ವಿಜಯಪುರ: ನಾನೊಬ್ಬ ಸಣ್ಣ ದಲಿತ. ಆದರೂ, ನನಗೆ ಮುಂದೆ ಗುರಿಗಳು ಇವೆ. ಹಿಂದೆ ಗುರುಗಳು ಇದ್ದಾರೆ. ನನ್ನ ಜೀವ ಇರುವವರಿಗೂ ಮತ್ತು ಆ ಗುರಿಗಳು ಈಡೇರುವವರೆಗೆ ನಾನು ನನ್ನ ಪ್ರಯತ್ನ ಬಿಡಲ್ಲ ಎಂದು ಬಿಜೆಪಿ ಹಿರಿಯ ಸಂಸದ ರಮೇಶ ಜಿಗಜಿಣಗಿ ಬಾವುಕರಾದರು.
ಜಿಲ್ಲೆಯ ಇಂಡಿ ತಾಲೂಕಿನ ಕ್ಯಾತನಕೇರಿ ಗ್ರಾಮದಲ್ಲಿ ಶನಿವಾರ ಕೆರೆಗೆ ಬಾಗಿನ ಅರ್ಪಿಸಿ ಮಾತನಾಡಿದ ಅವರು, ನನ್ನ ಪ್ರಯತ್ನ ಯಶಸ್ಸು ಆಗುತ್ತೋ, ಇಲ್ಲವೋ ಗೊತ್ತಿಲ್ಲ. ನನ್ನಂತಹ ದಲಿತರಿಗೆ ಒಳ್ಳೆಯದು ಆಗದಿದ್ದರೆ, ಮುಂದೆ ಯಾವ ದಲಿತರಿಗೂ ಒಳ್ಳೆಯದು ಆಗಲ್ಲ ಎಂಬುದು ಬಹಳ ಸ್ಪಷ್ಟ ಎಂದರು. ಈ ಮೂಲಕ ಮುಂದೆ ಬಿಜೆಪಿಗೆ ಬಹುಮತ ಬಂದರೆ ಮುಖ್ಯಮಂತ್ರಿ ಆಗುವ ಆಸೆಯನ್ನು ಜಿಗಜಿಣಗಿ ಬಿಚ್ಚಿಟ್ಟರು.
ನಾನು ಯಾರ ಮನ ನೋಯಿಸಿಲ್ಲ. ಯಾರ ಮನೆ ಮುರಿದಿಲ್ಲ. ಯಾರಿಗೂ ತೊಂದರೆಯನ್ನೂ ಮಾಡಿಲ್ಲ. ನನ್ನ ಜೀವನದಲ್ಲಿ ಕೆಲವು ಗುರಿಗಳು ಇವೆ. ನಮ್ಮಂತೋರು ಆಗದೇ ಇದ್ದರೆ, ಈ ದೇಶದಲ್ಲಿ ಮತ್ತ್ಯಾರು ಆಗುವವರು ಇದ್ದಾರೆ ಎಂದೂ ಪ್ರಶ್ನಿಸಿದರು.
ನಾನು 7 ಚುನಾವಣೆಗಳನ್ನು ಗೆದ್ದಿದ್ದೇನೆ. ಚಿಕ್ಕೋಡಿಯಲ್ಲಿ ಬೇರೆ-ಬೇರೆ ಪಕ್ಷದಿಂದ ಜನ ನನ್ನನ್ನು 3 ಸಲ ಗೆಲ್ಲಿಸಿದರು. ಮರಳಿ ಬಿಜಾಪುರಕ್ಕೆ ಬಂದೆ, ನೀವು 4 ಸಲ ಗೆಲ್ಲಿಸಿದಿರಿ. ಈ ಸಲ ನನ್ನನ್ನು ಸೋಲಿಸಲು ಬಹಳ ಪ್ರಯತ್ನ ಮಾಡಿದರು. ಕೋಟಿಗಟ್ಟಲೆ ಹಣ ಖರ್ಚು ಮಾಡಿದರು. ಆದರೆ, ನಾನು ‘ಪುಕ್ಕಟೆ ಗಿರಾಕಿ’ ಎಂದು ಹೇಳಿಕೊಂಡೇ ಪ್ರಚಾರ ಮಾಡಿದೆ ಎಂದರು.
ರಾಜಕಾರಣ ಮಾಡಲು ನಾವು ಹಣ ಎಲ್ಲಿಂದ ತರೋದು. ಹಣ ತರೋದು ಒಬ್ಬ ದಲಿತನಿಂದ ಸಾಧ್ಯ ಇದೆಯಾ?, ಮಕ್ಕಳು ದೊಡ್ಡೋರು ಆಗಿದ್ದಾರೆ. ಇರುವ ಆಸ್ತಿ ಮಾರಲು ಬಿಡಲ್ಲ. ನನ್ನದು ಒಣಗೈ ರಾಜಕಾರಣ. ಅದಕ್ಕೆ ನೀವು (ಜನ) ನನಗಾಗಿ ಒಂದು ದಿನ ಕೆಲಸ ಮಾಡಿ. ನಾನು ನಿಮಗಾಗಿ 5 ವರ್ಷ ಪುಕ್ಕಟೆ ಕೆಲಸ ಮಾಡುತ್ತೇನೆ ಅಂತಾ ಕೇಳಿಕೊಂಡೆ. ಅದಕ್ಕೆ ಜನರೂ ಮೆಚ್ಚಿಕೊಂಡಿದ್ದಾರೆ ಎಂದು ತಿಳಿಸಿದರು.
ಜೀವನದಲ್ಲಿ ಹಣವಷ್ಟೇ ಮುಖ್ಯವಲ್ಲ, ನಡತೆಯೂ ಇರಬೇಕು. ಸಮಾಜ ಕೂಡ ಸೂಕ್ಷ್ಮವಾಗಿ ನೋಡುತ್ತದೆ. ಚುನಾವಣೆ ಬಂದರೆ ಎಲ್ಲ ರಾಜಕಾರಣಿಗಳು ತಮ್ಮ-ತಮ್ಮ ಸಮಾಜಗಳ ಹಿಂದೆ ಗಂಟು ಬೀಳುತ್ತಾರೆ. ನಾನು ಒಂದು ದಿನ ಸಹ ದಲಿತರ ಕೇರಿಗೆ ಹೋಗಿಲ್ಲ. ಹೋಗೋದು ಇಲ್ಲ. ಈ ಇಂತಹ ಧೈರ್ಯ ರಾಜಕಾರಣದಲ್ಲಿ ಯಾರಾದರೂ ಮಾಡ್ತಾರಾ?. ನಾನು 50 ವರ್ಷ ರಾಜಕಾರಣದಲ್ಲಿ ಎಲ್ಲ ಸಮಾಜಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗುತ್ತಿದ್ದೇನೆ ಎಂದು ಹೇಳಿದರು.
ಇದನ್ನೂ ಓದಿ: ಈ ಬಾರಿಯ ದುರ್ಗಾ ಪೂಜೆಗೆ ಬಂಗಾಳದ ಕೈದಿಗಳಿಗೆ ಮಟನ್, ಚಿಕನ್ ಬಿರಿಯಾನಿ ಜೊತೆಗೆ ವಿಶೇಷ ಖಾದ್ಯ