Advertisement

BJP ಯಿಂದ ಅನ್ಯಾಯ; ಜಿಗಜಿಣಗಿಗೆ ಉಪ ಪ್ರಧಾನಿ ಹುದ್ದೆ ನೀಡಲು ಮಾದಿಗರ ಒಕ್ಕೂಟ ಒತ್ತಾಯ

12:33 PM Jun 12, 2024 | Vishnudas Patil |

ವಿಜಯಪುರ : ಮೋದಿ ನೇತೃತ್ವದಲ್ಲಿ ರಚನೆಯಾದ ಮೂರನೇ ಅವಧಿಯ ಕೇಂದ್ರ ಸಂಪುಟದಲ್ಲಿ ಮಾದಿಗ ಸಮುದಾಯಕ್ಕೆ ಆದ್ಯತೆ ನೀಡದೇ ಅನ್ಯಾಯ ಮಾಡಲಾಗಿದೆ. ಹೀಗಾಗಿ ಕರ್ನಾಟಕದ ದಲಿತ ಕೋಟಾದಲ್ಲಿ ಹಿರಿಯ ರಾಜಕೀಯ ನಾಯಕ ರಮೇಶ ಜಿಗಜಿಣಗಿ ಅವರಿಗೆ ಉಪ ಪ್ರಧಾನಿ ಹುದ್ದೆಯನ್ನೂ, ಸಂಸದ ಗೋವಿಂದ ಕಾರಜೋಳ ಅವರಿಗೆ ಸಂಪುಟ ದರ್ಜೆ ಸಚಿವ ಸ್ಥಾನ ನೀಡುವಂತೆ ಆಗ್ರಹ ಕೇಳಿ ಬಂದಿದೆ.

Advertisement

ಬುಧವಾರ ನಗರದಲ್ಲಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಜಯಪುರ ಜಿಲ್ಲಾ ಮಾದಿಗರ ಒಕ್ಕೂಟದ ಪ್ರಮುಖದಾರ ಹಣಮಂತ ಬಿರಾದಾರ, ಪರಶುರಾಮ ರೋಣಿಹಾಳ, ಮೂರನೇ ಅವಧಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿರುವ ಮೋದಿ ಅವರು ರಾಜ್ಯದ ದಲಿತರಿಗೆ ಅನ್ಯಾಯ ಮಾಡಿದ್ದಾರೆ ಎಂದು ಅಸಮಧಾನ ವ್ಯಕ್ತಪಡಿಸಿದರು.

ರಾಜ್ಯದಲ್ಲಿ 4 ಬಾರಿ ಶಾಸಕರಾಗಿ, ಹೆಗಡೆ ಅವರ ಸರ್ಕಾರದಲ್ಲಿ ವಿವಿಧ ಖಾತೆಗಳ ಸಚಿವರಾಗಿ ಸಮರ್ಥವಾಗಿ ಆಡಳಿತ ನೀಡಿರುವ ಜಿಗಜಿಣಗಿ, ಸತತ 7 ಬಾರಿ ಸಂಸದರಾಗಿ ಆಯ್ಕೆಯಾಗಿರುವ ದೇಶದ ಹಿರಿಯ ಸಂಸದರೂ ಆಗಿದ್ದಾರೆ. ರಾಜ್ಯದಲ್ಲಿ ಸಚಿವರಾಗಿದ್ದಾಗಲೇ ಚಿಕ್ಕೋಡಿ ಕ್ಷೇತ್ರದಲ್ಲಿ ಸಂಸದರಾಗಿ ಸತತ 3 ಬಾರಿ ಹಾಗೂ ವಿಜಯಪುರದಲ್ಲಿ 4 ಬಾರಿ ಆಯ್ಕೆಯಾಗಿ ದಾಖಲೆ ಬರೆದಿದ್ದಾರೆ ಎಂದರು.

ಗೋವಿಂದ ಕಾರಜೋಳ ಅವರಿಗೆ ಪಕ್ಷದ ವರಿಷ್ಠರು ಕೊನೆಯ ಹಂತದಲ್ಲಿ ಟಿಕೆಟ್ ನೀಡಿದರೂ ಚಿತ್ರದುರ್ಗ ಲೋಕಸಭೆ ಕ್ಷೇತ್ರದಲ್ಲಿ ಸುಲಭವಾಗಿ ಗೆದ್ದು, ಬಿಜೆಪಿ ಸ್ಥಾನ ಉಳಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಉಪ ಮುಖ್ಯಮಂತ್ರಿಯಾಗಿ ಸಮರ್ಥ ಆಡಳಿತ ನೀಡಿರುವ ಕಾರಜೋಳ ಅವರಿಗೆ ಸಂಪುಟ ದರ್ಜೆ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು.

ರಾಜಕೀಯ ಅಧಿಕಾರದ ಸಂದರ್ಭದಲ್ಲಿ ಒಂದೇ ಒಂದು ಕಪ್ಪುಚುಕ್ಕೆ ಇಲ್ಲದಂತೆ ಅಧಿಕಾರ ನಡೆಸಿರುವ ರಮೇಶ ಜಿಗಜಿಣಗಿ ಹಾಗೂ ಗೋವಿಂದ ಕಾರಜೋಳ ಜನತಾ ಪರಿವಾರ ತೊರೆದು ಬಿಜೆಪಿ ಸೇರಿದ್ದಾರೆ. ಪರಿಣಾಮ ಕರ್ನಾಟಕ ರಾಜ್ಯದಲ್ಲಿ ದಲಿತರು ಅದರಲ್ಲೂ ಮಾದಿಗ ಸಮುದಾಯ ಸಾರಾಸಗಟಾಗಿ ಬಿಜೆಪಿ ಪಕ್ಷವನ್ನು ಬೆಂಬಲಿಸುತ್ತ ಬರುತ್ತಿದೆ. ಕರ್ನಾಟಕದಲ್ಲಿ ಪಕ್ಷ ಬಲಗೊಳ್ಳಲು ಹಾಗೂ ಸರ್ಕಾರ ರಚಿಸುವ ಮಟ್ಟಕ್ಕೆ ಅಧಿಕಾರಕ್ಕೆ ತರುವಲ್ಲಿ ಸಕಾರಣವಾಗಿದ್ದಾರೆ ಎಂದು ವಿರಿಸಿದರು.

Advertisement

ರಾಜ್ಯದಲ್ಲಿ ಟಿಕೆಟ್ ಪಡೆದಿದ್ದ ಮಾದಿಗ ಸಮುದಾಯದ ಇಬ್ಬರೂ ಸಂಸದರಾಗಿ ಆಯ್ಕೆಯಾಗಿದ್ದಾರೆ. ಕಾರಣ ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದ ದಲಿತರಿಗೆ ರಾಜಕೀಯ ಅಧಿಕಾರ ನೀಡುವಲ್ಲಿ ಆಗಿರುವ ಅನ್ಯಾಯ ಸರಿಸಪಡಿಸಲು ಮುಂದಗಬೇಕು. ಇಲ್ಲವಾದಲ್ಲಿ ಬರುವ ಚುನಾವಣಗಳಲ್ಲಿ ಬಿಜೆಪಿ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದಾಗಿ ಎಚ್ಚರಿಸಿದರು.

ಒಕ್ಕೂಟದ ಪ್ರಮುಖರಾದ ಶರಣು ಬ್ಯಾಳಿ, ವಿಠ್ಠಲ ನಡುವಿನಕೇರಿ, ಶಿವಾನಂದ ತಿಕೋಟಿಕರ, ದೇವೇಂದ್ರ ಹಡಗಲಿ, ಮುಕುಂದ ಮಾದರ, ಸದಾನಂದ ಗುನ್ನಾಪುರ ಸೇರಿದಂತೆ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next