Advertisement

‘ಮಹಾ’ನಾಯಕರದ್ದು ಚುನಾವಣಾ ಗಮನ ಗಿಮಿಕ್: ರಮೇಶ ಜಿಗಜಿಣಗಿ

04:50 PM Dec 29, 2022 | keerthan |

ವಿಜಯಪುರ: ನಿದ್ದೆ ಮಾಡುವ ಮಹಾರಾಷ್ಟ್ರ ರಾಜಕೀಯ ನಾಯಕರು ಚುನಾವಣಾ ಹತ್ತಿರ ಬಂದಾಗ ಕರ್ನಾಟಕದ ಗಡಿ ವಿವಾದ ಕೆದಕಿ, ರಾಜಕೀಯ ತಂತ್ರಗಾರಿಕೆ ಮಾಡುತ್ತಾರೆ ಎಂದು ಕೇಂದ್ರದ ಮಾಜಿ ಸಚಿವರೂ ಆಗಿರುವ ವಿಜಯಪುರ ಸಂಸದ ರಮೇಶ ಜಿಗಜಿಣಗಿ ಕುಟುಕಿದ್ದಾರೆ.

Advertisement

ಗುರುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡೂ ರಾಜ್ಯಗಳ ಜನ ಸೌಹಾರ್ದತೆ ಬಯಸುತ್ತಾರೆ ಎಂದರು.

ವಿಜಯಪುರ-ಮಂಗಳೂರು ರೈಲಿನ ಹಾಲಿ ಮಾರ್ಗವನ್ನು ಕಾರವಾರ ಜಿಲ್ಲೆಯ ಮಾರ್ಗವಾಗಿ ಓಡಿಸುವ ಚಿಂತನೆ, ಯತ್ನಕ್ಕೆ ನನ್ನ ವಿರೋಧವಿದೆ. ಬೇಕಿದ್ದರೆ ಗೋಕರ್ಣ, ಉಳವಿ ಧಾರ್ಮಿಕ ಕ್ಷೇತ್ರಗಳ ಸಂಪರ್ಕಕ್ಕೆ ಪ್ರತ್ಯೇಕ ರೈಲು ಓಡಿಸಲು ಯೋಜಿಸಲಿ ಎಂದರು.

ಉನ್ನತೀಕರಿಸಿದ ಹಂತದ ಯೋಜನೆ ರೂಪಿಸಿದ್ದರಿಂದ ವಿಜಯಪುರ ವಿಮಾನ ನಿಲ್ದಾಣ ಯೋಜನೆ ಕಾಮಗಾರಿ ವಿಳಂಬವಾಗಿದೆ. ಚುನಾವಣಾ ಘೋಷಣೆ ಆದರೂ ಮಾರ್ಚ ವೇಳೆಗೆ ಕಾಮಗಾರಿ ಮುಗಿಯುವ ನಿರೀಕ್ಷೆ ಇದೆ. ಹೀಗಾಗಿ ವಿಜಯಪುರ ನಿಲ್ದಾಣದಿಂದ ವಿಮಾನ ಹಾರಾಟಕ್ಕೆ ನೀತಿ ಸಂಹಿತೆ ಅಡ್ಡಿಯಾಗದು ಎಂದರು.

ಇದನ್ನೂ ಓದಿ:ರಾಧಿಕಾ ಮರ್ಚೆಂಟ್ ಜೊತೆ ಮುಕೇಶ್ ಅಂಬಾನಿ ಕಿರಿಯ ಪುತ್ರ ಅನಂತ್ ಅಂಬಾನಿ ನಿಶ್ಚಿತಾರ್ಥ

Advertisement

ನನ್ನ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಳೆದ 5 ವರ್ಷಗಳಲ್ಲಿ 6 ರಾಷ್ಟ್ರೀಯ ಹೆದ್ದಾರಿ ನಿರ್ಮಿಸಿದ್ದೇನೆ. ಸೋಲಾಪುರ- ವಿಜಯಪುರ-ಹುಬ್ಬಳ್ಳಿ ಹೆದ್ದಾರಿ- 13(52), ಕಲಬುರಗಿ-ವಿಜಯಪುರ- ಹೊಸಪೇಟೆ ಹೆದ್ದಾರಿ-218 (50), ಕೊರ್ತಿ ವರೆಗೆ 56 ಕಿ.ಮೀ., ಮಹಾರಾಷ್ಟ್ರ ಗಡಿಯಲ್ಲಿನ ಮುರಂದಿಂದ ವಿಜಯಪುರ ವರೆಗೆ ಹೆದ್ದಾರಿ-548ಬಿ 106 ಕಿ.ಮೀ. 998 ಕೋಟಿ ರೂ. ಯೋಜನೆ ಮಂಜೂರಾಗಿದೆ. ಬರುವ ಎರಡು ವರ್ಷಗಳಲ್ಲಿ ಕಾಮಗಾರಿ ಮಿಗಿಯುವ ನಿರೀಕ್ಷೆ ಇದೆ ಎಂದರು.

ವಿಜಯಪುರ-ತೆಲಸಂಗ ಕ್ರಾಸ್ ವರೆಗೆ ಹೆದ್ದಾರಿ-548ಬಿ ದ್ವೀಪಥ 40 ಕಿ.ಮೀ. ರಸ್ತೆಯ 250‌ ಕೋಟಿ ರೂ. ಕಾಮಗಾರಿ ಪ್ರಗತಿಯಲ್ಲಿದ್ದು, 2024 ಮಾರ್ಚ ಅಂತ್ಯಕ್ಕೆ ಮುಕ್ತಾಯ ಆಗಲಿದೆ. ಮಹಾರಾಷ್ಟ್ರ ಗಡಿಯಲ್ಲಿ ಹೆದ್ದಾರಿ-561ಎ ಸಿದ್ದಾಪುರ -ಅರಕೇರಿ-ವಿಜಯಪುರ ನಗರಕ್ಕೆ ಸಂಪರ್ಕ ಕಲ್ಪಿಸುವ 90 ಕೋಟಿ ರೂ. ಮೊತ್ತದ 12 ಕಿ.ಮೀ. ರಸ್ತೆ ನಿರ್ಮಾಣಕ್ಕೆ ಭೂಸ್ವಾಧೀನ ಕಾಮಗಾರಿ ಪ್ರಗತಿಯಲ್ಲಿದೆ ಎಂದು ವಿವರಿಸಿದರು.

ಮಹಾರಾಷ್ಟ್ರ ಗಡಿಯಲ್ಲಿನ ಕನಮಡಿ-ಬಾಬಾನಗರ-ತಿಕೋಟಾ ಸಂಪರ್ಕಿಸುವ ಹೆದ್ದಾರಿ-166ಇ 23 ಕಿ.ಮೀ. ರಸ್ತೆ ನಿರ್ಮಾಣದ 196 ಕೋಟಿ ರೂ. ಯೋಜನೆ ಮಂಜೂರಾಗಿದ್ದು, ಟೆಂಡರ್ ಕರೆದು ಒಂದು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸುವ ಭರವಸೆ ನೀಡಿದರು.

ಝಳಕಿ- ಶಿರಾಡೋಣ ಮಾರ್ಗದ ಹೆದ್ದಾರಿ ಯೋಜನೆ ತಾಂತ್ರಿಕ ಕಾರಣದಿಂದ ವಿಳಂಬವಾಗಿತ್ತು. ಇದೀಗ ರಾಜ್ಯ ಸರ್ಕಾರ 58 ಕೋಟಿ ರೂ. ಮಂಜೂರು ಮಾಡಿದೆ ಎಂದು ವಿವರಿಸಿದರು.

ವಿಜಯಪುರ-ಹುಬ್ಬಳ್ಳಿ-ಕಲಬುರ್ಗಿ ಹೆದ್ದಾರಿ ದ್ವೀಪಥ ಇದ್ದು, ವಾಹನ ದಟ್ಟಣೆ ಹೆಚ್ಚಾಗಿದೆ. ಕಾರಣ ಚತುಸ್ಪಥ ನಿರ್ಮಾಣಕ್ಕೆ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆಯುವುದಾಗಿ ಹೇಳಿದರು.

ವಿಜಯಪುರ ನಗರಕ್ಕೆ ಸಂಬಂಧಿಸಿದಂತೆ ಇಬ್ರಾಹಿಮಪುರ ರೈಲ್ವೇ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಂಡು, ಎರಡುಬಲ ದಿನಗಳಿಂದ ಸಂಚಾರಕ್ಕೆ ಮುಕ್ತಗೊಂಡಿದೆ. ಬಾಗಲಕೋಟೆ ಮಾರ್ಗದ ರೈಲ್ವೇ ಮೇಲ್ಸೇತುವ ಕಾಮಗಾರಿ ಶೀಘ್ರವೇ ಆರಂಭ ಆಲಿದೆ. ಈ ಮಾರ್ಗದ ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ತಾರತಮ್ಯ, ವ್ಯತ್ಯಾಸ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next