ್ ಮಾರ್ಕ್ಸ್ ಜಪ ಮಾಡುವ ಮಟ್ಟಕ್ಕೆ ಪ್ರಜಾಪ್ರಭುತ್ವ ಬಂದಿದೆ.

ಹೀಗಾಗಿ ಈ ಎರಡೂ ಪಕ್ಷಗಳ ಹೊರತಾದ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಆಯಾ ರಾಜ್ಯ ಸರ್ಕಾರಗಳಿಂದಲೇ ಅಭಿವೃದ್ಧಿ ನಿರೀಕ್ಷಿಸುವಂತಾಗಿದೆ ಎಂದರು. ಕೇಂದ್ರ ಪಂಚಾಯತ್‌ರಾಜ್‌ ಇಲಾಖೆಯ ನಿವೃತ್ತ ಜಂಟಿ ಕಾರ್ಯದರ್ಶಿ ಟಿ.ಆರ್‌.ರಘುನಂದನ್‌, ನಗರ ಯೋಜನಾ ತಜ್ಞ ಜಾರ್ಜ್‌ ಮ್ಯಾಥ್ಯೂ, ಸಿವಿಕ್‌ ಸಂಸ್ಥೆಯ ಕಾರ್ಯನಿರ್ವಾಹಕ ಟ್ರಸ್ಟಿ ಕಾತ್ಯಾಯಿನಿ ಚಾಮರಾಜ್‌, ಮ್ಯಾಕ್ಸ್‌ ಮುಲ್ಲರ್‌ ಏಷಿಯಾದ ನಿರ್ದೇಶಕ  ಹೈಕೊ ಕ್ಸೇವಿಯರ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next