Advertisement

ಮೋದಿಯೇ ಮತ್ತೊಮ್ಮೆ ಪ್ರಧಾನಿ… ಜಿಗಜಿಣಗಿ ದೆಹಲಿಗೆ ಬರಲು ವರಿಷ್ಠರಿಂದ ಬುಲಾವ್

08:20 PM Jun 05, 2024 | Team Udayavani |

ವಿಜಯಪುರ : ಬಿಹಾರ ಮುಖ್ಯಮಂತ್ರಿ ನಿತೀಶಕುಮಾರ ಪ್ರಧಾನಿ ಹುದ್ದೆ ಮೇಲೆ ಕಣ್ಣಿರಬಹುದು, ಆದರೆ ನರೇಂದ್ರ ಮೋದಿ ಅವರನ್ನು ಹೊರತುಪಡಿಸಿ ಬೇರೆ ಯಾರೂ ಪ್ರಧಾನಿ ಆಗಲು ಸಾಧ್ಯವಿಲ್ಲ. ಮೋದಿ ಅವರೇ ಮತ್ತೊಮ್ಮೆ ಪ್ರಧಾನಿ ಆಗಲಿದ್ದು, ನನ್ನ ಬೆಂಬಲವಂತೂ ಅವರಿಗೇ ಇದೆ ಎಂದು ವಿಜಯಪುರ ಕ್ಷೇತ್ರದ ಸಂಸದ ರಮೇಶ ಜಿಗಜಿಣಗಿ ಹೇಳಿದರು.

Advertisement

ಬುಧವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಬಿಹಾರದ ನಿತೀಶಕುಮಾರ, ಆಂಧ್ರದ ಚಂದ್ರಬಾಬು ನಾಯ್ಡು ಎನ್‍ಡಿಎ ಜೊತೆ ಇರುವುದಾಗಿ ಭರವಸೆ ನೀಡಿದ್ದಾರೆ ಎಂದ ಜಿಗಜಿಣಗಿ, ಚುನಾವಣೆ ಬಳಿಕ ವರಿಷ್ಠರಿಂದ ದೆಹಲಿಗೆ ಬರುವಂತೆ ಕರೆ ಬಂದಿದೆ. ಗುರುವಾರ ನವದೆಹಲಿಯಲ್ಲಿ ಸಂಸದರ ಸಭೆ ನಡೆಯಲಿರುವ ಹಿನ್ನೆಲೆಯಲ್ಲಿ ದೆಹಲಿಗೆ ತೆರಳಲಿದ್ದೇನೆ ಎಂದರು.

ಎನ್.ಡಿ.ಎ. ಮೈತ್ರಿಕೂಟಕ್ಕೆ ನಿರೀಕ್ಷಿತ ಪ್ರಮಾಣದಲ್ಲಿ ಸಂಖ್ಯಾಬಲ ಸಿಗದಿರುವುದು ಅಚ್ಚರಿ ಮೂಡಿಸಿದೆ. ಪ್ರಧಾನಿ ಮೋದಿ ಅವರು ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ದರೂ ಜನ ಕೈಹಿಡಿಯಲಿಲ್ಲ. ಕೆಲವರಿಗೆ ದೇಶದ ಅಭಿವೃದ್ಧಿ ಬೇಕಿದೆಯೋ ಇಲ್ಲವೋ ಎಂದು ತಿಳಿಯಲಾಗಿದೆ ಎಂದರು.

ದೇಶದಲ್ಲಿ ಈ ಹಿಂಧೆ 60 ವರ್ಷ ಆಡಳಿತ ನಡೆಸಿದವರು ಹಣ, ಹೆಂಡದ ಮೇಲೆ ಚುನಾವಣೆ ಮಾಡಿದರು. ಆದರೆ ಮೋದಿ ಅವರು ಅಧಿಕಾರಕ್ಕೆ ಬಂದ ಮೇಲೆ ದೇಶದಲ್ಲಿ ಭದ್ರತೆ ಹೆಚ್ಚಿದೆ, ರಾಷ್ಟ್ರೀಯ ಹೆದ್ದಾರಿಗಳು ಊಹೆಗೂ ಮೀರಿ ಅಭಿವೃದ್ಧಿ ಕಂಡಿವೆ. ಆದರೂ ಎನ್‍ಡಿಎ ಮೈತ್ರಿಗೆ ಕಡಿಮೆ ಸ್ಥಾನ ಬಂದಿರುವುದು ನೋವು ತರಿಸಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next