ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿ.ಡಿ. ಬಹಿರಂಗ ಪ್ರಕರಣದ ತನಿಖೆಗೆ ಎಸ್‌ಐಟಿ ರಚಿಸಿರುವ ಆದೇಶ ಮತ್ತು ಬ್ಲ್ಯಾಕ್‌ಮೇಲ್ ಆರೋಪ ಸಂಬಂಧ ಜಾರಕಿಹೊಳಿ ಅವರ ದೂರು ಆಧರಿಸಿ ಸದಾಶಿವ ನಗರ ಠಾಣ ಪೊಲೀಸರು ದಾಖಲಿಸಿದ್ದ ಎಫ್ಐಆರ್ ರದ್ದು ಕೋರಿ ಸಂತ್ರಸ್ತ ಯುವತಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಹೈಕೋರ್ಟ್ ಜೂನ್ 27ಕ್ಕೆ ಮುಂದೂಡಿದೆ.
ಯುವತಿ ಸಲ್ಲಿಸಿರುವ ಪ್ರತ್ಯೇಕ ಎರಡು ತಕರಾರು ಅರ್ಜಿಗಳು ನ್ಯಾ| ಎಸ್.ಸುನಿಲ್ ದತ್ ಯಾದವ್ ಅವರ ಏಕಸದಸ್ಯ ನ್ಯಾಯಪೀಠದ ಮುಂದೆ ಸೋಮವಾರ ವಿಚಾರಣೆಗೆ ಬಂದಿದ್ದವು.
ಅರ್ಜಿ ವಿಚಾರಣೆ ಆರಂಭವಾಗುತ್ತಿದ್ದಂತೆ ಅರ್ಜಿದಾರರ ಪರ ನ್ಯಾಯವಾದಿ ಆಕೃತಿ ಧವನ್ ಹಾಜರಾಗಿ, ಸಂತ್ರಸ್ತೆಯ ಪರ ಇಂದಿರಾ ಜೈಸಿಂಗ್ ಅವರು ವಾದ ಮಂಡಿಸಲಿದ್ದಾರೆ.
ಆದರೆ, ಅವರು ಇಂದು (ಸೋಮವಾರ) ವಿಚಾರಣೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಅರ್ಜಿಯನ್ನು ಮುಂದೂಡಬೇಕು ಎಂದು ಕೋರಿದರು. ಅದಕ್ಕೆ ನ್ಯಾಯಪೀಠ ಒಪ್ಪಿ ವಿಚಾರಣೆಯನ್ನು ಮುಂದೂಡಿತು.
ಎಸ್‌ಐಟಿ ತನಿಖೆ ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದ ಯುವತಿ ಇದೇ ವೇಳೆ ಬ್ಲ್ಯಾಕ್‌ವೆುàಲ್ ಆರೋಪದಲ್ಲಿ ನರೇಶ್ ಗೌಡ, ಶ್ರವಣ್ ವಿರುದ್ಧದ ಪ್ರಕರಣವನ್ನೂ ರದ್ದುಪಡಿಸುವಂತೆ ಅರ್ಜಿ ಸಲ್ಲಿಸಿದ್ದಾರೆ. ಪ್ರಕರಣದಲ್ಲಿ ಈಗಾಗಲೇ ಪೊಲೀಸರು ಬಿ ರಿಪೋರ್ಟ್ ಸಲ್ಲಿಸಿದ್ದಾರೆ.
ಎಸ್‌ಐಟಿ ಕಾನೂನು ಬದ್ಧತೆ ಬಗ್ಗೆ ಪರಿಶೀಲಿಸುವಂತೆ ಹೈಕೋರ್ಟ್‌ಗೆ ನಿರ್ದೇಶನ ನೀಡಿದ್ದ ಸುಪ್ರೀಂಕೋರ್ಟ್, ಅಲ್ಲಿಯವರೆಗೆ ಬಿ ರಿಪೋರ್ಟ್ ಆಧರಿಸಿ ಯಾವುದೇ ಕ್ರಮ ಕೈಗೊಳ್ಳದಂತೆ ಸೂಚಿಸಿತ್ತು.