ಬಾಗಲಕೋಟೆ: ವಿಜಯಪುರ ಜಿಲ್ಲೆಯ ಸಂಸದ ರಮೇಶ ಜಿಗಜಿಣಗಿ ಉಸಿರಾಟದ ತೊಂದರೆಯಿಂದ ಇಲ್ಲಿನ ಕುಮಾರೇಶ್ವರ ಆಸ್ಪತ್ರೆಗೆ ದಾಖಲಾಗಿದ್ದು, ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಖ್ಯಾತ ಹೃದಯ ತಜ್ಞವೈದ್ಯ ಡಾ.ಸುಭಾಸ ಪಾಟೀಲ ತಿಳಿಸಿದ್ದಾರೆ.
ವಿಜಯಪುರದಿಂದ ಗದ್ದನಕೇರಿ ಕ್ರಾಸ್ ಮಾರ್ಗವಾಗಿ ಬೆಳಗಾವಿಗೆ ತೆರಳುತ್ತಿದ್ದ ವೇಳೆ ಬೀಳಗಿ ಹತ್ತಿರ ಪ್ರಯಾಣಿಸುವಾಗಲೇ ಉಸಿರಾಟದ ತೊಂದರೆಯಾಗಿತ್ತು. ಕೂಡಲೇ ಅವರನ್ನು ಬಾಗಲಕೋಟೆಯ ಬಿವಿವಿ ಸಂಘದ ಕುಮಾರೇಶ್ವರ ಆಸ್ಪತ್ರೆಗೆ ದಾಖಲಿಸಿದ್ದು, ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕುಮಾರೇಶ್ವರ ಆಸ್ಪತ್ರೆಯ ತಜ್ಞ ವೈದ್ಯರಾದ ಡಾ.ಸಮೀರ ಕುಲಕರ್ಣಿ, ಫಿಜಿಶಿಯನ್ ಡಾ.ಸುಭಾಸ ಪಾಟೀಲ, ಇಸಿಜಿ ವಿಭಾಗದ ಡಾ.ತುಕಾರಾಮ ಸಹಿತ ಹಲವು ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.
ಆಕ್ಸಿಜನ್ ಲೇವಲ್ ಕಡಿಮೆ ಆಗಿದ್ದರಿಂದ ಉಸಿರಾಟ ಏರುಪೇರಾಗಿತ್ತು. ಹಾರ್ಟ್ಬೀಟ್ ವ್ಯತ್ಯಾಸ ಆಗಿತ್ತು. ಕೂಡಲೇ ಆಕ್ಸಿಜನ್ ಹಚ್ಚಿ ಚಿಕಿತ್ಸೆ ನೀಡಲಾಗಿದೆ. ಅವರಿಗೆ ಹೃದಯಾಘಾತ ಆಗಿಲ್ಲ. ಸಧ್ಯ ಆರೋಗ್ಯವಾಗಿದ್ದಾರೆ. ಎರಡು ದಿನಗಳ ಬಳಿಕ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗುವುದು ಎಂದು ವೈದ್ಯ ಡಾ.ಸುಭಾಸ ಪಾಟೀಲ ತಿಳಿಸಿದ್ದಾರೆ.
ಸಂಸದ ಜಿಗಜಿಣಗಿ ಅವರಿಗೆ ಉಸಿರಾಟದ ತೊಂದರೆಯಾಗಿತ್ತು. ಸಿಟಿ ಸ್ಯ್ಯಾನ್, ಇಸಿಜಿ ಸಹಿತ ಹೃದಯ ತಪಾಸಣೆ ಮಾಡಿದ್ದಾರೆ. ಆಕ್ಸಿಜನ್ ಲೇವಲ್ ಕಡಿಮೆ ಆಗಿದ್ದರಿಂದ ಈ ತೊಂದರೆ ಆಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಯಾವುದೇ ರೀತಿ ಭಯಪಡುವ ಅಗತ್ಯವಿಲ್ಲ. ಆರೋಗ್ಯವಾಗಿದ್ದು, ಮಾತನಾಡುತ್ತಿದ್ದಾರೆ. ಎರಡು ದಿನ ವಿಶ್ರಾಂತಿ ಪಡೆದ ಬಳಿಕ ಅವರನ್ನು ಆಸ್ಪತ್ರೆಯಿಂದ ಮನೆಗೆ ಬಿಡುಗಡೆಗೊಳಿಸಲಾಗುವುದು.
-ಡಾ.ವೀರಣ್ಣ ಚರಂತಿಮಠ, ಕಾರ್ಯಾಧ್ಯಕ್ಷರು, ಬಿವಿವಿ ಸಂಘ